ವಿದೇಶಕ್ಕೆ ತೆರಳಲು ವೀಸಾ ಸಿಕ್ತಾ ಇಲ್ವಾ? ಇಲ್ಲಿ ಹರಕೆ ತೀರಿಸಿ...
ವಿದೇಶಕ್ಕೆ ಹೋಗುವ ಪ್ಲಾನ್ ಇದ್ಯಾ? ಬಿಜಿನೆಸ್ ಮಾಡಲು ಬಯಸಿದ್ದು ಆಗದಿದ್ದರೆ ಈ ವೀಸಾ ದೇವರನ್ನು ಬೇಡಿಕೊಂಡರೆ ಸಾಕು ಇಷ್ಟಾರ್ಥ ಸಿದ್ಧಿಯಾಗುತ್ತಂತೆ!
ದೇವರನ್ನು ಬೇರೆ ಬೇರೆ ಹೆಸರಲ್ಲಿ ಪೂಜಿಸುವುದು ಹಿಂದೂ ಧರ್ಮದಲ್ಲಿ ವಾಡಿಕೆ. ಆದರೆ ದೇವರನ್ನು ವೀಸಾ ದೇವರು ಎಂದು ಕರೆಯುವುದು ಕೇಳಿದ್ದೀರಾ? ಇಲ್ಲ ಅಂದ್ರೆ ಈ ದೇವಾಲಯದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಈ ಬಾಲಾಜಿ ದೇವಾಲಯ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್ ಮಂಡಲದಲ್ಲಿನ ಚಿಲುಕೂರು ಗ್ರಾಮದಲ್ಲಿದೆ. ಜನರು ತಮ್ಮ ಮನೋಭಾಲಾಷೆಗಳನ್ನು ಈಡೇರಿಸಲು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಈ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ದೊಡ್ಡದಾದರೂ ಸರಳವಾಗಿದೆ. ಇಲ್ಲಿನ ಆಚರಣೆ, ಪೂಜೆ, ದರ್ಶನ ಎಲ್ಲವೂ ಸರಳವಾಗಿ ಬರೋ ಭಕ್ತರಿಗೆ ಅನುಕೂಲ ಆಗುವಂತೆಯೇ ನಡೆಯುತ್ತದೆ. ಇಲ್ಲಿ ಮಂದಿ ಪ್ರದಕ್ಷಿಣೆ ಹಾಕಿ, ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಬೇಗ ವೀಸಾ ದೊರೆಯುತ್ತದೆ ಎಂದು ಭಕ್ತರು ನಂಬುತ್ತಾರೆ. ಹಾಗಾಗಿಯೇ ಇಲ್ಲಿನ ಬಾಲಾಜಿಯನ್ನು ವಿಸಾ ಬಾಲಾಜಿ ಎಂದೇ ಕರೆಯುತ್ತಾರೆ.
ರೂಪ ಬದಲಿಸಿದ ಆಂಜನೇಯ, ವಿಸ್ಮಯಕಾರಿ ಮಂದಿರದ ಹಿಂದಿದೆ ರೋಚಕ ಕತೆ
ಈ ಪುರಾತನ 'ವೀಸಾ ಬಾಲಾಜಿ' ದೇವಾಲಯವನ್ನು ನಿರ್ಮಿಸಿದವರು ಮುದ್ದಣ್ಣ ಮತ್ತು ಅಕ್ಕಣ್ಣ. ಎಲ್ಲೆಡೆಯಂತೆ ಇಲ್ಲಿ ಹುಂಡಿ ಇಲ್ಲ. ಭಕ್ತರಿಂದ ಯಾವುದೇ ಹಣವನ್ನೂ ಸ್ವೀಕರಿಸುವುದಿಲ್ಲ. ಬದಲಾಗಿ ದೇವಾಲಯದಲ್ಲಿ ವಿತರಿಸಲಾಗುವ ಪತ್ರಿಕೆ, ಪುಸ್ತಕಗಳನ್ನು ಮಾರಿ, ಬಂದ ಹಣದಿಂದ ಈ ದೇವಾಲಯ ನಡೆಯುತ್ತದೆ.
ಇಂಥದ್ದೊಂದು ದೇವಸ್ಥಾನ ನಿರ್ಮಿಸಿದ್ದೇಕೆ?
