ನನ್ನ ಕಂಪನಿಯಲ್ಲಿರುವ ಕನ್ನಡ ಭಾಷಿಕರಲ್ಲದ ಉದ್ಯೋಗಿಗಳು ನಾಳೆ ಕನ್ನಡ ಆತಂಕಕ್ಕೆ ತುತ್ತಾಗಬಾರದು. ಹೀಗಾಗಿ ಬೆಂಗಳೂರಿನ ಕಂಪನಿಯನ್ನು ಪುಣೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇನೆ ಎಂದು ಟೆಕ್ ಸಂಸ್ಥಾಪಕ ಘೋಷಿಸಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು(ಮೇ.23) ಭಾರಿ ವಿವಾದಕ್ಕೆ ಕಾರಣವಾಗಿದ್ದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಕನ್ನಡ ಮಾತನಾಡಲ್ಲ ಘಟನೆ ಬಳಿಕ ಇದೀಗ ಬೆಂಗಳೂರಿನಲ್ಲಿ ಮಹತ್ವದ ಘಟನೆಗಳು ನಡೆಯುತ್ತಿದೆ. ಇದೀಗ ಬೆಂಗಳೂರಿನಲ್ಲಿ ಟೆಕ್ ಕಂಪನಿ ಹುಟ್ಟುಹಾಕಿದ ಸಂಸ್ಥಾಪಕ ಇದೀಗ ಕನ್ನಡ ಭಾಷೆ ಕಾರಣದಿಂದ ತನ್ನ ಕಂಪನಿಯನ್ನು ಪುಣೆಗೆ ಸ್ಥಳಾಂತರಿಸುವುದಾಗಿ ಸಂಸ್ಥಾಪಕ ಘೋಷಿಸಿದ್ದಾರೆ.  ಕನ್ನಡ ಭಾಷಿಕರಲ್ಲದ ಕಂಪನಿ ಉದ್ಯೋಗಿಗಳು ನಾಳೆ ಕನ್ನಡ ವಿಚಾರದಲ್ಲಿ ಸಮಸ್ಯೆ ಎದುರಿಸಬಾರದು. ಉದ್ಯೋಗಿಗಳ ಸುರಕ್ಷತೆ, ಮುಂದಿನ ದಿನ ಸಂತ್ರಸ್ತರಾಗದಿರಲು ಕಂಪನಿಯನ್ನು 6 ತಿಂಗಳ ಒಳಗೆ ಪುಣೆಗೆ ಸ್ಥಳಾಂತರಿಸುವುದಾಗಿ ಟೆಕ್ ಕಂಪನಿ ಸಂಸ್ಥಾಪಕ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ಗಂಭೀರವಾದ ಕನ್ನಡ
ಬೆಂಗಳೂರಿನಲ್ಲಿ ಕನ್ನಡ ಮರೆಯಾಗುತ್ತಿದೆಯಾ? ಈ ಪ್ರಶ್ನೆಗೆ ನೇರ ಉತ್ತರ ಹೌದು. ಕನ್ನಡ ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಕಳೆದ ಹಲವು ದಶಕಗಳಿಂದ ಹೋರಾಟಗಳು, ಕಾರ್ಯಕ್ರಮಗಳು ನಡೆಯುತ್ತಿದೆ. ಆದರೆ ಪರಿಸ್ಥಿತಿ ಇತ್ತೀಚೆಗೆ ಕೈಮೀರುತ್ತಿದೆಯಾ ಅನ್ನೋ ಅನುಮಾನಗಳು ಹೆಚ್ಚಾಗುತ್ತಿದೆ. ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ತಾನು ಕನ್ನಡ ಮಾತನಾಡುವುದಿಲ್ಲ ಅನ್ನೋ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಮ್ಯಾನೇಜರ್ ಕ್ಷಮೆ ಕೇಳಿದ್ದರು. ಇದೀಗ ಈ ಘಟನೆ ಬಳಿಕ ಬೆಂಗಳೂರಿನಲ್ಲಿ ಟೆಕ್ ಕಂಪನಿ  ಆರಂಭಿಸಿ ಹಲವರಿಗೆ ಉದ್ಯೋಗ ನೀಡಿದದ್ ಕೌಶಿಕ್ ಮುಖರ್ಜಿ ತಮ್ಮ ಕಂಪನಿಯನ್ನು ಪುಣೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದರೆ. ಈ ಕುರಿತು ಎಕ್ಸ್ ಮೂಲಕ ಘೋಷಿಸಿದ್ದಾರೆ.

