What is Lord Hanuman s link with Saturday ಹಿಂದೂ ನಂಬಿಕೆಯ ಪ್ರಕಾರ ಶನಿವಾರದಂದು ಹನುಮಂತನನ್ನು ಪೂಜಿಸುವುದರಿಂದ ಶನಿದೋಷದ ಪ್ರಭಾವ ಕಡಿಮೆಯಾಗುತ್ತದೆ. ಶನಿದೇವರು ಮತ್ತು ಆಂಜನೇಯನ ನಡುವಿನ ಪೌರಾಣಿಕ ಹಿನ್ನೆಲೆ ಹಾಗೂ ಶನಿವಾರದಂದು ಹನುಮಂತನ ಆರಾಧನೆಯ ಮಹತ್ವವನ್ನು ಈ ಲೇಖನ ವಿವರಿಸುತ್ತದೆ.
ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ಶನಿವಾರ ಹನುಮಪ್ಪನ ವಾರ. ಈ ದಿನವನ್ನು ಶೌರ್ಯ, ಶಕ್ತಿ, ಸಾಮರ್ಥ್ಯ, ಬುದ್ಧಿವಂತಿಕೆ, ನಿಷ್ಠೆಯ ಪ್ರತೀಕ. ಶನಿವಾರದ ದಿನ ಆಂಜನೇಯನ ಪೂಜಜಿಸುವುದರಿಂದ ಒಳಿತಾಗುತ್ತದೆ. ಹನುಮಂತನು ಶ್ರೀರಾಮನ ಪರಮ ಭಕ್ತನಾಗಿರುವುದರಿಂದ ಶನಿವಾರವನ್ನು ಆತನಿಗೆ ಸಮರ್ಪಿಸಲಾಗಿದೆ ಎಂಬ ನಂಬಿಕೆ ಇದೆ.
ಶನಿವಾರದ ಅಧಿಪತಿ ದೇವರು ಯಾರು?
ವಾರದ ಏಳು ದಿನಗಳನ್ನು ನೆನಪಿಸಿಕೊಂಡಾಗ ಸೋಮವಾರದಿಂದ ಶುಕ್ರವಾರದವರೆಗೆ ಕೆಲಸ ಅವಧಿ, ಶನಿವಾರ ರವಿವಾರ ವೀಕೆಂಡ್ ಎಂದು ಗುರಿಸುತ್ತೇವೆ. ಆದರೆ ಭಾರತೀಯ ಸಂಪ್ರದಾಯದಲ್ಲಿ ಪ್ರತಿಯೊಂದು ದಿನಕ್ಕೂ ವಿಶೇಷ ಆಧ್ಯಾತ್ಮಿಕ ಮಹತ್ವವಿದೆ. ಪ್ರತಿಯೊಂದು ದಿನವೂ ನಿರ್ದಿಷ್ಟ ದೇವರಿಗೆ ಸಮರ್ಪಿತವಾಗಿದೆ ಎಂಬ ನಂಬಿಕೆ ಇದೆ.
ಶನಿವಾರ ಎಂದಾಕ್ಷಣ ಹಲವರಲ್ಲಿ ಕುತೂಹಲದ ಜೊತೆಗೆ ಸ್ವಲ್ಪ ಭಯವೂ ಮೂಡುತ್ತದೆ. ಏಕೆಂದರೆ ಶನಿವಾರ ಬಂತೆಂದರೆ ಶನಿ ದೇವರು ನೆನಪಾಗುತ್ತಾನೆ. ಈ ಶನಿ ದೇವರು ಮನುಷ್ಯನ ತಾಳ್ಮೆ ಮತ್ತು ಕರ್ಮವನ್ನು ಪರೀಕ್ಷಿಸುವ ದೇವರು ಎಂದು ಶನಿ ದೇವರನ್ನು ನಂಬಲಾಗುತ್ತದೆ. ಆದರೆ ಶನಿ ದೇವರ ಜೊತೆಗೆ ಶನಿವಾರದಂದು ಭಕ್ತರು ಶಕ್ತಿ, ಧೈರ್ಯ, ರಕ್ಷಣೆಗಾಗಿ ಆರಾಧಿಸುವ ಮತ್ತೊಬ್ಬ ಶಕ್ತಿಶಾಲಿ ದೇವರೆಂದರೆ ಅದು ಆಂಜನೇಯ.
