ತಿಮ್ಮಪ್ಪನಿಗೆ ದೇಶದ ಎಷ್ಟು ಕಡೆ ಆಸ್ತಿ ಇದೆ: ಇರುವ ಬಂಗಾರವೆಷ್ಟು? ಬ್ಯಾಂಕಲ್ಲಿರುವ ದುಡ್ಡೆಷ್ಟು ಗೊತ್ತಾ?
ವಿಶ್ವದಲ್ಲೇ ಅತಿ ದೊಡ್ಡ ಹಾಗೂ ಶ್ರೀಮಂತ ಹಿಂದೂ ದೇವಾಲಯ ಎನ್ನಿಸಿಕೊಂಡಿರುವ ತಿರುಪತಿಯ ವೆಂಕಟೇಶ್ವರ ದೇವಸ್ಥಾನ ತನ್ನ ಆಸ್ತಿಗೆ ಸಂಬಂಧಿಸಿದಂತೆ ಶನಿವಾರ ಶ್ವೇತಪತ್ರ ಹೊರಡಿಸಿದೆ.
ತಿರುಪತಿ: ವಿಶ್ವದಲ್ಲೇ ಅತಿ ದೊಡ್ಡ ಹಾಗೂ ಶ್ರೀಮಂತ ಹಿಂದೂ ದೇವಾಲಯ ಎನ್ನಿಸಿಕೊಂಡಿರುವ ತಿರುಪತಿಯ ವೆಂಕಟೇಶ್ವರ ದೇವಸ್ಥಾನ ತನ್ನ ಆಸ್ತಿಗೆ ಸಂಬಂಧಿಸಿದಂತೆ ಶನಿವಾರ ಶ್ವೇತಪತ್ರ ಹೊರಡಿಸಿದೆ. ದೇವಾಲಯದ ಒಟ್ಟು ಆಸ್ತಿ ಮೌಲ್ಯ 2.26 ಲಕ್ಷ ಕೋಟಿ ರು.ನಷ್ಟಿದೆ ಎಂದು ಅದು ಘೋಷಿಸಿಕೊಂಡಿದೆ. ಇದು ಬಹುತೇಕ ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಬಜೆಟ್‌ನಷ್ಟೇ ಗಾತ್ರವನ್ನು ಹೊಂದಿದ್ದು, ಹುಬ್ಬೇರಿಸುವಂತೆ ಮಾಡಿದೆ.
ಕರ್ನಾಟಕದ ಕಳೆದ ಬಜೆಟ್ ಗಾತ್ರ 2.65 ಲಕ್ಷ ಕೋಟಿ ರು. ಆಗಿದ್ದರೆ, ಆಂಧ್ರ ಪ್ರದೇಶದ (Andhra Pradesh)ಬಜೆಟ್ ಗಾತ್ರ 2.56 ಲಕ್ಷ ಕೋಟಿ ರು.ನಷ್ಟಿದೆ. ಹೆಚ್ಚೂ ಕಡಿಮೆ ಈ ಮೊತ್ತದ ಸನಿಹಕ್ಕೇ ತಿರುಪತಿ ತಿಮ್ಮಪ್ಪನ (Tirupati Thimappa)ಆಸ್ತಿ ಇದ್ದಂತಾಗಿದೆ. ಶ್ವೇತಪತ್ರ ಬಿಡುಗಡೆ ಮಾಡಿ ಮಾತನಾಡಿದ ತಿರುಮಲ ತಿರುಪತಿ ದೇವಸ್ಥಾನ ಸಮಿತಿ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರ ಎ.ವಿ. ಧರ್ಮರೆಡ್ಡಿ (Dharma Reddy), ‘ದೇವಾಲಯದ ನಿವ್ವಳ ಆಸ್ತಿ ಮೌಲ್ಯ 2.26 ಲಕ್ಷ ಕೋಟಿ ರು.ಗೆ ಹೆಚ್ಚಿದೆ’ ಎಂದು ಪ್ರಕಟಿಸಿದರು.
