ನೀರು ನಮಗೆ ಅತ್ಯಮೂಲ್ಯ. ದಿನವಿಡೀ ಸಾಕಷ್ಟು ನೀರು ಕುಡಿಯಬೇಕೆನ್ನುವ ಕಾರಣಕ್ಕೆ ಬಹುತೇಕರು ಬಾಟಲಿಯಲ್ಲಿ ನೀರು ಒಯ್ತಾರೆ. ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಯಾವ ಲೋಹ ಅಥವಾ ಪಾತ್ರೆಯಲ್ಲಿ ನೀರು ಕುಡಿಯಬೇಕು ಎಂಬುದನ್ನು ಅಂಕ ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

ಅಂಕ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ನೀರಿಗೆ ಮಹತ್ವ ನೀಡಲಾಗಿದೆ. ಬರೀ ನೀರಿಗೆ ಮಾತ್ರವಲ್ಲ ನೀರು ಕುಡಿಯಲು ಬಳಸುವ ಲೋಹ, ಪಾತ್ರೆಗೂ ಮಹತ್ವವಿದೆ. ಅಂಕ ಜ್ಯೋತಿಷ್ಯದ ಪ್ರಕಾರ, ಮೂಲಾಂಕಕ್ಕೆ ಅನುಗುಣವಾಗಿ ನಿರ್ದಿಷ್ಟ ಲೋಹದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಸಕಾರಾತ್ಮಕ ಶಕ್ತಿ, ಮಾನಸಿಕ ಸ್ಪಷ್ಟತೆ ಮತ್ತು ಜೀವನದಲ್ಲಿ ಉತ್ತಮ ಬದಲಾವಣೆಗಳು ಉಂಟಾಗುತ್ತವೆ.

ಯಾವ ಮೂಲಾಂಕದವರು ಯಾವ ಪಾತ್ರೆಯಲ್ಲಿ ನೀರು ಕುಡಿಯಬೇಕು?

ಮೂಲಾಂಕ 1 : ಜನ್ಮ ದಿನಾಂಕ1, 10, 19, 28

ಮೂಲಾಂಕ 1ರ ಅಧಿಪತಿ ಸೂರ್ಯ ಎಂದು ಅಂಕ ಜ್ಯೋತಿಷ್ಯದಲ್ಲಿ ಪರಿಗಣಿಸಲಾಗುತ್ತದೆ. ಆದ್ದರಿಂದ ತಾಮ್ರದ ಬಾಟಲಿಯಲ್ಲಿ ನೀರು ಕುಡಿಯುವುದು ಸೂಕ್ತ ಎಂದು ನಂಬಲಾಗಿದೆ. ತಾಮ್ರದ ಬಾಟಲಿಯಲ್ಲಿ ನೀರನ್ನು ಕುಡಿದರೆ ಆತ್ಮವಿಶ್ವಾಸ, ನಾಯಕತ್ವ ಗುಣ ಹೆಚ್ಚಾಗುತ್ತದೆ. ಜೀವನಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ರಾತ್ರಿ ತಾಮ್ರದ ಬಾಟಲಿಯಲ್ಲಿ ನೀರು ತುಂಬಿಟ್ಟು, ಬೆಳಗ್ಗೆ ಕುಡಿಯಬೇಕು.

ಮೂಲಾಂಕ 2 : ಜನ್ಮ ದಿನಾಂಕ 2, 11, 20, 29

ಮೂಲಾಂಕ 2ರ ಅಧಿಪತಿ ಚಂದ್ರ ಎಂದು ಪರಿಗಣಿಸಲಾಗುತ್ತದೆ. ಇವರು ಬೆಳ್ಳಿ ಅಥವಾ ಬಿಳಿ ಸೆರಾಮಿಕ್ ಪಾತ್ರೆಯಲ್ಲಿ ನೀರು ಕುಡಿಯುವುದು ಸೂಕ್ತ. ಮಾನಸಿಕ ಶಾಂತಿ, ಭಾವನಾತ್ಮಕ ಸಮತೋಲನ ಮತ್ತು ಸೃಜನಶೀಲತೆಗೆ ಇದು ಸಹಕಾರಿ. ಬೆಳ್ಳಿಯ ಪಾತ್ರೆಯಲ್ಲಿ ನೀರು ಕುಡಿಯುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ.

