ಹೌದು ಬಿಲ್ವ  ಪತ್ರೆಯನ್ನು ಪಾಪನಾಶಿನಿ ಅಂತ ಕರೆಯುತ್ತಾರೆ. ಈ ಬಿಲ್ವಪತ್ರೆಗೆ ಸಂಬಂಧಿಸಿದ ಒಂದು ಪ್ರಸಿದ್ಧ ಶ್ಲೋಕವಿದೆ.

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂಚ ತ್ರಿಯಾಯುಧಂ
ತ್ರಿಜನ್ಮ ಪಾಪ ಸಂಹಾರಂ ಏಕ ಬಿಲ್ವಂ ಶಿವಾರ್ಪಣಂ
ಈ ಶ್ಲೋಕ ನಿಮ್ಮೆಲ್ಲರಿಗೂ ಗೊತ್ತೇ ಇದೆ.

ಬಿಲ್ವ ಪತ್ರೆ ಅಂದರೆ  ಮೂರು ದಳಗಳ ಪತ್ರೆ. ಅದು ಶಿವನಿಗೆ ಅತ್ಯಂತ ಪ್ರಿಯ ಪತ್ರೆ. ಬಿಲ್ವಪತ್ರೆಯಿಂದ ಶಿವನನ್ನು ಆರಾಧಿಸಿದರೆ ಆತ ಮೂರು ಜನ್ಮಗಳ ಪಾಪಗಳನ್ನೇ ಸುಟ್ಟುಬಿಡುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಯಾರಾದರೂ ಸಂಕಷ್ಟದಲ್ಲಿದ್ದಾರೆ ಅಥವಾ ಶನಿ ದೋಷಕ್ಕೆ ಗುರಿಯಾಗಿದ್ದರೆ, ಅಥವಾ ಸೂರ್ಯನ ಅವಕೃಪೆಗೆ ಗುರುಯಾಗಿದ್ದಾರೆ ಎಂದರೆ ಅಂಥವರು ಶಿವನಿಗೆ ಈ ಬಿಲ್ವಪತ್ರೆಯನ್ನ ಸಮರ್ಪಿಸಬೇಕು. ಆಗ ಅವರ ಸಂಕಟ ದೂರವಾಗುತ್ತದೆ. ಅದರಲ್ಲಿ ಸಂಶಯವಿಲ್ಲ.

ವೃಕ್ಷದಲ್ಲಿ ಬ್ರಹ್ಮ, ವಿಷ್ಣು, ಶಿವನನ್ನು ನೋಡುವ ಸಂಸ್ಕತಿ ನಮ್ಮದು...

ಬಿಲ್ವ ಪತ್ರೆಗೆ ಯಾಕಿಷ್ಟು ಮಹತ್ವ...?

ಬಿಲ್ವಪತ್ರೆ ಹಿಂದಿದೆ ಪುರಾಣದ ಹಿನ್ನೆಲೆ. ಆ ಹಿನ್ನೆಲೆಯ ಕಾರಣದಿಂದಲೇ ಇಷ್ಟು ಮಹತ್ವ ಪಡೆದಿದೆ ಬಿಲ್ವ ಪತ್ರೆ. ಒಮ್ಮೆ ದೇವ-ದಾನವರು ಅಮೃತಕ್ಕಾಗಿ ಕ್ಷೀರ ಸಾಗರವನ್ನು ಮಂಥನ ಮಾಡುತ್ತಿದ್ದರು. ಆ ಸಂದರ್ಭ ಆ ಕ್ಷೀರ ಸಾಗರದಿಂದ ಸಾಕಷ್ಟು ಅನರ್ಘ್ಯ ರತ್ನಗಳು ಸೃಷ್ಟಿಯಾದವು. ಅವುಗಳಲ್ಲಿ ಮುಖ್ಯವಾದವು ಉಚ್ಹೈಶ್ರವಸ್ಸು (ಅತಿಶ್ರೇಷ್ಠವಾದ  7-ತಲೆಯುಳ್ಳ ಕುದರೆ ), ಕೌಸ್ತುಭ ( ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ. ), ಕಾಮಧೇನು ಅಥವಾ ಸುರಭಿ ( ಕೋರಿದುದನ್ನು ನೀಡುವ ಹಸು.), ಪಾರಿಜಾತ (ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು ಕಲ್ಪವೃಕ್ಷದೊಂದಿಗೆ ಗುರುತಿಸಲಾಗುತ್ತದೆ ), ಐರಾವ (ಇಂದ್ರನ ಆನೆ ), ಅಪ್ಸರೆಯರು, ರಂಭಾ, ಮೇನಕಾ, ಪುನ್ಜಿಕ ಸ್ಥಳ ಇತರರು , ಶಾರ್ಞ ಧನಸ್ಸು (ವಿಷ್ಣುವಿನ ಆಯುಧ ) ಹೀಗೆ ಅನೇಕ ರತ್ನಗಳು ಸೃಷ್ಟಿಯಾದವು.

