ದಾವಣಗೆರೆಯ ದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ ಮತ್ತು ಭಾರೀ ಪೊಲೀಸ್ ಭದ್ರತೆಯ ನಡುವೆಯೂ ಕೋಣವನ್ನು ಬಲಿ ಕೊಡಲಾಗಿದೆ. ಈ ಘಟನೆಯ ಜೊತೆಗೆ, ಬರಿಮೈಯಲ್ಲಿ ಬೇವಿನುಡುಗೆ ತೊಡುವುದನ್ನು ಅಧಿಕಾರಿಗಳು ತಡೆದಿದ್ದು, ಆದರೆ ಜಿಲ್ಲಾಡಳಿತವು ಯಾವುದೇ ಬಲಿ ನಡೆದಿಲ್ಲ ಎಂದು ಹೇಳಿಕೆ ನೀಡಿದೆ.

ದಾವಣಗೆರೆ: ಪ್ರಾಣಿ ಬಲಿ ನಿಷೇಧವಿದ್ದರೂ, ಭಾರೀ ಪೊಲೀಸ್‌ ಭದ್ರತೆ ಏರ್ಪಡಿಸಿದ್ದರೂ ನಗರದ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆಗೆ ಬುಧವಾರ ನಸುಕಿನ 2.45ರ ವೇಳೆಗೆ ಬರೋಬ್ಬರಿ 7 ಹೊಡೆತಕ್ಕೆ ದೇವಿಯ ಕೋಣ ಬಲಿ ಕೊಡಲಾಗಿದೆ ಎಂದು ತಿಳಿದುಬಂದಿದೆ. ಜಾತ್ರೆಯಲ್ಲಿ ಕೋಣ ಬಲಿ ತಡೆಯಲು ಪೊಲೀಸ್ ಅಧಿಕಾರಿಗಳು, ಕ್ಷಿಪ್ರ ಕಾರ್ಯಾಚರಣೆ ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಗೃಹ ರಕ್ಷಕ ದಳದ ಪಹರೆ ಇತ್ತು. ಈ ಮಧ್ಯೆಯೂ ವಾಹನವೊಂದರಲ್ಲಿ ಹಳೇ ಭಾಗದ ವಿವಿಧೆಡೆ ರಾತ್ರೋರಾತ್ರಿ ದೇವಿ ಕೋಣವನ್ನು ಸುತ್ತಾಡಿಸಿ, ಕಡೆಗೆ ಬಸವರಾಜ ಪೇಟೆಯ ಚೌಡಮ್ಮನ ದೇವಸ್ಥಾನ ಸಮೀಪದ ನಿರ್ಜನ ಪ್ರದೇಶದಲ್ಲಿ ದುಗ್ಗಮ್ಮನ ಕೋಣವನ್ನು ಜಾತ್ರೆ ಹೆಸರಿನಲ್ಲಿ ಬಲಿ ಕೊಡಲಾಯಿತು ಎನ್ನಲಾಗಿದೆ.

ಕತ್ತರಿಸಿದ ಕಾಲನ್ನು ಕೋಣದ ಬಾಯಿಗೆ ಅಡ್ಡ ಇಟ್ಟು, ದುಗ್ಗಮ್ಮನ ದೇವಸ್ಥಾನ ಬಳಿಗೆ ಮಿಂಚಿನ ವೇಗದಲ್ಲಿ ತಂದು, ಅಲ್ಲಿಂದ ಮತ್ತೆ ಗಾಂಧಿ ನಗರದ ಚೌಕಿಮನೆಗೆ ಒಯ್ಯುವುದರೊಂದಿಗೆ ಧಾರ್ಮಿಕ ಕಾರ್ಯ ನೆರವೇರಿತು. ಅನಂತರ ನಗರದ ಹಳೇ ಭಾಗಕ್ಕೆ ಸಹಸ್ರಾರು ಯುವಕರು ಪುಟ್ಟಿಯಲ್ಲಿ ಜೋಳದ ಚರಗ ಚೆಲ್ಲುತ್ತಾ ದುಗ್ಗಮ್ಮ ಜಾತ್ರೆಗೆ ಮೆರಗು ತಂದರು. ಈ ನಡುವೆ ಕತ್ತರಿಸಿದ ಕೋಣದ ಕಾಲನ್ನು ಹಿಡಿದು ವ್ಯಕ್ತಿಯೊಬ್ಬ ನೆರೆದಿದ್ದ ಜನರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ ವಿಡಿಯೋ ವೈರಲ್‌ ಆಗಿದೆ. ಕೋಣ ಬಲಿ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ.

