ಪ್ರಣಯ ಸಂಬಂಧಗಳಲ್ಲಿ ಯಾವುದೇ ಕಾರಣವಿಲ್ಲದೆ ಸಂಪರ್ಕ ಕಡಿತಗೊಳಿಸುವ 'ಘೋಸ್ಟಿಂಗ್' ಟ್ರೆಂಡ್ ಯುವ ಜನಾಂಗದಲ್ಲಿ (gen z) ಹೆಚ್ಚುತ್ತಿದೆ. 2026ರಲ್ಲಿ  ಈ ಕೆಳಗಿನ ಕೆಲವು ಜನ್ಮರಾಶಿಯವರು ಘೋಸ್ಟಿಂಗ್ ಮಾಡುವ ಸಾಧ್ಯತೆ ಹೆಚ್ಚಿದೆಯಂತೆ.  ಅವರ ಈ ವರ್ತನೆಯ ಹಿಂದಿನ ಕಾರಣವೇನು? ಇಲ್ಲಿದೆ.

ಇತ್ತೀಚಿನ ವರ್ಷಗಳಲ್ಲಿ ಪ್ರೇಮ ಮತ್ತು ಸಂಬಂಧಗಳ ಜಗತ್ತಿನಲ್ಲಿ ಹೆಚ್ಚು ಕೇಳಿಬರುತ್ತಿರುವ ಹೊಸ ಪದವೇ ‘ಘೋಸ್ಟಿಂಗ್’. ಯಾವುದೇ ಕಾರಣ, ವಿವರಣೆ ಇಲ್ಲದೇ ಒಮ್ಮೆಲೆ ಸಂಪರ್ಕ ಕಡಿದುಕೊಳ್ಳುವುದನ್ನೇ ಘೋಸ್ಟಿಂಗ್ ಎಂದು ಕರೆಯಲಾಗುತ್ತದೆ. ಮೆಸೇಜ್‌ ಮಾಡಿದ್ರೆ ವಾಟ್ಸಪ್‌ ರಿಪ್ಲೈ ಇಲ್ಲ, ಕಾಲ್‌ ರಿಟರ್ನ್ ಇಲ್ಲ. “seen” ಕೂಡ ಕಾಣಿಸದೇ ಹೋದರೆ – ಅದೇ ಘೋಸ್ಟಿಂಗ್! ಸರಳ ಭಾಷೆಯಲ್ಲಿ ಹೇಳುವುದಾದರೆ, ಸದ್ದಿಲ್ಲದೇ ಕೈಕೊಡುವುದು.

ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ ಪ್ರೀತಿ ಪ್ರೇಮ ಪ್ರಣಯದಲ್ಲಿರುವ ಪ್ರತೀ ನಾಲ್ಕು ಜನರಲ್ಲಿ ಮೂವರು ಕನಿಷ್ಠ ಒಮ್ಮೆ ಘೋಸ್ಟಿಂಗ್ ಅನುಭವಿಸಿದ್ದಾರೆ ಅಥವಾ ತಾವೇ ಯಾರನ್ನಾದರೂ ಘೋಸ್ಟ್ ಮಾಡಿದ್ದಾರೆ. ಡೇಟಿಂಗ್ ಆ್ಯಪ್‌ಗಳು, ಸೋಷಿಯಲ್ ಮೀಡಿಯಾ ಮತ್ತು ವೇಗದ ಜೀವನಶೈಲಿ ಈ ಟ್ರೆಂಡ್‌ಗೆ ಇನ್ನಷ್ಟು ಬಲ ನೀಡುತ್ತಿದೆ. ಅನಿಶ್ಚಿತತೆಯ ಕಾಲದಲ್ಲಿ ಜ್ಯೋತಿಷ್ಯ ದಿಕ್ಕು ತೋರಿಸುವ ದಿಕ್ಕುಸೂಚಿಯಂತೆ ಕೆಲಸ ಮಾಡುತ್ತದೆ. 2026ರ ವ್ಯಾಲೆಂಟೈನ್ಸ್ ಡೇಗೆ ಮುನ್ನ, ಯಾವ ರಾಶಿಯವರು ಘೋಸ್ಟಿಂಗ್ ಮಾಡುವ ಸಾಧ್ಯತೆ ಹೆಚ್ಚು ಎಂಬುದನ್ನು ನೋಡಬಹುದು

ಕುಂಭ ರಾಶಿ (Aquarius)