ಶನಿವಾರಕ್ಕೂ ಹನುಮಂತನ ನಡುವೆ ಏನು ಸಂಬಂಧ?
ಶನಿವಾರಕ್ಕೂ ಆಂಜನೇಯಗೂ ಏನು ಸಂಬಂಧ? ಇದು ಕೇವಲ ಪೂಜೆ-ಪುನಸ್ಕಾರಗಳಿಗೆ ಸಂಬಂಧಿಸಿದೆಯೋ ಅಥವಾ ಇದಕ್ಕೆ ಏನಾದರೂ ಹಿನ್ನೆಲೆ ಇದೆಯೋ? ಶನಿ ದೇವರಿಂದ ಎದುರಾಗುವ ಸಂಕಷ್ಟಗಳಿಂದ ಭಕ್ತರನ್ನು ಹನುಮಂತ ರಕ್ಷಿಸುತ್ತಾನೆ ಎಂಬ ಪುರಾತನ ನಂಬಿಕೆಯೇ ಶನಿವಾರ ಮತ್ತು ಹನುಮಂತನ ನಡುವಿನ ಸಂಬಂಧಕ್ಕೆ ಪ್ರಮುಖ ಕಾರಣವಾಗಿದೆ.
ಪುರಾಣದ ಕಥೆಗಳ ಪ್ರಕಾರ ನೋಡುವುದಾದರೆ, ಒಮ್ಮೆ ಶನಿ ದೇವರು ಹನುಮಂತನ ಮೇಲೆ ತನ್ನ ಪ್ರಭಾವ ಬೀರಲು ಪ್ರಯತ್ನಿಸಿದಾಗ ಹನುಮಂತನ ಅಪಾರ ಶಕ್ತಿಯ ಮುಂದೆ ಶನಿ ದೇವರಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲವಂತೆ. ಇನ್ನು ಕೆಲವು ಪುರಾಣ ಕತೆಗಳು, ಹನುಮಂತನು ಶನಿ ದೇವರನ್ನು ತನ್ನ ಬಾಲದಿಂದ ಬಂಧಿಸಿದ್ದನು. ನಂತರ ಶನಿ ದೇವರು ಹನುಮಂತನ ಭಕ್ತರಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಭರವಸೆ ನೀಡಿದ ಬಳಿಕ ಹನುಮಂತನು ಅವರನ್ನು ಬಿಡುಗಡೆ ಮಾಡಿದನಂತೆ.
ಇದು ತಲೆಮಾರುಗಳಿಂದ ಹೇಳಿಕೊಂಡು ಬಂದಿರುವ ಈ ಕಥೆಯಿಂದಾಗಿ ಶನಿವಾರ ಹನುಮಂತನನ್ನು ಪೂಜಿಸಿದರೆ ಶನಿ ದೇವರ ಪ್ರಭಾವದಿಂದ ಉಂಟಾಗುವ ಕಷ್ಟಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಬೆಳೆದಿದೆ. ವಿಳಂಬ, ಹಣಕಾಸಿನ ಸಮಸ್ಯೆಗಳು ಅಥವಾ ಆರೋಗ್ಯದ ತೊಂದರೆಗಳಂತಹ ಸಂಕಷ್ಟಗಳಿಂದ ಪರಿಹಾರ ಸಿಗುತ್ತದೆ ಎಂದು ಭಕ್ತರು ನಂಬುತ್ತಾರೆ. ಇದೇ ಕಾರಣಕ್ಕೆ ಕೋಟ್ಯಂತರ ಜನರ ನಂಬಿಕೆ ಮತ್ತು ಭಕ್ತಿಯಲ್ಲಿ ಹನುಮಂತ ಹಾಗೂ ಶನಿವಾರದ ಸಂಬಂಧ ಗಾಢವಾಗಿದೆ.
