ಗರುಡ ಪುರಾಣ (garuda Purana) ಪ್ರಕಾರ, ಸಾಯುವ ಮುನ್ನ ಕೆಲವು ಪುಣ್ಯಕರ ವಸ್ತುಗಳನ್ನು ನೋಡುವುದರಿಂದ ಸ್ವರ್ಗಪ್ರಾಪ್ತಿಯಾಗುತ್ತದೆ. ಈ ಪವಿತ್ರ ಎಂಟು ವಸ್ತುಗಳನ್ನು ದರ್ಶಿಸುವುದರಿಂದ ಪಾಪಗಳು ಕ್ಷಯಿಸಿ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗಿದೆ.

ಬದುಕಿಡೀ ಪಾಪಗಳನ್ನು ಮಾಡಿದ ಅಜಾಮಿಳ ಎಂಬ ಪರಮ ಪಾತಕಿ, ಸಾಯುವ ಕೊನೆಯ ಕ್ಷಣದಲ್ಲಿ ʼನಾರಾಯಣʼ ಎಂದು ತನ್ನ ಮಗನನ್ನು ಕರೆದನಂತೆ. ಆತ ಕರೆದದ್ದು ತನ್ನ ಮಗನನ್ನಾದರೂ, ಅದು ದೇವರ ನಾಮ ಆದ್ದರಿಂದ ಆತನ ಪಾಪಗಳು ಕ್ಷಯಿಸಿ, ಪುಣ್ಯವಂತನಾದ ಎಂಬ ಕತೆಯಿದೆ. ಹಾಗೆಯೇ, ಸಾಯುವ ಮುನ್ನ ಪುಣ್ಯಕಾರ್ಯಗಳನ್ನು ಮಾಡಿದರೆ ಸ್ವರ್ಗಪ್ರಾಪ್ತಿ ಖಚಿತ. ಒಂದು ವೇಳೆ ಪುಣ್ಯದ ಕೆಲಸ ಮಾಡಲಾಗದಿದ್ದರೆ, ಪುಣ್ಯಕರವಾದ ಕೆಲವು ವಸ್ತುಗಳನ್ನಾದರೂ ನೋಡಬೇಕು ಎನ್ನುತ್ತದೆ ಗರುಡ ಪುರಾಣ. ಗರುಡ ಪುರಾಣವನ್ನು ಮೋಕ್ಷದ ಪುಸ್ತಕವೆಂದು ಪರಿಗಣಿಸಲಾಗಿದೆ. ಗರುಡ ಪುರಾಣದಲ್ಲಿ ಭಕ್ತಿ, ಜ್ಞಾನ, ವೈರಾಗ್ಯ, ಪುಣ್ಯ, ನಿಸ್ವಾರ್ಥ ಕರ್ಮಗಳು ಮುಂತಾದ ಅನೇಕ ಕಾರ್ಯಗಳ ಫಲಗಳ ಅಲೌಕಿಕ ವಿವರಣೆಯನ್ನು ನೀಡಲಾಗಿದೆ. ಹಾಗಾದರೆ ಆ 8 ಶುಭ ಸಂಗತಿಗಳು ಯಾವುವು?

ಹಸು

ಸನಾತನ ಧರ್ಮದಲ್ಲಿ ಹಸುವನ್ನು ತಾಯಿ ಎಂದು ಕರೆಯಲಾಗುತ್ತದೆ. ಗೋವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಹಸುವಿನ ಪಾದಗಳನ್ನು ಸ್ಪರ್ಶಿಸಿದರೆ ತೀರ್ಥಯಾತ್ರೆ ಮಾಡಿದ ಫಲ ಸಿಗುವುದು ಎಂದು ಪರಿಗಣಿಸಲಾಗುತ್ತದೆ. ಹಸುವಿನ ಪಾದಗಳನ್ನು ಸ್ಪರ್ಶಿಸುವುದರಿಂದ ಎಲ್ಲಾ ದೇವತೆಗಳ ಆಶೀರ್ವಾದ ಸಿಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಸಾಯುವ ಮೊದಲು ಹಸುವನ್ನು ನೋಡಿದರೂ ಸಾಕು, ಮೂವತ್ತಮೂರು ಕೋಟಿ ದೇವತೆಗಳನ್ನು ದರ್ಶನ ಮಾಡಿದ ಫಲ.

