ಮುಂದಿನ ಸಲ ದೇವಾಲಯಕ್ಕೆ ಹೋದಾಗ ಸರಿಯಾಗಿ ಗಮನಿಸಿ ನೋಡಿ. ದೇವಾಲಯಕ್ಕೂ ನಿಮ್ಮ ದೇಹದ ವಿನ್ಯಾಸಕ್ಕೂ ಇರುವ ಹೋಲಿಕೆಯನ್ನು ಕಂಡು ನಿಮಗೆ ಅಚ್ಚರಿ ಆಗದೇ ಇರದು! ಅದೇಕೆ ಹಾಗೆ? 

ನೀವು ಮುಂದಿನ ಸಲ ದೊಡ್ಡ ದೇವಾಲಯಗಳಿಗೆ ಹೋದಾಗ ಗಮನಿಸಿ ನೋಡಿ- ಅಲ್ಲಿಂದ ಮಹಾದ್ವಾರದಿಂದ ಹಿಡಿದು ಗರ್ಭಗುಡಿಯವರೆಗೆ, ಎಲ್ಲವೂ ಮನುಷ್ಯನ ದೇಹದ ಆಕಾರದಲ್ಲಿಯೇ ವಿನ್ಯಾಸ ಮಾಡಿರುವುದನ್ನು ನೀವು ಕಾಣಬಹುದು. "ದೇಹೋ ದೇವಾಲಯಃ ಪ್ರೋಕ್ತಃ" ಎಂಬುದು ಸಂಸ್ಕೃತದ ಒಂದು ಶ್ಲೋಕ. ಇದರ ಅರ್ಥ "ದೇಹವನ್ನು ದೇವಾಲಯವೆಂದು ಹೇಳಲಾಗಿದೆ.ʼʼ ದೇಹವೇ ದೇವಾಲಯ ಎಂದರೆ ದೇಹವು ದೇವಾಲಯದಂತೆಯೇ ಪವಿತ್ರ ಮತ್ತು ಪೂಜ್ಯವಾಗಿದೆ ಎಂದರ್ಥ. ಯಾಕೆಂದರೆ ದೇಹದ ಒಳಗೆ ಪರಮಾತ್ಮನೇ ಆತ್ಮನ ರೂಪದಲ್ಲಿ ಇರುವನು. ಉಪನಿಷತ್ತುಗಳಲ್ಲಿ ಹೇಳಿರುವಂತೆ, ಮಾನವ ದೇಹವು ಭಗವಂತ ನೆಲೆಸುವ ದೇವಾಲಯದಂತೆಯೇ ಇದೆ. ಅಥವಾ, ದೇವಾಲಯ ಆವರಣ ಕೂಡ ದೇಹದಂತೆಯೇ ರಚಿಸಲ್ಪಡುತ್ತದೆ. ದೇಹದ ಪ್ರತಿಯೊಂದು ಅಂಗವೂ ದೈವಿಕ ಶಕ್ತಿಯಿಂದ ಕೂಡಿದೆ ಮತ್ತು ಅದನ್ನು ಗೌರವಿಸಬೇಕು ಎಂಬುದು ಇದರ ಅರ್ಥ.

