ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಸಂಕ್ಯೆ ಹೆಚ್ಚಾಗ್ತಿದೆ. ಸೌಂಡ್ ಇಲ್ದೆ ಓಡೋ ಈ ವಾಹನಗಳು ಪೆಟ್ರೋಲ್ – ಡಿಸೇಲ್ ಉಳಿಸುತ್ವೆ. ಈಗ ಇದ್ರಿಂದ ಆಗ್ತಿರೋ ಅಡ್ಡ ಪರಿಣಾಮ ಸದ್ಯ ಚರ್ಚೆಯಲ್ಲಿದೆ.
ಎಲೆಕ್ಟ್ರಿಕ್ ಕಾರುಗಳ (electric cars) ಮಾರಾಟ ವಿಶ್ವಾದ್ಯಂತ ವೇಗವಾಗಿ ಬೆಳಿತಿದೆ. 2024 ರಲ್ಲಿ, ಜಾಗತಿಕವಾಗಿ ಮಾರಾಟವಾದ ಒಟ್ಟು ಹೊಸ ಕಾರುಗಳಲ್ಲಿ ಶೇಕಡಾ 22 ರಷ್ಟು ಎಲೆಕ್ಟ್ರಿಕ್ ಕಾರು. ಪರಿಸರ ಸ್ನೇಹಿ, ಶಬ್ದರಹಿತ ಮತ್ತು ಇಂಧನ ಉಳಿತಾಕ್ಕೆ ಇದು ಬೆಸ್ಟ್ ಆಯ್ಕೆ ಅಂತ ಜನ ಭಾವಿಸಿದ್ದಾರೆ. ಆದ್ರೆ ಈ ಕಾರುಗಳಿಗೆ ಸಂಬಂಧಿಸಿದಂತೆ ಹೊಸ ಸಮಸ್ಯೆಯೊಂದು ಮುನ್ನೆಲೆಗೆ ಬರುತ್ತಿದೆ. ಎಲೆಕ್ಟ್ರಿಕ್ ಕಾರ್ ಡ್ರೈವ್ ಮಾಡುವ ಅನೇಕ ಜನರು ಮೋಷನ್ ಸಿಕ್ನೆಸ್ ಬಗ್ಗೆ ದೂರು ನೀಡ್ತಿದ್ದಾರೆ. ಅಂದ್ರೆ ಪ್ರಯಾಣದ ವೇಳೆ ವಾಕರಿಕೆ, ತಲೆಸುತ್ತು, ತಲೆ ನೋವು ಕಾಣಿಸಿಕೊಳ್ತಿದೆ.
ಅಧ್ಯಯನ (study) ಹೇಳೋದೇನು? : ಈ ಸಮಸ್ಯೆ ಕುರಿತು ಸಂಶೋಧನೆ ನಡೆಯುತ್ತಿದೆ. ಪ್ರಯಾಣಿಕರು ವಿಶೇಷವಾಗಿ ಎಲೆಕ್ಟ್ರಿಕ್ ಕಾರುಗಳಲ್ಲಿ Regenerative Braking ನಿಂದಾಗಿ ಈ ಸಮಸ್ಯೆ ಅನುಭವಿಸುತ್ತಿದ್ದಾರೆ ಅಂತ ಫ್ರಾನ್ಸ್ನ ಪಿಎಚ್ಡಿ ವಿದ್ಯಾರ್ಥಿ ವಿಲಿಯಂ ಎಡ್ಮಂಡ್ ಹೇಳಿದ್ದಾರೆ. ನಮ್ಮ ಮೆದುಳು ದೇಹದ ಚಲನೆಯನ್ನು ಮೊದಲೇ ಊಹಿಸಲು ಪ್ರಯತ್ನಿಸುತ್ತೆ. ಬ್ರೇಕಿಂಗ್ ಅಥವಾ ಚಲನೆಯು ಮೆದುಳಿನ ಅಂದಾಜಿಗೆ ಹೊಂದಿಕೆ ಆಗದಿದ್ದಾಗ ದೇಹ ಮತ್ತು ಮನಸ್ಸಿನ ನಡುವೆ ಅಸಮತೋಲನ ಸೃಷ್ಟಿಯಾಗುತ್ತದೆ. ಇದು ಮೋಷನ್ ಸಿಕ್ನೆಸ್ ಗೆ ಕಾರಣವಾಗುತ್ತದೆ.
ರಿಜನರೇಟಿವ್ ಬ್ರೇಕಿಂಗ್ ಅಂದ್ರೆ ಏನು? : ಕಾರಿನ ವೇಗ ಕಡಿಮೆಯಾದಾಗ ಕಾರಿನ ಬ್ರೇಕಿಂಗ್ ವ್ಯವಸ್ಥೆ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಶಕ್ತಿ ಬ್ಯಾಟರಿಯಲ್ಲಿ ಮತ್ತೆ ಸಂಗ್ರಹಿಸಲಾಗುತ್ತದೆ. ಇದು ರೇಂಜ್ ಹೆಚ್ಚಿಸುತ್ತದೆ. ಈ ಪ್ರಕ್ರಿಯೆ ಸಾಂಪ್ರದಾಯಿಕ ಬ್ರೇಕಿಂಗ್ಗಿಂತ ಭಿನ್ನವಾಗಿದೆ. ಅನೇಕ ಎಲೆಕ್ಟ್ರಿಕ್ ಕಾರುಗಳಲ್ಲಿ, ರಿಜನರೇಟಿವ್ ಬ್ರೇಕಿಂಗ್ ವೇಳೆ ಸೌಮ್ಯವಾದ ಆಘಾತ ಮತ್ತು ಅಸಹಜ ಕಂಪನದ ಅನುಭವವಾಗುತ್ತದೆ. ಇದು ಚಾಲಕ ಮತ್ತು ಪ್ರಯಾಣಿಕರಿಗೆ ತೊಂದ್ರೆಯುಂಟು ಮಾಡುತ್ತದೆ. ಅನೇಕ ಕಾರಿನಲ್ಲಿ ಇದು ಆಯ್ಕೆಯಾಗಿದ್ದು, ನೀವು ಅದನ್ನು ಬಂದ್ ಮಾಡಬಹುದು.
