Asianet Suvarna News Asianet Suvarna News

Bengaluru Market ಕೊರೋನಾ ಕಾರಣ ಕೆಆರ್ ಮಾರುಕಟ್ಟೆ ವಿವಿಧೆಡೆಗೆ ಸ್ಥಳಾಂತರ, ವ್ಯಾಪಾರಿಗಳಿಗೆ ಸಂಕಷ್ಟ!

  • ವರ್ತಕರು, ಬೀದಿ ಬದಿ ವ್ಯಾಪಾರಿಗಳನ್ನು ವಿಂಗಡಿಸಿದ ಪಾಲಿಕೆ
  •  ಮಾರ್ಕೆಟ್‌ ಸ್ಥಳಾಂತರ: ವ್ಯಾಪಾರಿಗಳಿಗೆ ಸಂಕಷ್ಟ
  • ಚಿಲ್ಲರೆ, ಸಗಟು ವ್ಯಾಪಾರಿಗಳಿಗೆ ತೀವ್ರ ತೊಂದರೆ
BBMP shifts KR market to decongest crowded areas for curb coronavirus traders unhappy ckm
Author
Bengaluru, First Published Jan 25, 2022, 3:18 AM IST

ಬೆಂಗಳೂರು(ಜ.25):  ಕೋವಿಡ್‌ ಕಾರಣದಿಂದ(Coronavirus) ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆಯು(BBMP) ಹೊರಡಿಸಿದ್ದ ಮಾರುಕಟ್ಟೆವಿಕೇಂದ್ರಿಕರಣ ಆದೇಶದಿಂದ ತಾವು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದಾಗಿ ಕೆ.ಆರ್‌.ಮಾರುಕಟ್ಟೆ, ಕಲಾಸಿಪಾಳ್ಯದ ಹೂವು, ಹಣ್ಣು ಮತ್ತು ತರಕಾರಿ ಚಿಲ್ಲರೆ ಹಾಗೂ ಸಗಟು ವ್ಯಾಪಾರಿಗಳು ಅಳಲುತೋಡಿಕೊಂಡಿದ್ದಾರೆ.

ಕೋವಿಡ್‌ 3ನೇ ಅಲೆ ಕಾರಣಕ್ಕೆ ಬಿಬಿಎಂಪಿ ಜ.12ರಂದು ಬೃಹತ್‌(Bengaluru Market) ಮಾರುಕಟ್ಟೆಯಾದ ಕೆ.ಆರ್‌.ಮಾರುಕಟ್ಟೆಯ(KR Market) ವರ್ತಕರು, ಬೀದಿ ಬದಿ ವ್ಯಾಪಾರಿಗಳನ್ನು ವಿಂಗಡಿಸಿ ಅವರ ಮೂಲ ವ್ಯಾಪಾರ ಸ್ಥಳವನ್ನು ಮುಂದಿನ ಆದೇಶದವರಿಗೆ ಬೇರೆಡೆಗೆ ಸ್ಥಳಾಂತರ ಮಾಡಿ ಆದೇಶಿಸಿತ್ತು. ಆದೇಶದನ್ವಯ ಚಿಲ್ಲರೆ ಹೂವಿನ ವ್ಯಾಪಾರಿಗಳನ್ನು ಬಿನ್ನಿಪೇಟೆ, ತರಕಾರಿ ಮತ್ತು ಹಣ್ಣು ಮಾರಾಟಗಾರರನ್ನು ಎನ್‌.ಟಿ.ಪೇಟೆ ಮುಖ್ಯರಸ್ತೆ, ಗುಂಡಪ್ಪ ರಸ್ತೆ, ಅವೆನ್ಯೂ ಮುಖ್ಯರಸ್ತೆಯಲ್ಲಿ ತಳ್ಳು ಗಾಡಿಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿತು.

Weekend Curfew: ಜನಜಂಗುಳಿಯಿಂದ ಇರುತ್ತಿದ್ದ ಕೆ ಆರ್ ಮಾರ್ಕೆಟ್ ಖಾಲಿ ಖಾಲಿ!

