ನಿಮ್ಮನ್ನ ಈಸಿಯಾಗಿ ಯಾಮಾರಿಸಬಹುದು ಅಂತಾ ಗೊತ್ತಾದ್ರೆ ಜನ ಹೆಂಗ ಬೇಕಾದರೂ ಬಳಸಿಕೊಳ್ತಾರೆ. ಇಲ್ಲೊಬ್ಬ ಟೆಕ್ಕಿ ಕಳ್ಕೊಂಡಿದ್ದು 10, 20 ಲಕ್ಷ ರೂಪಾಯಿ ಅಲ್ಲ. ಕೋಟಿ ಕೋಟಿ ಹಣ. ಹೆಂಗೆ ಮೋಸ ಹೋದ್ರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಸೈಬರ್ ಅಪರಾಧಗಳ ವಿರುದ್ಧ ಎಚ್ಚರದಿಂದ ಇರಿ. ಸೋಶಿಯಲ್ ಮೀಡಿಯಾ ಬಳಸುವಾಗ ಹುಷಾರಾಗಿ ಎಂದು ಹೇಳುತ್ತಲೇ ಇರುತ್ತೇವೆ. ಮೋಸ ಹೋಗೋರು ಹೋಗುತ್ತಲೇ ಇರುತ್ತಾರೆ. ಸೈಬರ್ ಕ್ರೈಂಗೆ ಬ್ರೇಕ್ ಇಲ್ಲದಂತಾಗಿದೆ. ಅದೇ ರೀತಿ ಬೆಂಗಳೂರಿನ ಟೆಕ್ಕಿಯೊಬ್ಬರು ಫೇಸ್‌ಬುಕ್‌ನಲ್ಲಿ ನೋಡಿದ ಜಾಹೀರಾತು ನಂಬಿ ಬರೋಬ್ಬರಿ 1.9 ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ.

ಆಗಿದ್ದೇನು?

ಮೋಸ ಹೋಗಿರುವ ವ್ಯಕ್ತಿ ಸೈಬರ್ ಠಾಣೆ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ.. ಫೆಬ್ರವರಿ 27 ರಿಂದ ಸೆಪ್ಟೆಂಬರ್ 9ರ ನಡುವೆ ನಡೆದಿದೆ. ಫೇಸ್‌ಬುಕ್‌ ಸ್ಕ್ರಾಲ್ ಮಾಡುತ್ತಿದ್ದಾಗ ಜಾಹೀರಾತು ಒಂದು ಕಾಣಿಸಿದೆ. ಕುತೂಹಲಕ್ಕೆ ಕ್ಲಿಕ್ ಮಾಡಿದ್ದಾರೆ. ನಂತರ ಒಂದು ಸ್ಕ್ರೀನ್ ಓಪನ್ ಆಗಿದೆ. ಅದರಲ್ಲಿ ಮಾರುಕಟ್ಟೆಗೆ ಸಂಬಂಧಿಸಿದ ಮಾಹಿತಿಗಳು ಪತ್ತೆಯಾಗಿವೆ. ಬೆನ್ನಲ್ಲೇ, ಮೋಸ ಹೋದ ವ್ಯಕ್ತಿಗೆ ಸಹಾಯ ಮಾಡುವ ನೆಪದಲ್ಲಿ ಆ ವ್ಯಾಪಾರ ವೇದಿಕೆಯ ಪ್ರತಿನಿಧಿಗಳು ಫೋನ್ ಮಾಡಿದ್ದಾರೆ.

ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ಓಳು ಬಿಟ್ಟಿದ್ದಾರೆ. ಹೀಗೆ ಅವರ ಮನವೊಲಿಸುತ್ತ ಪ್ರಾಕ್ಸ್‌ಟ್ರೆಂಡ್ ಹೂಡಿಕೆ ಮಾಡುವಂತೆ ಮನವೊಲಿಸಿದ್ದಾರೆ. ಮನವೊಲಿಕೆ ಬಳಿಕ ಆ ವ್ಯಕ್ತಿ http://www.proxtrendltd.com ಗೆ ನೊಂದಾಯಿಸಿಕೊಂಡಿದ್ದಾರೆ. ಇದು ಕೊಮೊರೊಸ್‌ನ ಮಾಲ್ವಿ ದ್ವೀಪದಲ್ಲಿ ನೋಂದಾಯಿಸಲಾದ proxtrend ಲಿಮಿಟೆಡ್‌ನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತೋರಿಸಿದೆ.

