ಬಳ್ಳಾರಿಯಲ್ಲಿ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ನಡೆದ ಗಲಾಟೆಯಲ್ಲಿ ಗಾಯಗೊಂಡ  ಶಾಸಕ ಭರತ್‌ ರೆಡ್ಡಿ ಆಪ್ತನನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದ್ದು, ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿದಂತೆ 11 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬಳ್ಳಾರಿ: ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ಅನಾವರಣ ಕಾರ್ಯಕ್ರಮದ ಬ್ಯಾನರ್ ತೆರವು ವಿಚಾರಕ್ಕೆ ಸಂಬಂಧಿಸಿದ ಗಲಾಟೆಯಲ್ಲಿ ಗಾಯಗೊಂಡಿದ್ದ ಶಾಸಕ ನಾರಾ ಭರತ್ ರೆಡ್ಡಿಯವರ ಆಪ್ತ ಸತೀಶ್ ರೆಡ್ಡಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನಿನ್ನೆ ಜನಾರ್ದನ ರೆಡ್ಡಿ ಮನೆ ಮುಂದೆ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ಅನಾವರಣ ಕಾರ್ಯಕ್ರಮದ ಬ್ಯಾನರ್ ಕಟ್ಟು ವೇಳೆ ಜನಾರ್ಧನ ರೆಡ್ಡಿ ಮತ್ತು ಭರತ್ ರೆಡ್ಡಿ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದರು.

ಈ ಗಲಾಟೆಗೆ ಸಂಬಂಧಿಸಿದಂತೆ ಈಗ ಜನಾರ್ದನ ರೆಡ್ಡಿ, ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಶಾಸಕ ಭರತ್ ರೆಡ್ಡಿ ಆಪ್ತ ಚಾನಾಳ್‌ ಶೇಖ‌ರ್ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಬ್ಯಾನರ್ ಹಾಕೋ ವಿಚಾರದಲ್ಲಿ ಗಲಾಟೆ ಮಾಡಿದ್ದಾರೆಂದು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಕಿರುವ ಬ್ಯಾನರ್ ಕಿತ್ತು ಹಾಕಿ ಬೈದು ದೌರ್ಜನ್ಯ ಮಾಡಿದ್ದಾರೆಂದು ಪ್ರಕರಣ ದಾಖಲಾಗಿದೆ.

  • ಜನಾರ್ಧನ್ ರೆಡ್ಡಿ
  • ಸೋಮಶೇಖರ್ ರೆಡ್ಡಿ
  • ಶ್ರೀರಾಮುಲು
  • ಮೋತ್ಕರ್ ಶ್ರೀನಿವಾಸ್
  • ಪ್ರಕಾಶ್ ರೆಡ್ಡಿ
  • ರಮಣ
  • ಪಾಲಣ್ಣ
  • ದಿವಾಕರ್
  • ಮಾರುತಿ ಪ್ರಸಾದ್
  • ದಮ್ಮೂರ್ ಶೇಖರ್
  • ಅಲಿಖಾನ್

ಒಟ್ಟು 11 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಲ್ಲು ತೆಗೆದುಕೊಂಡು ಗುಂಪು ಗುಂಪಾಗಿ ಕಟ್ಟಿಗೆ, ಮಚ್ಚುಗಳನ್ನು ಮತ್ತು ಸೋಡ ಬಾಟಲಿ ಹಿಡಿದುಕೊಂಡು ಬಂದು ಹಲ್ಲೆ ಮಾಡಿದ್ದಾರೆಂದು ಆರೋಪ ಕೇಳಿ ಬಂದಿದೆ.

ಜನಾರ್ದನ ರೆಡ್ಡಿ ಮನೆಯ ಮುಂದೆ ಶಾಂತ ಪ್ರಸ್ತುತ ಶಾಂತ ಸ್ಥಿತಿ

ಗಲಾಟೆ ನಡೆದ ಜನಾರ್ದನ ರೆಡ್ಡಿ ಮನೆಯ ಮುಂದೆ ಪ್ರಸ್ತುತ ಶಾಂತ ವಾತಾವರಣವಿದ್ದು, ಒಂದೆರಡು ಪೊಲೀಸರ ಡಿಆರ್ ವಾಹನ ಮತ್ತೊಂದಷ್ಟು ಪೊಲೀಸರು ಬಿಟ್ರೇ ಬೇರೆ ಯಾರು ಇಲ್ಲ. ಪೊಲೀಸ್ ಮೂಲಗಳ ಪ್ರಕಾರ ನಿನ್ನೆ ಗಲಾಟೆಯಲ್ಲಿ ಒಂಭತ್ತಕ್ಕೂ ಹೆಚ್ಚು ಬುಲೆಟ್ ಹೊರ ಬಂದಿವೆ. ಬುಲೆಟ್ ಯಾವ ಪಿಸ್ತೂಲ್ ನಿಂದ ಬಂದಿವೆ ಅನ್ನೋ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕ್ತಿದ್ದಾರೆ.

ಮೃತ ರಾಜಶೇಖರ ದೇಹದಲ್ಲಿ ಒಂದು ಗುಂಡು ಪತ್ತೆಯಾಗಿದೆ. ಎಫ್ಎಸ್ಎಲ್ ತಂಡ ಇನ್ನೂಳಿದ ಗುಂಡುಗಳನ್ನು ಕಲೆಕ್ಟ್ ಮಾಡಿಕೊಂಡಿದೆ. ಘಟನೆಗೆ ಬಳಸಿದ ಕಾರದ ಪುಡಿ, ಸೋಡಬಾಟಲಿ ಎಲ್ಲವನ್ನೂ ತಂಡ ಪರಿಶೀಲಿಸಿದೆ.