ಮೂಲಾಂಕ 3 : ಜನ್ಮ ದಿನಾಂಕ 3, 12, 21, 30

ಮೂಲಾಂಕ 3ರ ಅಧಿಪತಿ ಗುರು. ಆದ್ದರಿಂದ ಹಿತ್ತಾಳೆ ಅಥವಾ ಗೋಲ್ಡನ್ ಬಣ್ಣದ ಬಾಟಲಿಯನ್ನು ಬಳಸುವುದು ಉತ್ತಮ. ಜ್ಞಾನ, ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಗೌರವಕ್ಕೆ ಇದು ಸಹಕಾರಿ. ನೀರು ಕುಡಿಯುವ ಮೊದಲು ಅದಕ್ಕೆ ಸ್ವಲ್ಪ ಅರಿಶಿನ ಅಥವಾ ಕೇಸರಿ ಸೇರಿಸುವುದನ್ನು ಕೆಲವರು ಶುಭವೆಂದು ಪರಿಗಣಿಸುತ್ತಾರೆ.

ಮೂಲಾಂಕ 4 : ಜನ್ಮ ದಿನಾಂಕ 4, 13, 22, 31

ಮೂಲಾಂಕ 4ರ ಅಧಿಪತಿ ರಾಹು ಎಂದು ಪರಿಗಣಿಸಲಾಗುತ್ತದೆ. ಗಾಜು ಅಥವಾ ಸ್ಟೀಲ್ ಬಾಟಲಿಯಲ್ಲಿ ನೀರು ಕುಡಿಯಬೇಕು. ಗೊಂದಲ ಮತ್ತು ಒತ್ತಡವನ್ನು ಕಡಿಮೆ ಮಾಡಲು ಹಾಗೂ ಗಮನ ಕೇಂದ್ರೀಕರಿಸಲು ಸಹಾಯಕ. ಒಡೆದ ಅಥವಾ ಹಾನಿಗೊಳಗಾದ ಸ್ಟೀಲ್ ಬಾಟಲಿಯನ್ನು ಬಳಸಬಾರದು.

ಮೂಲಾಂಕ 5 : ಜನ್ಮ ದಿನಾಂಕ 5, 14, 23

ಮೂಲಾಂಕ 5ರ ಅಧಿಪತಿ ಬುಧ. ಇವರು ಗಾಜಿನ ಬಾಟಲಿಯಲ್ಲಿ ನೀರು ಕುಡಿಯುವುದು ಸೂಕ್ತ ಎಂದು ಅಂಕ ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಬುದ್ಧಿವಂತಿಕೆ, ಸಂವಹನ ಕೌಶಲ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಸಹಾಯಕವಾಗಬಹುದು. ಹಸಿರು ಬಣ್ಣದ ಬಾಟಲಿಯನ್ನು ತುಳಸಿ ಗಿಡದ ಬಳಿ ಸ್ವಲ್ಪ ಸಮಯ ಇಟ್ಟು ನಂತರ ನೀರು ಕುಡಿಯುವುದು ಒಳ್ಳೆಯದು.

ಮೂಲಾಂಕ 6 : 6, 15, 24

ಮೂಲಾಂಕ 6ರ ಅಧಿಪತಿ ಶುಕ್ರ. ಇವರು ಬೆಳ್ಳಿ ಅಥವಾ ಉತ್ತಮ ಗುಣಮಟ್ಟದ ಗಾಜಿನ ಬಾಟಲಿಯನ್ನು ಬಳಸುವುದು ಸೂಕ್ತ. ಆಕರ್ಷಕ ವ್ಯಕ್ತಿತ್ವ, ಸಾಮರಸ್ಯ ಮತ್ತು ಭೌತಿಕ ಸೌಕರ್ಯಗಳಿಗೆ ಸಂಬಂಧಿಸಿದ ಸಕಾರಾತ್ಮಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ನೀರಿಗೆ ನೈಸರ್ಗಿಕ ಗುಲಾಬಿ ಜಲವನ್ನು ಸ್ವಲ್ಪ ಸೇರಿಸಿ ಕುಡಿಯುವುದನ್ನು ಶುಭವೆಂದು ಪರಿಗಣಿಸುತ್ತಾರೆ.

