ಬೆಂಗಳೂರಿನ ಕಗ್ಗಲಿಪುರದಲ್ಲಿ ಡಿಸಿ ಕನ್ವರ್ಷನ್, ರೇರಾ ಮತ್ತು ಸಕ್ರಮ ಖಾತಾ ಹೊಂದಿದ್ದ ನೂರಾರು ನಿವೇಶನಗಳು ಬಿಡಿಎಯ 'ಪಿಆರ್‌ಆರ್-2' ಯೋಜನೆಯ ಅಂತಿಮ ಅಧಿಸೂಚನೆಗೆ ಸಿಲುಕಿವೆ.
ಬೆಂಗಳೂರು ( ಸೆ.28): ಡಿಸಿ ಕನ್ವರ್ಷನ್ (ಜಮೀನು ಪರಿವರ್ತನೆ), ಲೇಔಟ್ ಪ್ಲಾನ್ ಅಪ್ರೂವಲ್, ರೇರಾ (RERA) ನೋಂದಣಿ ಹಾಗೂ ಸಕ್ರಮ ಖಾತಾ ಪತ್ರಗಳು ಬೆನ್ನಿಗಿದ್ದವು! ತಮ್ಮ ಜೀವಮಾನದ ಕಷ್ಟದ ಸಂಪಾದನೆಯನ್ನು ಹೂಡಿಕೆ ಮಾಡಿ ಬೆಂಗಳೂರಿನ ಹೊರವಲಯದ ಕಗ್ಗಲಿಪುರದಲ್ಲಿ ಸೈಟು ಖರೀದಿಸಿದ್ದ ನೂರಾರು ಸಾರ್ವಜನಿಕರಿಗೆ ಈ ಎಲ್ಲಾ ಸರ್ಕಾರಿ ದಾಖಲೆಗಳೇ ತಮ್ಮ ನಿವೇಶನಗಳಿಗೆ ರಕ್ಷಣೆ ನೀಡಲಿವೆ ಎಂಬ ದೃಢ ನಂಬಿಕೆಯಿತ್ತು. ಆದರೆ, ಈಗ ಆ ಸಾಲಿನಲ್ಲಿರುವ ಅನೇಕ ಆಸ್ತಿಗಳು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (BDA) 'ಪೆರಿಫೆರಲ್ ರಿಂಗ್ ರಸ್ತೆ-2' (PRR-2) ಯೋಜನೆಯ ಅಂತಿಮ ಅಧಿಸೂಚನೆಯಲ್ಲಿ (Final Notification) ಕಾಣಿಸಿಕೊಂಡಿವೆ! ಅಂದರೆ, ನೂರಾರು ಜನರು ತಮ್ಮ ಕನಸಿನ ಮನೆಗಳನ್ನು ಕಟ್ಟಲು ಸೈಟು ಖರೀದಿಸಿದ್ದ ಜಾಗದಲ್ಲೀಗ ಬಿಡಿಎ 10 ಪಥಗಳ ಬೃಹತ್ ರಸ್ತೆ ನಿರ್ಮಿಸಲು ಮುಂದಾಗಿದೆ!
ಅಷ್ಟಕ್ಕೂ ಆಗಿದ್ದೇನು?
ಈ ತಿಂಗಳ ಆರಂಭದಲ್ಲಿ ಬಿಡಿಎ ಹೊರಡಿಸಿರುವ ಅಂತಿಮ ಅಧಿಸೂಚನೆಯ ಪ್ರಕಾರ, ನೈಸ್ (NICE) ರಸ್ತೆಗೆ ಸಮಾನಾಂತರವಾಗಿ ಮೈಸೂರು ರಸ್ತೆ ಮಾರ್ಗವಾಗಿ ಹೊಸೂರು ಹಾಗೂ ತುಮಕೂರು ರಸ್ತೆಗಳನ್ನು ಸಂಪರ್ಕಿಸುವ 'ಪಿಆರ್‌ಆರ್-2' ಯೋಜನೆಗೆ ಸುಮಾರು 1,427 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ.
