ಬೆಂಗಳೂರು (ಆ. 04): ರಸ್ತೆ ಸಂಚಾರಕ್ಕೆ ಸಂಬಂಧಿಸಿದ ಹೊಸ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಪಣ ತೊಟ್ಟು ಜಾರಿಗೊಳಿಸಿದೆ. ಈ ಮೋಟಾರು ವಾಹನ (ತಿದ್ದುಪಡಿ) ಮಸೂದೆಯು ಹಲವಾರು ರೀತಿಯ ಸುಧಾರಿತ ಅಂಶಗಳೊಂದಿಗೆ ಲೋಕಸಭೆ ಮತ್ತು ರಾಜ್ಯಸಭೆಯ ಅಲ್ಪಮತದ ವಿರೋಧದ ನಡುವೆ ಯಶಸ್ವಿಯಾಗಿ ಅಂಗೀಕಾರವಾಗಿದೆ. ಇನ್ನೇನು ರಾಷ್ಟ್ರಪತಿಯವರ ಅಂಕಿತದೊಂದಿಗೆ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬರುತ್ತದೆ.

ಮಾದರಿ ರಾಷ್ಟ್ರದ ಸಾಲಿಗೆ ಭಾರತ

ಈ ತಿದ್ದುಪಡಿ ಕಾಯ್ದೆಯು ಒಳಗೊಂಡಿರುವ ಟ್ರಾಫಿಕ್‌ ಉಲ್ಲಂಘನೆಯ ನಿಯಮಗಳಿಂದ ನಮ್ಮ ದೇಶ ವಾಹನ ಸಂಚಾರ ವ್ಯವಸ್ಥೆಯಲ್ಲಿ ಒಂದು ಮಾದರಿ ರಾಷ್ಟ್ರವೆನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಕಟ್ಟುನಿಟ್ಟಿನ ಕಾನೂನಾಗಿ ತನ್ನ ಅಧಿಕಾರವನ್ನು ಚಲಾಯಿಸಿದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಯಾಗದೆ ಇರಲು ಸಾಧ್ಯವೇ ಇಲ್ಲ.

ಮಸೂದೆ ಪಾಸ್, ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಭಾರೀ ದಂಡ!: ಯಾವುದಕ್ಕೆ ಎಷ್ಟು ದಂಡ?

ನಮ್ಮ ದೇಶದಲ್ಲಿ ಕಟ್ಟುನಿಟ್ಟಿನ ಕೆಲವೇ ಕೆಲವು ಕಾಯ್ದೆಗಳಲ್ಲಿ ಇದೂ ಒಂದಾಗಿ ಕಾರ್ಯ ನಿರ್ವಹಿಸುವುದು ಸಂತೋಷದ ವಿಷಯ. ಆದರೆ ಈ ಕಟ್ಟುನಿಟ್ಟಿನ ನಿಯಮವನ್ನು ಪಾಲನೆ ಮಾಡುವುದು ಕಷ್ಟವಾದರೂ ಕೂಡ, ನಿಯಮದಲ್ಲಿ ಬೃಹತ್‌ ಷರತ್ತುಗಳ ಭಯದಿಂದಾರೂ ಜನಸಾಮಾನ್ಯರು ಎಚ್ಚರಗೊಳ್ಳಬಹುದು.

ಭ್ರಷ್ಟಾಚಾರಕ್ಕೆ ಕುಮ್ಮಕ್ಕು?

ಈ ನಿಯಮ ಹಾದಿ ತಪ್ಪುವುದು ನಿಯಮಗಳನ್ನು ಪಾಲನೆ ಮಾಡುವವರಿಂದಲ್ಲ, ಬದಲಾಗಿ ನಿಯಮಗಳನ್ನು ಪಾಲನೆ ಮಾಡಿಸುವವರಿಂದಾಗಬಹುದು ಎನ್ನುವ ಸಂಶಯವೊಂದು ಕಾಡುತ್ತಿದೆ. ಹಾಗಂತ ನಾನು ಇಡೀ ಆಡಳಿತವನ್ನೇ ದೂರುತ್ತಿಲ್ಲ.