ಕುಂಭ ರಾಶಿಯವರು ಪ್ರೇಮಸಂಬಂಧದಿಂದ ಏಕಾಏಕಿ ಕಣ್ಮರೆಯಾಗುವುದಿಲ್ಲ. ಅವರು ಮೌನವಾಗುವ ವೇಳೆಗೆ ಆ ನಿರ್ಧಾರ ಮನಸ್ಸಿನಲ್ಲಿ ಬಹುಕಾಲದಿಂದಲೇ ತಯಾರಾಗಿರುತ್ತದೆ. 2026ರಲ್ಲಿ ಈ ರಾಶಿಯವರು ಒಂದೇ ಮಾತು, ಒಂದೇ ಗೊಂದಲ, ಒಂದೇ ಭಾವನಾತ್ಮಕ ಒತ್ತಡವನ್ನು ಮರುಮರು ಸಹಿಸಲು ಇಷ್ಟಪಡುವುದಿಲ್ಲ. ಮಾನಸಿಕವಾಗಿ ಕಳೆದುಹೋಗುವಂತೆ ಅನಿಸಿದಾಗ, ಅವರು ಜಗಳವಿಲ್ಲದೇ, ಡ್ರಾಮಾ ಇಲ್ಲದೇ ದೂರ ಸರಿಯುತ್ತಾರೆ. ಅವರಿಗೆ ಇದು ಪಕ್ವ ನಿರ್ಧಾರ. ಆದರೆ ಎದುರಿನವರಿಗೆ ಅದು ತಣ್ಣನೆಯ ನಿರ್ಲಕ್ಷ್ಯವಾಗಿ ಕಾಣಬಹುದು.

ಮಿಥುನ ರಾಶಿ (Gemini)

ಮಿಥುನ ರಾಶಿಯವರು ಸಾಮಾನ್ಯವಾಗಿ ಯಾರನ್ನಾದರೂ ಘೋಸ್ಟ್ ಮಾಡುವ ಉದ್ದೇಶದಿಂದ ಶುರು ಮಾಡುವುದಿಲ್ಲ. ಇಲ್ಲಿಯೇ ವ್ಯಂಗ್ಯ ಇದೆ. 2026ರಲ್ಲಿ ಇವರ ಜೀವನದಲ್ಲೇ ಸ್ಪಷ್ಟತೆ ಕಡಿಮೆ. ಹೀಗಾಗಿ ಉತ್ತರ ತಡ, ಮಾತು ಅರ್ಧದಲ್ಲೇ ನಿಲ್ಲುವುದು, ಸಂಭಾಷಣೆ ಮುಂದೂಡುವುದು ಸಾಮಾನ್ಯ. “ಸ್ವಲ್ಪ ಕ್ಲಿಯರ್ ಆದ್ಮೇಲೆ ಹೇಳ್ತೀನಿ” ಎಂದುಕೊಳ್ಳುತ್ತಾರೆ. ಆದರೆ ಆ ಕ್ಲಾರಿಟಿ ಬಂದೇ ಇರೋದಿಲ್ಲ. ಇದರಿಂದ ಸಂಬಂಧ ನಿಧಾನವಾಗಿ ಕರಗುತ್ತದೆ. ಎದುರಿನವರಿಗೆ ಇದು ನಿಧಾನವಾದ ಅಳಿಸುವಿಕೆಯಂತೆ ಅನಿಸುತ್ತದೆ. ಮಿಥುನರಿಗೆ ಮಾತ್ರ ಜೀವನ ಮುಂದಕ್ಕೆ ಸಾಗಿದಂತೆ ಭಾಸವಾಗುತ್ತದೆ.

ಮೀನ ರಾಶಿ (Pisces)

ಮೀನ ರಾಶಿಯವರು ಘೋಸ್ಟ್ ಮಾಡುವುದು ನಿರ್ಲಕ್ಷ್ಯದಿಂದಲ್ಲ – ಅತಿಯಾದ ಭಾವನಾತ್ಮಕ ಒತ್ತಡದಿಂದ. 2026ರಲ್ಲಿ ಇವರಿಗೆ ಭಾವನಾತ್ಮಕ ಗಡಿಗಳನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ನಿರೀಕ್ಷೆಗಳು ಜಾಸ್ತಿ ಅನಿಸುತ್ತವೆ, ಮೌನವೇ ಸುರಕ್ಷಿತವೆನಿಸುತ್ತದೆ. ಮುಖಾಮುಖಿ ಮಾತುಕತೆಯನ್ನು ತಪ್ಪಿಸುವುದು ಇವರ ಸ್ವಭಾವ. ಯಾರನ್ನಾದರೂ ನೋಯಿಸಬಾರದೆಂಬ ಭಯದಿಂದ ಅವರು ಹಿಂದೆ ಸರಿಯುತ್ತಾರೆ. ಆ ಮೌನ ಕೆಲವೊಮ್ಮೆ ನೋವನ್ನು ಕಡಿಮೆ ಮಾಡಬಹುದು… ಕೆಲವೊಮ್ಮೆ ಗೊಂದಲವನ್ನೇ ಉಳಿಸಬಹುದು.