ಕಳೆದ ಫೆಬ್ರವರಿ 27 ರಿಂದ ವ್ಯಾಪಾರ ಆರಂಭಿಸಿದರು. ಮೋಸ ಹೋದ ವ್ಯಕ್ತಿಯು ರಾಜಾ ಎಸ್‌ ಎಂಬ ವ್ಯಕ್ತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ರಾಜಾ ಎಸ್ ತಾನು ಕಂಪನಿಯ ಎಂಡಿ ಎಂದು ಪರಿಚಯಿಸಿಕೊಂಡು ಸಲಹೆ ಸೂಚನೆ ನೀಡಿದ್ದಾರೆ. ನಂತರ ವ್ಯಾಪಾರ ಹಾಗೂ ಹೂಡಿಕೆ ಮಾತುಕತೆ ನಡೆದು ಭಾರೀ ಪ್ರಮಾಣದಲ್ಲಿ ವರ್ಗಾವಣೆ ಮಾಡಲಾಗಿದೆ. ಅದಾದ ಬಳಿಕ ಮೋಸ ಹೋದ ವ್ಯಕ್ತಿಗೆ ಹಣದ ಅವಶ್ಯಕತೆ ಬಿದ್ದಿದೆ. ಹೀಗಾಗಿ ಅವರು ತಾವು ನೀಡಿದ ಹಣವನ್ನು ವಾಪಸ್ ಪಡೆಯೋದಾಗಿ ತಿಳಿಸಿದ್ದಾರೆ.

ಆದರೆ ಆ ಕಡೆಯಿಂದ ಹಣವನ್ನು ವಾಪಸ್ ನೀಡುವ ಬದಲು ಮತ್ತಷ್ಟು ಹೂಡಿಕೆ ಮಾಡುವ ಸಂಬಂಧ ನಿರಂತರವಾಗಿ ಸಂಪರ್ಕ ಮಾಡಿದರು. ಕೊನೆಗೆ ಸಿಮೀತ ಹಣವನ್ನು ವಾಪಸ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ, ಸೆಪ್ಟೆಂಬರ್ 9 ರಂದು ತಾವು ನೀಡಿದ ನಿರ್ಧಿಷ್ಟ ಹಣ ಬೇಕೇಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಹಣಕ್ಕಾಗಿ ಬರೋಬ್ಬರಿ 48 ಗಂಟೆಗಳ ಕಾಲ ವೇಟ್‌ ಮಾಡಿದರೂ ಹಣವನ್ನು ವಾಪಸ್ ನೀಡಲಿಲ್ಲ. ಹಣಕ್ಕಾಗಿ ಕಳುಹಿಸಿದ ರಿಕ್ವೆಸ್ಟ್‌ಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಕೊನೆಗೆ ತಾವು ಮೋಸ ಹೋಗಿರುವ ಬಗ್ಗೆ ಅರಿವಿಗೆ ಬರುತ್ತಿದ್ದಂತೆಯೇ, ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ತಮ್ಮನ್ನ ಯಾವೆಲ್ಲ ಹೆಸರಲ್ಲಿ ವ್ಯಕ್ತಿಗಳು ಸಂಪರ್ಕ ಮಾಡಿದ್ದರು ಅನ್ನೋದನ್ನು ತಿಳಿಸಿದ್ದಾರೆ. ಜಾರ್ಜ್‌ ಟೈಸನ್, ವಿಜಯ್ ಶರ್ಮಾ, ಜೇ ಶ್ರಾಫ್, ರಾಜಾ ರೆಸ್ಲಾನ್, ವಾಲ್ಟರ್ ಖಾನ್, ರೋನಿ ಎಸ್, ಅಲಿಸಾ ಅಗರ್ವಾಲ್, ಶಶಿಕಾಂತ್ ಶರ್ಮಾ, ಶಿವ ತಪ್ಪರ್, ರಾಯನ್ ಎಸ್‌ ಹೆಸರನ್ನು ತಿಳಿಸಿದ್ದಾರೆ. ಪೊಲೀಸ್ ದೂರಿನಲ್ಲಿ ಒಟ್ಟು 1.9 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ದೂರಿನಲ್ಲಿ ನೀಡಲಾಗಿದೆ. ಪೂರ್ವ ಸೈಬರ್ ಅಪರಾಧ ಪೊಲೀಸರು ತನಿಖೆ ನಡೆಸ್ತಿದ್ದಾರೆ.