ಬೆಂಗಳೂರಿನಲ್ಲಿ 18 ವರ್ಷಗಳ ಕಾಲ ಕೆಲಸ ಮಾಡಿದ್ದರೂ ಕನ್ನಡ ಕಲಿಯಲು ನಿರಾಕರಿಸಿದ ಹಿಂದಿ ಭಾಷಿಕ ಸ್ನೇಹಿತೆಯ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು (ಮೇ.23): ರಾಜ್ಯ ರಾಜಧಾನಿ ಉತ್ತರ ಭಾರತೀಯರು ಹಾಗೂ ಹಿಂದಿವಾಲಾಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಿಗೆ ಆಗುತ್ತಲೇ ಇದೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರು ಉತ್ತರ ಭಾರತೀಯರಿಂದ ತಮಗಾದ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ತನ್ನ ಹಿಂದಿ ಸ್ನೇಹಿತೆಯ ಅಸಡ್ಡೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
18 ವರ್ಷಗಳ ಕಾಲ ನಗರದಲ್ಲಿ ಕೆಲಸ ಮಾಡಿದ್ದರೂ, ಕನ್ನಡ ಕಲಿಯಲು ನಿರಾಕರಿಸಿದ ಸ್ನೇಹಿತೆಯ ಬಗ್ಗೆ ಬೆಂಗಳೂರಿನ ನಿವಾಸಿಯೊಬ್ಬರು ಆನ್‌ಲೈನ್‌ನಲ್ಲಿ ಬರೆದುಕೊಂಡಿದ್ದು, ಕರ್ನಾಟಕದ ರಾಜಧಾನಿಯಲ್ಲಿ ಭಾಷಾ ಗುರುತು ಮತ್ತು ಸಾಂಸ್ಕೃತಿಕ ಸಂಯೋಜನೆಯ ಕುರಿತು ಬಿಸಿ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.
ಬೆಂಗಳೂರಿನ ಪ್ರಜ್ವಲ್ ಭಟ್ ಅವರು ಸೋಶಿಯಲ್ ಮೀಡಿಯಾ ವೇದಿಕೆ ಎಕ್ಸ್‌ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸುಮಾರು ಎರಡು ದಶಕಗಳಿದ್ದರೂ, ಅವರ ಸ್ನೇಹಿತ ಕನ್ನಡ ಮಾತನಾಡುತ್ತಿರಲಲ್ಲ ಅಥವಾ ಮತದಾನದಂತಹ ಸ್ಥಳೀಯ ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
'ಆಕೆಗೆ ನಾನು ಕನ್ನಡದಲ್ಲಿ ಸಂಭಾಷಣೆ ಮಾಡುವ ನುಡಿಗಟ್ಟುಗಳನ್ನು ಕಲಿಸಲು ಮಾಡಿದ ಆರಂಭಿಕ ಪ್ರಯತ್ನಗಳು ಫಲ ನೀಡಲಿಲ್ಲ. ಈ ವೇಳೆ ಕನ್ನಡಿಗರು ಪಕ್ಷಪಾತಿಗಳು ಎಂದು ಆಕೆ ಹೇಳುತ್ತಿದ್ದಳು' ಎಂದು ಪ್ರಜ್ವಲ್ ಭಟ್ ಬರೆದುಕೊಂಡಿದ್ದಾರೆ. ಅಂದಿನಿಂದ ನನ್ನ ಹಾಗೂ ಆಕೆಯ ಸಂಬಂದ ತಣ್ಣಗಾಗಿದೆ ಎಂದು ತಿಳಿಸಿದ್ದಾರೆ.
