ಕಾರು ಅಪಘಾತಕ್ಕೀಡಾದಾಗ ಬಂಪರ್, ಹೆಡ್‌ಲೈಟ್, ವಿಂಡ್‌ಶೀಲ್ಡ್ ಮತ್ತು ಎಂಜಿನ್‌ನಂತಹ ಪ್ರಮುಖ ಪಾರ್ಟ್ಸ್ ಹಾಳಾದರೆ ರಿಪೇರಿ ಖರ್ಚು ಲಕ್ಷಗಳವರೆಗೆ ಹೋಗಬಹುದು. ಇಂತಹ ಅನಿರೀಕ್ಷಿತ ಆರ್ಥಿಕ ಹೊರೆಯಿಂದ ಪಾರಾಗಲು ಸರಿಯಾದ ಕವರೇಜ್ ಇರುವ ಕಾರ್ ಇನ್ಶೂರೆನ್ಸ್ ಹೊಂದುವುದು ಅತ್ಯಗತ್ಯ.

ವಾಹನ ಓಡಿಸುವಾಗ ಸಣ್ಣಪುಟ್ಟ ಗೀರುಗಳು ಬೀಳುವುದು ಮಾಮೂಲಿ. ಆದರೆ ಕಾರು ದೊಡ್ಡ ಅಪಘಾತಕ್ಕೀಡಾದರೆ ರಿಪೇರಿ ಖರ್ಚು ಏಕಾಏಕಿ ಹೆಚ್ಚಾಗಬಹುದು. ಅದರಲ್ಲೂ ಕಾರಿನ ಬೆಲೆಬಾಳುವ ಪಾರ್ಟ್ಸ್ ಹಾಳಾದರೆ ಇನ್ಶೂರೆನ್ಸ್ ಕ್ಲೈಮ್ ಮೊತ್ತ ಕೂಡ ಗಣನೀಯವಾಗಿ ಏರುತ್ತದೆ. ಅಪಘಾತದ ನಂತರ ರಿಪೇರಿ ಬಿಲ್ ಹೆಚ್ಚಾಗಲು ಕಾರಣವಾಗುವ ಪ್ರಮುಖ ಪಾರ್ಟ್ಸ್ ಯಾವುವು ಅಂತ ನೋಡೋಣ.

ಬಂಪರ್ ಮತ್ತು ಬಾಡಿ ಪಾರ್ಟ್ಸ್

ಅಪಘಾತವಾದಾಗ ಮೊದಲು ಜಖಂಗೊಳ್ಳುವುದು ಕಾರಿನ ಹೊರಭಾಗ. ಬಂಪರ್, ಫೆಂಡರ್, ಬಾನೆಟ್, ಡೋರ್ ಮತ್ತು ಟೈಲ್‌ಗೇಟ್ ಜಜ್ಜಿಕೊಳ್ಳಬಹುದು. ಸಣ್ಣ ಗೀರು ಅಥವಾ ಡೆಂಟ್ ಬಿದ್ದರೆ ರಿಪೇರಿ ಮಾಡಿಸಬಹುದು. ಆದರೆ ಡ್ಯಾಮೇಜ್ ದೊಡ್ಡದಾಗಿದ್ದರೆ ಆ ಪಾರ್ಟ್ಸ್ ಸಂಪೂರ್ಣವಾಗಿ ಬದಲಾಯಿಸಬೇಕಾಗುತ್ತದೆ. ಇದರ ಜೊತೆಗೆ ಪೇಂಟಿಂಗ್ ಮತ್ತು ಲೇಬರ್ ಚಾರ್ಜ್ ಕೂಡ ಸೇರಿಕೊಳ್ಳುತ್ತದೆ.

ಹೆಡ್‌ಲೈಟ್ ಮತ್ತು ಟೈಲ್‌ಲೈಟ್

ಹೊಸ ಕಾರುಗಳಲ್ಲಿ ಎಲ್ಇಡಿ (LED) ಮತ್ತು ಸ್ಮಾರ್ಟ್ ಲೈಟಿಂಗ್ ಸಿಸ್ಟಮ್ ಬಳಸುವುದರಿಂದ ಹೆಡ್‌ಲೈಟ್ ಮತ್ತು ಟೈಲ್‌ಲೈಟ್‌ಗಳ ಬೆಲೆ ದುಬಾರಿಯಾಗಿದೆ. ಈ ಲೈಟ್‌ಗಳ ಜೊತೆಗೆ ಹಲವು ಎಲೆಕ್ಟ್ರಾನಿಕ್ ವಸ್ತುಗಳು ಇರುತ್ತವೆ. ಹಾಗಾಗಿ ಅಪಘಾತದಲ್ಲಿ ಲೈಟ್ ಯೂನಿಟ್ ಒಡೆದುಹೋದರೆ, ಅದನ್ನು ಬದಲಾಯಿಸಲು ದೊಡ್ಡ ಮೊತ್ತವೇ ಬೇಕಾಗುತ್ತದೆ.

