Best Selling Scooters in India Jan 2026: Honda Activa Tops List ಭಾರತೀಯ ಸ್ಕೂಟರ್ ಮಾರುಕಟ್ಟೆಯಲ್ಲಿ ಜನವರಿ ತಿಂಗಳ ಮಾರಾಟದ ವರದಿ ಬಿಡುಗಡೆಯಾಗಿದೆ. ಹೋಂಡಾ ಆಕ್ಟಿವಾ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದು, ಟಿವಿಎಸ್ ಜುಪಿಟರ್ ಮತ್ತು ಸುಜುಕಿ ಆಕ್ಸೆಸ್ ನಂತರದ ಸ್ಥಾನಗಳಲ್ಲಿವೆ. 

ಬೆಂಗಳೂರು (ಫೆ.26): ನೀವು ಹೊಸ ಸ್ಕೂಟರ್ ಖರೀದಿಸುವ ಆಲೋಚನೆಯಲ್ಲಿದ್ದರೆ ಈ ಸುದ್ದಿಯನ್ನು ಗಮನಿಸಿ. ಭಾರತೀಯ ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು ಲಕ್ಷಾಂತರ ಜನರು ತಮಗಾಗಿ ಹೊಸ ಸ್ಕೂಟರ್‌ಗಳನ್ನು ಖರೀದಿಸುತ್ತಾರೆ ಮತ್ತು ಅವುಗಳಲ್ಲಿ, ಹೋಂಡಾ ಆಕ್ಟಿವಾ ಮತ್ತು ಟಿವಿಎಸ್ ಜುಪಿಟರ್ ಹಾಗೂ ಸುಜುಕಿ ಆಕ್ಸೆಸ್‌ನಂತಹ ಮಾದರಿಗಳು ಹೆಚ್ಚು ಮಾರಾಟವಾಗಿವೆ.

ಕಳೆದ ಒಂದು ಅಥವಾ ಎರಡು ವರ್ಷಗಳಲ್ಲಿ, ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು ಸಾಕಷ್ಟು ವೇಗವನ್ನು ಪಡೆದುಕೊಂಡಿದೆ, ಆದರೆ ಪೆಟ್ರೋಲ್ ಸ್ಕೂಟರ್‌ಗಳಿಗೆ ಹೋಲಿಸಿದರೆ ಅವುಗಳ ಮಾರುಕಟ್ಟೆ ಪಾಲು ಇನ್ನೂ ತುಂಬಾ ಕಡಿಮೆಯಾಗಿದೆ. ಜನವರಿಯಲ್ಲಿ, ಟಿವಿಎಸ್, ಬಜಾಜ್ ಮತ್ತು ಅಥರ್‌ನ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಹ ಟಾಪ್ 10 ರಲ್ಲಿವೆ. ಅದೇ ಸಮಯದಲ್ಲಿ, ಟಾಪ್ 10 ಮಾರಾಟವಾಗುವ ಸ್ಕೂಟರ್‌ಗಳ ಪಟ್ಟಿಯಲ್ಲಿ, ಹೆಚ್ಚಿನ ಮಾದರಿಗಳು ವರ್ಷದಿಂದ ವರ್ಷಕ್ಕೆ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡಿವೆ.

ಜನವರಿ ತಿಂಗಳ ಟಾಪ್-10 ಸ್ಕೂಟರ್‌ಗಳ ಮಾರಾಟದ ವಿವರ

ಹೋಂಡಾ ಆಕ್ಟಿವಾ (Honda Activa): ಜೂನ್ ತಿಂಗಳಲ್ಲೂ ಆಕ್ಟಿವಾ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿದೆ. ಬರೋಬ್ಬರಿ 2,71,924 ಗ್ರಾಹಕರು ಇದನ್ನು ಖರೀದಿಸಿದ್ದಾರೆ. ಕಳೆದ ವರ್ಷಕ್ಕೆ (1,66,739 ಯುನಿಟ್) ಹೋಲಿಸಿದರೆ ಮಾರಾಟದಲ್ಲಿ ಶೇ. 63 ರಷ್ಟು ಭರ್ಜರಿ ಏರಿಕೆ ಕಂಡಿದೆ. ಇದರ ಆರಂಭಿಕ ಎಕ್ಸ್ ಶೋರೂಮ್ ಬೆಲೆ ₹75,433.

ಟಿವಿಎಸ್ ಜುಪಿಟರ್ (TVS Jupiter): 1,29,744 ಯುನಿಟ್ ಮಾರಾಟದೊಂದಿಗೆ ಜುಪಿಟರ್ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷದ ಜನವರಿಗೆ (1,07,847 ಯುನಿಟ್) ಹೋಲಿಸಿದರೆ ಶೇ. 20 ರಷ್ಟು ಪ್ರಗತಿ ಸಾಧಿಸಿದೆ.

