ಇಲಾಖಾ ಪರಿಶೀಲನೆ ಸಭೆ ವೇಳೆ ಯಾವುದೇ ಅಂಕಿ-ಅಂಶಗಳಿಲ್ಲದೆ ಬರಿಗೈಲಿ ಬಂದ ಅಧಿಕಾರಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಅಲ್ಲದೇ ಸರಿಯಾದ ಉತ್ತರ ನೀಡಲು ವಿಫಲರಾದ ಅಧಿಕಾರಿಯನ್ನ ಜಿಬಿಎಂ ಕರ್ತವ್ಯದಿಂದ ಬಿಡುಗಡೆಗೊಳಿಸಲು ಸೂಚಿಸಿದರು.
ಬೆಂಗಳೂರು (ಜೂ.30): ಸಚಿವ ಕೃಷ್ಣ ಬೈರೇಗೌಡರು ಅಂದ್ರೆ ಗೊತ್ತಲ್ಲ. ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ನಿಂತ ಜಾಗದಲ್ಲಿ ಮುಖ ಮೂತಿ ನೋಡದೆ ಜಾಡಿಸಿಬಿಡ್ತಾರೆ ಅಂತದ್ರಲ್ಲಿ ಸಿಎಂ ಡಿಕೆ ಶಿವಕುಮಾರ್ ಹೊಸ ಸಂಪುಟದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಮೇಲೆ ಅವರ ಖದರ್ ಕೇಳಬೇಕೆ? ಅಗತ್ಯ ಅಂಕಿ-ಅಂಶಗಳಿಲ್ಲದೆ ಬರಿಗೈಲಿ ಸಭೆಗೆ ಬಂದ ಅಧಿಕಾರಿಯನ್ನ ಜಿಬಿಎ ಕರ್ತವ್ಯದಿಂದಲೇ ಬಿಡುಗಡೆ ಮಾಡುವಂತೆ ಖಡಕ್ ಆಗಿ ಸೂಚಿಸಿದ ಬೆಳವಣಿಗೆ ನಡೆದಿದೆ.
ಸಭೆಗೆ ಬರಿಗೈಲಿ ಬಂದ ಅಧಿಕಾರಿ!
ಸಚಿವ ಕೃಷ್ಣ ಬೈರೇಗೌಡರು ಇಲಾಖಾ ಪರಿಶೀಲನೆ ಸಭೆ ನಡೆಸಿದ್ದರು.ಈ ವೇಳೆ ಪಶುಸಂಗೋಪನೆ ಇಲಾಖೆಯ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿದರು. ಇಲಾಖೆಯಲ್ಲಿ 19 ಮಂದಿ ಅಧಿಕಾರಿಗಳಿದ್ದರೂ ಸಚಿವರು ಕರೆದ ಸಭೆಗೆ ಕನಿಷ್ಠ ಅಂಕಿ-ಅಂಶಗಳನ್ನ ಇಲ್ಲದೆ ಬರಿಗೈಲಿ ಮದುವೆಗೆ ಬಂದಂತೆ ಬಂದಿದ್ದ ಅಧಿಕಾರಿ. ಇದನ್ನ ಕಂಡು ಕೆಂಡಾಮಂಡಲರಾದ ಸಚಿವ ಕೃಷ್ಣ ಬೈರೇಗೌಡರು 'ಅಗತ್ಯ ದಾಖಲೆ ತರದೇ ಬರಿಗೈಲಿ ಬಂದಿದ್ದೀರಾ?' ಎಂದು ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯೋಜನೆಗಳ ಪ್ರಗತಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ವಿಫಲವಾದ ಅಧಿಕಾರಿಗಳ ವಿರುದ್ಧ ಗರಂ ಆದರು.
ನಾನೇನು ಕಿವಿಯಲ್ಲಿ ದಾಸವಾಳ ಇಟ್ಕಂಡು ಕೂತಿದಿನಾ?
