ಚೀನಾ ಕಂಪನಿ ಶಿಯೋಮಿ ಮತ್ತೊಂದು ಎಲೆಕ್ಟ್ರಿಕ್ ಕಾರ್ ರಸ್ತೆಯಲ್ಲಿ ಧೂಳೆಬ್ಬಿಸಲು ಬರ್ತಿದೆ. ಕಾರು ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ದಾಖಲೆ ಮಟ್ಟದಲ್ಲಿ ಬುಕ್ಕಿಂಗ್ ಆಗಿದೆ. 

ಸ್ಮಾರ್ಟ್ ಫೋನ್ ಹಾಗೂ ಎಲೆಕ್ಟ್ರಿಕ್ ಗೆಜೆಟ್ ಮೂಲಕ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿರುವ ಚೀನಾದ ಶಿಯೋಮಿ (Xiaomi) ಕಂಪನಿ ವಾಹನ ಕ್ಷೇತ್ರದಲ್ಲಿ ಕಮಾಲ್ ಮಾಡಿದೆ. Xiaomi ಕಂಪನಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಕಂಪನಿ ಎರಡು ದಿನಗಳ ಹಿಂದೆ ತನ್ನ ಇನ್ನೊಂದು ಎಲೆಕ್ಟ್ರಿಕ್ ಕಾರು YU7 ಎಲೆಕ್ಟ್ರಿಕ್ ಎಸ್ ಯುವಿ (SUV) ಬಿಡುಗಡೆ ಮಾಡಿದೆ. ಮಾರುಕಟ್ಟೆಗೆ ಬರ್ತಿದ್ದಂತೆ ಈ YU7 ಎಲೆಕ್ಟ್ರಿಕ್ ಎಸ್ ಯುವಿ ಧೂಳೆಬ್ಬಿಸಿದೆ.

ಬಿಡುಗಡೆಯಾದ 72 ಗಂಟೆಯಲ್ಲಿ 3 ಲಕ್ಷ ಬುಕ್ಕಿಂಗ್ : ಗ್ಲೋಬಲ್ ಮೀಡಿಯಾ ವರದಿ ಪ್ರಕಾರ, ಬಿಡುಗಡೆಯಾದ 72 ಗಂಟೆಯಲ್ಲೇ 3 ಲಕ್ಷಕ್ಕೂ ಹೆಚ್ಚು ಮುಂಗಡ ಬುಕ್ಕಿಂಗ್ ಆಗಿದೆ. ಕಂಪನಿಯ ಸುಮಾರು 351 ರಿಟೇಲ್ ಸ್ಟೋರ್ ನಲ್ಲಿ2.80 ಲಕ್ಷದಿಂದ 3.15 ಲಕ್ಷದವರಗೆ ಬುಕಿಂಗ್ ನಡೆದಿದೆ ಎಂದು ಕಂಪನಿ ಹೇಳಿದೆ. ವಿಶೇಷ ಅಂದ್ರೆ ಇದ್ರಲ್ಲಿ ಆನ್ಲೈನ್ ಬುಕ್ಕಿಂಗ್ ಸೇರಿಲ್ಲ. ಒಂದ್ವೇಳೆ ಅದನ್ನು ಸೇರಿಸಿದ್ರೆ ಬುಕ್ಕಿಂಗ್ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.

ಜೂನ್ 26 ರಿಂದ ಮುಂಗಡ ಬುಕ್ಕಿಂಗ್ ಶುರುವಾಗಿದೆ. ಬುಕ್ಕಿಂಗ್ ಶುರು ಆದ 18 ಗಂಟೆಯಲ್ಲಿ 2 ಲಕ್ಷದ 40 ಸಾವಿರಕ್ಕಿಂತ ಹೆಚ್ಚು ಲಾಕ್ ಇನ್ ಆರ್ಡರ್ ಬಂದಿದೆ ಎಂದು ಕಂಪನಿ ಹೇಳಿದೆ. ಕಂಪನಿ ಇದ್ರಲ್ಲಿ ಆನ್ಲೈನ್ ಬುಕ್ಕಿಂಗ್ ಸಂಖ್ಯೆಯನ್ನು ಕೂಡ ಸೇರಿಸಿದೆ. Xiaomi ಎಲೆಕ್ಟ್ರಿಕ್ ಕಾರಿನ ಈ ಅಂಕಿ ಅಂಶ ಚೀನಾದ EV ಮಾರುಕಟ್ಟೆಯಲ್ಲಿ Xiaomi ಯ ಹಿಡಿತ ಎಷ್ಟು ವೇಗವಾಗಿ ಹೆಚ್ಚುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸ್ತಿದೆ. YU7 ಎಲೆಕ್ಟ್ರಿಕ್ ಕಾರಿನ ಬೆಲೆ ಕೂಡ ಅಗ್ಗವಾಗಿದ್ದು, ಇದು ಟೆಸ್ಲಾ ಮಾಡೆಲ್ Y ಗಿಂತ ಸುಮಾರು ಶೇಕಡಾ 4 ಪಟ್ಟು ಅಗ್ಗವಾಗಿದೆ. ಚೀನಾದ ದೊಡ್ಡ ಕಾರು ತಯಾರಕ ಕಂಪನಿ ಬಿವೈಡಿಗೆ ಇದು ದೊಡ್ಡ ಸ್ಪರ್ಧಿಯಾಗಿ ಮಾರ್ಪಟ್ಟಿದೆ.