ಇನ್ನಷ್ಟು ಆಳವಾಗಿ ನೋಡಿದರೆ ಶನಿವಾರದಂದು ಹನುಮಂತನನ್ನು ಆರಾಧಿಸುವುದು ಕೇವಲ ಗ್ರಹದೋಷಗಳಿಂದ ರಕ್ಷಣೆ ಪಡೆಯುವುದಕ್ಕಷ್ಟೇ ಅಲ್ಲ. ಜೀವನದ ಕಷ್ಟಗಳನ್ನು ಎದುರಿಸುವ ಮಾನಸಿಕ ಧೈರ್ಯ ಮತ್ತು ಆಂತರಿಕ ಶಕ್ತಿಯನ್ನು ಬೆಳೆಸಿಕೊಳ್ಳುವುದಕ್ಕೂ ಸಂಬಂಧಿಸಿದೆ. ಶನಿ ದೇವರು ಶಿಸ್ತು ಮತ್ತು ತಾಳ್ಮೆಯ ಪರೀಕ್ಷಕನಾಗಿದ್ದರೆ, ಹನುಮಂತನು ಧೈರ್ಯ, ಭಕ್ತಿ ಮತ್ತು ಅಚಲ ನಂಬಿಕೆಯ ಪ್ರತೀಕ. ಹೀಗಾಗಿ ಶನಿವಾರ ಭಕ್ತರು ಹನುಮಾನ್ ಚಾಲೀಸಾ ಪಠಿಸುವುದು, ಸಾಸಿವೆ ಎಣ್ಣೆ ಅರ್ಪಿಸುವುದು ಅಥವಾ ಸರಳವಾಗಿ ಉಪವಾಸ ಮಾಡುವಂತಹ ಆಚರಣೆಗಳನ್ನು ಮಾಡುತ್ತಾರೆ.
ಇದರ ಉದ್ದೇಶ ಕಷ್ಟಗಳಿಂದ ಮುಕ್ತಿ ಪಡೆಯುವುದಷ್ಟೇ ಅಲ್ಲ, ಹನುಮಂತನಲ್ಲಿರುವ ಸಹನೆ, ಧೈರ್ಯ ಮತ್ತು ನಿರ್ಭಯತೆಯ ಗುಣಗಳನ್ನು ತಮ್ಮ ಜೀವನದಲ್ಲೂ ಬೆಳೆಸಿಕೊಳ್ಳುವುದಾಗಿದೆ. ಶನಿ ದೇವರ ಪರೀಕ್ಷೆಗಳನ್ನು ಎದುರಿಸುವ ಭಕ್ತರಿಗೆ ಹನುಮಂತ ಮಾರ್ಗದರ್ಶಕ ಶಕ್ತಿಯಾಗುತ್ತಾನೆ. ಕಷ್ಟದ ದಿನವೆಂದು ಭಾವಿಸುವ ಶನಿವಾರವನ್ನು ಭರವಸೆ, ಶಕ್ತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ದಿನವನ್ನಾಗಿ ನೋಡುವ ನಂಬಿಕೆ ಇದಾಗಿದೆ.
ಹನುಮಂತ ಮತ್ತು ಶನಿ ದೇವರ ನಡುವಿನ ಅಳಿಸಲಾಗದ ಸಂಬಂಧವೇನು?
