ಇತ್ತೀಚಿನ ಸಮೀಕ್ಷೆಯ ಪ್ರಕಾರ, ಕಿಯಾ ಸೆಲ್ಟೋಸ್ ಮಿಡ್-ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ರೀಸೇಲ್ ಮೌಲ್ಯವನ್ನು ಹೊಂದಿದೆ. ಅದರಲ್ಲೂ ಪೆಟ್ರೋಲ್-ಆಟೋಮ್ಯಾಟಿಕ್ ಮಾದರಿಯು ಮೊದಲ ವರ್ಷದ ನಂತರವೂ ತನ್ನ ಮೂಲ ಬೆಲೆಯ 79% ಮೌಲ್ಯವನ್ನು ಉಳಿಸಿಕೊಂಡು, ಗ್ರಾಹಕರ ನಂಬಿಕೆಯನ್ನು ಗಳಿಸಿದೆ.

ಭಾರತದ ಪ್ರಮುಖ ಕಾರು ತಯಾರಕ ಕಂಪನಿ ಕಿಯಾ ಇಂಡಿಯಾ, ತನ್ನ ಜನಪ್ರಿಯ ಸೆಲ್ಟೋಸ್ ಎಸ್‌ಯುವಿ ಬಗ್ಗೆ ಒಂದು ಖುಷಿ ಸುದ್ದಿ ಹಂಚಿಕೊಂಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ 'ಆಟೋಕಾರ್ ಇಂಡಿಯಾ' ಮತ್ತು 'ಸ್ಪಿನ್ನಿ' ಜಂಟಿಯಾಗಿ ನಡೆಸಿದ ಯೂಸ್ಡ್ ಕಾರ್ ಸಮೀಕ್ಷೆಯ ನಾಲ್ಕನೇ ಆವೃತ್ತಿಯಲ್ಲಿ, ಮಿಡ್-ಎಸ್‌ಯುವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್‌ಗೆ ಅತಿ ಹೆಚ್ಚು ರೀಸೇಲ್ ಮೌಲ್ಯ ಇದೆ ಎಂದು ತಿಳಿದುಬಂದಿದೆ. ಅದರಲ್ಲೂ, ಸೆಲ್ಟೋಸ್‌ನ ಪೆಟ್ರೋಲ್-ಆಟೋಮ್ಯಾಟಿಕ್ ಮಾಡೆಲ್, ಖರೀದಿಸಿದ ಮೊದಲ ವರ್ಷದ ನಂತರವೂ ತನ್ನ ಮೂಲ ಬೆಲೆಯ 79% ಮೌಲ್ಯವನ್ನು ಉಳಿಸಿಕೊಂಡಿದೆ. ಇದು ಈ ಸೆಗ್ಮೆಂಟ್‌ನಲ್ಲೇ ಅತಿ ಹೆಚ್ಚು ಎಂದು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅತ್ಯುತ್ತಮ ರೀಸೇಲ್ ಸಾಧನೆ

ಈ ಸಮೀಕ್ಷೆಯ ಪ್ರಕಾರ, ಸೆಲ್ಟೋಸ್ ಪೆಟ್ರೋಲ್-ಆಟೋಮ್ಯಾಟಿಕ್ ಮಾಡೆಲ್ ದೀರ್ಘಾವಧಿಯಲ್ಲೂ ಉತ್ತಮ ಮೌಲ್ಯ ಉಳಿಸಿಕೊಂಡಿದೆ. ಒಂದು ವರ್ಷದ ನಂತರ 79%, ಮೂರು ವರ್ಷಗಳ ನಂತರ 67% ಮತ್ತು ಐದು ವರ್ಷಗಳ ಬಳಿಕ 57% ಮೌಲ್ಯವನ್ನು ಇದು ಕಾಯ್ದುಕೊಂಡಿದೆ. ಇನ್ನು ಇಡೀ ಸೆಲ್ಟೋಸ್ ಸರಣಿಯ ಕಾರುಗಳನ್ನು ನೋಡಿದರೆ, ಅವು ಸರಾಸರಿ ಮೂರು ವರ್ಷಗಳ ನಂತರ 66% ಮತ್ತು ಐದು ವರ್ಷಗಳ ನಂತರ 55% ಮೌಲ್ಯವನ್ನು ಉಳಿಸಿಕೊಳ್ಳುತ್ತವೆ. ಇದು ಮಿಡ್-ಎಸ್‌ಯುವಿ ವಿಭಾಗದಲ್ಲಿಯೇ ಅತ್ಯುತ್ತಮ ಸಾಧನೆ ಎಂದು ವರದಿ ಹೇಳಿದೆ.

