ಚಾಣಕ್ಯ ನೀತಿಯ ಪ್ರಕಾರ, ಸುಖ ಮತ್ತು ಸುರಕ್ಷಿತ ಜೀವನಕ್ಕಾಗಿ ಒಬ್ಬ ವ್ಯಕ್ತಿಯು ಯಾವ ಸ್ಥಳದಲ್ಲಿ ವಾಸಿಸಬಾರದು ಮತ್ತು ವಾಸಯೋಗ್ಯ ಸ್ಥಳಕ್ಕೆ ಇರಬೇಕಾದ ಐದು ಪ್ರಮುಖ ಅಂಶಗಳೇನು? ಅದು ಇಲ್ಲಿದೆ.
ಆಚಾರ್ಯ ಚಾಣಕ್ಯ ಎಂಬ ಹೆಸರು ಕೇಳಿದೊಡನೆ ಮನಸ್ಸಿಗೆ ಬರುವುದೇ ತೀಕ್ಷ್ಣ ಬುದ್ಧಿ, ರಾಜಕೀಯ ಕುತಂತ್ರ ಮತ್ತು ಗಟ್ಟಿಯಾದ ನೀತಿ. ಕೌಟಿಲ್ಯ, ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಪರಿಚಿತನಾದ ಚಾಣಕ್ಯನು, ಅರ್ಥಶಾಸ್ತ್ರ ಮತ್ತು ಚಾಣಕ್ಯ ನೀತಿಯ ಮೂಲಕ ಇಂದಿಗೂ ಜಗತ್ತಿನ ಗಮನ ಸೆಳೆಯುತ್ತಿರುವ ಅಪರೂಪದ ಚಿಂತಕ. ರಾಜಕೀಯ, ಆಡಳಿತ ಮತ್ತು ಜೀವನ ನಿರ್ವಹಣೆಯ ವಿಷಯಗಳಲ್ಲಿ ಅವರು ಹೇಳಿದ ಅನೇಕ ಸೂತ್ರಗಳನ್ನು ಇಂದಿಗೂ ರಾಜಕಾರಣಿಗಳು ಹಾಗೂ ಆಡಳಿತಗಾರರು ಅನುಸರಿಸುತ್ತಿರುವುದು ಚಾಣಕ್ಯರ ಪ್ರಭಾವವನ್ನು ತೋರಿಸುತ್ತದೆ. ಈ ಕಾರಣಕ್ಕೇ ಅವರನ್ನು ವಿಶ್ವದ ಮಹಾನ್ ರಾಜಕೀಯ ಚಿಂತಕರಲ್ಲಿ ಒಬ್ಬನೆಂದು ಪರಿಗಣಿಸಲಾಗುತ್ತದೆ.
ಚಾಣಕ್ಯನ ಜೀವನವು ಸಾಮಾನ್ಯ ಬದುಕಿನಂತಿರಲಿಲ್ಲ. ತನ್ನ ಅಪಾರ ಬುದ್ಧಿವಂತಿಕೆ, ರಾಜತಾಂತ್ರಿಕ ಕೌಶಲ್ಯ ಮತ್ತು ಅಚಲ ಛಲದ ಮೂಲಕ ನಂದವಂಶದಿಂದ ಎದುರಿಸಿದ ಅವಮಾನಕ್ಕೆ ಅವರು ತಕ್ಕ ಉತ್ತರ ಕೊಟ್ಟ ರೀತಿಯನ್ನು ಇತಿಹಾಸ ಮರೆಯುವುದಿಲ್ಲ. ನಂದವಂಶವನ್ನು ಪತನಗೊಳಿಸಿ ಮೌರ್ಯ ಸಾಮ್ರಾಜ್ಯ ಸ್ಥಾಪನೆಗೆ ಕಾರಣನಾದ ಚಾಣಕ್ಯನ ಪಾತ್ರವನ್ನು ವಿವಿಧ ಮೂಲಗಳು ವಿಭಿನ್ನ ರೀತಿಯಲ್ಲಿ ವಿವರಿಸುತ್ತವೆ. ಕಾಶ್ಮೀರಿ ಉಲ್ಲೇಖಗಳು ಒಂದೆಡೆ, ಬೌದ್ಧ ಗ್ರಂಥಗಳು ಮತ್ತೊಂದೆಡೆ, ಹಾಗೆಯೇ ‘ಮುದ್ರಾರಾಕ್ಷಸ’ ಎಂಬ ಕೃತಿಯಲ್ಲಿ ಚಾಣಕ್ಯನ ರಾಜಕೀಯ ತಂತ್ರಗಳನ್ನು ವಿಭಿನ್ನ ದೃಷ್ಟಿಕೋನದಿಂದ ಚಿತ್ರಿಸಲಾಗಿದೆ.