ಹನುಮಂತ ಮತ್ತು ಶನಿ ದೇವರ ನಡುವಿನ ಸಂಬಂಧ ವೈರತ್ವಕ್ಕೆ ಸಂಬಂಧಿಸಿದ್ದಲ್ಲ; ಬದಲಿಗೆ ಅದು ಪರಸ್ಪರ ಗೌರವ ಮತ್ತು ದೈವಿಕ ತಿಳುವಳಿಕೆಯ ಸಂಬಂಧವೆಂದು ಪುರಾಣ ಕಥೆಗಳು ಹೇಳುತ್ತವೆ. ಒಮ್ಮೆ ಶನಿ ದೇವರು ಹನುಮಂತನ ಮೇಲೆ ತನ್ನ ದೃಷ್ಟಿ ಬೀರುವ ಪ್ರಯತ್ನ ಮಾಡಿದಾಗ, ಹನುಮಂತನ ಬಲಿಷ್ಠ ಬಾಲದ ಹಿಡಿತದಲ್ಲಿ ಸಿಲುಕಿಕೊಂಡರು ಎಂದು ಕಥೆ ಹೇಳುತ್ತದೆ. ಶನಿ ದೇವರಿಗೆ ಅಪಾರ ದೈವಿಕ ಶಕ್ತಿ ಇದ್ದರೂ, ಹನುಮಂತನ ಭಕ್ತಿ, ಶುದ್ಧತೆ ಮತ್ತು ಶಕ್ತಿಯ ಮುಂದೆ ತಮ್ಮ ಪ್ರಭಾವ ನಡೆಯುವುದಿಲ್ಲ ಎಂಬುದು ಶನಿದೇವರಿಗೆ ಅರಿವಾಯಿತು. ಈ ಘಟನೆ ಬಳಿಕ ಶನಿ ದೇವರು ಹನುಮಂತನ ಭಕ್ತರಿಗೆ ತೊಂದರೆ ನೀಡುವುದಿಲ್ಲ ಎಂದು ಭರವಸೆ ನೀಡಿದರು. ಇದಾದ ನಂತರ ಹನುಮಂತ ಶನಿವಾರ ದೇವರನ್ನು ಬಿಡುಗಡೆ ಮಾಡಿದನು. ಹೀಗೆ ಶನಿ ದೇವರ ಕಠಿಣ ಶಿಸ್ತು ಮತ್ತು ಹನುಮಂತನ ಅಪಾರ ಕರುಣೆಯ ನಡುವೆ ವಿಶಿಷ್ಟವಾದ ಸಂಬಂಧ ರೂಪುಗೊಂಡಿತು ಎಂದು ನಂಬಲಾಗುತ್ತದೆ.
ಇವರಿಬ್ಬರ ಸಂಬಂಧದ ವಿಶೇಷತೆ ಎಂದರೆ ಭಕ್ತರ ಜೀವನದಲ್ಲಿ ಇಬ್ಬರೂ ವಿಭಿನ್ನ ಪಾತ್ರಗಳನ್ನು ಹೊಂದಿದ್ದಾರೆ. ಕರ್ಮ ಮತ್ತು ನ್ಯಾಯದ ದೇವರೆಂದು ಪರಿಗಣಿಸಲ್ಪಡುವ ಶನಿ ದೇವರು ಪರೀಕ್ಷೆ, ಪಾಠ ಮತ್ತು ಜವಾಬ್ದಾರಿಯ ಪ್ರತೀಕ. ಹನುಮಂತನು ಧೈರ್ಯ, ನಂಬಿಕೆ ಮತ್ತು ರಕ್ಷಣೆಯ ಪ್ರತೀಕ. ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆದರೆ ಅವುಗಳನ್ನು ಎದುರಿಸಲು ಅಗತ್ಯವಾದ ಶಕ್ತಿಯನ್ನು ನಮ್ಮೊಳಗೆ ಬೆಳೆಸಿಕೊಳ್ಳಬೇಕು ಎಂಬ ಸಂದೇಶವನ್ನ ಹನುಮಂತ, ಶನಿದೇವರು ನೀಡುತ್ತಾರೆ. ಹೀಗಾಗಿ ಶನಿವಾರ ಹನುಮಂತನನ್ನು ಪೂಜಿಸುವುದು ಶನಿ ದೇವರನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಮಾತ್ರವಲ್ಲ. ಶನಿ ದೇವರನ್ನು ಪರೀಕ್ಷೆ ನೀಡುವ ಗುರುವಾಗಿ ಹಾಗೂ ಆ ಪರೀಕ್ಷೆಯನ್ನು ಎದುರಿಸಲು ಹನುಮಂತನನ್ನು ಮಾರ್ಗದರ್ಶಕನಾಗಿ ಗೌರವಿಸುವ ನಂಬಿಕೆಯಾಗಿದೆ. ಕರ್ಮದ ಹೊರೆ ಎಷ್ಟೇ ಭಾರವಾಗಿದ್ದರೂ ಹನುಮಂತನ ಕೃಪೆ ಅದನ್ನು ಹಗುರಗೊಳಿಸಬಹುದು ಎಂಬ ಭಕ್ತರ ನಂಬಿಕೆಯಿದೆ. ಅದೇ ಸಮಯದಲ್ಲಿ ಶನಿ ದೇವರ ಶಿಸ್ತು ನಮ್ಮನ್ನು ಸತ್ಯ ಮತ್ತು ಜವಾಬ್ದಾರಿಯ ಹಾದಿಯಲ್ಲಿ ಇರಿಸುತ್ತದೆ ಎಂಬ ನಂಬಿಕೆಯೂ ಇದೆ.