ಮೂಲಾಂಕ 7 : 7, 16, 25

ಮೂಲಾಂಕ 7ರ ಅಧಿಪತಿ ಕೇತು ಎಂದು ಪರಿಗಣಿಸಲಾಗುತ್ತದೆ. ಇವರು ಮಣ್ಣಿನ ಪಾತ್ರೆ ಅಥವಾ ಹಳದಿ ಬಣ್ಣದ ಬಾಟಲಿಯನ್ನು ಬಳಸಬೇಕು. ಅಂತಃಪ್ರಜ್ಞೆ ಹೆಚ್ಚಲು ಮತ್ತು ಒತ್ತಡ ಕಡಿಮೆಯಾಗಲು ಇದು ಸಹಾಯಕ. ಮಣ್ಣಿನ ಪಾತ್ರೆಯಲ್ಲಿ ರಾತ್ರಿ ನೀರು ಇಟ್ಟು, ಬೆಳಗ್ಗೆ ಕುಡಿಯಬಹುದು.

ಮೂಲಾಂಕ 8 : ಜನ್ಮ ದಿನಾಂಕ 8, 17, 26

ಮೂಲಾಂಕ 8ರ ಅಧಿಪತಿ ಶನಿ. ಇವರು ನೀಲಿ ಬಣ್ಣದ ಗಾಜಿನ ಬಾಟಲಿ ಅಥವಾ ಸಾಮಾನ್ಯ ಸ್ಟೇನ್ಲೆಸ್ ಸ್ಟೀಲ್ ಬಾಟಲಿಯನ್ನು ಬಳಸಬಹುದು. ಇದು ಶಿಸ್ತು, ಏಕಾಗ್ರತೆ ಮತ್ತು ಸ್ಥಿರತೆಗೆ ಸಹಾಯಕ. ನೀಲಿ ಬಣ್ಣದ ಬಾಟಲಿಯಲ್ಲಿ ನೀರು ತುಂಬಿಸಿ ಸ್ವಲ್ಪ ಸಮಯ ಸೂರ್ಯನ ಬೆಳಕಿನಲ್ಲಿ ಇಡುವುದನ್ನು ಹೆಚ್ಚು ಪರಿಣಾಮಕಾರಿ.

ಮೂಲಾಂಕ 9 : ಜನ್ಮ ದಿನಾಂಕ 9, 18, 27

ಮೂಲಾಂಕ 9ರ ಅಧಿಪತಿ ಮಂಗಳ ಎಂದು ಪರಿಗಣಿಸಲಾಗುತ್ತದೆ. ಇವರು ಮಣ್ಣಿನ ಕುಡಿಕೆ ಅಥವಾ ತಾಮ್ರದ ಬಾಟಲಿಯಲ್ಲಿ ನೀರು ಕುಡಿಯಬೇಕು. ಶಕ್ತಿ ಮತ್ತು ಧೈರ್ಯ ಹೆಚ್ಚಲು ಹಾಗೂ ಕೋಪ ನಿಯಂತ್ರಣಕ್ಕೆ ಇದು ಸಹಾಯಕ. ತಾಮ್ರದ ಬಾಟಲಿಯಿಂದ ಕೋಣೆಯ ಉಷ್ಣಾಂಶದಲ್ಲಿರುವ ನೀರನ್ನು ಕುಡಿಯುವುದು ಸೂಕ್ತ ಎಂದು ಹೇಳಲಾಗುತ್ತದೆ. ತುಂಬಾ ತಣ್ಣನೆಯ ನೀರನ್ನು ಅದರಲ್ಲಿ ಇಟ್ಟು ಕುಡಿಯುವುದನ್ನು ತಪ್ಪಿಸಬೇಕು.