ಭಾರತದ ಯಾವುದೇ ಮೂಲೆಯ ಹಿಂದೂಗಳಿಗೇ ಆಗಲಿ, ಶ್ರಾವಣ ಮಾಸವೆಂದರೆ ಬಹಳ ಪವಿತ್ರ, ಎಲ್ಲಕ್ಕಿಂತ ವಿಶೇಷ. ಸಾಲು ಸಾಲು ಹಬ್ಬಗಳನ್ನು ಪ್ರತಿ ವರ್ಷವೂ ಅದೇ ಉತ್ಸಾಹ, ಶ್ರದ್ಧೆ, ಆಸಕ್ತಿಯೊಂದಿಗೆ ಆಚರಿಸಲಾಗುತ್ತದೆ. ಈಗಾಗಲೇ ಭೀಮನ ಅಮವಾಸ್ಯೆ ಮುಗಿಸಿ, ನಾಗರಪಂಚಮಿ ಸಂಭ್ರಮಿಸಿ, ಜನರು ವರಮಹಾಲಕ್ಷ್ಮಿ ಹಬ್ಬಕ್ಕೆ ಸಜ್ಜಾಗಿದ್ದಾರೆ. ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ ಹಾಗೂ ತೆಲಂಗಾಣದ ಜನರಿಗೆ ವರಮಹಾಲಕ್ಷ್ಮಿ ಹಬ್ಬ ಬಹಳ ಮುಖ್ಯವಾದುದು. ಬೆಂಗಳೂರಿನ ರಸ್ತೆಯ ಇಕ್ಕೆಲಗಳೂ ಹಬ್ಬಕ್ಕಾಗಿ ಹೂವು, ಹಣ್ಣು, ಬಾಳೆಕಂಬ ಮಾರಾಟದ ಭರಾಟೆಯಲ್ಲಿ ತೊಡಗಿರುವ ದೃಶ್ಯ ಈಗಾಗಲೇ ಹಬ್ಬಾರಂಭದ ರಂಗೇರಿಸಿದೆ. ಈ ಹಬ್ಬದ ಕುರಿತು ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ. 

ಯಾವಾಗ ಹಬ್ಬ?

ಪ್ರತಿ ವರ್ಷ ಶ್ರಾವಣ ಶುಕ್ಲ ಪಕ್ಷದ ಮೊದಲ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಪಂಚಾಂಗದಂತೆ ಆಗಸ್ಟ್ 9ರ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಬಂದಿದೆ. 

ಏತಕ್ಕಾಗಿ ವರಮಹಾಲಕ್ಷ್ಮಿ ಆಚರಣೆ?