ಹಾಗಾದರೆ ದೇವಾಲಯದ ವಿನ್ಯಾಸ ದೇಹದಂತೆ ಇರುವುದು ಹೇಗೆ ಎಂಬ ಸ್ವಾರಸ್ಯಕರ ವಿಚಾರವನ್ನು ಈಗ ನೋಡೋಣ. ಈ ದೇಹವನ್ನು ಗಮನಿಸಿದ ಯೋಗಿಗಳು ಇದರಲ್ಲಿ ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧಿ, ಆಜ್ಞಾ, ಸಹಸ್ರಾರವೆಂಬುದಾಗಿ ಏಳು ಚಕ್ರಗಳು ಅಥವಾ ಕೇಂದ್ರಗಳನ್ನು ಗುರುತಿಸಿದ್ದಾರೆ. ಈ ಏಳು ಕೇಂದ್ರಗಳು ಏಳು ದ್ವಾರಗಳಂತೆ ಇದ್ದು ಒಳಗೆ ಬೆಳಗುವ ಪರಮಾತ್ಮನ ದರ್ಶನಕ್ಕೆ ದಾರಿ ಮಾಡಿ ಕೊಡುತ್ತವೆ. ಈ ಏಳು ಕೇಂದ್ರಗಳಲ್ಲಿ ಮೂರು ಕೇಂದ್ರಗಳು ಅತ್ಯಂತ ಮುಖ್ಯವಾದವು. ಅವುಗಳಲ್ಲಿ ಒಂದು ಅತ್ಯಂತ ಪ್ರಧಾನವಾದದ್ದು. ಈ ಅಂತರಂಗದ ವ್ಯವಸ್ಥೆಯನ್ನು ಪ್ರತಿನಿಧಿಸಿ ದೇವಾಲಯದಲ್ಲಿಯೂ ಏಳು ದ್ವಾರ, ಮೂರು ದ್ವಾರ, ಒಂದು ದ್ವಾರ ಎಂಬ ವ್ಯವಸ್ಥೆಯನ್ನು ಅಳವಡಿಸಿದರು.

ಪುರುಷನು ತನ್ನ ಕೈಗಳನ್ನು ಹಟ್ಟೆಯ ಮೇಲಿಟ್ಟುಕೊಂಡು ಮೇಲ್ಮುಖವಾಗಿ ಮಲಗಿರುವಂತೆ ಕಲ್ಪಿಸಿಕೊಳ್ಳಿ. ಈಗ ದೇವಾಲಯದ ಗರ್ಭಗುಡಿಯ ಮೇಲೆ ಏರುವ ಮುಖ್ಯ ಗೋಪುರವಾದ ವಿಮಾನವು ವ್ಯಕ್ತಿಯ ತಲೆಯನ್ನು ಸಂಕೇತಿಸುತ್ತದೆ. ಇದು ದೈವಿಕ ಉಪಸ್ಥಿತಿಯನ್ನು ಪ್ರತಿನಿಧಿಸುತ್ತದೆ ಮತ್ತು ದೇವಾಲಯದ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸುತ್ತದೆ. ತಲೆಯು ಆಲೋಚನೆ ಮತ್ತು ಬುದ್ಧಿಶಕ್ತಿಯನ್ನು ನಿಯಂತ್ರಿಸುವಂತೆಯೇ, ವಿಮಾನವು ಅತ್ಯುನ್ನತ ಆಧ್ಯಾತ್ಮಿಕ ಸಾರವನ್ನು ಸಾಕಾರಗೊಳಿಸುತ್ತದೆ. ಶಕ್ತಿಯನ್ನು ಸ್ವರ್ಗದಿಂದ ದೇವಾಲಯಕ್ಕೆ ಮತ್ತು ಭಕ್ತನ ಮನಸ್ಸು ಮತ್ತು ಆತ್ಮಕ್ಕೆ ಹರಿಸುತ್ತದೆ.

