ಬೆಂಗಳೂರು ನಮ್ಮ ಮೆಟ್ರೋದಲ್ಲಿ ಶಿಸ್ತು ಮತ್ತು ಸುರಕ್ಷತೆಗಾಗಿ BMRCL ನಿಯಮ ಉಲ್ಲಂಘನೆ ದಂಡವನ್ನು 50 ಪಟ್ಟು ಹೆಚ್ಚಿಸಿದೆ. ಹಳಿಗೆ ಜಿಗಿಯುವುದು, ರೀಲ್ಸ್ ಮಾಡುವುದು, ಗೋಡೆಗಳ ಮೇಲೆ ಬರೆಯುವುದು ಮುಂತಾದ ತಪ್ಪುಗಳಿಗೆ ಈಗ ₹2,500 ರಿಂದ ₹25,000 ವರೆಗೆ ದಂಡ ವಿಧಿಸಲಾಗುತ್ತದೆ. ಈ ಹೊಸ ನಿಯಮಗಳು 'ಜನ ವಿಶ್ವಾಸ್ ಕಾಯ್ದೆ' ಅಡಿಯಲ್ಲಿ ಜಾರಿಗೆ ಬಂದಿವೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಲೈಫ್‌ಲೈನ್ ಎಂದೇ ಕರೆಯಲ್ಪಡುವ 'ನಮ್ಮ ಮೆಟ್ರೋ' ಪ್ರಯಾಣಿಕರಲ್ಲಿ ಶಿಸ್ತು, ಸುರಕ್ಷತೆ ಮತ್ತು ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮೆಟ್ರೋ ನಿಲ್ದಾಣ ಹಾಗೂ ರೈಲುಗಳಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದು, ದಂಡದ ಮೊತ್ತವನ್ನು ಬರೋಬ್ಬರಿ 10 ರಿಂದ 50 ಪಟ್ಟು ಹೆಚ್ಚಳ ಮಾಡಿದೆ.

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ರೂಪಿಸಿದ್ದ 'ಜನ ವಿಶ್ವಾಸ್ ಕಾಯ್ದೆ (ನಿಬಂಧನೆ ತಿದ್ದುಪಡಿ) ಮಸೂದೆ-2026' ಕ್ಕೆ ಕಳೆದ ಏಪ್ರಿಲ್‌ನಲ್ಲಿ ರಾಷ್ಟ್ರಪತಿಗಳು ಅಂಗೀಕಾರ ನೀಡಿದ್ದರು. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಮೆಟ್ರೋ ಸಂಸ್ಥೆಗಳಿಗೆ ನಿಯಮ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಅದರಂತೆ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋದಲ್ಲಿ ಈ ನೂತನ ದಂಡದ ನಿಯಮಗಳನ್ನು ಅನುಷ್ಠಾನಕ್ಕೆ ತಂದಿದೆ. ಹೊಸ ನಿಯಮಗಳ ಪ್ರಕಾರ ಕನಿಷ್ಠ ₹2,500 ರಿಂದ ಗರಿಷ್ಠ ₹25,000 ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಮೆಟ್ರೋದಲ್ಲಿ ಯಾವ ಉಲ್ಲಂಘನೆಗೆ ಎಷ್ಟು ದಂಡ?

ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಸಾರ್ವಜನಿಕ ಆಸ್ತಿ ರಕ್ಷಣೆಗಾಗಿ ಪರಿಷ್ಕರಿಸಲಾದ ನೂತನ ದಂಡದ ವಿವರಗಳು ಈ ಕೆಳಗಿನಂತಿವೆ:

ಹಳಿಗೆ ಜಿಗಿಯುವುದು, ಹಳಿಯ ಮೇಲೆ ಓಡಾಡುವುದು, ಟಿಕೆಟ್/ಪಾಸ್ ದುರ್ಬಳಕೆ ಹಾಗೂ ನಕಲಿ ಟಿಕೆಟ್ ಬಳಕೆಗೆ ₹5,000 ರಿಂದ ₹25,000 ವರೆಗೆ ದಂಡ ಬೀಳಲಿದೆ. ಈ ಹಿಂದೆ ₹500 ರಿಂದ ₹5,000 ವರೆಗೆ ಇತ್ತು. ಸುರಕ್ಷತೆಗೆ ಧಕ್ಕೆ ತರುವ ಅತ್ಯಂತ ಗಂಭೀರ ತಪ್ಪು ಇದಾಗಿದೆ.

ನಿಲ್ದಾಣದ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವುದು, ಚಿತ್ರ ಬಿಡಿಸುವುದು, ಬರೆಯುವುದು ಅಥವಾ ಸಾರ್ವಜನಿಕ ಆಸ್ತಿಗೆ ಹಾನಿ ₹10,000 ದಂಡ ಹಾಕಲಿದೆ. ಸೌಂದರ್ಯ ಹಾಳು ಮಾಡುವ ಈ ಕೃತ್ಯಕ್ಕೆ ಈ ಹಿಂದೆ ಕೇವಲ ₹1,000 ದಂಡವಿತ್ತು.