ಎಲ್ಲಿ ವಾಸಿಸಬಾರದು?
ಕ್ರಿಸ್ತಪೂರ್ವ 371ರಲ್ಲಿ ಚಣಕ ಎಂಬ ಗ್ರಾಮದಲ್ಲಿ ಜನಿಸಿದ ಚಾಣಕ್ಯನು ಬಾಲ್ಯದಿಂದಲೇ ಅಪರೂಪದ ಬುದ್ಧಿವಂತನಾಗಿದ್ದನು ಎಂದು ಹೇಳಲಾಗುತ್ತದೆ. ಜೀವನವನ್ನು ಕೇವಲ ತತ್ವದ ಮಟ್ಟಕ್ಕೆ ಸೀಮಿತಗೊಳಿಸದೇ, ಪ್ರಾಯೋಗಿಕವಾಗಿ ನೋಡುವ ದೃಷ್ಟಿಕೋನ ಅವರಲ್ಲಿ ಸ್ಪಷ್ಟವಾಗಿತ್ತು. ಇದಕ್ಕೆ ಉದಾಹರಣೆಯಾಗಿ ಅವರು ಹೇಳಿದ ಒಂದು ಪ್ರಮುಖ ಮಾತಿದೆ—ಶ್ರೀಮಂತರು ಇಲ್ಲದ, ವೇದಗಳನ್ನು ತಿಳಿದ ವಿದ್ವಾಂಸರು ಇಲ್ಲದ, ರಾಜ ಅಥವಾ ಸರ್ಕಾರವಿಲ್ಲದ, ವೈದ್ಯರಿಲ್ಲದ ಹಾಗೂ ನದಿ ಅಥವಾ ನೀರಿನ ಮೂಲವಿಲ್ಲದ ಸ್ಥಳದಲ್ಲಿ ಒಬ್ಬ ವ್ಯಕ್ತಿ ವಾಸಿಸಬಾರದು.
ಈ ಮಾತಿನ ಹಿಂದೆ ಆಳವಾದ ಜೀವನ ತತ್ವವಿದೆ. ಚಾಣಕ್ಯನ ಪ್ರಕಾರ, ಸಂತೋಷಕರ ಮತ್ತು ಸುರಕ್ಷಿತ ಜೀವನಕ್ಕೆ ಈ ಐದು ಅಂಶಗಳು ಅಗತ್ಯ. ಆರ್ಥಿಕ ಸಂಕಷ್ಟದ ಸಮಯದಲ್ಲಿ ಶ್ರೀಮಂತನ ನೆರವು ಉಪಯುಕ್ತವಾಗುತ್ತದೆ. ಧಾರ್ಮಿಕ ಹಾಗೂ ಸಾಮಾಜಿಕ ಆಚರಣೆಗಳಿಗೆ ಪಾಂಡಿತ್ಯಪೂರ್ಣ ಪುರೋಹಿತನ ಅಗತ್ಯವಿರುತ್ತದೆ. ಶಾಂತಿ ಮತ್ತು ಕ್ರಮಕ್ಕಾಗಿ ಸಮರ್ಥ ರಾಜ ಅಥವಾ ಸರ್ಕಾರ ಬೇಕಾಗುತ್ತದೆ. ಅನಾರೋಗ್ಯದ ಸಂದರ್ಭದಲ್ಲಿ ವೈದ್ಯರ ಅವಶ್ಯಕತೆ ಅನಿವಾರ್ಯ. ಹಾಗೆಯೇ, ನೀರು ಇಲ್ಲದ ಬದುಕು ಸಾಧ್ಯವಿಲ್ಲ; ಆದ್ದರಿಂದ ನದಿ ಅಥವಾ ನೀರಿನ ಮೂಲವೂ ಅವಶ್ಯಕ.