ಬರಿ ಮೈಮೇಲೆ ಬೇವಿನುಡುಗೆ: ಬಟ್ಟೆ ಹಾಕಿಸಿದ ಅಧಿಕಾರಿಗಳು

ದುಗ್ಗಮ್ಮ ಜಾತ್ರೆ ವೇಳೆ ಬೇವಿನುಡುಗೆ, ಉರುಳು ಸೇವೆ, ದೀಡು ನಮಸ್ಕಾರದ ಹರಕೆ ತೀರಿಸುವುದು ಸಾಮಾನ್ಯವಾಗಿತ್ತು. ಬರಿಮೈಮೇಲೆ ಬೇವಿನುಡುಗೆ ತೊಟ್ಟು ಹರಕೆ ತೀರಿಸುವುದು ನಿಷೇಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ, ಸಿಬ್ಬಂದಿ ಅಂತಹ ಪ್ರಕರಣಗಳಲ್ಲಿ ಕೆಲವರಿಗೆ ಬಟ್ಟೆ ಹಾಕಿಸಿ ಕಳಿಸಿದ್ದಾರೆ.

ಬರಿ ಮೈಮೇಲೆ ಬೇವಿನುಡುಗೆ ತೊಟ್ಟಿದ್ದ ಸುಮಾರು ೨೦ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ದೇವಸ್ಥಾನ ಬಳಿ ಬಂದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿ ತಿಳಿಹೇಳಿದ್ದಾರೆ. ಹೀಗೆ ಬರಿ ಮೈಮೇಲೆ ಬೇವಿನುಡುಗೆ ತೊಡುವುದು ನಿಷೇಧಿಸಿದೆ. ಹಾಗಾಗಿ ಬಟ್ಟೆ ಧರಿಸಿ, ಹರಕೆ ತೀರಿಸುವಂತೆ ತೊಟ್ಟವರಿಗೆ ತಿಳಿಹೇಳಿ, ಕಾನೂನಿನ ಬಗ್ಗೆ ವಿವರಿಸಿ, ಮನ ಪರಿವರ್ತಿಸಿದ್ದಾರೆ. ಅಧಿಕಾರಿ, ಸಿಬ್ಬಂದಿಯ ಮಾತಿಗೆ ಸ್ಪಂದಿಸಿದ ಭಕ್ತರು ಬರಿ ಮೈಯಲ್ಲಿ ಬೇವಿನುಡುಗೆ ಉಟ್ಟವರಿಗೆ ಬಟ್ಟೆ ಹಾಕಿಸಿ, ಕಳಿಸಿದ್ದಾರೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಜಾತ್ರೆ ಜನಸಾಗರದಲ್ಲಿ ಹೆತ್ತವರಿಂದ ದೂರವಾಗಿದ್ದ ಮಕ್ಕಳನ್ನು ಪಾಲಕರಿಗೆ ತಲುಪಿಸುವ ಕೆಲಸವೂ ಪೊಲೀಸ್ ಅಧಿಕಾರಿ, ಸಿಬ್ಬಂದಿಯಿಂದ ನಡೆಯಿತು. ಅಲ್ಲಲ್ಲಿ ಮೊಬೈಲ್ ಕಳ್ಳರು, ಪಿಕ್ ಪಾಕೆಟ್ ಮಾಡುವವರು, ಸರಗಳ್ಳತನದಂತಹ ಕೆಲ ಪ್ರಕರಣದ ಬಗ್ಗೆ ಕೇಳಿಬಂದಿತು.