ಈ 52 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣಕ್ಕೆ ಬಿಡಿಎ ಮೊದಲು ಅಧಿಸೂಚನೆ (Preliminary Notification) ಹೊರಡಿಸಿದ್ದು ಸುದೀರ್ಘ ಸಮಯದ ಹಿಂದೆ. ಆ ನಂತರ ಜಮೀನುಗಳಲ್ಲಿ ಭಾರಿ ಬದಲಾವಣೆಗಳಾಗಿವೆ. ಇನ್ನು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು (BMRDA) ಕನಕಪುರ, ಆನೇಕಲ್ ಮುಂತಾದ ನಗರದ ಹೊರವಲಯಗಳಲ್ಲಿ ಲೇಔಟ್ ಅನುಮೋದನೆ ನೀಡಲು ದಶಕದ ಹಿಂದೆಯೇ ಸಮಗ್ರ ಅಭಿವೃದ್ಧಿ ಯೋಜನೆಯನ್ನು (CDP/Master Plan) ರೂಪಿಸಿತ್ತು. ಈಗ ಕಗ್ಗಲಿಪುರದ ನಿವೇಶನದಾರರು ಆತಂಕ ವ್ಯಕ್ತಪಡಿಸಿದ್ದು, "ಬಿಡಿಎ ಅಂತಿಮ ಅಧಿಸೂಚನೆಯಲ್ಲಿ ನಮೂದಿಸಿರುವ ಸರ್ವೆ ನಂಬರ್‌ಗಳು, ಬಿಎಂಆರ್‌ಡಿಎ ಅನುಮೋದಿಸಿರುವ ಮಹಾಯೋಜನೆಯಲ್ಲಿ (Master Plan) ಪಿಆರ್‌ಆರ್-2 ಗಾಗಿ ಗುರುತಿಸಲಾದ ಜಾಗಕ್ಕಿಂತ ಸಂಪೂರ್ಣ ಹೊರಗಿನ ಜಾಗದಲ್ಲಿವೆ," ಎಂದು ಕಿಡಿಕಾರಿದ್ದಾರೆ.
ಬಿಡಿಎ - ಬಿಎಂಆರ್‌ಡಿಎ ನಡುವೆ ಇಲ್ಲವೇ ಸಮನ್ವಯ?
ಬೆಂಗಳೂರಿನ ಪ್ರಮುಖ ಎರಡು ನಗರ ಯೋಜನಾ ಪ್ರಾಧಿಕಾರಗಳಾದ ಬಿಡಿಎ ಮತ್ತು ಬಿಎಂಆರ್‌ಡಿಎಗಳು 'ಪಿಆರ್‌ಆರ್-2' ಯೋಜನೆಗೆ ಬೇರೆ ಬೇರೆಯಾದ ಅಲೈನ್‌ಮೆಂಟ್‌ಗಳ (ರಸ್ತೆ ನಕ್ಷೆ) ಆಧಾರದಲ್ಲಿ ಕೆಲಸ ಮಾಡುತ್ತಿವೆಯೇ? ಎಂಬ ಗಂಭೀರ ಪ್ರಶ್ನೆಗಳು ಈಗ ಮೂಡಿಬಂದಿವೆ. ಈ ಎರಡು ಪ್ರಾಧಿಕಾರಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ನಿವೇಶನದಾರರು ಮತ್ತು ಮನೆ ಮಾಲೀಕರು ನರಕಯಾತನೆ ಅನುಭವಿಸುವಂತಾಗಿದೆ.
