ತಿರುಪತಿ ತಿಮ್ಮಪ್ಪನ ಸ್ಪೆಷಲ್ ದರ್ಶನ ಟಿಕೆಟ್ ಏಜೆಂಟರ ಪಾಲು!
- ತಿರುಪತಿ ತಿಮ್ಮಪ್ಪನ ಸ್ಪೆಷಲ್ ದರ್ಶನ ಟಿಕೆಟ್ ಏಜೆಂಟರ ಪಾಲು!
- ವಿಶೇಷ ದರ್ಶನದ 300 ರು.ಟಿಕೆಟ್‌ಗೆ 2 ಸಾವಿರ ರು.ವರೆಗೆ ವಸೂಲಿ,
- ಎಲ್ಲೆಂದರಲ್ಲಿ ಏಜೆಂಟ್‌ಗಳ ಕಾರುಭಾರು, ಟಿಟಿಡಿ ಮೌನ?
ಆತ್ಮಭೂಷಣ್
ಮಂಗಳೂರು (ಡಿ.25) : ಅತ್ಯಂತ ಶ್ರೀಮಂತ ದೇವರು ಖ್ಯಾತಿಯ ತಿರುಮಲ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿ(ಬಾಲಾಜಿ) ವಿಶೇಷ ದರ್ಶನ(ವಿಐಪಿ) ಕೋವಿಡ್ ಬಳಿಕ ಸುಲಭವಿಲ್ಲ. ಈ ವಿಶೇಷ ದರ್ಶನದ ಟಿಕೆಟ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ ಬಾಲಾಜಿಯ ವಿಶೇಷ ದರ್ಶನ ಮಾಡಬೇಕಾದರೆ ಹತ್ತಾರುಪಟ್ಟು ಹೆಚ್ಚು ಮೊತ್ತ ಪಾವತಿಸಬೇಕು. ಈ ಕಾಳಸಂಜೆ ಟಿಕೆಟ್ ಮಾರಾಟದ ಹಿಂದೆ ದೊಡ್ಡ ದಂಧೆಯೇ ಇದ್ದು, ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಸಮಿತಿ ಮೌನವಹಿಸಿರುವುದು ಭಕ್ತಾದಿಗಳ ವ್ಯಾಪಕ ಶಂಕೆಗೆ ಕಾರಣವಾಗಿದೆ.
ಕೋವಿಡ್‌ಗಿಂತ ಮುಂಚೆ ಬಾಲಾಜಿ ದರ್ಶನಕ್ಕೆ ವಿಐಪಿ ಟಿಕೆಟ್ ಸುಲಭವಾಗಿ ಸಿಗುತ್ತಿತ್ತು. ಆಗ ಮೂರು ತಿಂಗಳು ಮೊದಲೇ ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ ವಿಶೇಷ ದಿನ ಹೊರತುಪಡಿಸಿ ಬೇರೆಲ್ಲ ದಿನಗಳಲ್ಲಿ 300 ರು.ಗಳ ವಿಐಪಿ ಟಿಕೆಟ್ ಪಡೆಯಬಹುದಿತ್ತು. ಟಿಟಿಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಇದಕ್ಕೆ ಅವಕಾಶವೂ ಇತ್ತು. ಹಾಗಾಗಿ ಯಾವುದೇ ತಾಪತ್ರಯ ಇಲ್ಲದೆ ವಿಐಪಿ ಟಿಕೆಟ್ ಪಡೆದು ಸಾಮಾನ್ಯ ಭಕ್ತರೂ ತಿಮ್ಮಪ್ಪನ ವಿಶೇಷ ದರ್ಶನ ಸುಲಭದಲ್ಲಿ ಪಡೆಯುತ್ತಿದ್ದರು. ಮಾತ್ರವಲ್ಲ ಭಾರತೀಯ ಅಂಚೆ ಕಚೇರಿಗಳಲ್ಲೂ ಆಧಾರ್ ಅಥವಾ ಗುರುತಿನ ಚೀಟಿ ತೋರಿಸಿ 300 ರು.ಗಳ ಟಿಕೆಟ್ ಬುಕ್ ಮಾಡಲು ಅವಕಾಶ ಇತ್ತು. ಇದು ಕೂಡ ತಿಮ್ಮಪ್ಪನ ಭಕ್ತರಿಗೆ ಅನುಕೂಲವೇ ಆಗಿತ್ತು.
