ಕಿಂಗ್ ಕೋಬ್ರಾ ಎಂದೇ ಜನಜನಿತವಾಗಿರುವ ಉಗ್ರಸ್ವರೂಪಿ ಹಾವು ಕಾಳಿಂಗ ಸರ್ಪ. ಹಾವುಗಳ ಲೋಕದಲ್ಲಿ ಇವು ಹತ್ತು ಹಲವು ವಿಶಿಷ್ಠತೆ ಹೊಂದಿ ಉಳಿದವಕ್ಕಿಂತ ವಿಭಿನ್ನ ಎನಿಸಿಕೊಳ್ಳುತ್ತವೆ. ಅತ್ಯಂತ ಅಪಾಯಕಾರಿಯಾದ ಕಿಂಗ್ ಕೋಬ್ರಾಗಳ ಕುರಿತ ಕೆಲ ಆಸಕ್ತಿಕರ ವಿಷಯಗಳು ಇಲ್ಲಿವೆ. 

1. ಭುಸುಗುಟ್ಟುವ ಹಾವು

ಬೇಟೆಯಾಡುವ ಮುನ್ನ ಹೆಡೆಯನ್ನು ಅಗಲಿಸಿ, ದೇಹದ ಮೂರನೇ ಒಂದು ಭಾಗವನ್ನು ನೆಲದಿಂದ ಮೇಲೆತ್ತಿ, ತನ್ನ ಉಸಿರನ್ನು ಒಮ್ಮೆಲೇ ಫೋರ್ಸ್‌ನಿಂದ ಹೊರಹಾಕಿ ಭುಸುಗುಡುವ ರುದ್ರಭಯಾನಕ ಹಾವಿದು. ಇದರ ಟ್ರೇಕಿಯಲ್ ಡೈವರ್ಟಿಕುಲ ಎಂಬ ಗಾಳಿ ಚೀಲ ಈ ಹಿಸ್ ಎಂಬ ಶಬ್ದ ಹೊರಡಿಸಲು ಸಹಾಯ ಮಾಡುತ್ತದೆ. 

2. ವಿಷಕಾರಿ

ಭುಸುಗುಟ್ಟಿ ಶತ್ರುವನ್ನು ಓಡಿಸಲು ಸಾಧ್ಯವಾಗದಿದ್ದಾಗ ಕಿಂಗ್ ಕೋಬ್ರಾ ಅದಕ್ಕೆ ಕಚ್ಚುತ್ತದೆ. ಈ ಸಂದರ್ಭದಲ್ಲಿ ಒಂದೂವರೆ ಚಮಚದಷ್ಟು ವಿಷಯನ್ನು ಶತ್ರುವಿನ ದೇಹದೊಳಕ್ಕೆ ಇಂಜೆಕ್ಟ್ ಮಾಡುತ್ತದೆ. ಇದು ತಕ್ಷಣವೇ ನರವ್ಯವಸ್ಥೆಯ ಮೇಲೆ ಪರಿಣಾಮ ಬೀರಿ, ದೃಷ್ಟಿ  ಮಂಜಾಗಿಸ, ಪ್ಯಾರಾಲಿಸಿಸ್ ಹಾಗೂ ತಲೆ ಧಿಮ್ಮೆನ್ನುವಂತಾಗಿದೆ. ವಿಷ ಹೆಚ್ಚಿನ ಡೋಸೇಜ್‌ನಲ್ಲಿ ಒಳಸೇರಿದ್ದರೆ 30 ನಿಮಿಷದಲ್ಲಿ ವ್ಯಕ್ತಿ ಸಾಯುತ್ತಾನೆ. ಹಾಗಂತ ಎಲ್ಲ ಬಾರಿಯೂ ಅವು ವಿಷ ಕಾರುವುದಿಲ್ಲ. ಕೆಲವೊಮ್ಮೆ ಸುಮ್ಮನೆ ವಿಷ ತಾಕಿಸದೆ ಕಚ್ಚಿ ಹೆದರಿಸುತ್ತವೆ. ಇದನ್ನು ಡ್ರೈ ಬೈಟ್ ಎನ್ನಲಾಗುತ್ತದೆ. 

3. ಸ್ನೇಕ್ ಈಟರ್ಸ್

ನಿಜವಾದ ಕೋಬ್ರಾಗಳು ನಾಜಾ ಪಂಗಡಕ್ಕೆ ಸೇರಿದವಾಗಿದ್ದು, ಕಿಂಗ್ ಕೋಬ್ರಾಗಳು ಮಾಂಬಾಸ್ ಜಾತಿಗೆ ಹೆಚ್ಚು ಹತ್ತಿರದವೆನ್ನಲಾಗುತ್ತದೆ. ಹಾವುಗಳನ್ನೇ ತಿಂದು ಬದುಕುವ ಏಕೈಕ ಜಾತಿಯ ಹಾವು ಕಿಂಗ್ ಕೋಬ್ರಾ.

