Asianet Suvarna News Asianet Suvarna News

ಶ್ರಾವಣ; ಏನು ತಿನ್ನಬೇಕು, ಏನು ತಿನ್ನಬಾರದು?

ಶ್ರಾವಣದಲ್ಲಿ ಹಲವರು ಉಪವಾಸ ಮಾಡುತ್ತಾರೆ. ಮತ್ತೆ ಕೆಲವರು ಕೆಲವು ಆಹಾರಗಳಿಂದ ದೂರ ಉಳಿಯುತ್ತಾರೆ. ಉಪವಾಸದ ಸಂದರ್ಭದಲ್ಲಿ ಫಲಾಹಾರ ಸೇವನೆ ಹಿಂದಿನಿಂದ ನಡೆದುಕೊಂಡು  ಬಂದಿದೆ. ನೀವೂ ವೃಥಾಚರಿಸುತ್ತಿದ್ದರೆ ಶ್ರಾವಣದಲ್ಲಿ ಏನು ತಿನ್ನಬೇಕು, ಏನು ತಿನ್ನಬಾರದು ಎಂಬ ಮಾಹಿತಿ ಇಲ್ಲಿದೆ. 

Shravan Month 2019 What Foods To Eat And What Foods To Avoid
Author
bangalore, First Published Aug 10, 2019, 3:10 PM IST

ಉತ್ತರ ಭಾರತದಲ್ಲಿ ಜುಲೈ 17ರಂದೇ ಆರಂಭವಾದ ಶ್ರಾವಣ, ಆಗಸ್ಟ್ 15ರಂದು ರಕ್ಷಾ ಬಂಧನ ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ. ದಕ್ಷಿಣ ಭಾರತದಲ್ಲಿ ಈ ಹಬ್ಬಗಳ ಮಾಸವು ಆಗಸ್ಟ್ 1ರಂದು ಆರಂಭವಾಗಿದ್ದು, 30ರಂದು ಕೊನೆಗೊಳ್ಳುತ್ತದೆ. ಹಿಂದೂ ಕ್ಯಾಲೆಂಡರ್‌ನಲ್ಲಿ ಶ್ರಾವಣ ಮಾಸವನ್ನು ಬಹಳ ಪವಿತ್ರವಾದ ತಿಂಗಳೆಂದು ಪರಿಗಣಿಸಲಾಗುತ್ತದೆ. 

ಈ ತಿಂಗಳಲ್ಲಿ ಶಿವನ ಭಕ್ತರು ಆರೋಗ್ಯ, ನೆಮ್ಮದಿ, ಉನ್ನತಿ ಹಾಗೂ ಮೋಕ್ಷಕ್ಕಾಗಿ ದೇವರ ಆರಾಧನೆಯಲ್ಲಿ ತೊಡಗುತ್ತಾರೆ. ಇದೇ ಕಾರಣಕ್ಕೆ ಹಿಂದೂಗಳಲ್ಲಿ ಹಲವರು ಶ್ರಾವಣ ಸೋಮವಾರ ವ್ರತ ಎಂದು ಸೋಮವಾರ ಉಪವಾಸ ಆಚರಿಸುತ್ತಾರೆ. ಮತ್ತೆ ಕೆಲವರು ಮಾಂಸ ಮದ್ಯಗಳನ್ನು ತ್ಯಜಿಸಿ ಸ್ಟ್ರಿಕ್ಟ್ ಆಗಿ ಸಸ್ಯಾಹಾರ ಪದ್ಧತಿ ಅನುಸರಿಸುತ್ತಾರೆ. ಇನ್ನು ಕೆಲವರು ಊಟವನ್ನು ದಿನಕ್ಕೊಂದು ಹೊತ್ತಿಗೆ ಮಾತ್ರ ಸೀಮಿತಗೊಳಿಸುತ್ತಾರೆ. ಇನ್ನೊಂದಿಷ್ಟು ಮಂದಿ, ಉಪ್ಪು, ಬೆಳ್ಳುಳ್ಳಿ, ಈರುಳ್ಳಿ ಇರದ ಆಹಾರ ಸೇವಿಸುತ್ತಾರೆ. ಒಟ್ಟಿನಲ್ಲಿ ಬಹುತೇಕ ಹಿಂದೂಗಳು ಒಂದಲ್ಲ ಒಂದು ರೀತಿಯಲ್ಲಿ ಆಹಾರದ ವಿಷಯದಲ್ಲಿ ಕಟ್ಟುಪಾಡುಗಳನ್ನು ಅನುಸರಿಸುತ್ತಾರೆ. ಈ ಉಪವಾಸ ಆಚರಣೆಗಳಿಂದ ರಕ್ತದ ಸಕ್ಕರೆ ಮಟ್ಟ ನಿಭಾಯಿಸುವ, ಹೃದಯದ ಆರೋಗ್ಯ ಕಾಪಾಡುವ, ಮೆದುಳಿನ ಚಟುವಟಿಕೆಗಳನ್ನು ಹೆಚ್ಚಿಸುವ, ತೂಕ ಇಳಿಸುವ - ಹಲವಾರು ಲಾಭಗಳಿವೆ. 