ತಿರುಪತಿ ಹುಂಡಿಗೆ ಎಂಟೇ ತಿಂಗಳಲ್ಲಿ 1000 ಕೋಟಿ ರೂ. ಗೂ ಅಧಿಕ ಹಣ ಸಂಗ್ರಹ..!
ಆನ್‌ಲೈನ್ ಬುಕ್ಕಿಂಗ್ ಯಾವಾಗಲೂ ಭರ್ತಿ: ಕೋವಿಡ್ ನಂತರ ಕಳೆದ ಎರಡು ವರ್ಷಗಳಲ್ಲಿ ವಿಐಪಿ ದರ್ಶನ ಟಿಕೆಟ್ ಪಡೆಯುವುದೇ ದುಸ್ತರ ಎನಿಸಿದೆ. ಟಿಟಿಡಿಯ ಅಧಿಕೃತ ವೆಬ್‌ಸೈಟ್ ತಿರುಪತಿ ಬಾಲಾಜಿಗೆ ಕ್ಲಿಕ್ ಮಾಡಿ ಮೊಬೈಲ್ ನಂಬರು, ದರ್ಶನದ ವಿವರ ತುಂಬಿ ಚಾರ್ಚ್ ತೆರೆದರೆ ಅಲ್ಲಿ ಟಿಕೆಟ್ ಸೋಲ್ಡ್‌ಔಟ್ ಆಗಿರುವುದನ್ನು ತೋರಿಸುತ್ತದೆ. ಮುಂದಿನ ದಿನಗಳ ಬುಕ್ಕಿಂಗ್‌ಗೆ ತೆರೆದುಕೊಂಡಿಲ್ಲ ಎನ್ನುತ್ತದೆ. ಇದನ್ನೇ ನಂಬಿಕೊಂಡು ಕೆಲವು ಭಕ್ತರು ತಿರುಪತಿ ದೇವರ ದರ್ಶನವನ್ನು ಮುಂದೂಡುತ್ತಾರೆ. ಮತ್ತೆ ಮತ್ತೆ ಪ್ರಯತ್ನಿಸಿದರೂ ಆನ್‌ಲೈನ್‌ನಲ್ಲಿ ದರ್ಶನ ಟಿಕೆಟ್ ಬುಕ್ಕಿಂಗ್ ಸಾಧ್ಯವೇ ಆಗುವುದಿಲ್ಲ. ತಿರುಪತಿ ದೇವಸ್ಥಾನದ ಗೋವಿಂದ ಆ್ಯಪ್‌ನ್ನು ಡೌನ್‌ಲೋಡ್ ಮಾಡಿ ವಿಐಪಿ ದರ್ಶನ ಟಿಕೆಟ್‌ಗೆ ಪ್ರಯತ್ನಿಸಿದರೂ ಸೋಲ್ಡ್ ಔಟ್ ಎಂದೇ ತೋರಿಸುತ್ತದೆ. ಆದರೆ ಹೊರಗಿನ ಏಜೆಂಟ್‌ಗಳು ದುಬಾರಿ ದರ ಪೀಕಿಸಿ ಸುಲಭದಲ್ಲಿ ಟಿಕೆಟ್ ತೆಗೆಸಿಕೊಡುತ್ತಾರೆ!
ಕಾಳಸಂತೆಯಲ್ಲಿ ಸಿಗುತ್ತೆ ಟಿಕೆಟ್!: ತಿಮ್ಮಪ್ಪ ದೇವರ ವಿಐಪಿ ದರ್ಶನದ 300 ರು. ಟಿಕೆಟ್ ಈಗ ಕಾಳಸಂತೆಕೋರರ ಪಾಲಾಗಿದೆ. ಬಾಹ್ಯ ಏಜೆಂಟ್‌ಗಳÜ ಕೈಯಲ್ಲಿ ವಿಐಪಿ ದರ್ಶನದ ಟಿಕೆಟ್‌ಗಳು ಇಪ್ಪತ್ತು, ಮೂವತ್ತು ಪಟ್ಟು ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಿ ಸಿಗುತ್ತವೆ. ಆನ್‌ಲೈನ್‌ನಲ್ಲಿ ಟಿಕೆಟ್ ಸಿಗದ ಭಕ್ತರು ಕೂತಲ್ಲಿಂದಲೇ ಮೊಬೈಲ್ ಮೂಲಕ ಸಂಪರ್ಕಿಸಿ ಏಜೆಂಟರಿಂದ ಸುಲಭದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳುತ್ತಾರೆ. ಹೆಚ್ಚಾಗಿ ಟ್ರಾವಲರ್ ಏಜೆಂಟ್ ಮೂಲಕ ಕಾಳಸಂತೆಯಲ್ಲಿ ಟಿಕೆಟ್ ಮಾರಾಟವಾಗುತ್ತಿದೆ. ಏಜೆಂಟರನ್ನು ಸಂಪರ್ಕಿಸಿದರೆ ಭಕ್ತರಿಗೆ ಬೇಕಾದ ಸಮಯ ಹಾಗೂ ದಿನಾಂಕಕ್ಕೆ ಟಿಕೆಟ್ ಸಿಗುವುದು ಅಚ್ಚರಿ ತಂದಿದೆ.
