ಬೆಂಗಳೂರು [ಸೆ.05]:  ಸಂಚಾರ ನಿಯಮ ಉಲ್ಲಂಘನೆಗೆ ಭಾರಿ ಮೊತ್ತದ ದಂಡ ವಿಧಿಸುವ ಸಂಬಂಧ ರಾಜ್ಯ ಸರ್ಕಾರದ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ರಾಜ್ಯಾದ್ಯಂತ ವಾಹನ ಸವಾರರಿಗೆ ಬಿಸಿ ತಟ್ಟತೊಡಗಿದೆ. ಬುಧವಾರವೇ ದಂಡ ಪ್ರಯೋಗಕ್ಕಿಳಿದಿರುವ ಪೊಲೀಸರು, ಕುಡಿದು ವಾಹನ ಚಾಲನೆ ಮಾಡಿದ ಸವಾರರಿಗೆ ಮೂರು ಪ್ರಕರಣಗಳಲ್ಲಿ ಕನಿಷ್ಠ 10,000 ರು. ದಂಡ ವಿಧಿಸಿದ್ದಾರೆ.

ಬೆಂಗಳೂರಿನಲ್ಲಿ ಬೈಕ್‌ ಸವಾರನೊಬ್ಬನಿಗೆ 17,000 ರು. ದಂಡ ವಿಧಿಸಲಾಗಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಹಾಗೂ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಇಬ್ಬರು ಚಾಲಕರಿಗೆ ತಲಾ 10,000 ರು. ದಂಡ ವಿಧಿಸಲಾಗಿದೆ.

ದಂಡ ಹೆಚ್ಚಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಬಳಿಕ ಅನುಷ್ಠಾನಗೊಳಿಸುವುದಾಗಿ ಮಂಗಳವಾರವಷ್ಟೇ ಹೇಳಿಕೆ ನೀಡಿದ್ದ ಪೊಲೀಸರು ಬುಧವಾರ ತಮ್ಮ ನಿಲುವು ಬದಲಿಸಿಕೊಂಡು ಸದ್ದಿಲ್ಲದೆ ಏಕಾಏಕಿ ಕಾರ್ಯಾಚರಣೆಗಿಳಿದಿದ್ದಾರೆ. ಇದಕ್ಕೆ ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಹೊಸ ನಿಯಮದ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

ಇತ್ತೀಚೆಗೆ ಹೆಲ್ಮೆಟ್‌ ಇಲ್ಲದೆ ವಾಹನ ಚಾಲನೆ, ಅತಿವೇಗ, ಪಾನಮತ್ತರಾಗಿ ವಾಹನ ಚಾಲನೆ ಹೀಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪರಿಷ್ಕರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶ ಜಾರಿಗೊಳಿಸುವ ಸಂಬಂಧ ರಾಜ್ಯ ಸಾರಿಗೆ ಇಲಾಖೆ ಮಂಗಳವಾರ ಅಧಿಸೂಚನೆ ಹೊರಡಿಸಿತ್ತು. ಈ ಹೊಸ ನಿಯಮದ ಬಗ್ಗೆ ಅರಿವು ಮೂಡಿಸುವುದಾಗಿ ಪೊಲೀಸರು ಹೇಳಿದ್ದರು.

ಮದ್ಯ ಸೇವಿಸಿ, ಹೆಲ್ಮೆಟ್‌ ಇಲ್ಲದೆ ದಂಡ ತೆತ್ತ:

ಬೆಂಗಳೂರಿನ ಕನಕಪುರ ಮುಖ್ಯ ರಸ್ತೆಯಲ್ಲಿ ಆಕಾಶ್‌ ಎಂಬಾತ ಪಾನಮತ್ತನಾಗಿ ಮಂಗಳವಾರ ಸಂಜೆ ತನ್ನ ಸ್ನೇಹಿತನ ಜತೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ. ಆ ವೇಳೆ ತಡೆದ ಕುಮಾರಸ್ವಾಮಿ ಲೇಔಟ್‌ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ 6ನೇ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯಕ್ಕೆ ಆಕಾಶ್‌ ವಿರುದ್ಧ ತ್ವರಿತವಾಗಿ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದರು. ಈ ಪ್ರಕರಣ ದಾಖಲಾದ ಮಂಗಳವಾರವೇ ದಂಡ ಪರಿಷ್ಕರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