ತಲೆಯಿಂದ ಕೆಳಗೆ ಚಲಿಸಿದರೆ ಮಹಲ್ ಮಂಟಪ ಅಥವಾ ಮಹಾ ಸಭಾಂಗಣ. ಇದು ಮಾನವ ದೇಹದ ಎದೆಯ ಭಾಗಕ್ಕೆ ಅನುರೂಪವಾಗಿದೆ. ಈ ಪ್ರದೇಶವು ಹೃದಯ ಮತ್ತು ಶ್ವಾಸಕೋಶಗಳ ಸಂಕೇತವಾಗಿದೆ. ಅಲ್ಲಿ ಪ್ರಮುಖ ಶಕ್ತಿ ಮತ್ತು ಆಧ್ಯಾತ್ಮಿಕ ಸಾರವು ಸಂಗಮಿಸುತ್ತದೆ. ಮಂಟಪವು ಭಕ್ತರು ಸಾಮೂಹಿಕ ಶಕ್ತಿ ಮತ್ತು ಭಕ್ತಿಯನ್ನು ಅನುಭವಿಸಲು ಒಟ್ಟುಗೂಡುವ ಸಭೆಗೆ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. ಇದು ದೈಹಿಕ ಮತ್ತು ಆಧ್ಯಾತ್ಮಿಕ ಪೋಷಣೆಯ ಸ್ಥಳ. ಅಲ್ಲಿ ದೇವಾಲಯದ ಹೃದಯವು ಜೀವನ ಮತ್ತು ಚೈತನ್ಯದ ಹರಿವಿನೊಂದಿಗೆ ಮಿಡಿಯುತ್ತದೆ, ಎದೆಯ ಪ್ರದೇಶವು ಮಾನವ ದೇಹದಲ್ಲಿ ರಕ್ತ ಮತ್ತು ಗಾಳಿಯ ಪರಿಚಲನೆಗೆ ಕೇಂದ್ರವಾಗಿರುವಂತೆಯೇ.

ಬೆನ್ನುಮೂಳೆಯ ಪ್ರತಿನಿಧಿಯಾಗಿ ಒಂದು ಧ್ವಜಸ್ತಂಭ. ದೇವನ ಸನ್ನಿಧಿಯಲ್ಲಿ ಉಂಟಾಗುವ ಊರ್ಧ್ವಮುಖತೆಯ ಪ್ರತೀಕವಾಗಿ ಶಿಖರದಲ್ಲಿ ಒಂದು, ಮೂರು, ಐದು, ಏಳು ಕಲಶಗಳ ವ್ಯವಸ್ಥೆ. ದೇವಾಲಯದ ಸುತ್ತಲೂ ಭಿತ್ತಿಯಲ್ಲಿ ಕ್ರಮವಾಗಿ ಭೌತಿಕ, ದೈವಿಕ, ಆಧ್ಯಾತ್ಮಿಕವಾದ ಕೆತ್ತನೆಗಳಿರುತ್ತವೆ. ಅಂತರಂಗದಲ್ಲಿ ನಡೆಯುವ ಸದ್ಭಕ್ತಿಗಳ ಸಂಘರ್ಷ ಹಾಗೂ ಸತ್ ಶಕ್ತಿಗಳ ವಿಜಯದ ಕಥೆಗಳ ಕೆತ್ತನೆ. ಅರವತ್ನಾಲ್ಕು ವಿದ್ಯೆಗಳ ವಿವಿಧ ಕುರುಹುಗಳು ಇವೆಲ್ಲವೂ ಮಾನವ ದೇಹದ ಒಳ ರಚನೆಗೆ ಹೊಂದಿರುವಂತಹವುಗಳು.