ಹನುಮಂತ-ಶನಿ ದೇವರು ಭಕ್ತರಿಗೆ ನೀಡುವ ಸಂದೇಶವೇನು?
ಹನುಮಂತ ಮತ್ತು ಶನಿ ದೇವರ ನಡುವಿನ ಸಂಬಂಧ ಕೇವಲ ಪುರಾಣ ಕಥೆಯಲ್ಲ. ಅದು ನಂಬಿಕೆ, ಧೈರ್ಯ, ಶಿಸ್ತು ಮತ್ತು ಕಷ್ಟಗಳನ್ನು ಎದುರಿಸುವ ಮನೋಬಲದ ಸಂದೇಶವನ್ನೂ ನೀಡುತ್ತದೆ. ಜೀವನದಲ್ಲಿ ಕಷ್ಟಗಳು ಎದುರಾದಾಗ ಭಯಪಡುವ ಬದಲು ಧೈರ್ಯದಿಂದ ಅವುಗಳನ್ನು ಎದುರಿಸಬೇಕು ಎಂಬುದನ್ನು ಹನುಮಂತನ ಆರಾಧನೆ ನೆನಪಿಸುತ್ತದೆ. ಮತ್ತೊಂದೆಡೆ, ನಮ್ಮ ಕರ್ಮಗಳಿಗೆ ನಾವು ಜವಾಬ್ದಾರರಾಗಿರಬೇಕು ಮತ್ತು ಶಿಸ್ತಿನಿಂದ ಬದುಕಬೇಕು ಎಂಬುದನ್ನು ಶನಿ ದೇವರ ಆರಾಧನೆ ಸೂಚಿಸುತ್ತದೆ. ಈ ನಂಬಿಕೆಗಳ ಪ್ರಕಾರ, ಕಷ್ಟಗಳು ನಮ್ಮನ್ನು ಕುಗ್ಗಿಸಲು ಮಾತ್ರ ಬರುವುದಿಲ್ಲ. ಅವುಗಳಿಂದ ಪಾಠ ಕಲಿತು ಮತ್ತಷ್ಟು ಬಲಶಾಲಿಯಾಗಲು ಸಹಾಯ ಮಾಡುತ್ತವೆ.
ಶನಿವಾರ ಆಂಜನೇಯನ ಪೂಜಿಸುವುದು ಹೇಗೆ?