ಇದು ಬೇರೆ ಹಂತದ ಭಕ್ತಿ: ಡಿಸಿ ಗಂಗಾಧರಸ್ವಾಮಿ

ಭಕ್ತರು ಭಕ್ತಿಪರವಶರಾಗಿ ದೇವಿ ದರ್ಶನಕ್ಕೆ ಬಂದು, ಜಾತ್ರೆ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಜನಸಂದಣಿ ಇರುವಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಪೊಲೀಸ್ ಇಲಾಖೆಯಿಂದ ಡ್ರೋಣ್ ಮೂಲಕ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೂ ದೇವಸ್ಥಾನದ ಸಮೀಪದ ಸ್ಥಳದಲ್ಲಿದ್ದೇವೆ. ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಪಂ ಸಿಇಒ ಸಹ ಇಲ್ಲಿಯೇ ಇದ್ದು, ರಾತ್ರಿಯಿಂದಲೂ ಇದ್ದೇವೆ ಎಂದರು.

ದಾವಣಗೆರೆ ಹಳೇ ಭಾಗದ ಎಲ್ಲ ದೇವಸ್ಥಾನಗಳಿಗೂ ಅಧಿಕಾರಿಗಳನ್ನು ನಿಯೋಜಿಸಿದ್ದು, ಆ ಎಲ್ಲರೂ ಆಯಾ ಭಾಗದಲ್ಲಿ ನಿಗಾ ವಹಿಸಿದ್ದಾರೆ. ಜನರು ದೇವಿಯ ಆಶೀರ್ವಾದ ಪಡೆಯಬೇಕು. ಉತ್ತಮ ಮಳೆ-ಬೆಳೆಗಳಾಗಿ, ಜನರು ಸುಭಿಕ್ಷವಾಗಿರುವಂತೆ ದೇವಿಗೆ ಪ್ರಾರ್ಥಿಸುತ್ತೇವೆ. ಸಾರ್ವಜನಿಕವಾಗಿ ಪ್ರಾಣಿ ಬಲಿ ನೀಡೋದು ನಿಷೇಧಿಸಿ, ಆದೇಶ ಹೊರಡಿಸಿದ್ದೇವೆ. ಅಂತಹ ಯಾವುದೇ ಘಟನೆ ನಡೆದಿಲ್ಲ. ಬೇರೆಯ ಹಂತದ ಭಕ್ತಿ ಇದು. ಪ್ರತಿಯೊಬ್ಬರ ಮುಖದಲ್ಲೂ ಭಕ್ತಿಭಾವನೆ ಇದೆ. ಮೂಢ ಆಚರಣೆ ಇಲ್ಲ ಎಂದು ಅಭಿಪ್ರಾಯಪಟ್ಟರು.

ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೋತ್ಸವ ಇವತ್ತಿನ ದಿನ ವಿಜೃಂಭಣೆಯಿಂದ ನಡೆದಿದೆ. ಸಂಚಾರ, ಪಾರ್ಕಿಂಗ್‌, ಬಂದೋಬಸ್ತ್ ಹೀಗೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಆಯ್ದ ಸ್ಥಳಗಳಲ್ಲಿ ಬಂದೋಬಸ್ತ್ ಮಾಡಿದೆ. ಮೂಢನಂಬಿಕೆ, ಪ್ರಾಣಿ ಬಲಿ ನಿಷೇಧ ಹಿನ್ನೆಲೆ ಡಿಸಿ ನೇತೃತ್ವದಲ್ಲಿ ಇಲ್ಲೇ ಇದ್ದು, ಮುನ್ನೆಚ್ಚರಿಕೆ ವಹಿಸಿದ್ದರಿಂದ ಯಾವುದೇ ಬಲಿಯಂತಹ ಘಟನೆ ನಡೆದಿಲ್ಲ. ತಾಯಿ ದುಗ್ಗಮ್ಮ ಎಲ್ಲರಿಗೂ ಶುಭ ಮಂಗಳ ತರಲಿ.

- ಡಾ.ಶೇಖರ್ ಎಚ್. ಟೆಕ್ಕಣ್ಣನವರ್, ಜಿಲ್ಲಾ ಎಸ್‌ಪಿ.