ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ತಿದ್ರೆ ಇಲ್ಲ ಡಿಎಲ್‌ ರಿನೀವಲ್‌ ಬಗ್ಗೆ ಆಲೋಚನೆ ಮಾಡ್ತಿದ್ರೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಹೊಸ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಡ್ರೈವಿಂಗ್ ಲೈಸೆನ್ಸ್ಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಸರಳಗೊಳಿಸುವುದರ ಜೊತೆಗೆ, ಸುರಕ್ಷಿತ ಚಾಲನೆಗೆ ಸಂಬಂಧಿಸಿದ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ಸರ್ಕಾರ ಮುಂದಾಗಿದೆ.

ಡ್ರೈವಿಂಗ್‌ ಲೈಸೆನ್ಸ್‌ ಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಲು ಸರ್ಕಾರ ಮುಂದಾಗ್ತಿದೆ. ಪ್ರಸ್ತಾವಿತ ಕರಡು ನಿಯಮಗಳ ಪ್ರಕಾರ, ಲೈಸೆನ್ಸ್ನಲ್ಲಿರುವ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ನಂತಹ ವಿವರಗಳನ್ನು ಅಪ್ಡೇಟ್ ಮಾಡಲು ಶುಲ್ಕ ವಿಧಿಸದಿರುವ ಪ್ರಸ್ತಾಪವಿದೆ. ಈ ಬದಲಾವಣೆ ಜಾರಿಗೆ ಬಂದರೆ ಲೈಸೆನ್ಸ್ ವಿವರಗಳನ್ನು ತಿದ್ದುಪಡಿ ಮಾಡಿಸುವವರಿಗೆ ಅನುಕೂಲವಾಗಬಹುದು.

ಡ್ರೈವಿಂಗ್‌ ಲೆಸೆನ್ಸ್‌ ನಲ್ಲಿ ಮಹತ್ವದ ಬದಲಾವಣೆ

ಸುರಕ್ಷಿತ ಚಾಲನೆಗೆ ಸಂಬಂಧಿಸಿದ ಟ್ಯುಟೋರಿಯಲ್ ಮೌಲ್ಯಮಾಪನದಲ್ಲಿ ಪಾಸ್ ಆಗಲು ಅಗತ್ಯವಿರುವ ಅಂಕಗಳನ್ನು ಶೇಕಡಾ 60ರಿಂದ 75ಕ್ಕೆ ಹೆಚ್ಚಿಸುವ ಪ್ರಸ್ತಾಪವಿದೆ. ಜೊತೆಗೆ, ಸುರಕ್ಷಿತ ಚಾಲನೆಗೆ ಸಂಬಂಧಿಸಿದ ಟ್ಯುಟೋರಿಯಲ್ ಕನಿಷ್ಠ 30 ನಿಮಿಷಗಳ ಕಾಲ ಇರಬೇಕು ಎಂಬ ನಿಯಮವನ್ನೂ ಪ್ರಸ್ತಾಪಿಸಲಾಗಿದೆ.

ಡ್ರೈವಿಂಗ್ ಲೈಸೆನ್ಸ್ನಲ್ಲಿನ ಹೆಸರು, ವಿಳಾಸ ಅಥವಾ ಇತರ ವಿವರಗಳನ್ನು ಬದಲಾಯಿಸಲು ಅರ್ಜಿ ಸಲ್ಲಿಸಿದರೆ, ಸಂಬಂಧಪಟ್ಟ ಲೈಸೆನ್ಸಿಂಗ್ ಪ್ರಾಧಿಕಾರವು 15 ದಿನಗಳೊಳಗೆ ಅರ್ಜಿಯನ್ನು ಅನುಮೋದಿಸಬೇಕು ಅಥವಾ ತಿರಸ್ಕರಿಸಬೇಕು ಎಂಬ ಪ್ರಸ್ತಾಪವಿದೆ. ಇದರಿಂದ ಅರ್ಜಿದಾರರು ಹೆಚ್ಚು ಸಮಯ ಕಾಯುವುದನ್ನು ತಪ್ಪಿಸಬಹುದು.

ವಿಳಾಸ ಬದಲಾವಣೆಗೆ ಸಲ್ಲಿಸಿದ ಅರ್ಜಿಯ ಬಗ್ಗೆ 30 ದಿನಗಳವರೆಗೆ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ, ಆ ಅರ್ಜಿಯನ್ನು ಅನುಮೋದಿಸಲಾಗಿದೆ ಎಂದು ಪರಿಗಣಿಸುವ 'Deemed Approved' ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ. ಆದರೆ, ಈ ನಿಯಮ ಇನ್ನೂ ಕರಡು ಹಂತದಲ್ಲಿದೆ.