15,908 ಕೋಟಿ ರು. ಎಫ್‌ಡಿ:
ದೇವಸ್ಥಾನದ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ (National Bank) 2019ರಲ್ಲಿ 13,025 ಕೋಟಿ ರು. ನಿಶ್ಚಿತ ಠೇವಣಿ ಇಡಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ಬಳಿಕ ಈ ಠೇವಣಿ ಗಾತ್ರ 15,938 ಕೋಟಿ ರು.ಗೆ ಏರಿಕೆಯಾಗಿದೆ. ಕಳೆದ 3 ವರ್ಷಗಳಲ್ಲಿ ಒಟ್ಟು 2,900 ಕೋಟಿ ರು. ಠೇವಣಿ ಹೆಚ್ಚಳವಾಗಿದೆ ಎಂಬುದು ಗಮನಾರ್ಹ.
ತಿರುಪತಿಯಲ್ಲಿ ನವೆಂಬರ್‌ನಿಂದ ವಿಐಪಿ ದರ್ಶನ ವೇಳೆ ಬದಲಾವಣೆ
10.25 ಟನ್ ಚಿನ್ನ:
ದೇವಾಲಯಕ್ಕೆ ಚಿನ್ನವನ್ನು ಕಾಣಿಕೆಯಾಗಿ ನೀಡುವ ಜನರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. 2019ರಲ್ಲಿ ಟಿಟಿಡಿ 7.3 ಟನ್ ಚಿನ್ನ ಹೊಂದಿತ್ತು. ಇದಕ್ಕೆ ಈಗ ಇನ್ನೂ 2.9 ಟನ್ ಚಿನ್ನ ಸೇರಿಕೊಂಡಿದೆ. ಇದರಿಂದ ಒಟ್ಟಾರೆ ಚಿನ್ನದ ಠೇವಣಿ 10.25 ಟನ್‌ಗೆ ಮೂರೇ ವರ್ಷದಲ್ಲಿ ಏರಿದೆ. ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಟಿಟಿಡಿಯು 5,309 ಕೋಟಿ ರು. ಮೌಲ್ಯದ ಚಿನ್ನವನ್ನು ಠೇವಣಿ ಇಟ್ಟಿದೆ.
ವೈಷ್ಟೋದೇವಿಯಿಂದ… ತಿರುವನಂತಪುರದವರೆಗೂ ನೀವು ನೋಡಲೇಬೇಕು ಈ ದೇಗುಲಗಳನ್ನು
7123 ಎಕರೆ ಭೂಮಿ:
ತಿರುಪತಿ ದೇವಸ್ಥಾನ ದೇಶದಾದ್ಯಂತ ಒಟ್ಟು 960 ಭೂ ಆಸ್ತಿಗಳನ್ನು ಹೊಂದಿದೆ. ಇದು ಒಟ್ಟಾರೆ 7,123 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಈ ಆಸ್ತಿಯ ಸಬ್ ರಿಜಿಸ್ಟ್ರಾರ್ ಮೌಲ್ಯ 85,705 ಕೋಟಿ ರು. ಆಗಿದೆ. ಆದರೆ ಮಾರುಕಟ್ಟೆಮೌಲ್ಯ 2 ಲಕ್ಷ ಕೋಟಿ ಮೀರಬಹುದು ಎಂದು ಟಿಟಿಡಿ ಹೇಳಿದೆ. ತಿರುಪತಿ ಹಾಗೂ ತಿರುಮಲದಲ್ಲಿ ಕಟ್ಟಡಗಳು ಮತ್ತು ಇತರ ಸ್ಥಿರ ಆಸ್ತಿಗಳು, ಅತಿಥಿ ಗೃಹಗಳು (Guest House), ಕುಟೀರಗಳು, ಯಾತ್ರಿಕ ಸೌಕರ್ಯ ಕೇಂದ್ರಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ರೂಪದಲ್ಲಿ ಟಿಟಿಡಿ 5 ಸಾವಿರ ಕೋಟಿ ರು. ಆಸ್ತಿ ಹೊಂದಿದೆ.