4. ಕಿರೀಟಧಾರಿ ಹಾವು

ಕಿಂಗ್ ಕೋಬ್ರಾ ಹೆಸರಿಗೆ ತಕ್ಕಂತೆ ಹಾವುಗಳ ರಾಜನೇ. ಇದರ ತಲೆಭಾಗ ಮೈಗಿಂತ ಬೇರೆ ಬಣ್ಣದಿಂದ ಕೂಡಿದ್ದು, ಕಿರೀಟ ಧರಿಸಿದಂತೆ ಕಾಣುತ್ತದೆ. ಆದ್ದರಿಂದ ಮನುಷ್ಯರು ಈ ಕಾಳಿಂಗ ಸರ್ಪವನ್ನು ಸುಲಭವಾಗಿ ಗುರುತಿಸಬಹುದು. 

5. ದೊಡ್ಡ ಗಾತ್ರ

ವಿಷಕಾರಿ ಹಾವುಗಳ ಜಾತಿಯಲ್ಲಿ ಕಿಂಗ್ ಕೋಬ್ರಾದಷ್ಟು ಉದ್ದದ ಮತ್ತೊಂದು ಹಾವು ಜಗತ್ತಿನ ಯಾವ ಮೂಲೆಯಲ್ಲೂ ಸಿಗಲಾರದು. ಪ್ರಾಯಕ್ಕೆ ಬಂದ ಕಾಳಿಂಗ ಸರ್ಪಗಳು ಸಮಾನ್ಯವಾಗಿ 10ರಿಂದ 13 ಅಡಿ ಉದ್ದವಿರುತ್ತವೆ. ಕೆಲವೊಂದು 18 ಅಡಿ ಉದ್ದ ತಲುಪಿರುವ ಸರ್ಪಗಳೂ ಇವೆ. ಅತಿ ದೊಡ್ಡ ಬಿಳಿ ಶಾರ್ಕ್‌ಗಳಷ್ಟು ಉದ್ದ ಎಂದಾಯಿತು. 

6. ಜಗಿಯುವುದಿಲ್ಲ

ಎಲ್ಲ ಹಾವುಗಳಂತೆ ಕಿಂಗ್ ಕೋಬ್ರಾ ಕೂಡಾ ಫ್ಲೆಕ್ಸಿಬಲ್ ದವಡೆಗಳನ್ನು ಹೊಂದಿದ್ದು, ತನ್ನ ತಲೆಗಿಂತ ದೊಡ್ಡ ಬೇಟೆಯನ್ನು ಸಹಾ ಅದು ನುಂಗಬಲ್ಲದು. 

7. ತ್ಯಾಗಮಯಿ ತಾಯಿ

ಮೊಟ್ಟೆ ಇಡುವ ಹೆಣ್ಣು ಹಾವುಗಳೆಲ್ಲ ತಮ್ಮ ಮೊಟ್ಟೆಗಳನ್ನು ತಕ್ಷಣ ಬಿಟ್ಟು ಹೋಗುತ್ತವೆ. ಆದರೆ, ಕಾಳಿಂಗ ಸರ್ಪ ಹಾಗಲ್ಲ. ತಾನು ಮೊಟ್ಟೆಗಳನ್ನಿಡುವ ಮೊದಲು ಎಲೆಗಳನ್ನೆಲ್ಲ ಗುಂಪು ಮಾಡಿ ಮೆತ್ತನೆ ಹಾಸಿಗೆ ಸಜ್ಜುಗೊಳಿಸಿಕೊಳ್ಳುತ್ತದೆ. ನಂತರ ಸಾಮಾನ್ಯವಾಗಿ 21-40 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳನ್ನಿಟ್ಟ ಗೂಡನ್ನು ಮತ್ತಷ್ಟು ಎಲೆಗಳನ್ನು ಮುಚ್ಚಿ ಬೆಚ್ಚಗಾಗಿಸುತ್ತದೆ. ನಂತರ ಗೂಡಿನ ಮೇಲೆ ಈ ತಾಯಿ ಸರ್ಪ ಕುಳಿತುಕೊಳ್ಳುತ್ತದೆ. ಆಕೆ ಅಲ್ಲಿಯೇ ಮೂರು ತಿಂಗಳ ಕಾಲ ಆಹಾರ ತ್ಯಜಿಸಿ ಮಕ್ಕಳನ್ನು ಉಳಿಸಿಕೊಳ್ಳಲು ಕಾವಲು ಕುಳಿತುಕೊಳ್ಳುತ್ತಾಳೆ. ಒಂದು ಬೇಟೆಯ ಆಹಾರ ಆಕೆಯನ್ನು ಹಲವು ತಿಂಗಳವರೆಗೆ ಉಪವಾಸವಿದ್ದರೂ ಪೊರೆಯಬಲ್ಲದು. ಮೊಟ್ಟೆಯೊಡೆದು ಮರಿಗಳು ಹೊರ ಬರುತ್ತಿದ್ದಂತೆಯೇ ಸಮಾಧಾನದಿಂದ ಆಕೆ ಅಲ್ಲಿಂದ ತೆರಳುತ್ತಾಳೆ. 