ಬೀದಿ ನಾಯಿಗಳ ನಿಯಂತ್ರಣ ಕುರಿತು ಪ್ರಸ್ತಾಪಿಸಿದ ಸಚಿವರು, 'ನೀವುಗಳು 20 ವರ್ಷಗಳಿಂದ ಸಂತಾನ ಹರಣ (ABC) ಕಾರ್ಯಕ್ರಮ ನಡೆಸುತ್ತಿದ್ದರೂ ನಾಯಿಗಳ ಸಂಖ್ಯೆ ಅಷ್ಟೇ ಇರುವುದಕ್ಕೆ ಹೇಗೆ ಸಾಧ್ಯ?' ಎಂದು ಸಚಿವರು ಪ್ರಶ್ನಿಸಿದರು. ನೀವು ಸಂತಾನಹರಣ ಕಾರ್ಯಕ್ರಮ ನಡೆಸಿದ ಬಗ್ಗೆಯೂ ಅನುಮಾನವಿದೆ ಸರಿಯಾದ ಅಂಕಿಅಂಶಗಳನ್ನು ನೀಡುವಂತೆ ಸೂಚಿಸಿದರು. ಈ ವೇಳೆ ಅಧಿಕಾರಿಗಳು ನೀಡಿದ ಉತ್ತರಗಳು ಸಮರ್ಪಕವಾಗಿರದ ಹಿನ್ನೆಲೆಯಲ್ಲಿ ಸಚಿವರು ಇನ್ನಷ್ಟು ಕಿಡಿಕಾರಿದರು. 'ನಾನೇನು ಕಿವಿಯಲ್ಲಿ ದಾಸವಾಳ ಇಟ್ಕೊಂಡು ಕೂತಿದ್ದೀನಿ? ಅಸಂಬದ್ಧ ಉತ್ತರಗಳನ್ನು ಕೊಡಬೇಡಿ. ಸರಿಯಾದ ಮಾಹಿತಿ, ಅಂಕಿಅಂಶಗಳೊಂದಿಗೆ ಸಭೆಗೆ ಬನ್ನಿ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ನಡೆದ ಎರಡು ಚರ್ಚೆಗಳ ಬಗ್ಗೆ ಸಚಿವರ ಹೇಳಿಕೆ
ಮೊದಲನೆಯದಾಗಿ, ಇವತ್ತು ಎರಡು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬೆಂಗಳೂರು ನಗರದಲ್ಲಿರುವ ಬೀದಿನಾಯಿಗಳ ಸಮಸ್ಯೆ ಮತ್ತು ಈ ಸಮಸ್ಯೆಗೆ ಕಾನೂನಾತ್ಮಕವಾಗಿ ನಾವು ಹೇಗೆ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಚರ್ಚಿಸಿದ್ದೇವೆ. ಇನ್ನೊಂದು ಬೆಂಗಳೂರು ನಗರದಲ್ಲಿ ನಾವು ಲಕ್ಷಾಂತರ ಗಿಡಗಳನ್ನ ನೆಡುತ್ತಿದ್ದೇವೆ. ಅದು ಎಲ್ಲಿ ಹೋಗ್ತಾ ಇದೆ? ಗಿಡ ನೆಡೋದಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡ್ತಿದೆ ಆದ್ರೆ ನೆಟ್ಟ ಗಿಡಗಳೆಲ್ಲ ಎಲ್ಲಿ ಹೋಗ್ತಾವೆ ಅನ್ನೋದು ಪ್ರಶ್ನೆ. ಲಕ್ಷಾಂತರ ಗಿಡ ನೆಟ್ಟರು ಕೆಲವು ತಿಂಗಳ ಬಳಿಕ ನೆಟ್ಟ ಜಾಗದಲ್ಲಿ ಗಿಡಗಳೇ ಇರಲ್ಲ. ಹಾಗಾದ್ರೆ ಗಿಡಗಳೆಲ್ಲ ಎಲ್ಲಿಗೆ ಹೋದವು? ಎಂಬ ಬಗ್ಗೆಯೂ ಚರ್ಚೆ ನಡೆದಿದೆ.
ಸಂತಾನಹರಣ ಯಾರಿಗೆ ಮಾಡಿದ್ರು?
ನಾಯಿಗಳ ಸಂತಾನಹರಣದಲ್ಲಿ ಜಿಬಿಎ ಅಧಿಕಾರಿಗಳ ಕಳ್ಳಾಟ ಇದೆ. ಪಶು ಸಂಗೋಪನಾ ಇಲಾಖೆ ಅದಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿಕಾರಿದರು. ಕಳೆದ 8 ವರ್ಷಗಳ ಅವಧಿಯಲ್ಲಿ 3 ಲಕ್ಷ ನಾಯಿಗಳಿಗೆ ಸಂತಾನಹರಣ ಮಾಡಿದ್ದಾರೆ, ಅದಕ್ಕಾಗಿ 120 ಕೋಟಿ ರೂಪಾಯಿ ಖರ್ಚಾಗಿದೆ. ಆದರೆ ನಾಯಿಗಳ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಹಾಗಾದರೆ ಹಣ ಎಲ್ಲಿ ಹೋಯ್ತು? ಸಂತಾನ ಹರಣ ಯಾರಿಗೆ ಮಾಡಿದ್ರು? ಅನ್ನೋ ಸಂಶಯ ಇದೆ ಅಂತಾ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.