ಚಾಣಕ್ಯ ನೀತಿಯ ಮತ್ತೊಂದು ಪ್ರಮುಖ ಅಂಶವೆಂದರೆ, ವಾಸಸ್ಥಳದ ಆಯ್ಕೆ. ಜೀವನೋಪಾಯಕ್ಕೆ ಅವಕಾಶವೇ ಇಲ್ಲದ, ವ್ಯವಹಾರಕ್ಕೆ ಅನುಕೂಲಕರವಲ್ಲದ, ಕಾನೂನು ಅಥವಾ ಸಾಮಾಜಿಕ ಭಯವಿಲ್ಲದ ಪ್ರದೇಶಗಳಲ್ಲಿ ಮನೆ ಕಟ್ಟಬಾರದು ಎಂದು ಚಾಣಕ್ಯ ಎಚ್ಚರಿಸುತ್ತಾನೆ. ಭಯ ಅಂದ್ರೆ ಇಲ್ಲಿ ಅಕ್ರಮಕ್ಕೆ ಇರುವ ಭಯ—ಅದು ಇಲ್ಲದಿದ್ದರೆ ಸಮಾಜ ಅರಾಜಕತೆಯತ್ತ ಸಾಗುತ್ತದೆ ಎಂಬುದು ಅವರ ಅಭಿಪ್ರಾಯ. ಜೊತೆಗೆ, ದಾನ ಮತ್ತು ಔದಾರ್ಯ ಎಂಬ ಮೌಲ್ಯಗಳೇ ಅರಿವಿಲ್ಲದ ಜನರಿರುವ ಸ್ಥಳದಲ್ಲಿ ವ್ಯಕ್ತಿಗೆ ಗೌರವವೂ ಸಿಗುವುದಿಲ್ಲ ಎಂದು ಅವರು ಹೇಳುತ್ತಾರೆ.
ಆದ್ದರಿಂದ, ಒಬ್ಬ ವ್ಯಕ್ತಿ ತನ್ನ ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸಲು, ಲೌಕಿಕ ಸುಖಗಳನ್ನು ಅನುಭವಿಸಲು ಮತ್ತು ಪ್ರಾಯೋಗಿಕ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವಂತಹ ಸ್ಥಳವನ್ನೇ ಆಯ್ಕೆ ಮಾಡಬೇಕು ಎಂಬುದು ಚಾಣಕ್ಯನ ಸಲಹೆ. ಸಾವಿರಾರು ವರ್ಷಗಳ ಹಿಂದೆ ಹೇಳಲಾದ ಈ ಮಾತುಗಳು ಇಂದಿಗೂ ಅಷ್ಟೇ ಪ್ರಸ್ತುತವಾಗಿವೆ. ಕಾಲ ಬದಲಾಗಿದರೂ, ಬದುಕನ್ನು ಕಟ್ಟಿಕೊಳ್ಳುವ ಮೂಲ ಸೂತ್ರಗಳು ಬದಲಾಗಿಲ್ಲ ಎಂಬುದಕ್ಕೆ ಚಾಣಕ್ಯನೇ ಜೀವಂತ ಸಾಕ್ಷಿ.