8. ಬೇಟೆಗಾರನೂ ಹೌದು, ಬೇಟೆಯೂ ಹೌದು

ಸರ್ಪಗಳ ವಿಷ ಅವುಗಳನ್ನು ಅತಿ ಅಪಾಯಕಾರಿ ಜೀವಿಗಳನ್ನಾಗಿಸಿದೆ. ಆದರೆ, ಇಂಥ ಅಪಾಯಕಾರಿಗೇ ಅಪಾಯ ತಂದಿಡುವಂಥ ಜೀವಿಗಳೂ ಇವೆ. ಮೊಸಳೆಗಳು, ಆರ್ಮಿ ಇರುವೆಗಳು ಹಾಗೂ ಮುಂಗುಸಿಗಳು ಸಣ್ಣ ವಯಸ್ಸಿನ ಸರ್ಪವನ್ನು ಬೇಟೆಯಾಡಿ ತಿನ್ನಬಲ್ಲವು. ಅದರಲ್ಲೂ ಮುಂಗುಸಿಗಳು ದೊಡ್ಡ ಸರ್ಪಕ್ಕೂ ಅಂಜುವುದಿಲ್ಲ. ಕೋಶಗಳ ವಿಶಿಷ್ಠ ರಚನೆಯಿಂದಾಗಿ ಕೋಬ್ರಾದ ವಿಷ ಮುಂಗುಸಿಯ ಮೈಗೆ ತಾಕುವುದಿಲ್ಲ. ಇದೇ ಕಾರಣಕ್ಕೆ ಅವು ಹಾವಿಗೆ ಹೆದರಲಾರವು. 

9. ಮೇಲಾ ಫಿಮೇಲಾ

ಸಾಮಾನ್ಯವಾಗಿ ಹಾವಿನ ಲೋಕದಲ್ಲಿ ಹೆಣ್ಣು ಹಾವುಗಳು ಗಂಡಿಗಿಂತ ಬಹಳಷ್ಟು ದೊಡ್ಡ ಗಾತ್ರದಲ್ಲಿ ಬೆಳೆಯುತ್ತವೆ. ಆದರೆ, ಕಿಂಗ್ ಕೋಬ್ರಾಗಳ ವಿಷಯದಲ್ಲಿ ಇದು ಉಲ್ಟಾ. ಹೆಣ್ಣು ಸರ್ಪಗಳ ಸಾಮಾನ್ಯ ಗಾತ್ರಕ್ಕಿಂತ ಗಂಡು ಕಾಳಿಂಗ ಸರ್ಪಗಳು 6 ಅಡಿಯಷ್ಟು ಹೆಚ್ಚಿನ ಉದ್ದವಿರುತ್ತವೆ.

10. ಲಾಂಗ್ ಲೈಫ್

ವನ್ಯಜಗತ್ತಿನ ಎಲ್ಲ ಅಪಾಯಗಳನ್ನು ಮೀರಿ, ತಮ್ಮ ಪರಿಣಾಮಕಾರಿ ಬೇಟೆಯಿಂದಾಗಿ ಹಾಗೂ ತಮ್ಮನ್ನು ಬೇಟೆಯಾಡುವ ಜೀವಿಗಳು ಅತಿ ಕಡಿಮೆ ಸಂಖ್ಯೆಯಲ್ಲಿ ಇರುವುದರಿಂದ ಕಾಡಿನಲ್ಲಿ ಅವು ಸರಾರಿ 20 ವರ್ಷ ಬದುಕುತ್ತವೆ. ಕಾಡಿನ ಒತ್ತಡಗಳಿಲ್ಲದಿದ್ದಾಗ ಅವುಗಳ ಆಯಸ್ಸು ಇನ್ನೂ ಹೆಚ್ಚಿರುತ್ತದೆ. 

11. ಕಿವುಡು

ಅಂದ ಹಾಗೆ ಪುಂಗಿಯ ನಾದಕ್ಕೆ ಹಾವು ತಲೆಯಾಡಿಸುವುದಿಲ್ಲ. ಏಕೆಂದರೆ ಈ ಸರ್ಪಗಳಿಗೆ ಕಿವಿಯೇ ಕೇಳಿಸುವುದಿಲ್ಲ. ಅವು ನಿಜವಾಗಿ ತಲೆಯಾಡಿಸುವುದು ಪುಂಗಿಯ ಹೊರಳಾಡುವಿಕೆಗೆ.