ಶನಿವಾರ ಹನುಮಾನ್ ಚಾಲೀಸಾ ಪಠಿಸುವುದು, ಹನುಮಂತನ ಸರಳ ಮಂತ್ರಗಳನ್ನು ಜಪಿಸುವುದು ಇದಕ್ಕೆ ಒಂದು ಸುಲಭ ಮಾರ್ಗ. ಕೆಲವು ನಿಮಿಷಗಳ ಕಾಲ ಪ್ರಾಮಾಣಿಕವಾಗಿ ಪ್ರಾರ್ಥನೆ ಮಾಡಿ, ಜೀವನದ ಕಷ್ಟಗಳನ್ನು ಎದುರಿಸಲು ಶಕ್ತಿ ನೀಡುವಂತೆ ದೇವರಲ್ಲಿ ಬೇಡಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಧೈರ್ಯ ಸಿಗಬಹುದು. ಹನುಮಂತನ ವಿಗ್ರಹಕ್ಕೆ ಹೂವು ಅರ್ಪಿಸುವುದು, ದೀಪ ಬೆಳಗಿಸುವುದು ಅಥವಾ ಸಾಸಿವೆ ಎಣ್ಣೆ ಅರ್ಪಿಸುವುದು ಸಾಂಪ್ರದಾಯಿಕ ಆಚರಣೆಗಳಾಗಿವೆ. ಇವು ಭಕ್ತಿ ಮತ್ತು ಗೌರವದ ಸಂಕೇತಗಳಾಗಿವೆ.
ಇಂತಹ ಆಚರಣೆಗಳು ಸಣ್ಣದಾಗಿ ಕಂಡರೂ, ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಭಯವಿಲ್ಲದೆ ಎದುರಿಸಲು ಹನುಮಂತನ ಮಾರ್ಗದರ್ಶನವನ್ನು ನೆನಪಿಸಿಕೊಳ್ಳುವ ಅವಕಾಶವನ್ನು ನೀಡುತ್ತವೆ. ಹನುಮಂತನ ಧೈರ್ಯ, ನಿಸ್ವಾರ್ಥತೆ ಮತ್ತು ವಿನಯದ ಗುಣಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳುವುದು ಮತ್ತೊಂದು ಮಾರ್ಗ. ಶನಿವಾರ ಉಪವಾಸ ಮಾಡುವುದು, ಅನಗತ್ಯ ಭೋಗಗಳನ್ನು ದೂರವಿಡುವುದು ಮತ್ತು ಸ್ವಲ್ಪ ಸಮಯ ಆತ್ಮಾವಲೋಕನ ಮಾಡಿಕೊಳ್ಳುವುದು ಆಂತರಿಕ ಶಕ್ತಿಯನ್ನು ಬೆಳೆಸಲು ಸಹಾಯ ಮಾಡಬಹುದು ಎಂಬ ನಂಬಿಕೆ ಇದೆ. ಇದರ ಜೊತೆಗೆ ಅಗತ್ಯವಿರುವವರಿಗೆ ಸಹಾಯ ಮಾಡುವುದು, ಕಷ್ಟದಲ್ಲಿರುವವರಿಗೆ ಧೈರ್ಯ ತುಂಬುವುದು ಅಥವಾ ಸಣ್ಣಪುಟ್ಟ ಒಳ್ಳೆಯ ಕೆಲಸಗಳನ್ನು ಮಾಡುವುದರ ಮೂಲಕವೂ ಹನುಮಂತನ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು.
ಭಕ್ತಿಯನ್ನು ಒಳ್ಳೆಯ ಕೆಲಸಗಳೊಂದಿಗೆ ಬೆರೆಸಿದಾಗ, ಹನುಮಂತನ ಮೇಲಿನ ಆಧ್ಯಾತ್ಮಿಕ ನಂಬಿಕೆಯನ್ನು ಗೌರವಿಸುವುದರ ಜೊತೆಗೆ ಅವರ ಬೋಧನೆಗಳ ಸಾರವನ್ನೂ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಈ ರೀತಿಯಲ್ಲಿ ಶನಿವಾರ ಕೇವಲ ಪೂಜೆಯ ದಿನವಾಗದೆ, ಪ್ರಾಮಾಣಿಕತೆ, ಧೈರ್ಯ ಮತ್ತು ಕರುಣೆಯಿಂದ ಬದುಕುವಂತೆ ನೆನಪಿಸುವ ದಿನವಾಗುತ್ತದೆ.