ವರಮಹಾಲಕ್ಷ್ಮಿ ಹಬ್ಬದ ಬಗ್ಗೆ ನಿಮಗೆಷ್ಟು ಗೊತ್ತು?

ಹಾಗಿದ್ದ ಮೇಲೆ ನೀವೂ ಶ್ರಾವಣದಲ್ಲಿ ಏನು ತಿನ್ನಬೇಕು, ಏನು ತಿನ್ನಬಾರದು ಎಂದು ತಿಳಿದುಕೊಳ್ಳಬಾರದು? ಹವಾಮಾನ, ಆರೋಗ್ಯ, ಸಂಪ್ರದಾಯ- ಎಲ್ಲ ದೃಷ್ಟಿಯಿಂದ ತಯಾರಿಸಲಾದ ಪಟ್ಟಿ ಇಲ್ಲಿದೆ.  

ಶ್ರಾವಣದಲ್ಲಿ ಏನು ತಿನ್ನಬಾರದು?

- ಬದನೆಕಾಯಿಯನ್ನು ಈ ತಿಂಗಳಲ್ಲಿ ಸಂಪೂರ್ಣ ದೂರವಿಡಿ. ಹಳೆಯ ನಂಬಿಕೆಯ ಪ್ರಕಾರ, ಈ ತರಕಾರಿಯು ಸಂಪೂರ್ಣ ಅಪವಿತ್ರ ಎಂದಾಗಿದ್ದು, ಬಹಳಷ್ಟು ಜನರು ಶ್ರಾವಣದಲ್ಲಿ ಇದರಿಂದ ದೂರವುಳಿಯುತ್ತಾರೆ. ವೈಜ್ಞಾನಿಕವಾಗಿ ಹೇಳುವುದಾದರೆ ಬದನೆಯಲ್ಲಿ ಹುಳ ಜಾಸ್ತಿ. ಅದರಲ್ಲೂ ಈ ಮಳೆಗಾಲದಲ್ಲಿ ಬದನೆಕಾಯಿಯಲ್ಲಿ ಹುಳುಗಳು ಮನೆಯನ್ನೇ ಮಾಡಿಕೊಂಡಿರುತ್ತವೆ. ಹಾಗಾಗಿ, ಅದನ್ನು ತಿನ್ನದಿರುವುದೇ ಕ್ಷೇಮ.

- ಉಪವಾಸ ವೃತಾಚರಣೆ ಮಾಡುವವರು ಹಾಲಿನಿಂದ ದೂರ ಉಳಿಯಬೇಕು. ಆಯುರ್ವೇದದ ಪ್ರಕಾರ, ಮಳೆಗಾಲದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳು ಎಲ್ಲ ರೀತಿಯ ದೋಷಗಳನ್ನು ಇಂಬ್ಯಾಲೆನ್ಸ್ ಮಾಡುತ್ತವೆ. 

- ಮದ್ಯಪಾನದಿಂದ ಸಂಪೂರ್ಣ ದೂರವುಳಿಯಿರಿ. ಅದರಿಂದ ಒಳಿತಿಗಿಂತ ಕೆಡುಕೇ ಹೆಚ್ಚು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. 

- ಮೊಟ್ಟೆ, ಮೀನು ಹಾಗೂ ಮಾಂಸ ಶ್ರಾವಣದಲ್ಲಿ ವರ್ಜ್ಯ. 

- ಹಸಿರು ತರಕಾರಿಗಳು ಹಾಗೂ ಸೊಪ್ಪುಗಳನ್ನು ಶ್ರಾವಣದಲ್ಲಿ ಸೇವಿಸಬೇಡಿ. ಮಳೆಗಾಲದಲ್ಲಿ ಅವುಗಳಲ್ಲಿ ಹುಳಗಳು ಜಾಸ್ತಿ. ಅಲ್ಲದೆ, ಹಸಿರು ಸೊಪ್ಪುಗಳ ಸೇವನೆ ದೇಹದಲ್ಲಿ ಅತಿಯಾದ ಬೈಲ್ ರಸ ಉತ್ಪಾದಿಸುತ್ತದೆ. 