100 ರೂ ಸಹ ಸಂಪಾದನೆ ಆಗ್ತಿಲ್ಲ:
ಆದರೆ ಪಾಲಿಕೆ ಈ ನಿರ್ಧಾರದಿಂದ ಮೂಲ ಸ್ಥಳಗಳಲ್ಲಿ ನಿತ್ಯ 1000 ರುಪಾಯಿ ವ್ಯಾಪಾರ(Business) ಮಾಡುತ್ತಿದ್ದವರಿಗೆ ಸ್ಥಳಾಂತರದ ಮಾರುಕಟ್ಟೆಯಲ್ಲಿ ನಿತ್ಯ 100 ರು. ಸಂಪಾದಿಸುವುದು ಕಷ್ಟವಾಗಿದೆ. ಎಷ್ಟೋ ಗ್ರಾಹಕರಿಗೆ ವ್ಯಾಪಾರಿಗಳು ಇಲ್ಲಿಗೆ ಸ್ಥಳಾಂತರಗೊಂಡಿರುವುದು ಗೊತ್ತೇ ಇಲ್ಲ. ಕಳೆದೆರಡು ವರ್ಷದಿಂದ ಕೋವಿಡ್‌ ಹಾಕಿದ ಬರೆಯಿಂದ ಸುಧಾರಿಸಿಕೊಳ್ಳದ ಈ ವಲಯದ ಸಾವಿರಾರು ವ್ಯಾಪಾರಿಗಳ ಬದುಕು, ಮತ್ತೆ ಸ್ಥಳಾಂತರದ ಆದೇಶದಿಂದ ಮೂರಾಬಟ್ಟೆಗೆ ಆಗುತ್ತಿದೆ ಎಂದು ಚಿಲ್ಲರೆ ವ್ಯಾಪಾರಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕೆ.ಆರ್‌.ಮಾರುಕಟ್ಟೆಯಲ್ಲೇ ಕಳೆದ 50 ವರ್ಷದಿಂದ ಹೂ, ಹಣ್ಣು, ತರಕಾರಿ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದಾರೆ. ಸದರಿ ಮಾರುಕಟ್ಟೆವಿಕೇಂದ್ರಿಕರಣ ಆದೇಶದಿಂದ ಅವರೆಲ್ಲ ನಷ್ಟಅನುಭವಸುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಕೂಡಲೇ ಮೊದಲಿನಂತೆ ಮೂಲ ಸ್ಥಳದಲ್ಲೇ ವ್ಯಾಪಾರ ವಹಿವಾಟಿಗೆ ಅನುಮತಿ ಕೊಡಬೇಕು ಎಂದು ಬೀದಿ ಬದಿ ವ್ಯಾಪಾರಿಗಳ ಆಗ್ರಹವಾಗಿದೆ.

ಕೆಆರ್ ಮಾರ್ಕೆಟ್ ತೆರೆದು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ; ವ್ಯಾಪಾರಿಗಳ ಮನವಿ

ವ್ಯಾಪಾರಕ್ಕೆ ಸಮಯದ ಕೊರತೆ
ಕಲಾಸಿಪಾಳ್ಯ ಸಗಟು ತರಕಾರಿ ವರ್ತಕರಿಗೆ ಮಧ್ಯಾಹ್ನ 3ರಿಂದ ಮರುದಿನ ಬೆಳಗ್ಗೆ ನಸುಕಿನ ಜಾವ 3ರವರೆಗೆ ವ್ಯಾಪಾರಕ್ಕೆ ಆದೇಶಿಸಲಾಗಿದೆ. ಇದರಿಂದ ಇಲ್ಲಿನ ವರ್ತಕರು ತೊಂದರೆ ಅನುಭವಿಸುತ್ತಿದ್ದಾರೆ. ತರಕಾರಿ ಉತ್ಪನ್ನಗಳ ಲಾರಿಯಿಂದ ಇಳಿಸಲು ಸುಮಾರು 7-8 ಗಂಟೆ ಬೇಕು. ಇಕ್ಕಟ್ಟಾದ ಸ್ಥಳವಿರುವುದರಿಂದ ಕಲಾಸಿಪಾಳ್ಯದಲ್ಲಿ ಅನ್‌ಲೋಡಿಂಗ್‌ ವೇಳೆ ಸಂಚಾರ ದಟ್ಟಣೆ ಉಂಟಾಗಿ ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಸಮಯ ಪರಿಷ್ಕರಿಸಿ ಇಲ್ಲಿನ ವರ್ತಕರಿಗೆ ಹೆಚ್ಚು ಸಮಯ ನೀಡಬೇಕೆಂದು ತರಕಾರಿ ಸಗಟು ವರ್ತಕ ತರುಣ್‌ ಕೋರಿದರು.

