ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೂಷ್ ಅವರ ಹೇಳಿಕೆ ದಾಖಲಿಸುವುದನ್ನು ಮುಂದೂಡಲು ನಟ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ಸೆಷನ್ಸ್ ಹಾಗೂ ಹೈಕೋರ್ಟ್ ವಜಾಗೊಳಿಸಿವೆ. ಮತ್ತೊಂದೆಡೆ, ಬಿಗಿ ಭದ್ರತೆಯ ನಡುವೆ ಸೆಷನ್ಸ್ ಕೋರ್ಟ್‌ನಲ್ಲಿ ಪ್ರದೂಷ್ ಹೇಳಿಕೆ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ಜೈಲಿನಲ್ಲಿರುವ ದರ್ಶನ್ ಮತ್ತು ಪವಿತ್ರಾ ಗೌಡ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾದರು.

ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ವಿಚಾರಣೆ ಪ್ರಕ್ರಿಯೆ ಚುರುಕುಗೊಂಡಿದ್ದು, ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪ್ರದೂಷ್ ಅವರ ಹೇಳಿಕೆ ದಾಖಲಿಸುವುದನ್ನು ಮುಂದೂಡುವಂತೆ ನಟ ದರ್ಶನ್ ಪರ ವಕೀಲರು ನಡೆಸಿದ ಸರಣಿ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ಸೆಷನ್ಸ್ ಕೋರ್ಟ್ ಹಾಗೂ ಹೈಕೋರ್ಟ್ ಎರಡರಲ್ಲೂ ಮನವಿ ವಜಾಗೊಂಡ ನಂತರ, ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ದರ್ಶನ್ ಪರ ವಕೀಲರ ಪಡೆ ಸಜ್ಜಾಗಿದೆ.

ಸೆಷನ್ಸ್ ಕೋರ್ಟ್‌ನಲ್ಲಿ ಮನವಿ ತಿರಸ್ಕಾರ:

ಪ್ರದೂಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು 10 ದಿನಗಳ ಕಾಲ ಮುಂದೂಡಬೇಕೆಂದು ದರ್ಶನ್ ಪರ ವಕೀಲರು ಶನಿವಾರ ಸೆಷನ್ಸ್ ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಆದರೆ, 'ಸುಪ್ರೀಂ ಕೋರ್ಟ್ ಈ ಪ್ರಕರಣದ ತ್ವರಿತಗತಿ ವಿಚಾರಣೆಗೆ ಸೂಚನೆ ನೀಡಿರುವುದರಿಂದ ಹಾಗೂ ಆರೋಪಿಗಳ ಕಡೆಯಿಂದ ಪದೇ ಪದೇ ಮುಂದೂಡಿಕೆ ಅರ್ಜಿಗಳು ಸಲ್ಲಿಕೆಯಾಗುತ್ತಿರುವುದರಿಂದ ಈ ಮನವಿಯನ್ನು ಪುರಸ್ಕರಿಸಬಾರದು' ಎಂದು ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ಕೋರ್ಟ್‌ಗೆ ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ಸೆಷನ್ಸ್ ಕೋರ್ಟ್, ದರ್ಶನ್ ವಕೀಲರ ಅರ್ಜಿಯನ್ನು ವಜಾಗೊಳಿಸಿತು.

ಹೈಕೋರ್ಟ್‌ನಲ್ಲೂ ದರ್ಶನ್ ಪಡೆಗೆ ಸಿಗದ ರಿಲೀಫ್:

ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ದರ್ಶನ್ ಅವರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಇಂದು ಹೈಕೋರ್ಟ್‌ನ ನ್ಯಾಯಮೂರ್ತಿ ಶ್ರೀಷಾನಂದ ಅವರ ಪೀಠದ ಮುಂದೆ ತುರ್ತು ವಿಚಾರಣೆಗೆ ಮನವಿ ಸಲ್ಲಿಸಿದರು. ನಾವು ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದೇವೆ. ಅಲ್ಲಿ ಅರ್ಜಿ ಇತ್ಯರ್ಥವಾಗುವವರೆಗೆ ಅಥವಾ ಕನಿಷ್ಠ 3 ದಿನಗಳ ಕಾಲ ಪ್ರದೂಷ್ ಹೇಳಿಕೆ ದಾಖಲಾತಿಯನ್ನು ಮುಂದೂಡಬೇಕು. ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಬೇಕು ಎಂದು ಹಷ್ಮತ್ ಪಾಷಾ ಮನವಿ ಮಾಡಿದರು.

ಆದರೆ, ಈ ವಾದವನ್ನು ಸಗಟಾಗಿ ನಿರಾಕರಿಸಿದ ನ್ಯಾಯಮೂರ್ತಿಗಳು, ಈ ಪ್ರಕರಣದಲ್ಲಿ ವಿಶೇಷವಾದದ್ದು ಏನೂ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟು, ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಹ ತಿರಸ್ಕರಿಸಿದರು. ಇದರೊಂದಿಗೆ ಹೇಳಿಕೆ ಮುಂದೂಡಿಸಲು ದರ್ಶನ್ ತಂಡ ನಡೆಸಿದ ಎರಡೂ ಹಂತದ ಯತ್ನಗಳು ವಿಫಲವಾದವು.

ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧಾರ:

ಕೆಳ ನ್ಯಾಯಾಲಯಗಳಲ್ಲಿ ಹಿನ್ನಡೆಯಾದ ಹಿನ್ನೆಲೆಯಲ್ಲಿ, ಪ್ರದೂಷ್ ಹೇಳಿಕೆ ದಾಖಲಾತಿಯನ್ನು ತಡೆಯಲು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ.

ಕೋರ್ಟ್ ಹಾಲ್‌ನಲ್ಲಿ ಕಟ್ಟುನಿಟ್ಟಿನ ಭದ್ರತೆ:

ಮತ್ತೊಂದೆಡೆ, ಸೆಷನ್ಸ್ ಕೋರ್ಟ್‌ನಲ್ಲಿ ಪ್ರದೂಷ್ ಹಾಜರಾತಿಯನ್ನು ದಾಖಲಿಸಿಕೊಳ್ಳಲಾಗಿದ್ದು, ಅವರ ಹೇಳಿಕೆ ದಾಖಲು ಪ್ರಕ್ರಿಯೆ ಆರಂಭವಾಗಿದೆ. ಪ್ರದೂಷ್ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಅವರ ಜೊತೆ ಬಂದ ಭದ್ರತಾ ಸಿಬ್ಬಂದಿ 'ಬಾಡಿ ವರ್ನ್ ಕ್ಯಾಮೆರಾ' ಧರಿಸಿ ಬಂದಿದ್ದರು.. SPP ಮನವಿಯಂತೆ ಪ್ರದೂಷ್ ಅವರನ್ನು ಕೋರ್ಟ್ ಹಾಲ್ ಒಳಗಡೆಯೇ ಸುರಕ್ಷಿತವಾಗಿ ಕುಳಿತುಕೊಳ್ಳಲು ನ್ಯಾಯಾಧೀಶರು ಸೂಚಿಸಿದ್ದಾರೆ.

ವಿಆರ್ ಕನೆಕ್ಷನ್ ಮೂಲಕ ದರ್ಶನ್, ಪವಿತ್ರಾ ಗೌಡ ಹಾಜರು:

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಪ್ರಕ್ರಿಯೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾದರು. ಜಾಮೀನಿನ ಮೇಲಿರುವ ಇತರ ಆರೋಪಿಗಳು ನೇರವಾಗಿ ಕೋರ್ಟ್‌ಗೆ ಖುದ್ದು ಹಾಜರಾಗಿದ್ದರು.