ವಿಳಾಸದ ಪುರಾವೆಗಾಗಿ ವಿದ್ಯುತ್ ಬಿಲ್ ಮತ್ತು ಗೃಹಬಳಕೆಯ ಎಲ್ಪಿಜಿ ಗ್ಯಾಸ್ ಬಿಲ್ಗಳನ್ನು ಸ್ವೀಕರಿಸುವ ಪ್ರಸ್ತಾಪವಿದೆ. ಈ ಬಿಲ್ಗಳು ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಮೂರು ತಿಂಗಳಿಗಿಂತ ಹಳೆಯದಾಗಿರಬಾರದು ಎಂಬ ಷರತ್ತು ಇದೆ. ಡ್ರೈವಿಂಗ್ ಲೈಸೆನ್ಸ್ ನವೀಕರಣ, ಡುಪ್ಲಿಕೇಟ್ ಲೈಸೆನ್ಸ್ ಪಡೆಯುವುದು, ಹೊಸ ವಾಹನದ ವರ್ಗವನ್ನು ಸೇರಿಸುವುದು ಹಾಗೂ ಹೆಸರು ಅಥವಾ ವಿಳಾಸ ಬದಲಾಯಿಸುವಂತಹ ಸೇವೆಗಳಿಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸುವ ಬದಲು, ಒಂದೇ Form 2A ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ.

ಮಾಹಿತಿ ಸ್ವಯಂಚಾಲಿತವಾಗಿ ಭರ್ತಿ

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ, ಅರ್ಜಿದಾರರ ಹಳೆಯ ಮಾಹಿತಿಯನ್ನು ಸಾರಥಿ ಪೋರ್ಟಲ್ನಿಂದ ಸ್ವಯಂಚಾಲಿತವಾಗಿ ಪಡೆಯುವ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ. ಆದರೆ, ಪೋರ್ಟಲ್ನಲ್ಲಿ ಲಭ್ಯವಿಲ್ಲದ ಮಾಹಿತಿಯನ್ನು ಅರ್ಜಿದಾರರು ಸ್ವತಃ ನಮೂದಿಸಬೇಕಾಗಬಹುದು.

ಡ್ರೈವಿಂಗ್ ಲೈಸೆನ್ಸ್ನಿಂದ ಯಾವುದಾದರೂ ವಾಹನದ ವರ್ಗವನ್ನು, ಉದಾಹರಣೆಗೆ ಭಾರೀ ವಾಹನಗಳ ವರ್ಗವನ್ನು, ಕೈಬಿಡಲು ಅರ್ಜಿ ಸಲ್ಲಿಸಿದರೆ ಏಳು ದಿನಗಳೊಳಗೆ ಕ್ರಮ ಕೈಗೊಳ್ಳುವ ಪ್ರಸ್ತಾಪವಿದೆ. ಆದರೆ, ಒಂದು ವಾಹನದ ವರ್ಗವನ್ನು ಶಾಶ್ವತವಾಗಿ ಕೈಬಿಟ್ಟರೆ, ಆ ದಿನಾಂಕದಿಂದ ಒಂದು ವರ್ಷದವರೆಗೆ ಅದೇ ವರ್ಗಕ್ಕೆ ಸಂಬಂಧಿಸಿದ ಲರ್ನರ್ ಲೈಸೆನ್ಸ್ ಅಥವಾ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅರ್ಹರಾಗಿರುವುದಿಲ್ಲ ಎಂಬ ಷರತ್ತನ್ನೂ ಪ್ರಸ್ತಾಪಿಸಲಾಗಿದೆ.

ಡ್ರೈವಿಂಗ್ ಲೈಸೆನ್ಸ್ ಅರ್ಜಿ ನಮೂನೆಯಲ್ಲಿ ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದಾದ ವ್ಯಕ್ತಿಯ ಹೆಸರು ಮತ್ತು ಮೊಬೈಲ್ ಸಂಖ್ಯೆ ದಾಖಲಿಸುವ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ. ಇದಲ್ಲದೆ, ರಕ್ತದ ಗುಂಪಿನ ಮಾಹಿತಿ ಕಡ್ಡಾಯಗೊಳಿಸುವುದು ಹಾಗೂ ಅಂಗಾಂಗ ದಾನಕ್ಕೆ ಸಂಬಂಧಿಸಿದ ಆಯ್ಕೆಯನ್ನು ಅರ್ಜಿಯಲ್ಲಿ ಸೇರಿಸುವ ಪ್ರಸ್ತಾಪವೂ ಇದೆ.

ಈ ಬದಲಾವಣೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2026ರ ಅಕ್ಟೋಬರ್ 16ರಂದು ಹೊರಡಿಸಿದ್ದು, ಅಕ್ಟೋಬರ್ 21ರಂದು ರಾಜಪತ್ರದಲ್ಲಿ ಪ್ರಕಟಿಸಲಾಗಿದೆ ಎಂದು ವರದಿ ತಿಳಿಸಿದೆ. ಆದರೆ, ಇವು ಸದ್ಯಕ್ಕೆ ಕರಡು ನಿಯಮಗಳಾಗಿವೆ. ಇನ್ನೂ ಅಂತಿಮ ಅನುಮೋದನೆ ದೊರೆತಿಲ್ಲ. ಪ್ರಸ್ತಾಪಗಳ ಕುರಿತು ಸಾರ್ವಜನಿಕರು ತಮ್ಮ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಲು ಸರ್ಕಾರ 30 ದಿನಗಳ ಕಾಲಾವಕಾಶ ನೀಡಿದೆ.