ಜಾರಿಯಾಯ್ತು ಹೊಸ ರೂಲ್ಸ್; ಮನೆ ಮುಂದೆ ಕಾರು, ಶಾಲಾ ಹೊರಗಡೆ ಬಸ್ಸು ನಿಲ್ಸಿದ್ರೆ ದಂಡ!
ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ಟ್ರಾಫಿಕ್ ನಿಯಮ ಹಾಗೂ ದಂಡ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ ಜಾರಿಯಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ನಿಯಮ ಉಲ್ಲಂಘನೆ, ದಂಡ ಹಾಗೂ ನೂತನ ನಿಯಮದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು(ಸೆ.05): ನೂತನ ಟ್ರಾಫಿಕ್ ನಿಯಮ ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಜಾರಿಯಾಗಿದೆ. ಸರ್ಕಾರದಿಂದ ಯಾವುದೇ ನೊಟಿಫಿಕೇಶನ್ ಬಾರದ ಹಿನ್ನಲೆಯಲ್ಲಿ ಆರಂಭಿಕ 4 ದಿನ ಹಳೆ ನಿಯಮ ಮುಂದುವರಿದಿತ್ತು. ಇದೀಗ ಸರ್ಕಾರ ನೂತನ ನಿಯಮ ಹಾಗೂ ದಂಡದ ಕುರಿತು ನೋಟಿಫಿಕೇಶನ್ ನೀಡಿದೆ. ಇದರ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಾರ್ವಜನಿಕರಿಗೆ ನೂತನ ನಿಯಮದ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ: ಭಾರೀ ಟ್ರಾಫಿಕ್ ದಂಡ ರಾಜ್ಯದಲ್ಲಿ ಜಾರಿ : ಬೈಕ್ ಸವಾರನೊಬ್ಬನಿಗೆ 17 ಸಾವಿರ ಫೈನ್
ಒಟ್ಟು 24 ಸಂಚಾರ ನಿಯಮಗಳಿಗೆ ದಂಡ ಹೆಚ್ಚಿಸಲಾಗಿದೆ. ಇದರಲ್ಲಿ ಮನೆ ಮುಂದಿನ ರಸ್ತೆ, ಪಾದಾಚಾರಿ ರಸ್ತೆಯಲ್ಲಿ ಕಾರು ನಿಲ್ಲಿಸಿದರೆ ಇನ್ಮುಂದೆ ದಂಡ ಕಟ್ಟಬೇಕು. ಕಾರನ್ನು ಮನೆಯೊಳಗಡೆ ನಿಲ್ಲಿಸಬೇಕು ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. ಇಷ್ಟೇ ಅಲ್ಲ ಶಾಲಾ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುವಂತಿಲ್ಲ. ಶಾಲಾ ಆವರಣದಲ್ಲೇ ಬಸ್ ನಿಲ್ಲಿಸಬೇಕು. ಒಂದು ವೇಳೆ ಶಾಲಾ ಆವರಣದಲ್ಲಿ ಬಸ್ ನಿಲ್ಲಿಸಲು ಸ್ಥಳವಕಾಶವಿಲ್ಲದಿದ್ದರೆ, ಶಾಲೆಯನ್ನೇ ನಗರದಿಂದ ಹೊರಗಡೆ ನಡೆಸಲು ಭಾಸ್ಕರ್ ರಾವ್ ಹೇಳಿದ್ದಾರೆ.
ಇದನ್ನೂ ಓದಿ: ವಾಹನದ ಮೇಲೆ ಧರ್ಮ, ಜಾತಿ, ರಾಜಕೀಯ ಸ್ಟಿಕ್ಕರ್; ಬೀಳುತ್ತೆ ಭಾರಿ ದಂಡ!
ಸಾರ್ವಜನಿಕ ರಸ್ತೆಯಲ್ಲಿ, ಪಾದಾಚಾರಿ ರಸ್ತೆಯಲ್ಲಿ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಕೊಡುವವರು ದಂಡ ಅಥವಾ ಶಿಕ್ಷೆಗೆ ಗುರಿಯಾಗಬೇಕು ಎಂದಿದ್ದಾರೆ. 20 ವರ್ಷಗಳ ಹಿಂದಿನ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. ಇದರಿಂದ ಸರ್ಕಾರ ಹಣ ಮಾಡುವ ಉದ್ದೇಶವಲ್ಲ. ನಿಯಮ ಉಲ್ಲಂಘನೆ ಮಾಡಿ ಅಪಘಾತವಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಕುಡಿದು ವಾಹನ ಚಲಾಯಿಸಿದರೆ ದಂಡ ಕಟ್ಟಲೇಬೇಕು. ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಭಾಸ್ಕರ್ ರಾವ್ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
"
ಇದನ್ನೂ ಓದಿ: 15 ಸಾವಿರ ಬೆಲೆಯ ಸ್ಕೂಟಿ: ಹೈರಾಣಾದ 23 ಸಾವಿರ ದಂಡ ಕಟ್ಟಿ!
ಬೆಂಗಳೂರಿನಲ್ಲಿ ಪಾರ್ಕಿಂಗ್ ಮಾಫಿಯಾ ಆಗಿ ಮಾರ್ಪಟ್ಟಿದೆ. ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿದರೆ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾಗುತ್ತೆ. ಹೀಗಾಗಿ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ. ರಸ್ತೆಯಲ್ಲಿ ಪಾರ್ಕ್ ಮಾಡಿದರೆ ದಂಡ ಕಟ್ಟಲೇಬೇಕು ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. ನೂತನ ನಿಯಮ ಜಾರಿಯಾಗಿದೆ. ವಾಹನ ಸವಾರರು ನಿಯಮ ಉಲ್ಲಂಘಿಸಿದಂತೆ ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.