ಧಾರವಾಡದಲ್ಲಿ ನಡೆದ ಜಂಬೂಸವಾರಿ ಉತ್ಸವದಲ್ಲಿ ಕೋಡಿಮಠದ ಶ್ರೀಗಳು ರಾಜ್ಯದ ಮಳೆ-ಬೆಳೆ ಹಾಗೂ ರಾಜಕೀಯದ ಕುರಿತು ಹೊಸ ಭವಿಷ್ಯ ನುಡಿದಿದ್ದಾರೆ. ಮುಂಬರುವ ದಿನಗಳಲ್ಲಿ ಉತ್ತಮ ಹಿಂಗಾರು ಮಳೆಯಾಗಿ ನಾಡು ಸುಭಿಕ್ಷವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ರಾಜ್ಯ ರಾಜಕಾರಣದ ಬಗ್ಗೆ ಸ್ಪಷ್ಟ ಉತ್ತರ ನೀಡದೆ ಕುತೂಹಲ ಮೂಡಿಸಿದ್ದಾರೆ.
ಧಾರವಾಡ: ಪ್ರತಿವರ್ಷವೂ ದಸರಾ ಸಮಯ ಸೇರಿದಂತೆ ಕೆಲವೊಂದು ಪ್ರಮುಖ ದಿನಗಳಲ್ಲಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯವಾಣಿ ನುಡಿಯುತ್ತಾರೆ. ಇವರ ಭವಿಷ್ಯ ನಿಜವಾಗುತ್ತದೆ ಎಂದು ಹಲವು ಭಕ್ತರು ನಂಬುವುದು ಇದೆ. ಈ ಹಿಂದೆ ಇವರಾಡಿರುವ ವಾಣಿಗಳು ನಿಜವಾಗಿವೆ ಎಂದೂ ಹೇಳಲಾಗುತ್ತದೆ. ಅದೇ ರೀತಿ ಇದೀಗ ಧಾರವಾಡದಲ್ಲಿ ನಡೆದ ಜಂಬೂಸವಾರಿ ಉತ್ಸವದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಶ್ರೀ ಅವರು ಕೆಲವೊಂದು ವಿಷಯಗಳ ಬಗ್ಗೆ ತಿಳಿಸಿದ್ದಾರೆ. ರಾಜ್ಯದಲ್ಲಿನ ಮಳೆ-ಬೆಳೆ ಬಗ್ಗೆ ತಿಳಿಸುತ್ತಲೇ ರಾಜ್ಯದ ರಾಜಕೀಯದ ಕುರಿತು ಕೇಳಿದ ಪ್ರಶ್ನೆಗೂ ಪ್ರತಿಕ್ರಿಯೆ ನೀಡಿದ್ದಾರೆ.
ಮಳೆಯ ಕುರಿತು ಹೇಳಿದ್ದೇನು?
