Chennamma health updates:  ಮಾಜಿ ಪ್ರಧಾನಿ ದೇವೇಗೌಡ ಅವರ ಪತ್ನಿ ಚೆನ್ನಮ್ಮರ ಆರೋಗ್ಯ ಸ್ಥಿರವಾಗಿದೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ತಿಳಿಸಿದೆ. ಆರೋಗ್ಯ ಚೇತರಿಕೆಯ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.  ಆ ವಿವರ ಇಲ್ಲಿದೆ.

ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮರ (Chennamma) ಆರೋಗ್ಯಕ್ಕೆ ಸಂಬಂಧಿಸಿ ಹೆಲ್ತ್‌ ಬುಲೆಟಿನ್ ಬಿಡುಗಡೆ ಆಗಿದೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ಮಣಿಪಾಲ್ ಆಸ್ಪತ್ರೆಯ ಡಾಕ್ಟರ್ ಸತ್ಯನಾರಾಯಣ, ಚೆನ್ನಮ್ಮ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಹತೋಟಿಗೆ ಬಂದ ಉಸಿರಾಟದ ತೊಂದರೆ

ಡಾ. ಸತ್ಯನಾರಾಯಣ ಅವರ ಪ್ರಕಾರ, ನಿನ್ನೆ ರಾತ್ರಿ ಚೆನ್ನಮ್ಮ ಅವರ ಆರೋಗ್ಯ ಸ್ಥಿತಿ ಸ್ವಲ್ಪ ಗಂಭೀರವಾಗಿತ್ತು. ಈಗ ಶೇ. 20 ರಿಂದ 30 ರಷ್ಟು ಉಸಿರಾಟದ ತೊಂದರೆ ಹತೋಟಿಗೆ ಬರುತ್ತಿದೆ. ಉಸಿರಾಟಕ್ಕಾಗಿ ಅವರು ಪಡುತ್ತಿದ್ದ ಶ್ರಮ ಈಗ ಕಡಿಮೆಯಾಗಿದೆ. ನಿನ್ನೆಗಿಂತ ಇಂದು ಅವರು ಚೇತರಿಕೆ ಕಂಡಿದ್ದಾರೆ ಎಂದು ತಿಳಿಸಿದ್ದಾರೆ.

ವೆಂಟಿಲೇಟರ್‌ನಲ್ಲಿ ಇಲ್ಲ

ಜನರ ಆತಂಕಕ್ಕೆ ತೆರೆ ಎಳೆದಿರುವ ವೈದ್ಯರು, ಚೆನ್ನಮ್ಮ ಅವರು ಸದ್ಯಕ್ಕೆ ವೆಂಟಿಲೇಟರ್‌ನಲ್ಲಿ ಇಲ್ಲ. ಅವರು ಸಹಜವಾಗಿಯೇ ಉಸಿರಾಟ ನಡೆಸುತ್ತಿದ್ದಾರೆ. ಆದರೆ ಅವರಿಗೆ ಪೂರಕವಾದ ವೈದ್ಯಕೀಯ ವ್ಯವಸ್ಥೆಗಳನ್ನು (Supportive care) ನೀಡಲಾಗುತ್ತಿದೆ. ರಕ್ತದೊತ್ತಡ (BP) ಸೇರಿದಂತೆ ಉಳಿದೆಲ್ಲಾ ಪ್ಯಾರಾಮೀಟರ್‌ಗಳು ಸದ್ಯಕ್ಕೆ ಸ್ಥಿರವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ. 80 ವರ್ಷ ಮೇಲ್ಪಟ್ಟಾಗ ದೇಹವು ಚಿಕಿತ್ಸೆಗೆ ಸ್ಪಂದಿಸುವುದು ಸ್ವಲ್ಪ ನಿಧಾನವಾಗುತ್ತದೆ. ಕೆಲವು ವಯೋಸಹಜ ವ್ಯಾಧಿಗಳು ಕಾಣಿಸಿಕೊಳ್ಳುತ್ತಿವೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಚಿಕಿತ್ಸೆ ನಿರಂತರವಾಗಿ ನಡೆಯಬೇಕಿದೆ. ಅವರಿಗೆ ಯಾವುದೇ ರೀತಿಯ ನೋವು ಅಥವಾ ಸಂಕಟವಾಗದಂತೆ ನಾವು ಎಚ್ಚರಿಕೆ ವಹಿಸುತ್ತಿದ್ದೇವೆ ಎಂದಿದ್ದಾರೆ.

ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ

ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳ ಬಗ್ಗೆ ವೈದ್ಯರು ಮನವಿ ಮಾಡಿದ್ದಾರೆ. ಚೆನ್ನಮ್ಮ ಅವರ ಬಗ್ಗೆ ಯಾವುದೇ ಸುಳ್ಳು ವದಂತಿಗಳನ್ನು ಹರಡಬೇಡಿ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಕರ್ತವ್ಯವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ, ಉಳಿದದ್ದು ಭಗವಂತನಿಗೆ ಬಿಟ್ಟಿದ್ದು ಎಂದು ಡಾ. ಸತ್ಯನಾರಾಯಣ ಹೇಳಿದ್ದಾರೆ. ಚೆನ್ನಮ್ಮ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಪ್ರಾರ್ಥಿಸುತ್ತಿದ್ದಾರೆ.