ಮರ ಕಡಿಯುವಾಗ ಅಲ್ಲಿ ಗರ್ಭಿಣಿ ಇದ್ದರೆ ಆಕೆಯನ್ನು ಹಿರಿಯರು ದೂರ ಕಳಿಸುವುದನ್ನು ನೀವೂ ನೋಡಿರಬಹುದು. ಆ ಜಾಗದಲ್ಲಿ ಗರ್ಭಿಣಿ ಇರಬಾರದು ಎನ್ನುವುದು ನಂಬಿಕೆ. ಇದು ಗರ್ಭಿಣಿಯರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರೂಢಿಗೆ ತಂದ ಸಂಪ್ರದಾಯ.

ಇದಕ್ಕೆ ಹಲವು ಕಾರಣಗಳಿವೆ. ಕಡಿದ ಮರ ಯಾವ ದಿಕ್ಕಿನಲ್ಲಿ ಬೀಳುತ್ತದೆ ಎಂಬುದು ಎಷ್ಟೋ ಸಲ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಲೆಕ್ಕಾಚಾರ ತಪ್ಪಿ ಅದು ವಿರುದ್ಧ ದಿಕ್ಕಿನಲ್ಲಿ ಬೀಳಬಹುದು. ಆಗ ತಪ್ಪಿಸಿಕೊಂಡು ಓಡುವುದಕ್ಕೆ ಗರ್ಭಿಣಿಗೆ ಕಷ್ಟ. ಇದು ಒಂದು ಕಾರಣವಾದರೆ, ಇನ್ನೊಂದು ಕಾರಣ- ಮರ ಬೀಳುವಾಗ ಆಗುವ ಭಾರಿ ಶಬ್ದಕ್ಕೆ ಗರ್ಭಿಣಿ ಹೆದರಬಹುದು. ಅದು ಆಕೆಗೂ, ಹೊಟ್ಟೆಯಲ್ಲಿರುವ ಮಗುವಿಗೂ ಒಳ್ಳೆಯದಲ್ಲ. 

ಹಳೆ ಆಚಾರ ಹೊಸ ವಿಚಾರಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ...

ಇನ್ನೂ ಒಂದು ಕಾರಣವಿದೆ. ಭಾರತೀಯರು ಪ್ರಕೃತಿ ಆರಾಧಕರು. ನಾವು ಕಾರಣವಿಲ್ಲದೆ ಮರ ಕಡಿಯುವುದಿಲ್ಲ. ಆದರೆ, ಶವಸಂಸ್ಕಾರಕ್ಕೆ ಅನಿವಾರ್ಯವಾಗಿ ಮರ ಕಡಿದೇ ಕಡಿಯುತ್ತೇವೆ. ಗರ್ಭಿಣಿಯರಿಗೆ ಕೆಟ್ಟ ಯೋಚನೆಗಳು ಬರಬಾರದೆಂಬುವುದು ನಮ್ಮ ಆಶಯ. ಮರ ಕಡಿಯುವಾಗ ಅದನ್ನು ಶವಸಂಸ್ಕಾರಕ್ಕೆ ಕಡಿಯುತ್ತಿರಬಹುದು ಎಂಬ ಯೋಚನೆ ಗರ್ಭಿಣಿಗೆ ಬರಬಹುದು ಎಂಬ ಕಾರಣಕ್ಕೂ ಇಂಥದ್ದೊಂದು ಸಂಪ್ರದಾಯ ಚಾಲ್ತಿಯಲ್ಲಿದೆ.

ಇವುಗಳನ್ನು ಆಧುನಿಕರು ನಿರಾಕರಿಸಬಹುದು. ಅವರು ಒಪ್ಪಿದರೂ ಸರಿ, ಒಪ್ಪದಿದ್ದರೂ ಸರಿ, ಗರ್ಭಿಣಿಯರು ಸಂತೋಷವಾಗಿರಬೇಕು, ಅವರು ಮಾನಸಿಕವಾಗಿ ಪ್ರಶಾಂತವಾಗಿರಬೇಕು ಎಂಬುದನ್ನಂತೂ ಎಲ್ಲರೂ ಒಪ್ಪುತ್ತಾರಲ್ಲ. ಮರ ಕಡಿಯುವುದು ಒಂದು ಜೀವಿಯನ್ನು ಸಾಯಿಸುವ ಕ್ರಿಯೆಯಾಗಿರುವುದರಿಂದ ಅದನ್ನು ಗರ್ಭಿಣಿಯರು ನೋಡದೆ ಇರುವುದು ಒಳ್ಳೆಯದೇ. ಹಾಗೆಯೇ, ಪ್ರಾಣಿವಧೆಯನ್ನೂ ಗರ್ಭಿಣಿಯರು ನೋಡಬಾರದು ಎಂಬ ನಿಯಮವಿದೆ. ಮಾಂಸಾಹಾರಿಗಳು ಮನೆಯಲ್ಲಿ ಕೋಳಿ, ಕುರಿಯನ್ನು ಕಡಿಯುವಾಗ ಗರ್ಭಿಣಿಯರು ಅದನ್ನು ನೋಡಬಾರದು ಎನ್ನುತ್ತಾರೆ. ದೇವರಿಗೆ ಪ್ರಾಣಿ ಬಲಿ ಕೊಡುವವರೂ ಅಲ್ಲಿ ಗರ್ಭಿಣಿ ಇರಬಾರದು ಎನ್ನುವುದುಂಟು.

- ಮಹಾಬಲ ಸೀತಾಳಬಾವಿ, ಕನ್ನಡಪ್ರಭ