ಕೋಡಿಶ್ರೀ ಅವರು ಮಳೆಯ ಬಗ್ಗೆ ಮಾತನಾಡುತ್ತಾ, ಹಿಂಗಾರು ಮಳೆ ಉತ್ತಮವಾಗಿ ಸುರಿಯಲಿದೆ. ನಾಡು ಸುಭಿಕ್ಷವಾಗಲಿದೆ ಎಂದಿದ್ದಾರೆ. ಈ ಹಿಂದೆ ಹೇಳಿದಂತೆ ಮುಂಗಾರು ಮಳೆ ಸಮರ್ಪಕವಾಗಿ ಆಗದೆ, ನೀರಿನ ಅಭಾವ, ಅನ್ನದ ಕೊರತೆ ಹಾಗೂ ಜನಜೀವನದಲ್ಲಿ ತೀವ್ರ ಸಂಕಷ್ಟಗಳು ಎದುರಾಗಿದ್ದವು. ಆದರೆ, ಈಗ ಮುಂದೆ ಹಿಂಗಾರು ಮಳೆ ಉತ್ತಮವಾಗಿ ಸುರಿಯಲಿದೆ. ಇದರಿಂದ ನಾಡಿನಲ್ಲಿ ಸಮೃದ್ಧಿ ಉಂಟಾಗಿ, ಜನರಿಗೆ ಎದುರಾಗಿದ್ದ ಸಂಕಷ್ಟಗಳು ಕಳೆದು ನೆಮ್ಮದಿ ಮತ್ತು ಶಾಂತಿ ಸಿಗಲಿದೆ. ಜಲಾಶಯಗಳು ಹಾಗೂ ಜಲಚರಗಳಿಗೂ ಒಳಿತಾಗಲಿದೆ ಎಂದು ನುಡಿದಿದ್ದಾರೆ. ಅಖಂಡ ಕರ್ನಾಟಕದ ಸಾಹಿತ್ಯ, ಸಂಸ್ಕೃತಿ, ಜನಜೀವನ ಹಾಗೂ ರೈತರು, ಕಾರ್ಮಿಕರು ಸೇರಿದಂತೆ ಸಮಸ್ತ ಮನುಕುಲ ಒಂದಾಗಿ ಸಾಗಬೇಕು ಎಂದು ಕೋಡಿಶ್ರೀ ಆಶಯ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಮಳೆಯಿಂದ ಜಲಚರಗಳಿಗೂ ಒಳಿತಾಗಲಿದೆ. ಜನ, ಜಾನುವಾರುಗಳ ಸಮೃದ್ಧಿ ಸಿಗಲಿದೆ ಎಂದು ಕೋಡಿಶ್ರೀಗಳು ಭರವಸೆ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹಿಂಗಾರು ಮಳೆಯಿಂದ ಉತ್ತಮ ಇಳುವರಿ, ಆರ್ಥಿಕ ಸಂಕಷ್ಟದಲ್ಲಿರುವ ರೈತರು ಚೇತರಿಸಿಕೊಳ್ಳಲಿದ್ದಾರೆ. ಬರಗಾಲದೋತ್ತರ ಜನಜೀವನ ಸಹಜ ಸ್ಥಿತಿಗೆ ಮರಳಲಿದೆ ಎಂದು ಸ್ವಾಮೀಜಿ ನುಡಿದರು. ರೋಗ ರುಜಿನಗಳು ದೂರಾಗಿ, ಉತ್ತಮ ಮಳೆ-ಬೆಳೆ ಆಗಿ ನಾಡಿನ ಜನರಿಗೆ ಶಾಂತಿ ಹಾಗೂ ನೆಮ್ಮದಿ ಸಿಗಲಿ ಎಂದು ಕೋಡಿ ಮಠದ ಶ್ರೀಗಳು ಪ್ರಾರ್ಥಿಸಿದರು.
ರಾಜಕೀಯದ ಬಗ್ಗೆ ಏನ್ ಹೇಳಿದ್ರು?
ರಾಜ್ಯ ರಾಜಕಾರಣದ ಬಗ್ಗೆ ಏನಾದರೂ ಹೇಳುತ್ತಾರೆಯೇ ಎಂದು ನೋಡುವ ಸಲುವಾಗಿ ಮಾಧ್ಯಮದವರು ಈ ಪ್ರಶ್ನೆಯನ್ನು ಸ್ವಾಮೀಜಿಗೆ ಕೇಳಿದಾಗ, ಆ ಬಗ್ಗೆ ಸ್ಪಷ್ಟ ಉತ್ತರ ಕೊಡದ ಅವರು, ರಾಜ್ಯ ರಾಜಕಾರಣ ಬಗ್ಗೆ ನನಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ ಎಂದಷ್ಟೇ ಹೇಳಿ, ಎಲ್ಲರಿಗೂ ಒಳಿತಾಗಲಿ, ದೈವ ಕೃಪೆ ಇರಲಿ ಎಂದು ತೆರಳಿದರು.


