ರೂಪ ಬದಲಿಸಿದ ಆಂಜನೇಯ, ವಿಸ್ಮಯಕಾರಿ ಮಂದಿರದ ಹಿಂದಿದೆ ರೋಚಕ ಕತೆ
ರಾತ್ರೋ ರಾತ್ರಿ ರೂಪ ಬದಲಾಯಿಸಿದ್ದ ಆಂಜನೇಯ| ಉತ್ತರಕ್ಕೆ ಮುಖ ಮಾಡಿದ ಹನುಮಂತನ ಮೇಲಿದೆ ಭಕ್ತರಿಗೆ ವಿಶೇಷ ನಂಬಿಕೆ| ಇಲ್ಲಿದೆ ಮಂದಿರದ ಹಿಂದಿನ ರೋಚಕ ಕತೆ
ಲಕ್ನೋ[ಮೇ.20]: ಲಕ್ನೋವಿನ ಆಲಿಗಂಜ್ ನಲ್ಲಿರುವ ಪುರಾತನ ಹನುಮಾನ್ ಮಂದಿರದಲ್ಲಿ ಹನುಮಂತನ ಪ್ರತಿಮೆಗೆ ಮೀಸೆ ಇದೆ, ಇಷ್ಟೇ ಅಲ್ಲದೇ ಅವರ ಕಾಲಿನ ಕೆಳಗೆ ರಾವಣನೂ ಇದ್ದಾನೆ. ರೌದ್ರ ರೂಪದಲ್ಲಿರುವ ಈ ಪ್ರತಿಮೆಯಲ್ಲಿ ಹನುಮಂತ ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡಿದ್ದಾರೆ. ಉತ್ತರಕ್ಕೆ ಮುಖ ಮಾಡಿರುವ ಈ ಹನುಮಂತನ ಮೇಲೆ ಭಕ್ತರಿಗೆ ವಿಶೇಷ ನಂಬಿಕೆ ಇದೆ.
ಆಲೀಗಂಜ್ ಮಂದಿರದ ಹಿರಿಯರಾದ ಗೋಪಾಲ್ ದಾಸ್ ಅನ್ವಯ ವನವಾಸದಲ್ಲಿದ್ದ ಸೀತಾ ದೇವಿ ಬಿಠುರ್ ಗೆ ತೆರಳುತ್ತಿದ್ದಾಗ ಇಲ್ಲಿ ಬೇಟಿ ನೀಡಿದ್ದರಂತೆ. ಪ್ರಾಚೀನ ಗ್ರಂಥಗಳಲ್ಲಿ ಹನುಮಂತ ಸೀತಾ ದೇವಿಗೆ ಕಾವಲು ನೀಡಿದ್ದರೆಂಬ ಉಲ್ಲೇಖವಿದೆ.
ಮಂದಿರದೊಂದಿಗೆ ನವಾಬ್ ಸಾದತ್ ಅಲಿ ಖಾನ್ ನಂಟು
ಈ ಪ್ರಾಚೀನ ಮಂದಿರ ಹಾಗೂ ನವಾಬ್ ಸಾದತ್ ಅಲಿ ನಡುವೆ ನಂಟಿದೆ ಎಂಬ ಮಾತೂ ಇದೆ. ಇತಿಹಾಸಕಾರ ಯೋಗೇಶ್ ಪ್ರವೀಣ್ ಈ ಕುರಿತಾಗಿ ಮಾತನಾಡುತ್ತಾ ಸಾದತ್ ಅಲಿ ಖಾನ್ ಮಂಗಳವಾರದಂದು ಜನಿಸಿದ್ದರು. ಹೀಗಾಗಿ ಅವರನ್ನು ಎಲ್ಲರೂ ಪ್ರೀತಿಯಿಂದ ಮಂಗಲೂ ಎಂದೇ ಕರೆಯುತ್ತಿದ್ದರು. ಸಾಆದತ್ ತಾಯಿ ಹಿಂದೂ ಪರಂಪರೆಯನ್ನು ಬಹಳವಾಗಿ ನಂಬುತ್ತಿದ್ದರು. ಇದೇ ಕಾರಣದಿಂದ ಸಾದತ್ ಒಂದು ಬಾರಿ ಅನಾರೋಗ್ಯಕ್ಕೀಡಾದಾಗ ಅವರ ತಾಯಿ ಹನುಮಂತನಲ್ಲಿ ಹರಕೆ ಹೊತ್ತುಕೊಂಡಿದ್ದರು. ತಾನು ಕೇಳಿದ್ದು ನೆರವೇರಿದಾಗ ಅವರು 1798ರಲ್ಲಿ ಆಲೀಗಂಜ್ ನಲ್ಲಿ ಹನುಮಂತನ ದೇವಸ್ಥಾನ ನಿರ್ಮಿಸಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಈ ಮಂದಿರದಲ್ಲಿ ಇಂದಿಗೂ ಚಂದ್ರನ ಆಕೃತಿ ನೋಡಬಹುದು.
ರೂಪ ಬದಲಿಸಿದ ಪ್ರತಿಮೆ
ಅರ್ಚಕ ಗೋಪಾಲ್ ದಾಸ್ ಮಾತನಾಡುತ್ತಾ 2014ರಲ್ಲಿ ಒಂದು ಮಂಗಳವಾರ ರಾತ್ರಿ ಅಚಾನಕ್ಕಾಗಿ ಪವನಪುತ್ರ ಹನುಮಂತನ ಪ್ರತಿಮೆ ತನ್ನ ರೂಪ ಬದಲಾಯಿಸಿಕೊಂಡಿತು. ಹೊಸ ರೂಪದಲ್ಲಿ ಹನುಮಂತನ ಮೀಸೆ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಅದಕ್ಕೂ ಮೊದಲು ಈ ಪ್ರತಿಮೆಗೆ ಮೀಸೆ ಇರಲಿಲ್ಲ. ಬಳಿಕ ನಡೆಸಿದ ಅಧ್ಯಯನದಲ್ಲಿ ಮೂಲ ಪ್ರತಿಮೆಗೆ ಮಣ್ಣು ಸೇರಿದಂತೆ ಇನ್ನಿತರ ವಸ್ತುಗಳ ಲೇಪ ಮಾಡಲಾಗಿತ್ತು. ಬಳಿಕ ಇದು ಇದ್ದಕ್ಕಿದ್ದಂತೆಯೇ ಮೂರ್ತಿಯಿಂದ ಬೇರ್ಪಟ್ಟಿತ್ತು ಎಂದು ತಿಳಿದು ಬಂದಿದೆ.