ಅವುಗಳ ಜೊತೆ ಮಹಾಲಕ್ಷ್ಮೀಯೂ ಬಂದಳು. ಆ ಮಹಾಲಕ್ಷ್ಮಿಯನ್ನು ಕಂಡು ದೈತ್ಯರು ಲಕ್ಷ್ಮಿಯ ಮೇಲೇ ಕಣ್ಣು ಹಾಕಿದರು, ಆಕೆಯನ್ನ ಶತಾಯ  ಗತಾಯ ಪಡೆಯುವ ಪ್ರಯತ್ನ ಮಾಡಿದರು. ಆಗ ಬೆಚ್ಚಿ ಬಿದ್ದ ಮಹಾಲಕ್ಷ್ಮಿ ಬಿಲ್ವವೃಕ್ಷವಾಗಿ ನೆಲೆ ನಿಂತಳು. ಹಾಗಾಗಿ ಬಿಲ್ವ ವೃಕ್ಷ ಶ್ರೇಷ್ಠ ವೃಕ್ಷವಾಯ್ತು ಅನ್ನುವ ಕಥೆ ಇದೆ.

ನಂಬಿದವರನೆಂದೂ ಬಿಡದ ಶೃಂಗೇರಿ ಶಾರದಾಂಬೆ; ತಿಳಿಯಬನ್ನಿ ಮಹಾತ್ಮೆಯ!

ಪಾರ್ವತಿಯ ಬೆವರಿನ ಹನಿಯೇ ಬಿಲ್ವ..!

ಮತ್ತೊಂದು ಕಥೆಯ ಪ್ರಕಾರ ಪಾರ್ವತಿಗೆ ತುಂಬ ದಣಿವಾಗಿತ್ತು. ಆಗ ಮಂದರ ಪರ್ವತದಲ್ಲಿ ವಿಶ್ರಾಂತಿಗೆ ಅಂತ ಬಂದು ಕುಳಿತಿದ್ದಳು. ಆಗ ಆಕೆಯ ಬೆವರ ಹನಿ ಭೂಮಿಯ ಮೇಲೆ ಬಿತ್ತು ಆ ಹನಿಯಿಂದ ಒಂದು ವೃಕ್ಷ ಮೂಡಿತು ಅದೇ ಬಿಲ್ವ ವೃಕ್ಷ ಅಂತಲೂ ಕಥೆ ಇದೆ.

ಲಕ್ಷ್ಮೀ ಸ್ತನದಲ್ಲಿ ಮೂಡಿದ್ದು ಬಿಲ್ವ..!

ಮತ್ತೊಂದು ಕಥೆಯ ಪ್ರಕಾರ ಅದೊಮ್ಮೆ ಲಕ್ಷ್ಮೀ ಶಿವನನ್ನು ಕುರಿತು ಸಹಸ್ರ ನಾಮಾವಳಿ ಹೇಳುತ್ತಿದ್ದಳು. ಒಂದೊಂದು  ನಾಮ ಹೇಳುವಾಗಲೂ ಒಂದೊಂದು ಪುಷ್ಪ ಸಮರ್ಪಣೆ ಮಾಡುತ್ತಿದ್ದಳು. ಕೊನೆಯ ನಾಮ ಹೇಳುವ ಹೊತ್ತಿಗೆ ಒಂದು ಹೂ ಕಾಣಿಸಲಿಲ್ಲ. ಹಾಗಾಗಿ ಒಂದು ಹೂವು ಕಡಿಮೆ ಬಿತ್ತಲ್ಲ ಅನ್ನೋ ಕಾರಣಕ್ಕೆ ತನ್ನ ಸ್ತನವನ್ನೇ ಕತ್ತರಿಸಿ ಹೂವಿನ ರೂಪದಲ್ಲಿ ಅರ್ಚಿಸಿದ್ದಳು ಮಹಾಲಕ್ಷ್ಮಿ. ಆ ಘೋರ ಸ್ಥಿತಿಯನ್ನ ಕಂಡ ಶಿವ ತಕ್ಷಣ ಆಕೆಯ ಮೇಲೆ ಗಂಗಾಜಲವನ್ನ ಹರಿಸಿ ಆಕೆಯ ನೋವನ್ನ ಕಳೆದನಂತೆ.  ಹಾಗೆ ಹರಿದ ನೀರು ಶ್ರೀ ಶೈಲವನ್ನು ತಲುಪಿ ಅಲ್ಲಿ ಬಿಲ್ವ ವೃಕ್ಷದ ಪ್ರಾದುರ್ಭಾವವಾಯಿತು ಅಂತ ಹೇಳ್ತಾರೆ. ಅಂದು ಮಹಾಲಕ್ಷ್ಮಿಗೆ ಶಿವ ವರದ ರೂಪದಲ್ಲಿ ಅಷ್ಟ ಸಿದ್ಧಿತ್ವವನ್ನು ಕೊಟ್ಟನಂತೆ. ಹಾಗಾಗೇ ಅಷ್ಟ ಮಹಾಲಕ್ಷ್ಮಿಯರ ಸೃಷ್ಟಿಯಾಯಿತು ಅಂತಲೂ ಉಲ್ಲೇಖಗಳಿದ್ದಾವೆ.