ಅಲ್ಲದೇ ಜೆ.ಸಿ.ರಸ್ತೆಗಳಲ್ಲಿ ನಿಯಮ ಬಾಹಿರವಾಗಿ ಹೂ, ಹಣ್ಣು, ತರಕಾರಿ ಅಂಗಡಿಗಳು ತಲೆ ಎತ್ತಿವೆ. ಪಾಲಿಕೆ ಆದೇಶ ನಂತರ ನಾಲ್ಕು ದಿನ ಬಂದ್‌ ಆಗಿದ್ದ ಇಲ್ಲಿನ ಅಂಗಡಿ ಮುಂಗಟ್ಟುಗಳು ಮತ್ತೆ ಪುನಾರಂಭಗೊಂಡಿವೆ. ಆದರೆ ಈ ಬಗ್ಗೆ ಗಮನ ಹರಿಸದ ಅಧಿಕಾರಿಗಳು, ಪೊಲೀಸರು ಕಲಾಸಿಪಾಳ್ಯದಲ್ಲಿ ನಿಗದಿತ ಸಮಯಕ್ಕಿಂತ 10 ನಿಮಿಷ ತಡವಾದರೆ ಸಗಟು ವರ್ತಕರು ವ್ಯಾಪಾರಕ್ಕೆ ತಡೆಯೊಡ್ಡಿ ದೌರ್ಜನ್ಯವೆಸಗುತ್ತಾರೆÜ. ಪಾಲಿಕೆ ಆದೇಶಕ್ಕೂ ಮುನ್ನ ನಡೆದ ಪಟ್ಟಣ ವ್ಯಾಪಾರಿ ಸಮಿತಿ (ಟಿವಿಸಿ) ಸಭೆಯಲ್ಲಿ ವರ್ತಕರ ಅಭಿಪ್ರಾಯ ಕೇಳಿಲ್ಲ ಎಂದು ತರುಣ್‌ ಆರೋಪಿಸಿದರು.

ಸಮಸ್ಯೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ: ರಂಗಸ್ವಾಮಿ
ಆದೇಶಕ್ಕೂ ಮುನ್ನ ಪಾಲಿಕೆ, ಪೊಲೀಸ್‌ ಹಾಗೂ ವ್ಯಾಪಾರಿಗಳು ಮತ್ತು ವರ್ತಕರ ಸಮ್ಮುಖದಲ್ಲಿ ನಡೆದ ಟಿವಿಸಿ ಸಭೆಯಲ್ಲಿ ಹೂ, ಹಣ್ಣು, ತರಕಾರಿ ವ್ಯಾಪಾರಿಗಳಿಗೆ ತೊಂದರೆ ಆಗುವ ಬಗ್ಗೆ ಪ್ರಸ್ತಾಪವಾಗಿಲ್ಲ. ಸಭೆಯ ನಿರ್ಣಯವನ್ನು ಎಲ್ಲರೂ ಒಪ್ಪಿದ್ದರು. ಸದ್ಯ ಉಂಟಾಗಿರುವ ಸಮಸ್ಯೆ ಕುರಿತು ಸಂಬಂಧಿಸಿದ ವ್ಯಾಪಾರಿಗಳು ಒಕ್ಕೂಟದ ಗಮನಕ್ಕೆ ತಂದರೆ ಕೂಡಲೇ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.

Follow Us:
Download App:
  • android
  • ios