ಸ್ತಂಭಗಳ ಸಂಖ್ಯೆ ಇಪ್ಪತ್ನಾಲ್ಕು, ಮೂವತ್ತಾರು, ಅರವತ್ನಾಲ್ಕು, ತೊಂಬತ್ತಾರು, ನೂರೆಂಟು, ಸಾವಿರದೆಂಟು ಹೀಗೆ ಸೃಷ್ಟಿ ವಿಕಾಸದಲ್ಲಿರುವ ತತ್ತ್ವಗಳ ಪ್ರತಿನಿಧಿಯಾಗಿ ಬಂದಿದೆ. ಪಾದಗಳೇ ಮುಖದ್ವಾರ. ಮಲಗಿದಾಗ ಪಾದಗಳು ಎತ್ತರವಾಗಿ ಕಾಣಿಸುವಂತೆ ಮುಖದ್ವಾರ ಗೋಪುರ ಎತ್ತರವಾಗಿರುತ್ತದೆ. ನಿಮಿರಿದ ಸ್ಥಿತಿಯಲ್ಲಿ ಜನನೇಂದ್ರಿಯ ಹೇಗಿರುತ್ತದೋ ಹಾಗೆ ಧ್ವಜಸ್ತಂಭ ಇರುತ್ತದೆ. ಹೊಟ್ಟೆಯೇ ಬಲಿಪೀಠ, ಹೃದಯವು ನವರಂಗ, ಕೊರಳು ಸುಕನಾಸಿ, ಶಿರಸ್ಸು ಗರ್ಭಗೃಹ, ಭ್ರೂಮಧ್ಯದ ಆಜ್ಞಾಚಕ್ರ ಸ್ಥಾನವೇ ಮೂಲ ಪೀಠ. ಇನ್ನು ಲಂಬರೂಪದಲ್ಲಿ ಕಂಡಾಗ ಪಾದಗಳೇ ನಿಧಿಕುಂಭ, ನಾಳವೇ ಮೊಳಕಾಲು, ಬುನಾದಿಯೇ ತೊಡೆಗಳು, ಕಟಿ-ಉದರಗಳೇ ಗೋಡೆಗಳು. ಭುಜವೇ ವಲಭಿ, ಕರಗಳು ಪ್ರಾಕಾರ, ನಾಲಿಗೆ ಘಂಟೆ, ಹೃದಯವೇ ದೇವಮೂರ್ತಿ, ಕೊರಳೇ ವಿಮಾನ, ಶಿರಸ್ಸೇ ಶಿಖರ, ಬ್ರಹ್ಮರಂಧ್ರವೇ ಕಲಶ.

ಬ್ರಹ್ಮ ಕಮಲ: ದೇವರ ಪ್ರಿಯ ಹೂವಿನ ಹಿಂದೆ ಇರುವ ನಿಗೂಢ ಕಥೆ

ಇನ್ನು ಕೋಶಗಳ ದೃಷ್ಟಿಯಿಂದ, ಹೊರಗಿನ ಪ್ರಾಕಾರ ಅನ್ನಮಯ, ಒಳಗಿನ ಪ್ರದಕ್ಷಿಣ ಪಥವು ಪ್ರಾಣಮಯ, ನವರಂಗ ಪರಿಧಿಯು ಮನೋಮಯ, ಅಂತಃಪ್ರದಕ್ಷಿಣ ಪಥವು ವಿಜ್ಞಾನಮಯ ಮತ್ತು ಗರ್ಭಗೃಹವು ಆನಂದಮಯ ಕೋಶಗಳು. ಈ ಕೋಶಗಳು ಮಾನವ ಶರೀರದಲ್ಲೂ ಇವೆ.

ಹೀಗೆ ದೇವಾಲಯವೆಂದರೆ ಕರೀ ಕಟ್ಟಡವಲ್ಲ. ಅದು ಸನಾತನ ಭಾರತದ ವಿಜ್ಞಾನಿಗಳಾದ ಋಷಿಗಳ ತಪಸ್ಸಿನ ಫಲಶ್ರುತಿ. ದೇಹವ ತೀರ್ಥಕ್ಷೇತ್ರ ಎಂಬ ಸನಾತನ ಧರ್ಮದ ಅನಾದಿ ಕಲ್ಪನೆಯನ್ನು ಸಾಕಾರರೂಪಗೊಳಿಸಲು ಹಿರಿಯರು ಅದನ್ನು ರೂಪಿಸಿದರು. ಜೀವನನ್ನು ದೇವನನ್ನಾಗಿಸುವ ಮಹೋನ್ನತ ಸಂಕಲ್ಪವನ್ನು ದೇವಾಲಯವು ಹೊಂದಿರುತ್ತದೆ. ದೇಹವೇ ದೇವರ ನೆಲೆ ಎಂಬುದನ್ನು ನಮಗೆ ಮನದಟ್ಟು ಮಾಡಿಕೊಡುತ್ತದೆ.

ಬಾಬಾ ವಂಗಾ ಭವಿಷ್ಯವಾಣಿ 2025: ಸಂಪತ್ತು, ಶಾಂತಿ, ಯಶಸ್ಸು ಈ 4 ರಾಶಿಗೆ