YU7 ಎಲೆಕ್ಟ್ರಿಕ್ ಎಸ್ ಯುವಿ ವಿಶೇಷತೆ ಮತ್ತು ಬೆಲೆ : ಫವರ್ ಫುಲ್ ಎಸ್ ಯುವಿ ಸಾಲಿಗೆ YU7 ಎಲೆಕ್ಟ್ರಿಕ್ ಎಸ್ ಯುವಿ ಸೇರುತ್ತದೆ. ಇದ್ರ ಬೆಲೆ 2,53,000 ಯುವಾನ್ ಇಡಲಾಗಿದೆ. ಅಂದ್ರೆ ಭಾರತದ ರೂಪಾಯಿಯಲ್ಲಿ30.28 ಲಕ್ಷ ರೂಪಾಯಿಗೆ ನಿಮಗೆ YU7 ಎಲೆಕ್ಟ್ರಿಕ್ ಎಸ್ ಯುವಿ ಲಭ್ಯವಾಗಲಿದೆ. ಕಂಪನಿ ಇದನ್ನು ಮೂರು ರೂಪಾಂತರದಲ್ಲಿ ಬಿಡುಗಡೆ ಮಾಡಿದೆ ಒಂದು YU7, ಇನ್ನೊಂದು YU7 ಪ್ರೋ ಹಾಗೂ YU7 ಮ್ಯಾಕ್ಸ್. ಈ ಮೂರು ರೂಪಾಂತರದಲ್ಲಿ ನಿಮಗೆ ಬೇರೆ ಬೇರೆ ಬ್ಯಾಟರಿ ಹಾಗೂ ರೇಂಜ್ ಲಭ್ಯವಾಗಲಿದೆ.

YU7, 315 bhp ಶಕ್ತಿ ಉತ್ಪಾದಿಸುತ್ತದೆ. ಸಿಂಗಲ್ ಚಾರ್ಜ್ಗೆ 835 ಕಿ.ಮೀ ಓಡಬಲ್ಲದು. YU7 ಪ್ರೊ ಆವೃತ್ತಿಯು 489 bhp ಯೊಂದಿಗೆ ಲಭ್ಯವಿದೆ. ಇದು ಸಿಂಗಲ್ ಚಾರ್ಜ್ ಗೆ 770 ಕಿ.ಮೀ ವರೆಗೆ ಓಡಬಲ್ಲದು. ಇನ್ನು YU7 ಮ್ಯಾಕ್ಸ್ ರೂಪಾಂತರವು 760 ಕಿ.ಮೀ ಡ್ರೈವಿಂಗ್ ರೇಂಜ್ ನೀಡುತ್ತದೆ. ಎಲ್ಲಾ ರೂಪಾಂತರಗಳು ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ವೆ. ಬ್ಯಾಟರಿ, ಕೇವಲ 12 ನಿಮಿಷಗಳಲ್ಲಿ ಶೇಕಡಾ 10 ರಿಂದ ಶೇಕಡಾ 80 ರಷ್ಟು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ದೆ ಇದು 15 ನಿಮಿಷಗಳಲ್ಲಿ 620 ಕಿ.ಮೀ. ವರೆಗೆ ಚಲಿಸಬಲ್ಲದು. YU7 ನಲ್ಲಿ ನಿಮಗೆ 9 ಬಣ್ಣಗಳು ಲಭ್ಯವಿದೆ. ಅತ್ಯಂತ ವಿಶಿಷ್ಟ ವೈಶಿಷ್ಟ್ಯವೆಂದರೆ ಮೋಷನ್ ಸಿಕ್ನೆಸ್ ರಿಲೀಫ್ ಮೋಡ್. ಇದನ್ನು ಆಸ್ಪತ್ರೆಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ವ್ಯವಸ್ಥೆಯು ವಾಹನದ ಆಘಾತಗಳು, ಪಿಚ್ ಮತ್ತು ರೋಲ್ ಅನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ. ಇದು ಪ್ರಯಾಣದ ಸಮಯದಲ್ಲಿ ಗೊಂದಲ ಅಥವಾ ತಲೆತಿರುಗುವಿಕೆ ಮುಂತಾದ ಸಮಸ್ಯೆಗಳನ್ನು ಶೇಕಡಾ 51 ರಷ್ಟು ಕಡಿಮೆ ಮಾಡುತ್ತದೆ.