ಸಕಲ ಸಂಪನ್ನಗಳ ತಾಯಿ ಎಂದೇ ಕರೆಸಿಕೊಳ್ಳುವ ದೇವಿ ಮಹಾಲಕ್ಷ್ಮಿಗಾಗಿ ಈ ಹಬ್ಬ ಮುಡಿಪಾಗಿದೆ. ಮಹಾಲಕ್ಷ್ಮಿಯ ಕೃಪೆಗೆ ಪಾತ್ರವಾಗುವ ಹಂಬಲದಿಂದ ಈ ವರಮಹಾಲಕ್ಷ್ಮಿ ವೃತ ಆಚರಿಸಲಾಗುತ್ತದೆ. ಪೂಜೆಗೆ ತಾಯಿ ಒಲಿದರೆ ಭಕ್ತರಿಗೆ ಅಷ್ಟೈಶ್ವರ್ಯಗಳನ್ನು ಕರುಣಿಸಿ ಆಶೀರ್ವದಿಸುತ್ತಾಳೆಂಬ ನಂಬಿಕೆಯಿದೆ. ಈ ಕುರಿತಂತೆ ಪುರಾಣದಲ್ಲಿ ಮಹಾಲಕ್ಷ್ಮಿಯೇ ತನ್ನ ಭಕ್ತೆ  ಚಾರುಮತಿಗೆ ಹೇಗೆ ವೃತ ಆಚರಿಸಬೇಕೆಂದು ಹೇಳಿದ್ದಾಗಿ ತಿಳಿಸಲಾಗಿದೆ. ಚಾರುಮತಿಯು ಉತ್ತಮ ಮಗಳಾಗಿ, ಪತ್ನಿ, ಸೊಸೆ, ತಾಯಾಗಿ ಸುತ್ತಲಿನವರ ಸಂತೋಷಕ್ಕೆ ಕಾರಣಳಾಗಿದ್ದಳು. ಲಕ್ಷ್ಮಿಯ ಪರಮ ಭಕ್ತೆಯಾದ ಚಾರುಮತಿಯ ಭಕ್ತಿಗೆ ಮೆಚ್ಚಿ ಆಕೆಯ ಕನಸಿನಲ್ಲಿ ಬಂದ ಲಕ್ಷ್ಮಿ, ಹೇಗೆ ಪೂಜಿಸಿದರೆ ತಾನು ಒಲಿಯುವುದಾಗಿ  ಹೇಳಿದ್ದಾಳೆ. ಬಳಿಕ ಈ ವೃತ ನಡೆಸಿದ ಚಾರುಮತಿ ಹಾಗೂ ಕುಟುಂಬ ಯಶಸ್ಸು ಹಾಗೂ ಸಂಪನ್ನಗಳಿಂದ ಸಂತೋಷವಾಗಿರುತ್ತದೆ. ಸ್ಕಂದ ಪುರಾಣದಲ್ಲಿ ಶಿವನು ಪಾರ್ವತಿಗೆ ವರಮಹಾಲಕ್ಷ್ಮಿ ವೃತದ ಪ್ರಾಮುಖ್ಯತೆ ವಿವರಿಸುವುದನ್ನು ಕಾಣಬಹುದು. 

ಯಾವ ಶ್ಲೋಕಗಳನ್ನು ಹೇಳಬೇಕು?

ಮಹಾಲಕ್ಷ್ಮಿ ದೇವಿಗೆ ಸಂಬಂಧಿಸಿದ ಹಲವಾರು ಶ್ಲೋಕಗಳಿವೆ. ಆದರೆ, ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮಿ ಅಷ್ಟೋತ್ತರ ಹಾಗೂ ಲಕ್ಷ್ಮಿ ಸಹಸ್ರನಾಮ ಹೇಳುವುದು ಎಲ್ಲಕ್ಕಿಂತ ಹೆಚ್ಚು ಶ್ರೇಯಸ್ಕರ ಎಂದು ಭಾವಿಸಲಾಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಹೀಗಿತ್ತು ನೋಡಿ!

ವೃತ ನಡೆಸುವವರು ಉಪವಾಸ ಮಾಡಬೇಕೇ?

ಸಾಮಾನ್ಯವಾಗಿ ವರಮಹಾಲಕ್ಷ್ಮಿ ವೃತ ನಡೆಸುವ ಮಹಿಳೆಯರು ಬೆಳಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಎದ್ದು ಪೂಜೆ ಮುಗಿಯುವವರೆಗೆ ಉಪವಾಸ ಆಚರಿಸುತ್ತಾರೆ. ಆದರೆ, ಈ ಸಂಬಂಧ ಅತಿಯಾದ ಕಟ್ಟುಪಾಡುಗಳಿಲ್ಲ. ಯಾರನ್ನೂ ಒತ್ತಾಯದಿಂದ ಶ್ಲೋಕ ಹೇಳಿ ಪೂಜೆ ಮಾಡಲು ಹೇಳುವಂತಿಲ್ಲ. ಗರ್ಭಿಣಿ ಮಹಿಳೆಯರು ಹಾಗೂ ರೋಗಿಗಳು ಉಪವಾಸ ಮಾಡಬೇಕಿಲ್ಲ. ಒಂದು ವೇಳೆ ಮುಟ್ಟು, ಕಾಯಿಲೆಗಳು ಇತರೆ ವೈಯಕ್ತಿಕ ಕಾರಣಗಳಿಂದ ವೃತಾಚರಣೆ ಮಾಡಲು ಸಾಧ್ಯವಾಗದಿದ್ದಲ್ಲಿ ಮುಂದಿನ ಶುಕ್ರವಾರ ಇಲ್ಲವೇ ನವರಾತ್ರಿಯ ಶುಕ್ರವಾರದಂದು ವರಮಹಾಲಕ್ಷ್ಮಿ ವೃತ ಕೈಗೊಳ್ಳಬಹುದು. 