ಅನುಮತಿಯಿಲ್ಲದೆ ವ್ಯಾಪಾರ ಮಾಡುವುದು, ವಸ್ತುಗಳ ಮಾರಾಟ ಹಾಗೂ ಅನಗತ್ಯ ಪ್ರಚಾರ ನಡೆಸುವುದು ₹5,000 ದಂಡ ಬೀಳಲಿದೆ. ನಿಲ್ದಾಣದ ಆವರಣದಲ್ಲಿ ಅನಧಿಕೃತ ವಾಣಿಜ್ಯ ಚಟುವಟಿಕೆ ತಡೆಯಲು ಜಾರಿಯಾಗುತ್ತಿದೆ.

ರೈಲಿನಲ್ಲಿ ರೀಲ್ಸ್ ಮಾಡುವುದು, ಆಹಾರ ಸೇವನೆ (ತಿಂಡಿ-ತಿನಿಸು), ನೆಲದ ಮೇಲೆ ಕುಳಿತುಕೊಳ್ಳುವುದು, ಜೋರಾಗಿ ಮ್ಯೂಸಿಕ್ ಹಾಕಿ ಕಿರಿಕಿರಿ ಮಾಡುವುದು ₹2,500 ರಿಂದ ₹10,000 ವರೆಗೆ ದಂಡ ಬೀಳಲಿದೆ. ಈ ಹಿಂದೆ ₹500 ದಂಡ ಇತ್ತು. ಇತರ ಪ್ರಯಾಣಿಕರ ನೆಮ್ಮದಿಗೆ ಭಂಗ ತರುವುದನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

ಮದ್ಯಪಾನ ಮಾಡಿ ಪ್ರಯಾಣಿಸುವುದು, ಗಲಾಟೆ/ಜಗಳ ಮಾಡುವುದು, ಉಗುಳುವುದು ಮತ್ತು ಅಸಭ್ಯ ವರ್ತನೆ ₹2,500 ಸಾರ್ವಜನಿಕ ಸ್ಥಳದಲ್ಲಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವವರಿಗೆ ಬಿಸಿ ಮುಟ್ಟಿಸಲು ಈ ನಿಯಮ.

ಪಟಾಕಿ, ಸ್ಫೋಟಕ ವಸ್ತುಗಳು, ಅಪಾಯಕಾರಿ ರಾಸಾಯನಿಕ ಅಥವಾ ನಿಷೇಧಿತ ವಸ್ತುಗಳ ಸಾಗಾಟ ₹2,500 ದಂಡ. ಈ ಹಿಂದೆ ಇದಕ್ಕೆ ₹500 ದಂಡವಿತ್ತು. ಸುರಕ್ಷತೆಯ ದೃಷ್ಟಿಯಿಂದ ದಂಡ ಹೆಚ್ಚಿಸಲಾಗಿದೆ.

ಪ್ರತಿ 3 ವರ್ಷಕ್ಕೊಮ್ಮೆ ದಂಡದ ಮೊತ್ತ ಹೆಚ್ಚಳ:

ಈ ನೂತನ ಕಾಯ್ದೆಯ ಪ್ರಕಾರ, ಮೆಟ್ರೋದಲ್ಲಿ ನಿಗದಿಪಡಿಸಲಾದ ಈ ಎಲ್ಲಾ ದಂಡದ ಮೊತ್ತವನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಸ್ವಯಂಚಾಲಿತವಾಗಿ (Automatic) ಶೇಕಡಾ 10 ರಷ್ಟು ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ನಿಯಮ ಉಲ್ಲಂಘನೆಗೆ ಶಾಶ್ವತ ತಡೆ ಒಡ್ಡುವುದು ಬಿಎಂಆರ್‌ಸಿಎಲ್ ಉದ್ದೇಶವಾಗಿದೆ.

ಆತ್ಮHತ್ಯೆ ತಡೆಗೆ ₹1,274 ಕೋಟಿ ವೆಚ್ಚದಲ್ಲಿ 'ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್' ಅಳವಡಿಕೆ

ಮೆಟ್ರೋ ಹಳಿಗಳ ಮೇಲೆ ಜಿಗಿದು ಆತ್ಮHತ್ಯೆ ಮಾಡಿಕೊಳ್ಳುವ ಮತ್ತು ಆತ್ಮಹತ್ಯೆಗೆ ಯತ್ನಿಸುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇದರಿಂದ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿರುವುದರ ಜೊತೆಗೆ ಮೆಟ್ರೋ ಸಂಚಾರದಲ್ಲೂ ಭಾರಿ ವ್ಯತ್ಯಯವಾಗುತ್ತಿದೆ.

ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಿಎಂಆರ್‌ಸಿಎಲ್ ಸುಮಾರು ₹1,274 ಕೋಟಿ ಭಾರಿ ವೆಚ್ಚದಲ್ಲಿ ಮೆಟ್ರೋ ನಿಲ್ದಾಣಗಳ ಪ್ಲಾಟ್‌ಫಾರ್ಮ್‌ಗಳಲ್ಲಿ 'ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್' (PSD) ಅಳವಡಿಸುವ ಬೃಹತ್ ಯೋಜನೆ ರೂಪಿಸಿದೆ.