ತುಳಸಿ

ತುಳಸಿ ದೇವತಾವೃಕ್ಷ. ಅದರಲ್ಲಿ ಸ್ವತಃ ನಾರಾಯಣನೂ, ಲಕ್ಷ್ಮೀದೇವಿಯೂ ನೆಲೆಸಿರುತ್ತಾರೆ ಎಂದು ಪ್ರತೀತಿ. ಮುಸ್ಸಂಜೆಯಲ್ಲಿ ತುಳಸಿಯ ಮುಂದೆ ದೀಪವನ್ನು ಹಚ್ಚುವುದು ಲಕ್ಷ್ಮಿಯ ಆಗಮನದ ಪ್ರತೀಕ. ಮರಣಾಸನ್ನ ಗಳಿಗೆಗಳಲ್ಲಿ ತುಳಸಿವೃಕ್ಷವನ್ನು ದರ್ಶಿಸಿದವನು ಯಾವುದೇ ಅಡೆತಡೆಗಳಿಲ್ಲದೆ ಸ್ವರ್ಗದ ದಾರಿ ಹಿಡಿಯುತ್ತಾನೆ. ಅದಕ್ಕೇ ಪ್ರತಿ ಮನೆಯ ಮುಂದೆ ತುಳಸಿ ಕಟ್ಟೆ ಇರಬೇಕೆನ್ನುವರು.

​ಗೋಮೂತ್ರ

ಗೋವಿನಿಂದ ಪಡೆದ ಎಲ್ಲವನ್ನೂ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಗೋಮೂತ್ರವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಗೋಮೂತ್ರವನ್ನು ಔಷಧ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಪೂಜಿಸುವ ಅಥವಾ ಮಂಗಳಕರ ಕಾರ್ಯಗಳನ್ನು ಮಾಡುವಲ್ಲಿ ಬಳಸುವ ಪಂಚಗವ್ಯಗಳಲ್ಲಿ ಗೋಮೂತ್ರವೂ ಒಂದು. ಆದ್ದರಿಂದ, ಗರುಡ ಪುರಾಣದ ಪ್ರಕಾರ, ಗೋಮೂತ್ರವನ್ನು ನೋಡುವುದರಿಂದ ಮಾತ್ರ ಪುಣ್ಯ ಪ್ರಾಪ್ತಿಯಾಗುತ್ತದೆ.

ಹಾಲು

ಹಸುವಿನ ಹಾಲನ್ನು ಅಮೃತದಂತೆ ಪರಿಗಣಿಸಲಾಗುತ್ತದೆ, ಇದರ ಸೇವನೆಯು ಉತ್ತಮ ಆರೋಗ್ಯವನ್ನು ನೀಡುತ್ತದೆ ಮತ್ತು ಇದು ಅನೇಕ ರೋಗಗಳನ್ನು ತೊಡೆದುಹಾಕಲು ಸಹ ಸಮರ್ಥವಾಗಿದೆ. ದಣಿದು ಬಂದಾಗ ಒಂದು ಕುಡಿತೆ ಹಾಲನ್ನು ನೀಡಿದ ವಿದುರನ ಮನೆಯ ಮುಂದೆ ಹಾಲಿನ ಹೊಳೆಯನ್ನೇ ಶ್ರೀಕೃಷ್ಣ ಹರಿಸಿದನಂತೆ. ಹೀಗಾಗಿ ಹಾಲು ಪುಣ್ಯಕರ.