ಬದಲಾಗಿ ನಾ ಕಂಡಂತೆ ಕೆಲವು ನಿಷ್ಠಾವಂತ ಟ್ರಾಫಿಕ್‌ ಪೊಲೀಸರ ಹೊರತಾಗಿ ಅನೇಕರು ತಮ್ಮ ಸೇವೆಗೆ ಸರ್ಕಾರ ಕೊಡುವ ಸಂಬಳಕ್ಕೂ ಮೀರಿದ ದುರಾಸೆಯ ಗಿಂಬಳ(ಲಂಚ)ಕ್ಕೆ ಆಸೆಪಟ್ಟು ಬಿಕ್ಷುಕರಂತೆ ಕೈಚಾಚುತ್ತಾರಲ್ಲ ಅಂತಹ ಅಧಿಕಾರಿಗಳ ಬಗ್ಗೆ. ಟ್ರಾಫಿಕ್‌ ನಿಯಮ ಉಲ್ಲಂಘನೆಗೆ ವಿಧಿಸಿರುವ ದಂಡದಲ್ಲಿ ಮಾಡಲಾಗಿರುವ ಭಾರೀ ಏರಿಕೆಯಿಂದ ಜನಸಾಮಾನ್ಯರಿಗೆ ನಷ್ಟವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ, ಇದರಿಂದ ಭ್ರಷ್ಟಾಚಾರ ನಾಶವಾಗುವ ಬದಲು ಮತ್ತಷ್ಟುಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿ ಕೇವಲ ಟ್ರಾಫಿಕ್‌ ಪೊಲೀಸರದ್ದೇ ತಪ್ಪು ಎಂದಲ್ಲ. ಭ್ರಷ್ಟಾಚಾರ ಅಂದರೆ ಲಂಚ ಪಡೆಯುವುದು ಅಷ್ಟೇ ಅಲ್ಲ, ಲಂಚ ಕೊಡುವುದೂ ಕೂಡ.

ರಸ್ತೆ ನಿಯಮ ಪಾಲಿಸಿದರೆ ಪೊಲೀಸರಿಂದ ಭರ್ಜರಿ ಗಿಫ್ಟ್!

ಭಾರಿ ದಂಡಕ್ಕೆ ಸಣ್ಣ ಲಂಚ ಪರಿಹಾರ!

ಪರವಾನಗಿ ಇಲ್ಲದೆ ವಾಹನ ಚಲಾಯಿಸಿದರೆ 5 ಸಾವಿರ ರು. ದಂಡ, ಕುಡಿದು ವಾಹನ ಚಲಾಯಿಸಿದರೆ 10 ಸಾವಿರ ರು. ದಂಡ... ಇದು ಕಷ್ಟದ ಮಾತಲ್ಲದೆ ಮತ್ತೇನು? ದಿನನಿತ್ಯ ಸಾವಿರಾರು ಜನ ಪರವಾನಗಿ ಇಲ್ಲದೆಯೇ ವಾಹನ ಚಲಾಯಿಸಬಹುದು. ಲಕ್ಷಾಂತರ ಜನ ಕುಡಿದ ಅಮಲಿನಲ್ಲಿಯೇ ವಾಹನ ಚಲಾಯಿಸಬಹುದು. ಅಂತಹ ವಾಹನ ಸವಾರನನ್ನು ದಾರಿ ಮಧ್ಯದಲ್ಲಿಯೇ ಬಲೆಗೆ ಬೀಳಿಸಿಕೊಳ್ಳುವ ಖಾಕಿ ತೊಟ್ಟವರ ಬಾಯಿಯಿಂದ ಬರುವ ಶಬ್ದವೇ ‘ತೆಗಿ.. ತೆಗಿ..’! ಸವಾರನು ‘ಸರ್‌.. ಲೈಸೆನ್ಸ್‌ ಇಲ್ಲ.. ಆರ್‌ಸಿ, ಇನ್ಸೂರೆನ್ಸ್‌ ಎಲ್ಲ ಮನೆಲಿದಾವೆ..’ ಎಂದು ರಾಗ ಎಳೆದಾಗ, ಪೊಲೀಸರ ಪಾಲಿಗೆ ಇವನೊಬ್ಬ ಪೀಕಿಸಿಕೊಳ್ಳುವ ಅಸಾಮಿಯಾಗುತ್ತಾನೆ.

