ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿದ್ದ 14 ಜಿಲ್ಲೆಗಳ 25,413 ರೈತರಿಗೆ ಸರ್ಕಾರ 265 ಕೋಟಿ ರೂ. ಬಾಕಿ ಹಣವನ್ನು ಪಾವತಿಸಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಈ ಹಣ ರೈತರ ಖಾತೆಗೆ ಜಮೆಯಾಗಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಯೋಜನೆಯಡಿ ರಾಗಿ ಮಾರಾಟ ಮಾಡಿದ್ದ 14 ಜಿಲ್ಲೆಯ 25,413 ರೈತರಿಗೆ ಕೊನೆಗೂ 265 ಕೋಟಿ ರು. ಅನ್ನು ಸರ್ಕಾರ ಪಾವತಿಸಿದೆ. ರಾಗಿ ಬೆಳೆಗಾರರಿಗೆ ಬಾಕಿ ಹಣ ಸಂದಾಯವಾಗದ ಕುರಿತು ಆ.30 ಹಾಗೂ ಅ.5ರಂದು ಕನ್ನಡಪ್ರಭ ವರದಿ ಮಾಡಿತ್ತು.
ಹಬ್ಬಕ್ಕೆ ಆದರೂ ಹಣ ಬಂತು ಅಂತ ನಿಟ್ಟಿಸುಬಿಟ್ಟ ರೈತರು
ಸೋಮವಾರ ಬೆಳಗ್ಗೆಯಿಂದಲೇ ಬಹುತೇಕ ರೈತರಿಗೆ ರಾಗಿ ಬಾಕಿ ಹಣ ಪಾವತಿಯಾಗಿದೆ. ಏನಾದರೂ ತಾಂತ್ರಿಕ ಸಮಸ್ಯೆ ಇದ್ದವರಿಗೆ ಮಾತ್ರ ಹಣ ಪಾವತಿಯಲ್ಲಿ ಒಂದು ದಿನ ತಡವಾಗಬಹುದಷ್ಟೇ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಗೌರಿ ಗಣೇಶ ಹಬ್ಬಕ್ಕಂತೂ ಹಣ ಬರಲಿಲ್ಲ. ನಾಡಹಬ್ಬ ದಸರಾಕ್ಕಾದರೂ ಹಣ ಪಾವತಿ ಮಾಡಿದ್ದಾರಲ್ಲ ಎಂದು ರೈತರು ನಿಟ್ಟುಸಿರುಬಿಟ್ಟಿದ್ದಾರೆ.
14 ಜಿಲ್ಲೆಯ 25,413 ರೈತರಿಗೆ ಹಣ
ಎಂಎಸ್‌ಪಿ ಅಡಿ 2025-26ನೇ ಸಾಲಿಗೆ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು. 15 ಜಿಲ್ಲೆಯ 2,46,605 ರೈತರು ಪ್ರತಿ ಕ್ವಿಂಟಲ್‌ಗೆ 4,886 ರು.ನಂತೆ 2500 ಕೋಟಿ ರು.ಗೂ ಅಧಿಕ ಮೌಲ್ಯದ 5,69,331 ಮೆಟ್ರಿಕ್ ಟನ್ ರಾಗಿಯನ್ನು ನೋಡೆಲ್ ಏಜೆನ್ಸಿಗಳ ಮೂಲಕ ಮಾರಾಟ ಮಾಡಿದ್ದರು. ಇದರಲ್ಲಿ 2.21 ಲಕ್ಷ ರೈತರಿಗೆ ಹಣ ಪಾವತಿಸಿದ್ದು, 14 ಜಿಲ್ಲೆಯ 25,413 ರೈತರಿಗೆ ತಿಂಗಳುಗಳಾದರೂ 265 ಕೋಟಿ ರು. ಬಾಕಿ ಉಳಿಸಿಕೊಳ್ಳಲಾಗಿತ್ತು.
‘ಬರ’ಗಾಲವಿದ್ದರೂ ಹಣ ಪಾವತಿ ವಿಳಂಬ
ತುಮಕೂರು ಜಿಲ್ಲೆಯ 10,146 ರೈತರಿಗೆ ಬರೋಬ್ಬರಿ 103 ಕೋಟಿ ರು. ಬಾಕಿ ಪಾವತಿಸಬೇಕಿತ್ತು. ಹಾಸನ ಜಿಲ್ಲೆಯ 5440 ರೈತರಿಗೆ 56 ಕೋಟಿ, ಮೈಸೂರು ಜಿಲ್ಲೆಯ 2648 ರೈತರಿಗೆ 26 ಕೋಟಿ, ಚಿಕ್ಕಮಗಳೂರು ಜಿಲ್ಲೆಯ 2499 ರೈತರಿಗೆ 27 ಕೋಟಿ ರು. ಬಾಕಿ ಇತ್ತು. ಚಿತ್ರದುರ್ಗ, ಮಂಡ್ಯ, ಚಾಮರಾಜನಗರ, ದಾವಣಗೆರೆ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ಒಟ್ಟಾರೆ 14 ಜಿಲ್ಲೆಯ ರೈತರಿಗೆ ರಾಗಿಯ ಹಣ ಪಾವತಿಸಬೇಕಿತ್ತು.
‘ಬರ’ಗಾಲವಿದ್ದರೂ ಹಣ ಪಾವತಿ ವಿಳಂಬ ಆಗುತ್ತಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ‘ಕನ್ನಡಪ್ರಭ’ ವಿಶೇಷ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.