ಈ ಸಾಧನೆ ಬಗ್ಗೆ ಕಿಯಾ ಇಂಡಿಯಾದ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಅತುಲ್ ಸೂದ್ ಮಾತನಾಡಿದ್ದಾರೆ. ‘ಒಂದು ಕಾರಿನ ರೀಸೇಲ್ ಮೌಲ್ಯವು ಗ್ರಾಹಕರ ನಂಬಿಕೆ, ಉತ್ಪನ್ನದ ಜನಪ್ರಿಯತೆ ಮತ್ತು ದೀರ್ಘಕಾಲೀನ ಮಾಲೀಕತ್ವದ ವಿಶ್ವಾಸವನ್ನು ಅಳೆಯುವ ಸ್ಪಷ್ಟ ಸೂಚಕ. ಕಿಯಾ ಸೆಲ್ಟೋಸ್‌ನ ಗುಣಮಟ್ಟ, ಕಾರ್ಯಕ್ಷಮತೆ, ತಂತ್ರಜ್ಞಾನ ಮತ್ತು ಮಾಲೀಕತ್ವದ ಅನುಭವದ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆಯನ್ನು ಈ ಸಮೀಕ್ಷೆಯ ಫಲಿತಾಂಶ ಮತ್ತೊಮ್ಮೆ ಸಾಬೀತುಪಡಿಸಿದೆ’ ಎಂದು ಹೇಳಿದ್ದಾರೆ.

6.5 ಲಕ್ಷಕ್ಕೂ ಹೆಚ್ಚು ಸೆಲ್ಟೋಸ್ ಕಾರುಗಳು ಮಾರಾಟ

ಭಾರತದಲ್ಲಿ ಬಿಡುಗಡೆಯಾದಾಗಿನಿಂದ, ಕಿಯಾ ಸೆಲ್ಟೋಸ್ ತನ್ನ ಬೋಲ್ಡ್ ಡಿಸೈನ್, ಆಧುನಿಕ ತಂತ್ರಜ್ಞಾನ, ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಉತ್ತಮ ಪರ್ಫಾರ್ಮೆನ್ಸ್‌ನಿಂದಾಗಿ ದೊಡ್ಡ ಯಶಸ್ಸು ಕಂಡಿದೆ. ಇಲ್ಲಿಯವರೆಗೆ ದೇಶದಲ್ಲಿ 6.5 ಲಕ್ಷಕ್ಕೂ ಹೆಚ್ಚು ಸೆಲ್ಟೋಸ್ ಕಾರುಗಳು ಮಾರಾಟವಾಗಿವೆ. ಕಡಿಮೆ ಮೌಲ್ಯ ಕುಸಿತ, ಉತ್ತಮ ಎಕ್ಸ್‌ಚೇಂಜ್ ಮತ್ತು ಅಪ್‌ಗ್ರೇಡ್ ಅವಕಾಶಗಳು, ಹಾಗೂ ಕಡಿಮೆ ನಿರ್ವಹಣಾ ವೆಚ್ಚದ ಮೂಲಕ ಸೆಲ್ಟೋಸ್ ಗ್ರಾಹಕರಿಗೆ ಹೆಚ್ಚಿನ ಮೌಲ್ಯ ನೀಡುತ್ತಿದೆ ಎಂಬುದನ್ನು ಈ ಸಮೀಕ್ಷೆ ಮತ್ತೊಮ್ಮೆ ದೃಢಪಡಿಸಿದೆ. ಗ್ರಾಹಕರಿಗೆ ಉತ್ತಮ ಮಾಲೀಕತ್ವದ ಅನುಭವ ಮತ್ತು ದೀರ್ಘಕಾಲೀನ ಮೌಲ್ಯವನ್ನು ನೀಡುವ ಮೊಬಿಲಿಟಿ ಪರಿಹಾರಗಳನ್ನು ಒದಗಿಸಲು ಕಿಯಾ ಇಂಡಿಯಾ ಬದ್ಧವಾಗಿದೆ ಎಂದು ಕಂಪನಿ ತಿಳಿಸಿದೆ.