ಮಹಾಭಾರತದ ಶ್ರೇಷ್ಠ ಯೋಧ ಕರ್ಣನನ್ನು ಕೊಂದದ್ದು ಅರ್ಜುನ ಮಾತ್ರವಲ್ಲ! ಅವನ ಮೇಲೆ ಮೂರು ಶಾಪಗಳಿದ್ದವು. ಈ ಶಾಪಗಳು ಅವನ ದುರಂತ ಅಂತ್ಯಕ್ಕೆ ಕಾರಣವಾದವು. 

ಮಹಾಭಾರತದ ಅಪ್ರತಿಮ ನಾಯಕ ಕರ್ಣನನ್ನು ಅವನ ಅಪ್ರತಿಮ ಶೌರ್ಯಕ್ಕಾಗಿ ಮಾತ್ರವಲ್ಲದೆ ಅವನ ದುರದೃಷ್ಟಕ್ಕಾಗಿಯೂ ಸ್ಮರಿಸಲಾಗುತ್ತದೆ. ಅವನು ಸೂರ್ಯದೇವ ಮತ್ತು ಕುಂತಿಯ ಮಗನಾಗಿದ್ದರೂ ಹುಟ್ಟಿನಿಂದಲೇ ಪರಿತ್ಯಕ್ತನಾದನು. ಕರ್ಣನನ್ನು ಸಾರಥಿ ಅಧಿರಥ ಬೆಳೆಸಿದ. ದುರ್ಯೋಧನನ ಮೇಲಿನ ಅವನ ನಿಷ್ಠೆ, ಶ್ರದ್ಧೆ, ಅವನಿಗಾಗಿ ಜೀವಿತಾವಧಿ ಪೂರ್ತಿ ಮಾಡಿದ ಹೋರಾಟ ಕರ್ಣನನ್ನು ಈ ಮಹಾಕಾವ್ಯದ ಅತ್ಯಂತ ಗಾಢ ಪಾತ್ರಗಳಲ್ಲಿ ಒಬ್ಬನನ್ನಾಗಿ ಮಾಡಿದೆ. ಅವನು ಪರಾಕ್ರಮಿ ಯೋಧನಾಗಿದ್ದ. ಆದರೆ ಕರ್ಣ ಭವಿಷ್ಯದಲ್ಲಿ ದುರಂತವನ್ನು ಕಾಣಬೇಕೆಂದೇ ವಿಧಿ ಹೊಂಚು ಹಾಕಿತ್ತು. ಅಂತಿಮವಾಗಿ ಕರ್ಣನ ಸಾವಿಗೆ ಕಾರಣವಾದದ್ದು ಅರ್ಜುನನ ಬಾಣ ಅಥವಾ ಕೃಷ್ಣನ ತಂತ್ರ ಮಾತ್ರವಲ್ಲ. ಅವನ ಜೀವನದ ವಿವಿಧ ಹಂತಗಳಲ್ಲಿ ಅವನಿಗೆ ಎರಗಿದ ಮೂರು ಪ್ರಬಲ ಶಾಪಗಳು. ಈ ಶಾಪಗಳು ಕುರುಕ್ಷೇತ್ರ ಯುದ್ಧದಲ್ಲಿ ಅವನ ಸೋಲಿಗೆ ಅಡಿಪಾಯವನ್ನು ಹಾಕಿದವು.