ಪೂಜೆ ಹೇಗೆ ಮಾಡುತ್ತಾರೆ?

ಬೆಳಗ್ಗೆ ಸ್ನಾನದ ಬಳಿಕ ಮಹಿಳೆಯರು ಕಲಶ ಇಡುವ ಜಾಗದಲ್ಲಿ ಎಂಟು ದಳದ ಕಮಲದ ರಂಗೋಲಿ ಬಿಡಿಸಬೇಕು. ಅಕ್ಕಿಯಿಂದ ತುಂಬಿದ, ಮಾವಿನೆಲೆಗಳಿಂದ ಅಲಂಕರಿಸಿದ, ಮೇಲೆ ಕಾಯಿಟ್ಟು ಬಟ್ಟೆಗಳಿಂದ ಅಲಂಕರಿಸಿದ ಕಲಶವನ್ನು ಇಡಬೇಕು. ಇದಕ್ಕೆ ಮಹಾಲಕ್ಷ್ಮಿಯನ್ನು ಆಹ್ವಾನ ಮಾಡಲಾಗುತ್ತದೆ. ತಾಯಿಗೆ ಅರಿಶಿನ ಕುಂಕುಮವಿಟ್ಟು, ಹೂವುಗಳಿಂದ ಅಲಂಕರಿಸಿ, ಒಡವೆ ವಸ್ತ್ರ ಹಾಕಬೇಕು. ಹಣ್ಣುಗಳು, ಡ್ರೈ ಫ್ರೂಟ್ಸ್, ಸ್ವೀಟ್ಸ್ ಹಾಗೂ ಪಂಚಭಕ್ಷ ಪರಮಾನ್ನಗಳನ್ನು ನೈವೇದ್ಯಕ್ಕೆ ಇಡಬೇಕು. ಹಣ ಹಾಗೂ ಬಂಗಾರಗಳನ್ನು ಕೂಡಾ ದೇವಿಯ ಎದುರಿಟ್ಟು ಪೂಜಿಸಲಾಗುತ್ತದೆ. ಆರಂಭದಲ್ಲಿ ಗಣಪತಿಗೆ ಪೂಜೆ ಮಾಡಿ ನಂತರ ಲಕ್ಷ್ಮಿ ವೃತ ನಡೆಸಬೇಕು. ಪೂಜೆಯ ಸಂದರ್ಭದಲ್ಲಿ 9 ಗಂಟುಗಳನ್ನು ಬಿಗಿದು ಹೂವನ್ನು ಕಟ್ಟಿದ ಅರಿಶಿನ ದಾರವನ್ನು ಬಲಗೈಗೆ ಕಟ್ಟಿಕೊಳ್ಳಲಾಗುತ್ತದೆ. 

ಬರ್ತಿದ್ದಾಳೆ ‘ವರಮಹಾಲಕ್ಷ್ಮೀ’; ಮನೆ ತುಂಬಿಸಿಕೊಳ್ಳಲು ಹೀಗೆ ಪೂಜೆ ಮಾಡಿ!

ಈ ಹಬ್ಬಕ್ಕೆ ಅಡುಗೆ ವಿಶೇಷವೇನು?

ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ವರಮಹಾಲಕ್ಷ್ಮಿ ಹಬ್ಬದಂದು ಒಬ್ಬಟ್ಟು, ಕೋಸಂಬರಿ, ಪುಳಿಯೋಗರೆ, ಹುಳಿ ಅನ್ನ, ಹೆಸರು ಬೇಳೆ ಪಾಯಸ ಮಾಡಲಾಗುತ್ತದೆ. ಸಂಜೆಯ ಹೊತ್ತಿನಲ್ಲಿ ಮಹಿಳೆಯರು ಲಕ್ಷ್ಮಿ ಕೂರಿಸಿದ ಇತರೆ ಮನೆಗಳಿಗೆ ಹೋಗಿ ಬಾಗೀನ ಪಡೆದು ಸಿಹಿಗಳನ್ನು ಹಂಚಿಕೊಳ್ಳುತ್ತಾರೆ.