ವಿಐಪಿ ದರ್ಶನದ 300 ರು. ಟಿಕೆಟ್‌ಗೆ 15 ದಿನಗಳ ಅಂತರ ಇದ್ದರೆ 1,500 ರು., ಒಂದು ವಾರದಲ್ಲಿ ದರ್ಶನ ಬೇಕಾದರೆ 2 ಸಾವಿರ ರು. ವರೆಗೂ ಹಣವನ್ನು ಏಜೆಂಟರು ಪೀಕಿಸುತ್ತಾರೆ. ಇನ್ನು 500 ರು.ಗೆ ವಿಐಪಿ ಬ್ರೇಕ್ ದರ್ಶನ ಬೆಳಗ್ಗೆ 6ರಿಂದ ಇರುತ್ತದೆ. ಈ ದರ್ಶನ ಟಿಕೆಟ್ ಕೂಡ 2.50 ಸಾವಿರದಿಂದ 3 ಸಾವಿರ ರು. ವರೆಗೆ ಬಿಕರಿಯಾಗುತ್ತದೆ. ಈ ಟಿಕೆಟ್‌ನಲ್ಲಿ ದೇವರ ದರ್ಶನಕ್ಕೆ ಬೇಗನೆ ಅವಕಾಶ ಇರುತ್ತದೆ. ಏಜೆಂಟ್‌ಗಳಿಗೆ ದುಬಾರಿ ಬೆಲೆ ತೆತ್ತರೂ ಸಿಗುವ ಟಿಕೆಟ್‌ನಲ್ಲಿ ಅಧಿಕೃತ 300 ರು. ಅಥವಾ 500 ರು. ಎಂದೇ ನಮೂದಾಗಿರುತ್ತದೆ.
ಈಗ ಅಂಚೆ ಇಲಾಖೆ ಹೊರಕ್ಕೆ:
ಕೋವಿಡ್‌ಗೂ ಮೊದಲು ಅಂಚೆ ಇಲಾಖೆಯಲ್ಲಿ ಬಾಲಾಜಿ ದರ್ಶನದ ಟಿಕೆಟ್ ಬುಕ್ಕಿಂಗ್‌ಗೆ ಅವಕಾಶ ಇತ್ತು. ಮಧ್ಯವರ್ತಿಗಳಿಗೆ ಅವಕಾಶ ಇರಲಿಲ್ಲ. ಕೋವಿಡ್ ನಂತರ ಕಳೆದ ಎರಡು ವರ್ಷಗಳಿಂದ ಅಂಚೆ ಇಲಾಖೆಯಲ್ಲಿ ಬಾಲಾಜಿ ದರ್ಶನದ ಆನ್‌ಲೈನ್ ಬುಕ್ಕಿಂಗ್‌ನ್ನು ಆಂಧ್ರಪ್ರದೇಶ ಸರ್ಕಾರ ರದ್ದುಪಡಿಸಿದೆ. ಇದಕ್ಕೆ ನಿರ್ದಿಷ್ಟಕಾರಣ ಗೊತ್ತಾಗಿಲ್ಲ.