ಮೊದಲ ಶಾಪ: ಬ್ರಾಹ್ಮಣ

ಒಂದು ದಿನ, ಕರ್ಣನು ಬಿಲ್ಲುಗಾರಿಕೆಯನ್ನು ಅಭ್ಯಾಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬ್ರಾಹ್ಮಣನೊಬ್ಬನ ಹಸುವನ್ನು ಬಾಣದಿಂದ ಹೊಡೆದು ಕೊಂದ. ಆ ಹಸು ಕಾಡಿನಲ್ಲಿ ಮೇಯುತ್ತಿತ್ತು. ಕರ್ಣ ಅದನ್ನು ಕಾಡು ಪ್ರಾಣಿ ಎಂದು ತಪ್ಪಾಗಿ ಭಾವಿಸಿ ಹೊಡೆದ. ಇದರಿಂದ ಕೋಪಗೊಂಡ ಬ್ರಾಹ್ಮಣ, ಕರ್ಣನನ್ನು ಶಪಿಸಿದ. ʼನನ್ನ ಹಸು ಅಸಹಾಯಕವಾಗಿ ಸತ್ತಂತೆ, ನೀನೂ ಸಹ ರಕ್ಷಣೆಯಿಲ್ಲದ ಸ್ಥಿತಿಯಲ್ಲಿ ಸಾಯುವಂತಾಗಲಿ. ನಿನ್ನ ರಥದ ಚಕ್ರ ಭೂಮಿಯಲ್ಲಿ ಸಿಕ್ಕಿಹಾಕಿಕೊಂಡು ಕೈಯಲ್ಲಿ ಯಾವುದೇ ಆಯುಧವಿಲ್ಲದೆ ಇದ್ದಾಗ ಸಾಯಿʼ ಎಂದು ಶಪಿಸಿದ. ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಕರ್ಣನ ರಥದ ಚಕ್ರ ಭೂಮಿಗೆ ಇಳಿದಾಗ ಬ್ರಾಹ್ಮಣನ ಈ ಶಾಪ ನಿಜವಾಯಿತು. ನಿರಾಯುಧ ಮತ್ತು ದುರ್ಬಲನಾಗಿ ಅದನ್ನು ಎತ್ತಲು ಹೆಣಗಾಡುತ್ತಿರುವಾಗ, ಅರ್ಜುನನು ಮಾರಕ ಬಾಣವನ್ನು ಪ್ರಯೋಗಿಸಿ ಅವನನ್ನು ಕೊಂದ.

ಎರಡನೇ ಶಾಪ: ಪರಶುರಾಮ

ಕರ್ಣ ಅತ್ಯಂತ ಧೈರ್ಯಶಾಲಿಯಾಗಿದ್ದ. ಶ್ರೇಷ್ಠ ಯೋಧನಾಗುವ ದೃಢನಿಶ್ಚಯ ಹೊಂದಿದ್ದ. ಅದಕ್ಕಾಗಿ ಪರಶುರಾಮನಲ್ಲಿಗೆ ಬಿಲ್ವಿದ್ಯೆ ಕಲಿಯಲು ತೆರಳಿದ. ಪರಶುರಾಮರು ಕ್ಷತ್ರಿಯರನ್ನು ದ್ವೇಷಿಸುತ್ತಿದ್ದರು, ಅವರಿಗೆ ಕಲಿಸುತ್ತಿರಲಿಲ್ಲ. ತಾನು ಕ್ಷತ್ರಿಯನಲ್ಲʼ ಎಂದು ಕರ್ಣ ನಿಜವನ್ನೇ ಹೇಳಿದ. ಯಾಕೆಂದರೆ ಕರ್ಣನಿಗೆ ತನ್ನ ಜನ್ಮದ ಬಗ್ಗೆ ಗೊತ್ತಿರಲಿಲ್ಲ. ತಾನು ಬ್ರಾಹ್ಮಣನೆಂದು ಹೇಳಿದ. ಆದರೆ ಅವನು ಬ್ರಾಹ್ಮಣನಾಗಿರಲಿಲ್ಲ. ಒಂದು ದಿನ ಪರಶುರಾಮನು ಕರ್ಣನ ತೊಡೆಯ ಮೇಲೆ ತಲೆ ಇಟ್ಟು ಮಲಗಿದ್ದಾಗ, ಒಂದು ಕೀಟ ಕರ್ಣನ ತೊಡೆಯನ್ನು ಕಚ್ಚಿತು. ತೀವ್ರವಾದ ನೋವಿನ ಹೊರತಾಗಿಯೂ, ಕರ್ಣನು ಮೌನವಾಗಿದ್ದ. ಪರಶುರಾಮನು ಎಚ್ಚರಗೊಂಡು ಗಾಯವನ್ನು ಗಮನಿಸಿದ. ಇಂಥ ಸಹಿಷ್ಣುತೆ ಕ್ಷತ್ರಿಯನಿಗೆ ಮಾತ್ರ ಸಾಧ್ಯ ಎಂದು ತಿಳಿದಿದ್ದ ಅವನು, ಬ್ರಾಹ್ಮಣನೆಂದು ಸುಳ್ಳು ಹೇಳಿದ್ದಕ್ಕಾಗಿ, ತಾನು ಕಲಿಸಿದ ಎಲ್ಲಾ ಅಸ್ತ್ರಗಳು ಮತ್ತು ದೈವಿಕ ಮಂತ್ರಗಳು ನಿನಗೆ ಅತ್ಯಂತ ಅಗತ್ಯವಿರುವ ಕ್ಷಣದಲ್ಲಿ ಮರೆತುಹೋಗಲಿ ಎಂದು ಶಪಿಸಿದ.