ಸುಜುಕಿ ಆಕ್ಸೆಸ್ (Suzuki Access): 69,042 ಗ್ರಾಹಕರು ಈ ಸ್ಕೂಟರ್ ಖರೀದಿಸಿದ್ದು, ಮಾರಾಟದಲ್ಲಿ ಶೇ. 26 ರಷ್ಟು ವಾರ್ಷಿಕ ಬೆಳವಣಿಗೆ ಕಂಡಿದೆ.

ಟಿವಿಎಸ್ ಐಕ್ಯೂಬ್ (TVS iQube): ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಐಕ್ಯೂಬ್ ಸಂಚಲನ ಮೂಡಿಸಿದೆ. 37,560 ಯುನಿಟ್ ಮಾರಾಟವಾಗಿದ್ದು, ಶೇ. 50 ರಷ್ಟು ಭರ್ಜರಿ ಬೇಡಿಕೆ ಹೆಚ್ಚಿಸಿಕೊಂಡಿದೆ.

ಟಿವಿಎಸ್ ಎನ್‌ಟಾರ್ಕ್ (TVS NTORQ): ಯುವಕರ ನೆಚ್ಚಿನ ಸ್ಪೋರ್ಟಿ ಸ್ಕೂಟರ್ ಎನ್‌ಟಾರ್ಕ್ 36,596 ಯುನಿಟ್ ಮಾರಾಟ ಕಂಡಿದೆ. ಇದು ಶೇ. 54 ರಷ್ಟು ಬೆಳವಣಿಗೆ ಸಾಧಿಸಿದೆ.

ಬಜಾಜ್ ಚೇತಕ್ (Bajaj Chetak): ಬಜಾಜ್‌ನ ಈ ಎಲೆಕ್ಟ್ರಿಕ್ ಸ್ಕೂಟರ್ 28,216 ಗ್ರಾಹಕರನ್ನು ಸೆಳೆದಿದ್ದು, ಶೇ. 34 ರಷ್ಟು ವಾರ್ಷಿಕ ಏರಿಕೆ ದಾಖಲಿಸಿದೆ.

ಹೀರೋ ಡೆಸ್ಟಿನಿ (Hero Destini): ಹೀರೋ ಮೊಟೊಕಾರ್ಪ್‌ನ ಡೆಸ್ಟಿನಿ 125 ಸ್ಕೂಟರ್ ಮಾರಾಟ ದುಪ್ಪಟ್ಟಾಗಿದೆ. 27,782 ಯುನಿಟ್ ಮಾರಾಟವಾಗುವ ಮೂಲಕ ಶೇ. 97 ರಷ್ಟು ಬೃಹತ್ ಬೆಳವಣಿಗೆ ಕಂಡಿದೆ.

ಸುಜುಕಿ ಬರ್ಗ್‌ಮನ್ (Suzuki Burgman): ಸುಜುಕಿಯ ಈ ಮಾಡೆಲ್ ಮಾರಾಟದಲ್ಲಿ ಶೇ. 8 ರಷ್ಟು ಕುಸಿತ ಕಂಡಿದೆ. ಈ ಬಾರಿ 23,474 ಯುನಿಟ್ ಮಾರಾಟವಾಗಿದೆ.

ಅಥರ್ ರಿಜ್ಟಾ (Ather Rizta): ಅಥರ್ ಎನರ್ಜಿಯ ಫ್ಯಾಮಿಲಿ ಸ್ಕೂಟರ್ ರಿಜ್ಟಾ 20,155 ಯುನಿಟ್ ಮಾರಾಟವಾಗಿದ್ದು, ಶೇ. 68 ರಷ್ಟು ಅಭೂತಪೂರ್ವ ಏರಿಕೆ ಕಂಡಿದೆ.

ಯಮಹಾ ರೇ-ಜೆಡ್‌ಆರ್ (Yamaha Ray-ZR): ಯಮಹಾದ ಈ ಜನಪ್ರಿಯ ಹೈಬ್ರಿಡ್ ಸ್ಕೂಟರ್ 19,815 ಯುನಿಟ್ ಮಾರಾಟದೊಂದಿಗೆ ಹತ್ತನೇ ಸ್ಥಾನದಲ್ಲಿದೆ. ಇದು ಶೇ. 30 ರಷ್ಟು ಬೆಳವಣಿಗೆ ಸಾಧಿಸಿದೆ.