ಅವರ ಈ ಪೋಸ್ಟ್ ಬಳಿಕ ಇದೇ ರಿತಿಯ ಹತಾಶೆಗಳನ್ನು ವಿವರಿಸುವ ಸಾಲು ಸಾಲು ಕಾಮೆಂಟ್‌ಗಳು ಇದಕ್ಕೆ ಬಂದಿವೆ. ಒಬ್ಬ ಯೂಸರ್, ಈ ಮನೋಭಾವ ನಿಜವಾಗಿಯೂ ಕೆಟ್ಟದ್ದು ಎಂದು ಟೀಕೆ ಮಾಡಿದ್ದರೆ, ಇನ್ನೊಬ್ಬರು ಇದನ್ನು ಕಟು ಶಬ್ದಗಳಲ್ಲಿ ಟೀಕಿಸಿ ಬರೆದಿದ್ದರೆ. ಇನ್ನೂ ಕೆಲವರು ತಮಗೆ ಆದ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ 15 ವರ್ಷಗಳ ಕಾಲ ನಗರದಲ್ಲಿ ವಾಸಿಸುತ್ತಿದ್ದರೂ ಮತ್ತು ಕಾವೇರಿ ಜಲ ವಿವಾದದಲ್ಲಿ ತಮಿಳು ಹಿತಾಸಕ್ತಿಗಳನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದರೂ ಕನ್ನಡ ಕಲಿಯಲು ವಿರೋಧಿಸಿದ ತಮಿಳುನಾಡು ಮೂಲದ ವ್ಯಕ್ತಿಯ ಕಥೆಯೂ ಸೇರಿದೆ.
ಈ ನಡುವೆ ಕೆಲವು ನೆಟ್ಟಿಗರು ಸ್ಥಳೀಯ ಭಾಷೆಗಳನ್ನು ಕಲಿಯುವ ಬಗ್ಗೆ ತಮ್ಮ ಹೆಮ್ಮೆಯನ್ನು ಎತ್ತಿ ತೋರಿಸಿದರು. "ನಾನು ರಾಜಸ್ಥಾನದವನು... ಈಗ ನಾನು ಕರ್ನಾಟಕದಲ್ಲಿಯೇ ಉಳಿದು ತುಳು ಮತ್ತು ಕನ್ನಡ ಮಿಶ್ರಣವನ್ನು ಕಲಿತಿದ್ದೇನೆ. ಒಂದು ಭಾಷೆಯನ್ನು ಕಲಿಯುವುದು ಒಂದು ಸಾಧನೆ" ಎಂದು ಒಬ್ಬ ಯೂಸರ್ ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್‌ವೊಬ್ಬರು ಗ್ರಾಹಕರೊಂದಿಗೆ ಕನ್ನಡ ಮಾತನಾಡಲು ನಿರಾಕರಿಸಿ ಹಿಂದಿ ಬಳಸುವಂತೆ ಒತ್ತಾಯಿಸಿದ್ದಕ್ಕೆ ಸಂಬಂಧಿಸಿದ ಇತ್ತೀಚಿನ ವಿವಾದದ ಹಿನ್ನೆಲೆಯಲ್ಲಿ ಈ ಸಾಮಾಜಿಕ ಮಾಧ್ಯಮದ ಬೆಂಕಿಯ ಬಿರುಗಾಳಿ ಬಂದಿದೆ. ಈ ವೀಡಿಯೊ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶ ಮತ್ತು ಕನ್ನಡ ಪರ ಗುಂಪುಗಳಿಂದ ಪ್ರತಿಭಟನೆಗಳು ನಡೆದವು.
ಈ ಘಟನೆಯ ಬೆನ್ನಲ್ಲಿಯೇ ಎಸ್‌ಬಿಐ ಮ್ಯಾನೇಜರ್ ಕ್ಷಮೆಯಾಚಿಸಬೇಕಾಯಿತು, ಆದರೆ ಈ ಘಟನೆಯು ರಾಜ್ಯ ಸಂಸ್ಥೆಗಳಲ್ಲಿ ಭಾಷಾ ಗೌರವಕ್ಕಾಗಿ ಕರೆಗಳನ್ನು ಹೆಚ್ಚಿಸಿತು ಮತ್ತು ಬೆಂಗಳೂರಿನಲ್ಲಿ ಕನ್ನಡದ ಮರೆಯಾಗುತ್ತಿರುವ ಬಗ್ಗೆ ಆತಂಕಗಳನ್ನು ಹುಟ್ಟುಹಾಕಿದೆ.