ಕಾಶಿ ತೀರ್ಥದಿಂದ ತೊಡಗಿ ಪ್ರಮುಖ ಸೇವೆಗಳಿಗೆ ಅಂಚೆ ಇಲಾಖೆಯಲ್ಲಿ ಬುಕ್ ಮಾಡಲು ಈಗಲೂ ಅವಕಾಶ ಇದೆ, ಆದರೆ ಬಾಲಾಜಿ ದರ್ಶನ ಟಿಕೆಟ್ ಹೊರತುಪಡಿಸಿ ಎನ್ನುತ್ತಾರೆ ಅಂಚೆ ಇಲಾಖೆ ಅಧಿಕಾರಿಗಳು.
ತಿರುಪತಿ: ವೈಕುಂಠ ಏಕಾದಶಿ ವೇಳೆ ತಿಮ್ಮಪ್ಪನ ವಿಶೇಷ ದರ್ಶನ ರದ್ದು
ಟಿಕೆಟ್ ದಂಧೆಯ ಕರಾಳಮುಖ
ತಿರುಮಲ ತಿಮ್ಮಪ್ಪನ ವಿಐಪಿ ದರ್ಶನದ ಟಿಕೆಟ್ ಆನ್‌ಲೈನ್‌ನಲ್ಲಿ ತೆರೆದುಕೊಳ್ಳುವುದೇ ಇಲ್ಲ ಎಂದೇನಿಲ್ಲ. ಪ್ರತಿ ತಿಂಗಳ 20 ತಾರೀಖಿನ ಆಸುಪಾಸಿನಲ್ಲಿ ಹಠಾತ್ತನೆ ಒಂದೆರಡು ನಿಮಿಷದಲ್ಲಿ ವಿಐಪಿ ದರ್ಶನದ ಮಾಸಿಕ ಕೋಟಾವನ್ನು ಟಿಟಿಡಿ ಬಿಡುಗಡೆ ಮಾಡುತ್ತದೆ. ಸುಮಾರು ನಾಲ್ಕು ಸಾವಿರದಷ್ಟುಟಿಕೆಟ್‌ಗಳು ಒಂದೆರಡು ನಿಮಿಷದೊಳಗೆ ಫುಲ್ ಆಗಿಬಿಡುತ್ತದೆ. ಹಾಗೆಂದು ಏಜೆಂಟ್‌ಗಳಲ್ಲಿ ವಿಚಾರಿಸಿದರೆ ಅವರಿಗೆ ಯಥೇಚ್ಛವಾಗಿ ಬೇಕಾದಂತೆಲ್ಲ ವಿಐಪಿ ದರ್ಶನದ ಟಿಕೆಟ್ ಸಿಗುತ್ತದೆ. ಇದು ಹೇಗೆ ಸಾಧ್ಯ ಎಂಬುದೇ ಯಕ್ಷಪ್ರಶ್ನೆ.
ಎರಡು ವರ್ಷದ ಹಿಂದೆ ಸುಲಭವಾಗಿ ಬಾಲಾಜಿ ದರ್ಶನದ ವಿಐಪಿ ಟಿಕೆಟ್ ಸಿಗುತ್ತಿತ್ತು. ಈಗ ಭಕ್ತರ ಸಂಖ್ಯೆ ಜಾಸ್ತಿಯಾಗಿಲ್ಲ, ಆದರೂ ಆನ್‌ಲೈನ್‌ನಲ್ಲಿ ವಿಪಿಐ ಟಿಕೆಟ್ ಬ್ಲಾಕ್ ಆಗಿರುವುದು ಅಚ್ಚರಿ ಹಾಗೂ ಸಂದೇಹಕ್ಕೆ ಕಾರಣವಾಗಿದೆ. ಇದರಿಂದ ವಿಐಪಿ ದರ್ಶನ ಆಕಾಂಕ್ಷೆಯ ಸಾಮಾನ್ಯ ಭಕ್ತರು ದುಬಾರಿ ಟಿಕೆಟ್‌ಗೆ ಏಜೆಂಟರ ಮೊರೆ ಹೋಗಬೇಕಾಗಿರುವುದು ವಿಪರ್ಯಾಸ. ಟಿಟಿಡಿ, ಆಂಧ್ರ ಸರ್ಕಾರ ಕೂಡ ಈ ಬಗ್ಗೆ ಮೌನ ವಹಿಸಿರುವುದರ ಹಿಂದೆ ನಿಗೂಢ ಕಾರಣ ಇರಬಹುದು.
-ರಾಜೇಶ್ ಶರ್ಮಾ, ಪುತ್ತೂರು, ತಿರುಪತಿ ಭಕ್ತ