ಬೆಂಗಳೂರಿನ ಎಸ್‌ಬಿಐ ಶಾಖಾ ವ್ಯವಸ್ಥಾಪಕರೊಬ್ಬರು ಕನ್ನಡ ಮಾತನಾಡಲು ನಿರಾಕರಿಸಿ ಹಿಂದಿ ಭಾಷಾ ದರ್ಪ ತೋರಿದ್ದಕ್ಕೆ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದಾರೆ. ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಸರ್ಕಾರ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಬ್ಯಾಂಕ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ತರಬೇತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದೆ.
ಬೆಂಗಳೂರು (ಮೇ 21): ಬೆಂಗಳೂರಿನ ಹೊರವಲಯ ಅನೆಕಲ್ ತಾಲ್ಲೂಕಿನ ಸೂರ್ಯನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯ ಮ್ಯಾನೇಜರ್ ನಾನು ಕನ್ನಡ ಮಾತನಾಡೊಲ್ಲ, ನೀವೇ ಹಿಂದಿ ಮಾತನಾಡಿ. ಇಲ್ಲವೆಂದರೆ ಅದೇನು ಮಾಡ್ಕೋತೀರೋ ಮಾಡಿಕೊಳ್ಳಿ ಎಂದು ಹಿಂದಿ ದರ್ಪವನ್ನು ಮೆರೆದಿದ್ದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್‌ನನ್ನು ವರ್ಗಾವಣೆ ಮಾಡಿ ಬ್ಯಾಂಕ್ ಆಡಳಿತ ಮಂಡಳಿ ಶಿಕ್ಷೆ ನೀಡಿದೆ. ನಾನು ಕನ್ನಡ ಮಾತನಾಡೊಲ್ಲವೆಂದು ದರ್ಪ ತೋರಿದ್ದ ಮ್ಯಾನೇಜರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲಿಯೇ ಮ್ಯಾನೇಜರ್‌ನಲ್ಲಿ ವರ್ಗಾವಣೆ ಮಾಡಿದ್ದು, ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಆನೇಕಲ್‌ನ ಸೂರ್ಯನಗರದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಬಳಿ ಕೆಲಸದ ನಿಮಿತ್ತ ಹೋಗಿದ್ದ ಕನ್ನಡಿಗರೊಂದಿಗೆ ವ್ಯವಹರಿಸುವಾಗ ಮ್ಯಾನೇಜರ್ ಹಿಂದಿಯಲ್ಲಿ ಮಾತನಾಡಿದ್ದಾರೆ. ಆಗ ಹಿಂದಿ ಬಾರದ ಕನ್ನಡಿಗರು ಇಂಗ್ಲೀಷ್‌ನಲ್ಲಿ ಮಾತನಾಡಿ ಅಥವಾ ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದ್ದಾರೆ. ಇದಕ್ಕೆ ನಾನು ಹಿಂದಿಯಲ್ಲಿಯೇ ಮಾತನಾಡುವುದು. ಇದು ಇಂಡಿಯಾ ಎಲ್ಲರೂ ಹಿಂದಿ ಮಾತನಾಡಬೇಕು ಎಂದು ವಾದ ಮಾಡಿದ್ದಾರೆ. ಜೊತೆಗೆ, ನೀವು ಬ್ಯಾಂಕ್ ನಿಯಮಾವಳಿ ಪ್ರಕಾರ ಕೆಲಸ ಮಾಡುವ ಸ್ಥಳದ ಪ್ರಾದೇಶಿಕ ಭಾಷೆ ಕಲಿತು ಮಾತನಾಡಬೇಕು ಎಂದು ಗ್ರಾಹಕರು ತಿಳಿಸಿದ್ದಾರೆ. ಇದಕ್ಕೆ ಕ್ಯಾರೇ ಎನ್ನದ ಬ್ಯಾಂಕ್ ಮ್ಯಾನೇಜರ್ ಎಂದಿಗೂ ಕನ್ನಡ ಮಾತನಾಡುವುದಿಲ್ಲ, ನಾನು ಹಿಂದಿಯಲ್ಲೇ ಮಾತನಾಡುತ್ತೇನೆ ಎಂದು ಹೇಳಿರುವ ವಿಡಿಯೋ ಒಂದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಇದರ ಬೆನ್ನಲ್ಲಿಯೇ ಸೂರ್ಯನಗರ ಬ್ರ್ಯಾಂಚ್ ಮ್ಯಾನೇಜರ್ ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಲು ನಿರಾಕರಿಸಿ, ಸಾರ್ವಜನಿಕರೊಂದಿಗೆ ದುರಹಂಕಾರದಿಂದ ವರ್ತನೆ ತೋರಿಸಿದ್ದು, ರಾಜ್ಯದಾದ್ಯಂತ ತೀವ್ರ ಖಂಡನೆಗೆ ಗುರಿಯಾಗಿದೆ. ಸ್ಥಳೀಯ ಭಾಷೆಯ ಅಪಮಾನ ಮಾಡಿರುವ ಈ ದುರ್ಘಟನೆ ವಿರೋಧಿಸಿ ಜನರು ತೀವ್ರವಾಗಿ ಪ್ರತಿಭಟಿಸಿದರು. ಸಾರ್ವಜನಿಕರಿಂದ ಬಂದ ಪ್ರತಿಕ್ರಿಯೆಯ ಹಿನ್ನೆಲೆ, ಎಸ್‌ಬಿಐ ಆಡಳಿತ ಮಂಡಳಿಯು ತಕ್ಷಣ ಕ್ರಮ ಕೈಗೊಂಡು ಸಂಬಂಧಿತ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ.
ಆದಾಗ್ಯೂ, ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸಬಾರದು ಎಂಬುದು ಬಹುಮುಖ್ಯ. ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಯೂ ಗ್ರಾಹಕರೊಂದಿಗೆ ಗೌರವಪೂರ್ವಕವಾಗಿ ವರ್ತಿಸಬೇಕು ಮತ್ತು ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸಬೇಕು. ಇದೊಂದು ಕೇವಲ ಭಾಷಾ ಸಮಸ್ಯೆಯಲ್ಲ. ಇದುವರೆಗೂ ಆಳವಾಗಿ ಬೇರೂರಿರುವ ಭಾಷಾ ಗೌರವ ಮತ್ತು ಸಾಂಸ್ಕೃತಿಕ ಸ್ಪಷ್ಟತೆಯ ಕೊರತೆಯ ಪ್ರದರ್ಶನವಾಗಿದೆ. ಈ ಹಿನ್ನೆಲೆಯಲ್ಲಿ, ನಾನು ಹಣಕಾಸು ಸಚಿವಾಲಯ (@FinMinIndia) ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಸೇವಾ ಇಲಾಖೆ (Department of Financial Services) ಗೆ ಪ್ರಸ್ತಾಪವೊಂದನ್ನು ಮುಂದಿಡುತ್ತೇನೆ. ಭಾರತದೆಲ್ಲೆಡೆ ಬ್ಯಾಂಕ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾಶೀಲತೆ ತರಬೇತಿ ನೀಡುವುದು ಕಡ್ಡಾಯವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.