ಎಲೆಕ್ಟ್ರಿಕ್ ಕಾರು ಚಾಲಕನಿಗೆ ತಲೆ ಸುತ್ತುವ ಸಮಸ್ಯೆ : ಎಲೆಕ್ಟ್ರಿಕ್ ಕಾರು ಒಂದು ದೊಡ್ಡ ವೈಶಿಷ್ಟ್ಯ ಅಂದ್ರೆ ಎಂಜಿನ್ ಶಬ್ದ ತುಂಬಾ ಕಡಿಮೆ ಅಥವಾ ಬಹುತೇಕ ಇಲ್ದೆ ಇರೋದು. ಪೆಟ್ರೋಲ್-ಡೀಸೆಲ್ ಕಾರುಗಳಲ್ಲಿ, ಎಂಜಿನ್ ಶಬ್ದ ಪ್ರಯಾಣಕ್ಕೆ ಮೆದುಳನ್ನು ಸಿದ್ಧಪಡಿಸುವ ಸಂಕೇತವಾಗಿದೆ. ಆದ್ರೆ ಈ ಸಿಗ್ನಲ್ ಎಲೆಕ್ಟ್ರಿಕ್ ಕಾರುಗಳಲ್ಲಿ ಕೇಳಿಸೋದಿಲ್ಲವಾದ್ರಿಂದ ಮೆದುಳು ಅಸ್ವಸ್ಥಗೊಳ್ಳುತ್ತದೆ. 2024 ರ ವರದಿಯ ಪ್ರಕಾರ, ವಿದ್ಯುತ್ ವಾಹನಗಳ ಸೀಟುಗಳಲ್ಲಿ ಬರುವ ಕಡಿಮೆ ಕಂಪನಗಳು ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಸದ್ಯ ಸಾಮಾನ್ಯ ಸಮಸ್ಯೆ ಎನ್ನುವಂತಾಗಿದೆ. ಡೆನ್ಮಾರ್ಕ್ನಲ್ಲಿ ಪೊಲೀಸ್ ಅಧಿಕಾರಿಗಳು ಪ್ರಾಯೋಗಿಕವಾಗಿ ವಿದ್ಯುತ್ ವಾಹನಗಳನ್ನು ಬಳಸಿದಾಗ, ಅವರಿಗೆ ತಲೆತಿರುಗುವಿಕೆ ಮತ್ತು ವಾಂತಿಯ ಅನುಭವವಾಗಿದೆ.
ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚಾದ ದೂರು : ಸೋಶಿಯಲ್ ಮೀಡಿಯಾಗಳಲ್ಲಿ ಈಗ ಅನೇಕ ವೀಡಿಯೊಗಳು ವೈರಲ್ ಆಗುತ್ತಿವೆ. ಇದರಲ್ಲಿ ಅನೇಕರು, ಎಲೆಕ್ಟ್ರಿಕ್ ಕಾರುಗಳಲ್ಲಿ ಪ್ರಯಾಣಿಸುವಾಗ ವಾಕರಿಕೆ ಮತ್ತು ತಲೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದೇವೆ ಅಂತ ದೂರಿದ್ದಾರೆ. ಇದೇ ಕಾರಣಕ್ಕೆ ಅನೇಕರು ಎಲೆಕ್ಟ್ರಿಕ್ ಕಾರುಗಳನ್ನು ಖರೀದಿ ಮಾಡಲು ಹಿಂಜರಿಯುತ್ತಿದ್ದಾರೆ.
ಎಲೆಕ್ಟ್ರಿಕ್ ಕಾರುಗಳ ಈ ಮೋಷನ್ ಸಿಕ್ನೆಸ್ ಬಗ್ಗೆ ದೂರು ಹೆಚ್ಚಾಗ್ತಿದ್ದಂತೆ ಚೀನಾ ಕಂಪನಿ ಶಿಯೋಮಿ (Xiaomi) , YU7 ಎಲೆಕ್ಟ್ರಿಕ್ ಎಸ್ ಯುವಿ (SUV), ಮೋಷನ್ ಸಿಕ್ನೆಸ್ ರಿಲೀಫ್ ಮೋಡ್ ನೀಡಿದೆ. ಇದನ್ನು ಆಸ್ಪತ್ರೆಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಅಂತ ಕಂಪನಿ ಹೇಳಿದೆ. ಇದು ಪ್ರಯಾಣದ ಸಮಯದಲ್ಲಿ ಗೊಂದಲ ಅಥವಾ ತಲೆತಿರುಗುವಿಕೆ ಮುಂತಾದ ಸಮಸ್ಯೆಗಳನ್ನು ಶೇಕಡಾ 51 ರಷ್ಟು ಕಡಿಮೆ ಮಾಡುತ್ತದೆಯಂತೆ.