ಹಿಂದೆ ಶ್ರೀ ವೆಂಕಟೇಶ್ವರ ಸ್ವಾಮಿಯ ಮಹಾ ಭಕ್ತನ್ನೊಬ್ಬನಿದ್ದ. ಈ ಭಕ್ತನು ಪ್ರತಿ ವರ್ಷವೂ ತಿರುಪತಿಗೆ ಹೋಗಿ ಸ್ವಾಮಿ ದರ್ಶನ ಮಾಡಿಕೊಂಡು ಬರುತ್ತಿದ್ದ. ವರ್ಷಗಳು ಕಳೆದಂತೆ ಆತ ಕೆಲವು ರೋಗಗಳಿಂದ ನರಳಲು ಆರಂಭಿಸುತ್ತಾನೆ. ಹೀಗಾಗಿ ತಿರುಪತಿಗೆ ತಿಮ್ಮಪ್ಪನ ದರ್ಶನ ಕಷ್ಟವಾಯಿತು. ಹೀಗಿರುವಾಗ ವೆಂಕಟೇಶ್ವರ ಸ್ವಾಮಿ ಈ ಭಕ್ತನ ಕನಸಿನಲ್ಲಿ ಬಂದು ನಿನಗೆ ನಾನು ಇದ್ದೇನೆ ಎಂದು ಹೇಳಿ, ಒಂದು ಪ್ರದೇಶದ ಕುರಿತು ತಿಳಿಸಿದನು. ಭಕ್ತನು ಆ ತಾಣವನ್ನು ಹುಡುಕಿ, ನಂತರ ಶಾಸ್ತ್ರೋಸ್ತ್ರವಾಗಿ ವಿಗ್ರಹ ಪ್ರತಿಷ್ಠಾಪಿಸಿ, ದೇವಾಲಯ ನಿರ್ಮಿಸಿದನಂತೆ. ಅಂದಿನಿಂದ ಅಲ್ಲಿ ಬಾಲಾಜಿ ಬಂದು ನೆಲೆಸಿದ ಎನ್ನುತ್ತಾರೆ.
ದೇವರ ಪೂಜೆಗೆ ಹೂವುಗಳನ್ನೇಕೆ ಬಳಸುತ್ತೇವೆ?
ವೀಸಾ ದೇವರಾದ ಬಾಲಾಜಿ
ಹಲವು ವರ್ಷಗಳ ಹಿಂದೆ ಪಾಶ್ಚಿಮಾತ್ಯ ದೇಶಗಳಲ್ಲಿ ತಮ್ಮ ಮತ್ತು ಮಕ್ಕಳ ವಿಧ್ಯಾಭ್ಯಾಸ ಅಥವಾ ಉದ್ಯೋಗಕ್ಕಾಗಿ ವೀಸಾ ಇಲ್ಲದೇ ಜನರು ತೊಂದರೆಯನ್ನು ಅನುಭವಿಸುತ್ತಿದ್ದರು. ನಂತರ ಕೆಲವು ಭಕ್ತರು ಈ ದೇವಾಲಯಕ್ಕೆ ಬಂದು ವೀಸಾಗಾಗಿ ಪಾರ್ಥನೆ ಮಾಡತೊಡಗಿದರು. ಅವರು ಕೋರುವ ಕೋರಿಕೆಗಳು ನೇರವೇರುತ್ತಿದ್ದರಿಂದ ಬಾಲಾಜಿಯನ್ನು ಚಿಲ್ಕೂರಿನ ವೀಸಾ ಬಾಲಾಜಿ ಎಂದು ಹೆಸರು ಬಂದಿತು.
ವೀಸಾ ಪಡೆಯಲು ಬೇಡಿಕೆ ಇಟ್ಟುಕೊಂಡು ಚಿಲ್ಕೂರಿನಲ್ಲಿರುವ ಬಾಲಾಜಿ ದೇವಾಲಯಕ್ಕೆ ಬರುವ ಭಕ್ತರು ಮೊದಲ ಬಾರಿಗೆ ದರ್ಶನ ಮಾಡಲು ಬಂದಾಗ 11 ಪ್ರದಕ್ಷಿಣೆ ಮಾಡಿ ಕೋರಿಕೆಗಳನ್ನು ಕೋರಬೇಕಂತೆ. ಹಾಗೆಯೇ ಕೋರಿಕೆಗಳು ನೆರವೇರಿದ ನಂತರ 108 ಪ್ರದಕ್ಷಿಣೆಗಳನ್ನು ಮಾಡಬೇಕಂತೆ. ಇನ್ನು ಈ ದೇವಾಲಯಕ್ಕೆ ಎಷ್ಟೇ ಶ್ರೀಮಂತರು, ಮಂತ್ರಿಗಳು ಯಾರೇ ಬಂದರೂ ಸರತಿ ಸಾಲಿನಲ್ಲಿಯೇ ನಿಂತು ಬಾಲಾಜಿಯ ದರ್ಶನ ಪಡೆಯಬೇಕು. ಯಾರಿಗೂ ವಿಶೇಷ ದರ್ಶನದ ವ್ಯವಸ್ಥೆ ಮಾಡಿಕೊಡುವುದಿಲ್ಲ ಅನ್ನೋದು ಈ ದೇವಾಲಯದ ವಿಶೇಷ.