ನವದೆಹಲಿ(ಸೆ.04): ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಕಾನೂನು ದೇಶಾದ್ಯಂತ ಗೊಂದಲಮಯ ವಾತಾವರಣ ಸೃಷ್ಟಿಸಿದ್ದು, ಸಂಚಾರ ನಿಯಮ ಉಲ್ಲಂಘಿಸಿದವರ ಪಾಲಿಗೆ ಅಕ್ಷರಶಃ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.

ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ಹೊಸ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಕಾನೂನು ಸಂಚಾರ ನಿಯಮವನ್ನು ಮತ್ತಷ್ಟು ಕಠಿಣಗೊಳಿಸಿದೆ. ಆದರೆ ನಿಯಮ ಉಲ್ಲಂಘಿಸಿದರೆ ಕಟ್ಟಬೇಕಾದ ದಂಡದ ಮೊತ್ತ ಮಾತ್ರ ನಿಜಕ್ಕೂ ದಂಗು ಬಡಿಸುವಂತಿದೆ.

ಸರಿಯಾದ ದಾಖಲೆಗಳಿಲ್ಲದೆ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕೆ ದೆಹಲಿ ಮೂಲದ ವ್ಯಕ್ತಿಯೊಬ್ಬರಿಗೆ ಬರೊಬ್ಬರಿ 23 ಸಾವಿರ ರೂ ದಂಡ ವಿಧಿಸಲಾಗಿದೆ. ಇಲ್ಲಿನ ದಿನೇಶ್ ಮದನ್ ಎಂಬುವರು ಹೆಲ್ಮೆಟ್ ಇಲ್ಲದೆಯೆ ವಾಹನ ಚಲಾಯಿಸಿದ್ದಕ್ಕೆ ಹಾಗೂ ಸರಿಯಾದ ದಾಖಲೆಗಳನ್ನು ಹೊಂದಿರದ ಕಾರಣ ಪೊಲೀಸರು ಬರೋಬ್ಬರಿ 23 ಸಾವಿರ ರೂ. ದಂಡ ವಿಧಿಸಿದ್ದಾರೆ.

ವಿಚಿತ್ರ ಎಂದರೆ ದಿನೇಶ್ ಚಲಾಯಿಸುತ್ತಿದ್ದ ಸ್ಕೂಟಿಯ ಬೆಲೆ ಕೇವಲ 15 ಸಾವಿರ ರೂ. ಇದ್ದು, ಚಾಲನಾ ಪರವಾನಗಿ, ವಿಮೆ, ನೋಂದಣಿ ಪ್ರಮಾಣ ಪತ್ರ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಹೊಂದಿಲ್ಲದ ಕಾರಣಕ್ಕೆ ದಿನೇಶ್ ಅವರಿಗೆ 23 ಸಾವಿರ ರೂ. ದಂಡ ವಿಧಿಸಲಾಗಿದೆ.