ನಮ್ಮ ಬೆಂಗಳೂರು ಕಂಪನಿಯನ್ನು ಪುಣೆಗೆ ಸ್ಥಳಾಂತರಿಸಲು ನಿರ್ಧರಿದ್ದೇನೆ. ಮುಂದಿನ 6 ತಿಂಗಳಲ್ಲಿ ಬೆಂಗಳೂರಿನ ಕಂಪನಿ ಪುಣೆಗೆ ಸ್ಥಳಾಂತರಗೊಳ್ಳಲಿದೆ. ಈ ಭಾಷೆಯ ಆತಂಕ, ನಡೆ ಹೀಗೆ ಮುಂದುವರೆದೆ ನನ್ನ ಕಂಪನಿಯ ಕನ್ನಡ ಭಾಷಿಕರಲ್ಲದ ಉದ್ಯೋಗಿಗಳು ಸಂತ್ರಸ್ತರಾಗಬಾರದು, ಅವರ ಸಮಸ್ಯೆ ಎದುರಿಸಬಾರದು. ಈ ಸೂಚನೆಯನ್ನು ಸಿಬ್ಬಂದಿಗಳೇ ನೀಡಿದ್ದಾರೆ. ಸಿಬ್ಬಂದಿಗಳ ಮನವಿಯನ್ನು ಪುರಸ್ಕರಿಸಿದ್ದೇನೆ ಎಂದು ಕೌಶಿಕ್ ಮುಖರ್ಜಿ ಎಕ್ಸ್ ಮಾಡಿದ್ದಾರೆ.

ಎಸ್‌ಬಿ ಮ್ಯಾನೇಜರ್ ಕನ್ನಡ ಮಾತನಾಡುವುದಿಲ್ಲ ಎಂದ ವಿಡಿಯೋವನ್ನು ಸಂಸದ ತೇಜಸ್ವಿ ಸೂರ್ಯ ಹಂಚಿಕೊಂಡಿದ್ದರು. ಈ ನಡೆ ಸ್ವೀಕಾರ್ಹವಲ್ಲ, ಗ್ರಾಹಕರ ಜೊತೆ ವ್ಯವಾಹರ ಮಾಡುವಾಗ, ಅದರಲ್ಲೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರ ಜೊತೆ ಅವರ ಬಾಷೆಯಲ್ಲಿ ವ್ಯವಹರಿಸುವುದು ಮುಖ್ಯ. ಈ ಮ್ಯಾನೇಜರ್ ವಿರುದ್ದ ಕ್ರಮ ಕೈಗೊಳ್ಳಿ, ಕರ್ನಾಟಕದಲ್ಲಿ ಕನ್ನಡ ಗ್ರಾಹಕರಿಗೆ ಕನ್ನಡದಲ್ಲಿ ಸೇವೆ ಅಗತ್ಯ ಎಂದು ತೇಜಸ್ವಿ ಸೂರ್ಯ ಎಕ್ಸ್ ಮಾಡಿದ್ದರು. ಇದೇ ಎಕ್ಸ್ ಪ್ರತಿಕ್ರಿಯಿಸಿರುವ ಕೌಶಿಕ್ ಮುಖರ್ಜಿ, ಇದು ಆತಂಕಕಾರಿಯಾಗಿದೆ. ಈ ಘಟನೆಯಿಂದ ನನ್ನ ಕಂಪನಿಯನ್ನು ಪುಣೆಗೆ ಸ್ಥಳಾಂತರಿಸುತ್ತಿದ್ದೇನೆ ಎಂದಿದ್ದಾರೆ.

ಈ ಘೋಷಣೆಗೆ ಬಹುತೇಕರ ಪ್ರತಿಕ್ರಿಯೆ ಏನು?
ಕೌಶಿಕ್ ಮುಖರ್ಜಿ ಕನ್ನಡ ಭಾಷೆ ಕಾರಣದಿಂದ ತಮ್ಮ ಕಂಪನಿ ಪುಣೆಗೆ ಸ್ಥಳಾಂತರಿಸುತ್ತಿದ್ದೇನೆ ಎಂದಾಗ ಹಲವರು ಪ್ರತಿಕ್ರಿಯಿಸಿದ್ದಾರೆ. ಈ ಪೈಕಿ ಬಹುತೇಕರು ಗುಡ್ ಬೈ ಎಂದಿದ್ದಾರೆ. ಸ್ಥಳೀಯ ಭಾಷೆಯನ್ನು ಗೌರವಿಸದ ನಿಮಗೆ ಪುಣೆಯಲ್ಲಿ ಭವ್ಯ ಸ್ವಾಗತ ಸಿಗುವುದಿಲ್ಲ. ಪುಣೆಯಲ್ಲಿ ಮರಾಠಿ ಪ್ರಧಾನ ಎಂದು ಹಲವರು ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿ ಒಂದಷ್ಟು ನೀರು ಉಳಿಯಿತು. ಟ್ರಾಫಿಕ್ ಸಮಸ್ಯೆಯೂ ಕಡಿಮೆಯಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ಸೌಲಭ್ಯ, ಕರ್ನಾಟಕದ ಸವಲತ್ತು ಬಳಸಿಕೊಂಡು ಕಂಪನಿ ಆರಂಭಿಸಿ ಆದಾಯಗಳಿಸಿದ್ದೀರಿ. ಆದರೆ ಕನ್ನಡ ಕಲಿಯುವ ಪ್ರಯತ್ನ ಮಾಡಲಿಲ್ಲ.  ಮುಖ್ಯವಾಗಿ ಕನ್ನಡಕ್ಕೆ ಗೌರವ ಕೊಡಿ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.