ಮಾನವನ ದೇಹ ಮತ್ತು ದೇವಾಲಯ ವಿನ್ಯಾಸದ ರಹಸ್ಯ!

ಮೂರನೇ ಶಾಪ: ಭೂದೇವಿ

ಒಂದು ದಿನ ಕರ್ಣ ಬೀದಿಯಲ್ಲಿ ಹೋಗುತ್ತಿದ್ದಾಗ, ಮಹಿಳೆಯೊಬ್ಬಳು ಹೊತ್ತೊಯ್ಯುತ್ತಿದ್ದ ತುಪ್ಪದ ಗಡಿಗೆ ನೆಲಕ್ಕೆ ಆಕಸ್ಮಿಕವಾಗಿ ಬಿದ್ದು ಒಡೆದು ತುಪ್ಪವೆಲ್ಲ ಭೂಮಿಯ ಪಾಲಾಯಿತು. ಇದರಿಂದ ಗಂಡನ ಮನೆಯಲ್ಲಿ ತಾನು ದಂಡನೆಗೆ ಒಳಗಾಗುತ್ತೇನೆ ಎಂದು ಆತಂಕದಲ್ಲಿ ಮಹಿಳೆ ಅಳತೊಡಗಿದಳು. ಇದನ್ನು ಕಂಡ ಕರ್ಣ ಪ್ರಬಲವಾದ ಒಂದು ಮಂತ್ರಾಸ್ತ್ರವನ್ನು ಪ್ರಯೋಗಿಸಿ ನೆಲದಿಂದ ತುಪ್ಪವನ್ನು ಹಿಂಡಿ ತೆಗೆದು ಆಕೆಗೆ ಕೊಟ್ಟ. ಇದರಿಂದ ಕೋಪಗೊಂಡ ಭೂದೇವಿ, ಸರಿಯಾದ ಕಾಲದಲ್ಲಿ ನಿನ್ನನ್ನು ಹಿಂಡುವುದಾಗಿ ಶಪಿಸಿದಳು. ಕುರುಕ್ಷೇತ್ರ ಯುದ್ಧದ ಅಂತಿಮ ಹಂತದಲ್ಲಿ, ಅವನು ಅರ್ಜುನನೊಂದಿಗೆ ಹೋರಾಡುತ್ತಿದ್ದಾಗ, ಅವನ ರಥದ ಚಕ್ರ ನೆಲದಲ್ಲಿ ಸಿಲುಕಿಕೊಂಡಿತು. ಅವನ ಪ್ರಯತ್ನಗಳ ಹೊರತಾಗಿಯೂ ಅದನ್ನು ಎತ್ತಲು ಅವನಿಗೆ ಸಾಧ್ಯವಾಗಲಿಲ್ಲ.

ಮಹಾಭಾರತದಲ್ಲಿ ಕರ್ಣನ ಶೌರ್ಯ, ನಿಷ್ಠೆ, ಸತ್ಯಪರತೆ, ಅಪಾರ ಶಕ್ತಿ ಮತ್ತು ಕೌಶಲ್ಯಗಳ ಹೊರತಾಗಿಯೂ, ಈ ಮೂರು ಶಕ್ತಿಶಾಲಿ ಶಾಪಗಳು ಅವನ ಅವನತಿಗೆ ಕಾರಣವಾದವು. ಕರ್ಣನ ಅಂತ್ಯವು ಕೇವಲ ಯುದ್ಧದ ಪರಿಣಾಮವಲ್ಲ, ಬದಲಾಗಿ ವಿಧಿಯಿಂದಲೇ ಆಗಿತ್ತು. ಅವನ ಆಯ್ಕೆಗಳು, ಕರ್ಮ ಮತ್ತು ಅವನು ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳು ಅವನ ಸೋಲನ್ನು ನಿರ್ಧರಿಸಿದವು.

ಬ್ರಹ್ಮ ಕಮಲ: ದೇವರ ಪ್ರಿಯ ಹೂವಿನ ಹಿಂದೆ ಇರುವ ನಿಗೂಢ ಕಥೆ