​ಗೋಧೂಳಿ

ಮುಸ್ಸಂಜೆ ಎಂದರೆ ಹಸುವಿನ ಪಾದಗಳಿಂದ ಏಳುವ ಧೂಳು. ಹಿಂದಿನ ಕಾಲದಲ್ಲಿ ಹಸುಗಳೆಲ್ಲ ಸಂಜೆ ಮೆಂದು ಮನೆಗೆ ಮರಳುತ್ತಿದ್ದಾಗ ಕಾಲಿನಿಂದ ಧೂಳು ಹಾರುತ್ತಿತ್ತು, ಹಾಗಾಗಿ ಈ ಸಂಜೆಯ ಸಮಯವನ್ನು ಗೋಧೂಳಿ ಎಂದು ಕರೆಯುತ್ತಾರೆ. ಈ ಸಮಯವನ್ನು ಪೂಜೆಗೆ ಉತ್ತಮ ಸಮಯವೆಂದು ಪರಿಗಣಿಸಲಾಗಿದೆ. ಗೋವಿನ ಪಾದದಿಂದ ಮೂಡುವ ಧೂಳು ಅತ್ಯಂತ ಪವಿತ್ರವಾದುದು, ಅದನ್ನು ನೋಡಿದ ಮಾತ್ರಕ್ಕೆ ಪುಣ್ಯ ಪ್ರಾಪ್ತಿಯಾಗುತ್ತದೆ.

ಶಂಖ

ಶಂಖವು ಸಮುದ್ರಮಥನ ಕಾಲದಲ್ಲಿ ಸಮುದ್ರದಿಂದ ಮೂಡಿಬಂತಂತೆ. ಆದ್ದರಿಂದ ಇದನ್ನು ಲಕ್ಷ್ಮಿದೇವಿಯ ಸಹೋದರ ಎಂದೂ ಕರೆಯಲಾಗುತ್ತದೆ. ಲಕ್ಷ್ಮಿಯೂ ಸಮುದ್ರಮಥನ ಕಾಲದಲ್ಲಿ ಜನಿಸಿದವಳು. ಮುಸ್ಸಂಜೆಯಲ್ಲಿ ಶಂಖವನ್ನು ಊದುವುದರಿಂದ ಸರ್ವ ಪಾಪಗಳೂ ನಿವಾರಣೆಯಾಗುತ್ತವೆ. ಮರಣಮುಖಿ ವ್ಯಕ್ತಿಯ ಮುಂದೆ ಶಂಖವನ್ನು ಇಡುವುದು ಯಾವಾಗಲೂ ಒಳ್ಳೆಯದು.

ಗಂಗಾಜಲ

ಹಿಂದೂ ಧರ್ಮದಲ್ಲಿ ಕೊನೆಯುಸಿರು ಎಳೆಯುತ್ತಿರುವ ವ್ಯಕ್ತಿಗೆ ಗಂಗಾಜಲವನ್ನು ಕುಡಿಸುತ್ತಾರೆ. ಅದೇನೂ ಚೆಂಬುಗಟ್ಟಲೆ ಕುಡಿಸುವುದಿಲ್ಲ, ಬರೀ ಒಂದೆರಡು ಉದ್ಧರಣೆ ಮಾತ್ರ. ಕುಡಿಸುವುದಲ್ಲ, ಗಂಗಾಜಲವನ್ನು ನೋಡಿದರೂ ಸಾಕು, ಆತ ಪುಣ್ಯವಂತನಾಗುತ್ತಾನೆ ಎನ್ನಲಾಗಿದೆ. ಗಂಗೆಯೂ ದೇವಿ, ಗಂಗೆಯೂ ಕೋಟ್ಯಂತರ ದೇವತೆಗಳ ನೆಲೆ.

ಸಾಲಿಗ್ರಾಮ

ಈ ಕಲ್ಲನ್ನು ವಿಷ್ಣುವಿನ ರೂಪ ಎಂದು ಪರಿಗಣಿಸಲಾಗುವುದು. ದೈವ ಶಕ್ತಿಯನ್ನು ಹೊಂದಿರುವ ಸಾಲಿಗ್ರಾಮವನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಸಕಾರಾತ್ಮಕ ಶಕ್ತಿಯು ಮನೆಯೊಳಗೆ ಆಗಮಿಸುವುದು. ದೈವ ಶಕ್ತಿಯೊಂದಿಗೆ ಸಂಯೋಜನೆಯನ್ನು ಪಡೆದುಕೊಂಡ ಸಾಲಿಗ್ರಾಮವನ್ನು ಮನೆಯಲ್ಲಿ ಇಟ್ಟು ಪೂಜಿಸುತ್ತಾರೆ. ಇದನ್ನು ನೋಡಿದರೆ ಯಾವಾಗಲೂ ಪುಣ್ಯವಂತೆ.