ಈ ಕುರಿತು ಬುಧವಾರ ವಿಚಾರಣೆ ನಡೆಸಿದ ನ್ಯಾಯಾಲಯವು, ಪರಿಷ್ಕೃತ ದಂಡದ ಅನ್ವಯ ಬುಧವಾರ ಮದ್ಯ ಸೇವಿಸಿ ಚಾಲನೆಗೆ 10 ಸಾವಿರ ರು., ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆಗೆ 5 ಸಾವಿರ ರು., ಹೆಲ್ಮೆಟ್‌ ಇಲ್ಲದ ಚಾಲನೆಗೆ (ಸವಾರ) ಒಂದು ಸಾವಿರ ರು. ಮತ್ತು ಹೆಲ್ಮೆಟ್‌ ಇಲ್ಲದ ಹಿಂಬದಿ ಸವಾರನಿಗೆ ಒಂದು ಸಾವಿರ ರು. ಸೇರಿ ಒಟ್ಟು 17 ಸಾವಿರ ರು. ದಂಡ ವಿಧಿಸಿ ಆದೇಶಿಸಿತು. ಬಳಿಕ ನ್ಯಾಯಾಲಯಕ್ಕೆ ಆಕಾಶ್‌ ದಂಡ ಪಾವತಿಸಿದ್ದರಿಂದ ಪ್ರಕರಣ ಮುಕ್ತಾಯವಾಯಿತು ಎಂದು ಜಂಟಿ ಆಯುಕ್ತ (ಸಂಚಾರ) ರವಿಕಾಂತೇಗೌಡ ವಿವರಿಸಿದ್ದಾರೆ.

ಚನ್ನಪಟ್ಟಣದಲ್ಲಿ 10,000 ರು. ದಂಡ:

ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿದ ವ್ಯಕ್ತಿಗೆ ಬುಧವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಬೆಂಗಳೂರಿನ ಯಲಹಂಕ ನಿವಾಸಿ ಪ್ರಶಾಂತ್‌ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದಾಗ ಮತ್ತಿಕೆರೆ ಸಮೀಪ ಟ್ರಾಫಿಕ್‌ ಪೊಲೀಸರ ಕೈಗೆ ಸಿಕ್ಕಿದ್ದರು.

ಲಿಂಗಸುಗೂರಿನಲ್ಲಿ ದಂಡ ಕಕ್ಕಿದ ಪಾನಮತ್ತ ವ್ಯಕ್ತಿ:

ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ವಿಜಯ ದೇವಪ್ಪ ಎಂಬ ವ್ಯಕ್ತಿ ಬುಧವಾರ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುವ ವೇಳೆ ಸಿಕ್ಕಿಬಿದ್ದಿದ್ದು, ಪೊಲೀಸರು 10,000 ರು. ದಂಡ ವಿಧಿಸಿದ್ದಾರೆ.

ದಂಡ ಪರಿಷ್ಕರಣೆ ಏಕಾಏಕಿ ಜಾರಿಗೆ ಬಂದಿಲ್ಲ. ಈ ಕುರಿತು ಆರು ತಿಂಗಳಿಂದಲೇ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿದೆ. ಕೇಂದ್ರ ಸರ್ಕಾರ ಪರಿಷ್ಕರಿಸಿದ ಬಳಿಕ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಮತ್ತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಅಗತ್ಯವಿಲ್ಲ. ಸರ್ಕಾರದ ಆದೇಶದಂತೆ ದಂಡ ವಿಧಿಸಲಾಗುತ್ತದೆ.

- ಡಾ.ಬಿ.ಆರ್‌.ರವಿಕಾಂತೇಗೌಡ, ಜಂಟಿ ಆಯುಕ್ತ (ಸಂಚಾರ), ಬೆಂಗಳೂರು

ಸೆ.05ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