ಧನು ರಾಶಿ (Sagittarius)

ಧನು ರಾಶಿಯವರು ಯಾವುದಾದರೂ ಸರಿಯಾಗಿಲ್ಲ ಅನ್ನಿಸಿದ ಕ್ಷಣ ಅಲ್ಲಿ ನಿಲ್ಲುವುದಿಲ್ಲ. 2026ರಲ್ಲಿ ಇವರಿಗೆ ಭಾವನಾತ್ಮಕ ಗೊಂದಲಗಳು, ಒಂದೇ ವಿಷಯದ ಬಗ್ಗೆ ಮತ್ತೆ ಮತ್ತೆ ಚರ್ಚೆಗಳಿಗೆ ತಾಳ್ಮೆ ಕಡಿಮೆ. ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದೇನೆ ಅನ್ನಿಸಿದರೆ, ಅವರು ನಿರ್ಗಮನ ದ್ವಾರ ಹುಡುಕುತ್ತಾರೆ. ವಿವರಣೆ ನೀಡುವುದು ಅವಶ್ಯಕವೆನಿಸದು. ಅವರ ದೃಷ್ಟಿಯಲ್ಲಿ ಕ್ರಿಯೆಯೇ ಉತ್ತರ. ಹೀಗಾಗಿ ಅವರ ಮೌನ ಅಚಾನಕ್ ಆಗಿರುತ್ತದೆ – ಯಾವುದೇ ಸೂಚನೆ ಇಲ್ಲದೇ.

ಮಕರ ರಾಶಿ (Capricorn)

ಮಕರ ರಾಶಿಯವರ ಘೋಸ್ಟಿಂಗ್ ಉದ್ದೇಶಪೂರ್ವಕ. ಆದರೆ ಅಜಾಗರೂಕ ಅಲ್ಲ. 2026ರಲ್ಲಿ ಇವರಿಗೆ ಸಮಯ ಮತ್ತು ಶಕ್ತಿ ಅಮೂಲ್ಯ. ಫಲಿತಾಂಶವಿಲ್ಲದ ಭಾವನಾತ್ಮಕ ಚರ್ಚೆಗಳು ಇವರಿಗೆ ವ್ಯರ್ಥವೆನಿಸುತ್ತವೆ. “ಬೌಂಡರಿ ಹಾಕೋಕೆ ಘೋಷಣೆ ಬೇಕಿಲ್ಲ” ಅನ್ನೋ ನಂಬಿಕೆ ಇವರದು. ಮೌನವೇ ಸ್ಪಷ್ಟತೆ ಎಂದುಕೊಳ್ಳುತ್ತಾರೆ. ಎದುರಿನವರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತಾರೆ. ಆ ಊಹೆ ತಪ್ಪಾಗಬಹುದು. ಆದರೆ ಮಕರರು ತೆಗೆದುಕೊಂಡ ನಿರ್ಧಾರಕ್ಕೆ ಅಪರೂಪವಾಗಿ ಹಿಂದಿರುಗುತ್ತಾರೆ.

ಒಟ್ಟಾರೆ ಹೇಳುವುದಾದರೆ ಇಂದಿನ ಡಿಜಿಟಲ್ ಯುಗದಲ್ಲಿ, ವಿಶೇಷವಾಗಿ ಮೆಟ್ರೋ ನಗರಗಳಿಂದ ಹಿಡಿದು ಟಯರ್-2 ಪಟ್ಟಣಗಳವರೆಗೆ, ಸಂಬಂಧಗಳು ಹೆಚ್ಚು ಸಂಕೀರ್ಣವಾಗುತ್ತಿವೆ. ಘೋಸ್ಟಿಂಗ್ ಕ್ರೂರತೆಯಂತೆ ಕಾಣಬಹುದು, ಆದರೆ ಕೆಲವರಿಗೆ ಅದು ತಮ್ಮನ್ನು ಕಾಪಾಡಿಕೊಳ್ಳುವ ವಿಧಾನ. ಈ ವ್ಯಾಲೆಂಟೈನ್ಸ್ ಸೀಸನ್‌ನಲ್ಲಿ, ಮೌನದ ಹಿಂದೆ ಇರುವ ಕಾರಣಗಳನ್ನು ಅರ್ಥಮಾಡಿಕೊಳ್ಳುವುದೇ ಸಂಬಂಧಗಳನ್ನು ಉಳಿಸುವ ಮೊದಲ ಹೆಜ್ಜೆಯಾಗಬಹುದು.