- ಹಣ್ಣು ಹಾಗೂ ಇತರೆ ತರಕಾರಿಗಳನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದೂರವಿರಿ. ಐಸ್ ಹಾಕಿದ ರಸ್ತೆ ಬದಿಯ ಜ್ಯೂಸ್‌ಗಳು ಕೂಡಾ ಬೇಡ. ನೀರನ್ನು ಕಾಯಿಸದೆ ಕುಡಿಯಬೇಡಿ.

ಕಾಳಿಂಗ ಸರ್ಪಕ್ಕೂ ಮನುಷ್ಯರಿಗೂ ಏನೀ ಸಂಬಂಧ?

- ಅತಿಯಾಗಿ ಕರಿದ ಮಸಾಲಾ ಪದಾರ್ಥಗಳಿಂದ ದೂರವಿರಿ.  ಇಷ್ಟೆಲ್ಲ ಆಹಾರ ಪದಾರ್ಥಗಳಿಂದ ದೂರ ಉಳಿದ ಮೇಲೆ, ಉಪವಾಸವಾದ್ದರಿಂದ ಅನ್ನ, ಹಾಲು ವರ್ಜ್ಯ ಎಂದ ಮೇಲೆ  ಮತ್ತಿನ್ನೇನು ಸೇವಿಸುವುದು ಎಂದಿರಾ? 

ಶ್ರಾವಣದಲ್ಲಿ ಏನು ತಿನ್ನಬೇಕು? 

- ದಿನದಲ್ಲಿ ಕನಿಷ್ಠ 8-10 ಗ್ಲಾಸ್ ನೀರು ಕುಡಿಯಿರಿ. ಬೆಳಗ್ಗೆ ಎದ್ದೊಡನೆ ಒಂದೆರಡು ಗ್ಲಾಸ್ ಬೆಚ್ಚನೆಯ ನೀರಿಗೆ  ಸ್ವಲ್ಪ ನಿಂಬೆರಸ, ಜೇನುತುಪ್ಪ ಹಾಕಿಕೊಂಡು ಸೇವಿಸಿ. ಇದು ಮಳೆಗಾಲದಲ್ಲಿ ನಿಧಾನವಾಗುವ ಮೆಟಾಬಾಲಿಸಂನ್ನು ವೇಗಗೊಳಿಸುತ್ತದೆ. 

- ಉಪವಾಸದ ಸಂದರ್ಭದಲ್ಲಿ ತಿಂಡಿಯ ಬದಲು ಒಂದು ಲೋಟ ಬಾಳೆಹಣ್ಣಿನ ಮಿಲ್ಕ್‌ಶೇಕ್ ಕುಡಿಯಬಹುದು. ಇದು ಹೊಟ್ಟೆ ಹೆಚ್ಚು ಕಾಲ ಹಸಿಯದಂತೆ ನೋಡಿಕೊಳ್ಳುತ್ತದೆ.

- 11 ಗಂಟೆಯ ಹೊತ್ತಿಗೆ ಐದಾರು ಬಾದಾಮಿ, ಒಂದೆರಡು ವಾಲ್‌ನಟ್ ಸೇವಿಸಿ.  ಈ ನಟ್ಸ್‌ಗಳಲ್ಲಿ ಫ್ಯಾಟ್, ಪ್ರೋಟೀನ್, ಫೈಬರ್ ಅಧಿಕವಾಗಿದ್ದು, ಊಟದ ಸಮಯದವರೆಗೂ ನಿಮ್ಮನ್ನು ಫುಲ್ ಆಗಿಡುತ್ತದೆ.

- ಊಟಕ್ಕೆ 1 ಬಟ್ಟಲು ಸಲಾಡ್ ಅಥವಾ ಸಬುದಾನಾ ಕಿಚಡಿ ಮಾಡಿ ಸೇವಿಸಬಹುದು. ಉಪವಾಸದ ದಿನಗಳಲ್ಲಿ ಸಬುದಾನ ದೇಹದ ಎನರ್ಜಿಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. 

- ಸಂಜೆಗೆ 1 ಗ್ಲಾಸ್ ಗ್ರೀನ್ ಟೀ ಹಾಗೂ ಗೋಧಿ ಹಿಟ್ಟಿನ ಉಂಡೆ ಸೇವಿಸಬಹುದು. 

- ರಾತ್ರಿಯ ಊಟದ ಸಮಯದಲ್ಲಿ 2 ಚಪಾತಿ, 1 ಬಟ್ಟಲು ದಾಲ್, 1 ಬಟ್ಟಲು ಸೂಪ್, 1 ಬಟ್ಟಲು ಮೊಸರು ಸೇವಿಸುವುದು ಉತ್ತಮ. ಮಲಗುವಾಗ 1 ಬಾಳೆಹಣ್ಣು ಸೇವಿಸಿ. 
 

Follow Us:
Download App:
  • android
  • ios