ಈ ಕುರಿತು ಕಗ್ಗಲಿಪುರದ ನಿವೇಶನದಾರ ಹಾಗೂ ವಕೀಲೆಯಾದ ನಿಸರ್ಗ ಮಾತನಾಡಿ, "ಬಿಎಂಆರ್‌ಡಿಎ ನಕ್ಷೆಯ ಪ್ರಕಾರ ನಮ್ಮ ಲೇಔಟ್ ಪಿಆರ್‌ಆರ್-2 ರಸ್ತೆ ಮಾರ್ಗದಿಂದ ಸುಮಾರು 1.5 ಕಿಲೋಮೀಟರ್ ದೂರದಲ್ಲಿದೆ. ಆದರೆ ಈಗ ಬಿಡಿಎ ನಮ್ಮ ಲೇಔಟ್ ಅಭಿವೃದ್ಧಿಪಡಿಸಿದ ಮಾಲೀಕರಿಗೆ ನೋಟಿಸ್ ನೀಡಿದೆ! ನಮ್ಮ ಗುಳಕಮಲೆ ಗ್ರಾಮದ ಸರ್ವೆ ನಂಬರ್ 112/1 ಹಾಗೂ 112/3 ವ್ಯಾಪ್ತಿಯಲ್ಲಿ ಬರುವ 4 ಲೇಔಟ್‌ಗಳು ಮತ್ತು 350ಕ್ಕೂ ಹೆಚ್ಚು ನಿವೇಶನಗಳು ಈ ರಸ್ತೆ ಮಾರ್ಗಕ್ಕೆ ಸಿಲುಕುತ್ತಿವೆ. ಹೀಗಾದರೆ, ಸರ್ಕಾರ ನೀಡುವ ಲೇಔಟ್ ಅನುಮೋದನೆ ಮತ್ತು ಖಾತಾ ಪತ್ರಗಳಿಗೆ ಏನು ಬೆಲೆ ಇದೆ?" ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ರೀತಿ 'ಎಸ್‌ಎಲ್‌ವಿ ಗಾರ್ಡನ್ಸ್ 4' ನಿವೇಶನದಾರರು ಸಹ ತಮ್ಮ ಅಳಲನ್ನು ತೋಡಿಕೊಂಡಿದ್ದು, ಕಳೆದ ಹಲವು ವರ್ಷಗಳಿಂದ ಪ್ರತಿ ತಿಂಗಳು ಇಎಮ್‌ಐ (EMI) ಕಟ್ಟುತ್ತಿದ್ದೇವೆ ಎಂದು ಅಸಹಾಯಕರಾಗಿದ್ದಾರೆ. ಇನ್ನು ಕೆಲವರು, ಬಿಡಿಎ ಪ್ರಸ್ತುತ ಜಮೀನಿನ ಮಾಲೀಕರ ಹೆಸರುಗಳನ್ನು ಹುಡುಕುವ ಸೌಜನ್ಯ ತೋರದೆ, ದಶಕಗಳ ಹಿಂದೆ ಜಮೀನು ಹೊಂದಿದ್ದ ಹಳೆಯ ಮಾಲೀಕರ ಹೆಸರುಗಳನ್ನೇ ನೋಟಿಫಿಕೇಶನ್‌ನಲ್ಲಿ ಪ್ರಕಟಿಸಿದೆ ಎಂದು ದೂರಿದ್ದಾರೆ.
ಪ್ರಾಧಿಕಾರಗಳ ಅಧಿಕಾರಿಗಳು ಹೇಳುವುದೇನು?
ಈ ಗೊಂದಲಕ್ಕೆ ಯಾರು ಹೊಣೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಕುರಿತು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, "ನಾವು ಪ್ರಾಥಮಿಕ ಅಧಿಸೂಚನೆಯಲ್ಲಿದ್ದ ಹೆಸರುಗಳನ್ನೇ ಅಂತಿಮ ಅಧಿಸೂಚನೆಯಲ್ಲೂ ನಮೂದಿಸಿದ್ದೇವೆ. ನಾವು ಯಾವುದೇ ಅಲೈನ್‌ಮೆಂಟ್ ಬದಲಾಯಿಸಿಲ್ಲ ಅಥವಾ ಯಾರ ಹೆಸರನ್ನೂ ಕೈಬಿಟ್ಟಿಲ್ಲ. ಪ್ರಸ್ತುತ ಮಾಲೀಕರಿಗೆ ಏನಾದರೂ ಆಕ್ಷೇಪಣೆಗಳಿದ್ದರೆ ಲಿಖಿತವಾಗಿ ಸಲ್ಲಿಸಬಹುದು," ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಬಿಎಂಆರ್‌ಡಿಎ ಅಧಿಕಾರಿಗಳು, "ಸಾರ್ವಜನಿಕರಿಂದ ನಮಗೆ ಇನ್ನೂ ಅಧಿಕೃತ ಆಕ್ಷೇಪಣೆಗಳು ತಲುಪಿಲ್ಲ. ಸಾರ್ವಜನಿಕರಿಗೆ ಮಾಸ್ಟರ್ ಪ್ಲಾನ್ ಮಾಹಿತಿ ನೀಡಲು ನಾವು ಸಿದ್ಧರಿದ್ದೇವೆ," ಎಂದು ಹೇಳಿದ್ದಾರೆ.