ವಿಂಡ್‌ಶೀಲ್ಡ್ ಮತ್ತು ಗ್ಲಾಸ್

ಅಪಘಾತದಿಂದ ಅಥವಾ ರಸ್ತೆಯಲ್ಲಿ ಹಾರುವ ಕಲ್ಲುಗಳಿಂದ ವಿಂಡ್‌ಶೀಲ್ಡ್ ಒಡೆಯಬಹುದು. ಡ್ಯಾಮೇಜ್ ಹೆಚ್ಚಾಗಿದ್ದರೆ ಗ್ಲಾಸ್ ಅನ್ನು ಪೂರ್ತಿಯಾಗಿ ಬದಲಾಯಿಸಬೇಕು. ಇಂದಿನ ಆಧುನಿಕ ಕಾರುಗಳ ವಿಂಡ್‌ಶೀಲ್ಡ್‌ಗಳಲ್ಲಿ ಕ್ಯಾಮೆರಾ ಮತ್ತು ಸೆನ್ಸಾರ್‌ಗಳನ್ನು ಅಳವಡಿಸಿರುತ್ತಾರೆ. ಹೊಸ ಗ್ಲಾಸ್ ಹಾಕಿದ ಮೇಲೆ ಇವುಗಳನ್ನು ಮತ್ತೆ ಕ್ಯಾಲಿಬ್ರೇಟ್ ಮಾಡಬೇಕಾಗುತ್ತದೆ. ಇದು ನಿಮ್ಮ ರಿಪೇರಿ ಖರ್ಚನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಅಲಾಯ್ ವೀಲ್ ಮತ್ತು ಟೈರ್

ಕಾರು ದೊಡ್ಡ ಗುಂಡಿಗೆ ಬಿದ್ದಾಗ ಅಥವಾ ಜೋರಾಗಿ ಗುದ್ದಿದಾಗ ಟೈರ್ ಮತ್ತು ಅಲಾಯ್ ವೀಲ್‌ಗಳಿಗೆ ಹಾನಿಯಾಗುತ್ತದೆ. ಅಲಾಯ್ ವೀಲ್ ಬೆಂಡಾದರೆ ಅಥವಾ ಒಡೆದರೆ ಹೊಸದನ್ನೇ ಹಾಕಿಸಬೇಕು. ಪ್ರೀಮಿಯಂ ಕಾರುಗಳಲ್ಲಿರುವ ದೊಡ್ಡ ಅಲಾಯ್ ವೀಲ್ ಮತ್ತು ದುಬಾರಿ ಟೈರ್‌ಗಳು ರಿಪೇರಿ ಬಿಲ್ ಅನ್ನು ಆಕಾಶಕ್ಕೇರಿಸುತ್ತವೆ.

ಎಂಜಿನ್, ಸಸ್ಪೆನ್ಷನ್ ಮತ್ತು ಏರ್‌ಬ್ಯಾಗ್

ಭೀಕರ ಅಪಘಾತವಾದಾಗ ಕಾರಿನ ಹೊರಭಾಗ ಮಾತ್ರವಲ್ಲ, ಒಳಗಿನ ಪಾರ್ಟ್ಸ್ ಕೂಡ ಹಾಳಾಗುತ್ತವೆ. ಎಂಜಿನ್, ರೇಡಿಯೇಟರ್, ಸಸ್ಪೆನ್ಷನ್, ಏರ್‌ಬ್ಯಾಗ್ ಮತ್ತು ಇತರ ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಾನಿಕ್ ಪಾರ್ಟ್ಸ್ ಡ್ಯಾಮೇಜ್ ಆದರೆ, ರಿಪೇರಿ ಖರ್ಚು ಸಾವಿರಗಳಿಂದ ಲಕ್ಷಗಳವರೆಗೆ ಹೋಗಬಹುದು.

ಕೈ ಹಿಡಿಯುವ ಇನ್ಶೂರೆನ್ಸ್

ಇಂಥ ಸಂದರ್ಭಗಳಲ್ಲಿ ದೊಡ್ಡ ಆರ್ಥಿಕ ಹೊರೆಯಿಂದ ಪಾರಾಗಲು ಕಾರ್ ಇನ್ಶೂರೆನ್ಸ್ ನಿಮಗೆ ಸಹಾಯ ಮಾಡುತ್ತದೆ. ಆದರೆ ನಿಮಗೆ ಸಿಗುವ ಕ್ಲೈಮ್ ಮೊತ್ತವು ಪಾಲಿಸಿಯ ಕವರೇಜ್, ಡಿಡಕ್ಟಿಬಲ್ ಮೊತ್ತ, ವಾಹನದ ವಯಸ್ಸು ಮತ್ತು ಅಪಘಾತದ ತೀವ್ರತೆಯನ್ನು ಅವಲಂಬಿಸಿರುತ್ತದೆ. ಹಾಗಾಗಿ ಕಾರ್ ಇನ್ಶೂರೆನ್ಸ್ ಮಾಡಿಸುವಾಗ ಕೇವಲ ಪ್ರೀಮಿಯಂ ಮೊತ್ತವನ್ನು ಮಾತ್ರ ನೋಡಬೇಡಿ. ಪಾಲಿಸಿಯಲ್ಲಿರುವ ಕವರೇಜ್, ನಿಯಮಗಳು ಮತ್ತು ಷರತ್ತುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ಕಾರಿನ ಬಾಡಿ ಪಾರ್ಟ್ಸ್‌ನಿಂದ ಹಿಡಿದು ಲೈಟ್, ಗ್ಲಾಸ್, ಟೈರ್, ಎಂಜಿನ್ ವರೆಗೆ ಎಲ್ಲವೂ ಅಪಘಾತದ ನಂತರ ದೊಡ್ಡ ಬಿಲ್ ತರಬಹುದು. ಸರಿಯಾದ ಇನ್ಶೂರೆನ್ಸ್ ಪಾಲಿಸಿ ಇದ್ದರೆ ಇಂಥ ಅನಿರೀಕ್ಷಿತ ಖರ್ಚುಗಳಿಂದ ನೀವು ಬಚಾವ್ ಆಗಬಹುದು.