ಬಿಲ್ವ ತತ್ವ ಏನು..?

ಬಿಲ್ವದ ಕಥೆ ಗೊತ್ತಾಯ್ತು. ಆದ್ರೆ ಆ ಬಿಲ್ವದ ಕಥೆಗಿಂದ ಅದರ ತತ್ವ ನಮಗೆ ಅರ್ಥವಾಗಬೇಕು. ಹಾಗೆ ತತ್ವಾರ್ಥ ತಿಳಿದು ಮಾಡುವ ಪೂಜೆ ಅತ್ಯಂತ ಶ್ರೇಷ್ಠ ಹಾಗೂ ಫಲದಾಯಕ.

ದೇವರಿಗೆ ತೆಂಗಿನಕಾಯಿ ಒಡೆಯುವುದೇಕೆ?

ಬಿಲ್ವ ಪತ್ರೆಯಲ್ಲಿ ಮೂರು ದಳಗಳಿರುತ್ತವೆ. ಆ ಮೂರು ದಳಗಳು : ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಸಂಕೇತ.

ಪ್ರಾತ: ಕಾಲ, ಮಧ್ಯಾಹ್ನ ಕಾಲ, ಸಂಧ್ಯಾ ಕಾಲಗಳ ಸಂಕೇತ.
 
ಬಿಲ್ವ ಪತ್ರೆಯಿಂದ ನಾವು ಶಿವನನ್ನು ಅರ್ಚಿಸುತ್ತೇವೆ. ಶಿವ ಅಂದ್ರೆ ಮಂಗಳಕರ ಅಂತ. ನಮಗೆ ಮಂಗಳವಾಗಬೇಕಾದರೆ, ಶುಭ ಫಲಗಳು ದಕ್ಕಬೇಕಾದರೆ ನಾವು ಸತ್ವ-ರಜಸ್ಸು-ತಮೋಗುಣಗಳನ್ನ ದಾಟಬೇಕು. ನಮ್ಮ ಹುಟ್ಟು , ನಮ್ಮ ಇರುವಿಕೆ, ನಮ್ಮ ಮರಣ ಈ ಎಲ್ಲ ಸ್ಥಿತಿಯಲ್ಲೂ ಆ ಶಿವನ ನಿರ್ದೇಶನವಿದೆ. ಆವನ ಸಂಕಲ್ಪದ ಹೊರತಾಗಿ ಜಗತ್ತಿಲ್ಲ ಎಂಬ ಭಾವದಲ್ಲಿ ಬಿಲ್ವ ಪತ್ರೆಯನ್ನು ಸಮರ್ಪಿಸಿದರೆ ಖಂಡಿತಾ ಶಿವನ ಅನುಗ್ರಹವಾಗುತ್ತದೆ. ಅದರಲ್ಲಿ ಸಂದೇಹವಿಲ್ಲ. ಬಿಲ್ವ ಪತ್ರೆ ಸಮರ್ಪಿಸುವ ಮುನ್ನ ಈ ತತ್ವ ನೆನಪಾದರೆ ಅದೆ ನಿಜವಾದ ಶಿವ ಪೂಜೆ.