‘ಲೈಸೆನ್ಸ್‌ ಇಲ್ಲವೇ 5 ಸಾವಿರ, ಹೆಲ್ಮೇಟ್‌ ಹಾಕಿಲ್ಲವೇ 1 ಸಾವಿರ, ಆರ್‌ಸಿ ಇಲ್ಲವೇ 10 ಸಾವಿರ, ಇನ್ಸುರೆನ್ಸ್‌ ಇಲ್ಲವೇ 2000.. ಎಲ್ಲ ಕೂಡಿಸಿ 18 ಸಾವಿರ ಆಗುತ್ತೆ. ಕೊಟ್ಟು ರಸೀದಿ ತೆಗಸ್ತಿಯೋ, ಸುಮ್ನೆ ಇದ್ದಷ್ಟುಕೊಟ್ಟು ಹೋಗ್ತಿಯೋ’ ಎಂದು ತಾತ್ಕಾಲಿಕ ಪರಿಹಾರವೆಂಬ ಉಪಾಯವನ್ನು ಪೊಲೀಸರು ಹೇಳಬಹುದು.

ದಿನನಿತ್ಯ ಸಂಚಾರಿ ಪೊಲೀಸರಿಂದ ನಡೆಯುತ್ತಿರುವ ಸುಲಿಗೆಯನ್ನು ಕಣ್ಣಾರೆ ಕಂಡವರಿಗೆ ಅಥವಾ ಅನುಭವಿಸಿದವರಿಗೆ ಇದು ಸುಲಭವಾಗಿ ಅರ್ಥವಾಗುತ್ತದೆ. ಹೀಗಾಗಿ ಈ ನಿಯಮ ಟ್ರಾಫಿಕ್‌ ಪೊಲೀಸರಿಗೆ ವರದಾನವಾಗಬಹುದು!

ಹಾಗಾಗದಂತೆ ಉನ್ನತಾಧಿಕಾರಿಗಳು ನೋಡಿಕೊಂಡು, ಸಂಚಾರ ನಿಯಮ ಪಾಲನೆಗೆ ಈ ಹೊಸ ತಿದ್ದುಪಡಿ ಕಾಯ್ದೆಯನ್ನು ರಹದಾರಿಯಾಗಿ ಮಾಡಿಕೊಂಡರೆ ದೇಶದಲ್ಲಿ ಅಪಘಾತಗಳು ಕಡಿಮೆಯಾಗಿ, ಜನರಲ್ಲಿ ಸಂಚಾರ ಶಿಸ್ತು ನಿಸ್ಸಂಶಯವಾಗಿ ಮೂಡುತ್ತದೆ.

ಸಂಚಾರಿ ಕಾಯ್ದೆಯ ಹೊಸ ತಿದ್ದುಪಡಿಯಲ್ಲಿ ನಿಯಮ ಉಲ್ಲಂಘಿಸುವವರಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತದೆ. ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಟ್ರಾಫಿಕ್‌ ಪೊಲೀಸರು ಮುಂದಾದರೆ ಕಾಯ್ದೆಯ ಉದ್ದೇಶವೇ ವ್ಯರ್ಥವಾದೀತು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರೆ ಮಾತ್ರ ಇದು ಯಶಸ್ವಿಯಾಗುತ್ತದೆ.

- ಜಾಫರ್ ಶರೀಫ್ ಕೆ ಮಕಂದರ್