ಈಗ ಚಾಲ್ತಿಯಲ್ಲಿರುವ 35 ನಿಲ್ದಾಣಗಳು ಸೇರಿದಂತೆ ಒಟ್ಟು 191 ಮೆಟ್ರೋ ನಿಲ್ದಾಣಗಳಲ್ಲಿ ಹಂತ ಹಂತವಾಗಿ ಈ ಸ್ವಯಂಚಾಲಿತ ಗೇಟ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ.

ಈಗಾಗಲೇ ನಮ್ಮ ಮೆಟ್ರೋದ 'ಗುಲಾಬಿ ಮಾರ್ಗ'ದ (Pink Line) ಸುರಂಗ ಮಾರ್ಗದ ನಿಲ್ದಾಣಗಳಲ್ಲಿ ಸ್ಕ್ರೀನ್ ಡೋರ್ ಅಳವಡಿಕೆ ಕಾರ್ಯ ಆರಂಭಗೊಂಡಿದೆ.

ಮುಂಬರುವ ದಿನಗಳಲ್ಲಿ ನಮ್ಮ ಮೆಟ್ರೋದ ಎಲ್ಲಾ ಪ್ರಮುಖ ನಿಲ್ದಾಣಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ರೈಲು ಬಂದು ನಿಂತಾಗ ಮಾತ್ರ ಈ ಸ್ಕ್ರೀನ್ ಡೋರ್‌ಗಳು ತೆರೆದುಕೊಳ್ಳುವುದರಿಂದ, ಸಾರ್ವಜನಿಕರು ಹಳಿಗೆ ಜಿಗಿಯುವುದನ್ನು ಸಂಪೂರ್ಣವಾಗಿ ತಡೆಯಬಹುದು.

ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಸ್ಪ್ರೇ ಆತಂಕ: ಸಿಕ್ಕಿಬೀಳದ ಕಿಡಿಗೇಡಿ

ಇದೇ ಸಂದರ್ಭದಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತೆಯ ಅಗತ್ಯತೆಯನ್ನು ಸಾರುವ ಘಟನೆಯೊಂದು ಇಂದಿರಾನಗರದಲ್ಲಿ ನಡೆದಿದೆ. ಗುರುವಾರ ರಾತ್ರಿ ಸುಮಾರು 7.30ರ ಸುಮಾರಿಗೆ ನೇರಳೆ ಮಾರ್ಗದ ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರು ಹೊರಬರುತ್ತಿದ್ದಾಗ, ಮಾಸ್ಕ್ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ಹಠಾತ್ ಆಗಿ ಪ್ರಯಾಣಿಕರ ಮೇಲೆ ಏನೋ ದ್ರವವನ್ನು ಸಿಂಪಡಿಸಿ ಓಡಿಹೋಗಿದ್ದಾನೆ.

ನಿಲ್ದಾಣದ ಆವರಣದಲ್ಲಿ ಹೊಗೆಯಂತಹ ವಾತಾವರಣ ಆವರಿಸಿದ್ದರಿಂದ ರಾಸಾಯನಿಕ ದಾಳಿ ನಡೆದಿರಬಹುದು ಎಂದು ಪ್ರಯಾಣಿಕರು ಮೂಗು ಮುಚ್ಚಿಕೊಂಡು ಆತಂಕದಿಂದ ಓಡಾಡಿದರು. ತಕ್ಷಣ ಎಚ್ಚೆತ್ತ ಮೆಟ್ರೋ ಅಧಿಕಾರಿಗಳು ತನಿಖೆ ನಡೆಸಿದಾಗ, ಆ ಕಿಡಿಗೇಡಿ ಸಿಂಪಡಿಸಿದ್ದು ಯಾವುದೇ ಅಪಾಯಕಾರಿ ರಾಸಾಯನಿಕವಲ್ಲ, ಬದಲಿಗೆ 'ರೂಮ್ ಫ್ರೆಶ್‌ನರ್' ಎಂದು ತಿಳಿದುಬಂದ ಬಳಿಕ ಎಲ್ಲರೂ ನಿಟ್ಟುಸಿರು ಬಿಟ್ಟರು. ಸದ್ಯ ಇಂದಿರಾನಗರ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಅನಗತ್ಯ ಆತಂಕ ಸೃಷ್ಟಿಸಿದ ಆ ಕಿಡಿಗೇಡಿಯ ಪತ್ತೆಗೆ ಜಾಲ ಬೀಸಿದ್ದಾರೆ.

ನಮ್ಮ ಮೆಟ್ರೋ ಕೇವಲ ಪ್ರಯಾಣಕ್ಕೆ ಮಾತ್ರವಲ್ಲ, ಅದು ಬೆಂಗಳೂರಿನ ಹೆಮ್ಮೆ. ಪ್ರಯಾಣಿಕರು ನಿಯಮಗಳನ್ನು ಗೌರವಿಸಿ, ದಂಡದಿಂದ ಪಾರಾಗುವುದರ ಜೊತೆಗೆ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕಿದೆ.