ಭಾರತದಲ್ಲಿ ನೂರು ಹೆಜ್ಜೆಗೊಂದು ದೇವಾಲಯ ಎದುರಾಗುತ್ತದೆ. ಅವು ಕೇವಲ ಪೂಜಾತಾಣಗಳಲ್ಲ, ಕಲೆ, ಇತಿಹಾಸ, ಸಂಸ್ಕೃತಿ ಸಾರುವ ಹಾಗೂ ದಾನ ಕಾರ್ಯಗಳಿಂದ ಸಮೃದ್ಧಗೊಂಡ ನೆಲೆವೀಡುಗಳು. ಜನರ ಧಾರ್ಮಿಕ ನಂಬಿಕೆಗಳನ್ನು ಉಳಿಸಿಬೆಳೆಸುವ ಜೊತೆಗೆ, ದೇವಾಲಯದ ಸುತ್ತಲಿನ ಸಮುದಾಯಗಳಿಗೆ ಆರ್ಥಿಕ ಮೂಲವೂ ಆಗಿರುತ್ತವೆ. ಇಂಥ ಈ ಒಂದೊಂದು ದೇಗುಲಗಳಲ್ಲೂ ಕೆದಕಿದರೆ ಹಲವಾರು ವಿಶೇಷ ಸಂಗತಿಗಳು ಕಾಣಸಿಗುತ್ತವೆ. ಅವುಗಳಲ್ಲಿ ಈ ಶ್ರದ್ಧಾಕೇಂದ್ರಗಳಲ್ಲಿ ವಿತರಿಸುವ ಪ್ರಸಾದವೂ ಒಂದು. ಪ್ರತಿ ದೇವಾಲಯವೂ ದೇವರಿಗಾಗಿ ಪ್ರಸಾದ ನೈವೇದ್ಯ ಮಾಡುತ್ತದೆ. ಅದರಲ್ಲೂ ಕೆಲ ದೇವಾಲಯಗಳ ಪ್ರಸಾದ ಬಹಳ ವಿಶಿಷ್ಠ. ಅವುಗಳ ವೈಶಿಷ್ಠ್ಯತೆಯ ಹಿಂದೆ ಕತೆಗಳೂ, ಕಾರಣಗಳೂ ಇರುತ್ತವೆ. ಅಂಥ ಕೆಲವು ವಿಶೇಷ ಪ್ರಸಾದಗಳನ್ನು ನೀಡುವ ದೇಗುಲಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ತಿರುಪತಿ ವೆಂಕಟೇಶ್ವರ ದೇವಾಲಯ

ತಿರುಪತಿಯ ತಿಮ್ಮಪ್ಪನಿಗೆ ನೈವೇದ್ಯವಾಗಿ ನೀಡುವ ಶ್ರೀವಾರಿ ಲಡ್ಡು ಜಗದ್ವಿಖ್ಯಾತ. 1715ರ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಉತ್ತಮ ಐಶ್ವರ್ಯ ಹಾಗೂ ಅದೃಷ್ಟದ ಪ್ರತೀಕವಾಗಿ ಲಡ್ಡುವನ್ನು ಪ್ರಸಾದ ನೀಡುವ ಪದ್ಧತಿ ಆರಂಭವಾಯಿತು. 'ಪೋಟು' ಎಂಬ ವಿಶೇಷ ಅಡುಗೆಮನೆಯಲ್ಲಿ ಮೈದಾಹಿಟ್ಟು, ಗೋಡಂಬಿ, ಏಲಕ್ಕಿ, ತುಪ್ಪ, ದ್ರಾಕ್ಷಿ ಹಾಗೂ ಸಕ್ಕರೆ ಬಳಸಿ ಈ ಲಡ್ಡು ತಯಾರಿಸಲಾಗುತ್ತದೆ. ಲಡ್ಡು ತಯಾರಿಸುವ ವಿಶೇಷ ಅರ್ಚಕರನ್ನು 'ಅಚಕ' ಎನ್ನಲಾಗುತ್ತದೆ. 

ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡುವುದೇಕೆ?

ಶ್ರೀನಾಥ್‌ಜಿ ದೇಗುಲ, ರಾಜಸ್ಥಾನ

ರಾಜಸ್ಥಾನದ ನಾಥ್‌ದ್ವಾರಾದಲ್ಲಿರುವ ಈ ದೇಗುಲದಲ್ಲಿ ಮತಾಡಿ ಎಂಬ ವಿಶೇಷ ಪ್ರಸಾದವನ್ನು ಶ್ರೀನಾಥ ದೇವರಿಗಾಗಿ ತಯಾರಿಸಲಾಗುತ್ತದೆ. ಪೇಸ್ಟ್ರಿಯನ್ನು ಡೀಪ್ ಫ್ರೈ ಮಾಡಿ, ಸಕ್ಕರೆ ಪಾಕದಲ್ಲಿ ಅದ್ದಿದಂತೆ ಈ ಮತಾಡಿಯ ರುಚಿ. ಸಿಹಿ ತಿನ್ನದವರಿಗಾಗಿ ಥಾರ್ ಎಂಬ ಮತ್ತೊಂದು ಪ್ರಸಾದ ನೀಡಲಾಗುತ್ತದೆ. 

ವೈಷ್ಣೋದೇವಿ, ಕಾತ್ರಾ

ಕಾತ್ರಾದ ಈ ಪ್ರಖ್ಯಾತ ದೇವಾಲಯದಲ್ಲಿ ಮಂಡಕ್ಕಿ, ಸಕ್ಕರೆ ಉಂಡೆಗಳು, ಒಣ ಸೇಬು ಹಾಗೂ ಕಾಯಿಯನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ಇನ್ನೂ ವಿಶೇಷ ಎಂದರೆ, ಪ್ರಸಾದದೊಂದಿಗೆ ಪುಟ್ಟ ಬೆಳ್ಳಿಯ ನಾಣ್ಯವನ್ನು ದೇವಾಲಯದ ಆಡಳಿತ ಮಂಡಳಿ ವಿತರಿಸುತ್ತದೆ. ಅಲ್ಲದೆ, ಈ ಪ್ರಸಾದವನ್ನು ಸೆಣಬಿನ ಚೀಲಗಳಲ್ಲಿ ಹಾಕಿಕೊಡುವ ಮೂಲಕ ದೇವಾಲಯ ಪರಿಸರಸ್ನೇಹಿ ವರ್ತನೆಯನ್ನೂ ಅಳವಡಿಸಿಕೊಂಡಿದೆ. ಈ ಪ್ರಸಾದದ ಒಟ್ಟಾರೆ ಪ್ಯಾಕೆಟ್ಟನ್ನು ಭೈಂಟ್ಸ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಶಕ್ತಿಪೀಠಗಳಲ್ಲಿ ದೇವರಿಗೆ ಪ್ರಾಣಿಬಲಿ ಕೊಡುವ ಸಂಪ್ರದಾಯವಿರುತ್ತದೆ. ಆದರೆ, ವೈಷ್ಣೋದೇವಿಯಲ್ಲಿ ಪೂರ್ತಿ ಸಸ್ಯಾಹಾರ ಹಾಗೂ ಸಾತ್ವಿಕ ಆಹಾರಗಳನ್ನು ಮಾತ್ರ ದೇವರ ನೈವೇದ್ಯ ಮಾಡಲಾಗುತ್ತದೆ. 

ಜಗನ್ನಾಥ ದೇಗುಲ, ಪುರಿ

ಈ ಪ್ರಸಿದ್ಧ ಜಗನ್ನಾಥ ದೇವಾಲಯದ ಮಹಾಪ್ರಸಾದ ಅನ್ನ. ಮಹಾಪ್ರಸಾದವನ್ನು ಅನ್ನಬ್ರಹ್ಮ ಎಂದು ಕರೆದು ಗೌರವಿಸಲಾಗುತ್ತದೆ. ಇಲ್ಲಿನ ಅಡುಗೆಕೋಣೆಯಲ್ಲಿ ದೊಡ್ಡ ದೊಡ್ಡ ಮಡಕೆಗಳಲ್ಲಿ ಕಟ್ಟಿಗೆಯ ಬೆಂಕಿಯಲ್ಲಿ ಬೇಯಿಸಿ ಅನ್ನ ತಯಾರಿಸಲಾಗುತ್ತದೆ. ಇತಿಹಾಸಕಾರರ ಪ್ರಕಾರ, ಮಡಕೆಗಳಲ್ಲಿ ಅನ್ನವನ್ನು ಜಗನ್ನಾಥನಿಗೆ ನೈವೇದ್ಯ ಮಾಡಲು ತೆಗೆದುಕೊಂಡು ಹೋಗುವಾಗ ಅನ್ನಕ್ಕೆ ಯಾವುದೇ ಪರಿಮಳವಿರುವುದಿಲ್ಲ. ಆದರೆ, ನೈವೇದ್ಯದ ಬಳಿಕ ಅನ್ನವನ್ನು ಆನಂದ್ ಬಜಾರ್‌ಗೆ ತೆಗೆದುಕೊಂಡು ಹೋದಾಗ ಆ ಪರಿಮಳಕ್ಕೆ ಮನಸೋಲದವರೇ ಇಲ್ಲ. ಅನ್ನ ಸುಗಂಧಯುಕ್ತವಾಗಿರುವುದು ದೇವರ ಆಶೀರ್ವಾದಕ್ಕೆ ಸಾಕ್ಷಿ ಎಂದು ನಂಬಲಾಗುತ್ತದೆ. 

ಪುರಿ ಜಗನ್ನಾಥ ದೇವಸ್ಠಾನದಲ್ಲಿ ನಡೆಯೋ ಈ ಪವಾಡಗಳಿಗೆ ಉತ್ತರವೇ ಇಲ್ಲ!

ಪರಸಿನಿಕ್ಕಡವು ದೇವಸ್ಥಾನ, ಕಣ್ಣೂರು

ಕೇರಳದ ಕಣ್ಣೂರಿನಲ್ಲಿರುವ ಈ ಪಾರಂಪರಿಕ ದೇವಾಲಯವು ದೇವರಿಗೆ ನೀಡುವ ವಿಶೇಷ ನೈವೇದ್ಯಕ್ಕಾಗಿಯೇ ವಿಶ್ವಪ್ರಸಿದ್ಧಿ ಪಡೆದಿದೆ. ಇಲ್ಲಿನ ದೇವರು ಮಾಂಸಾಹಾರಿಗಳು ಹಾಗೂ ಮದ್ಯಪ್ರಿಯರ ಪಾಲಿಗೆ ನಿಜಕ್ಕೂ ಬಯಸಿದ್ದನ್ನು ಕರುಣಿಸುವಾತ. ಅಂಥದ್ದೇನಪ್ಪಾ ಪ್ರಸಾದ ಇಲ್ಲಿ ನೀಡುತ್ತಾರೆ ಅಂದ್ರಾ ? ಮೀನು, ನೀರಾ ಹಾಗೂ ಮದ್ಯದ ಬಾಟಲ್‌ಗಳನ್ನೇ ಇಲ್ಲಿ ದೇವರಿಗೆ ನೈವೇದ್ಯ ಮಾಡಿ, ಪೂಜೆಯ ಬಳಿಕ ಭಕ್ತರಿಗೂ ಅದನ್ನೇ ನೀಡಲಾಗುತ್ತದೆ. ಸಸ್ಯಾಹಾರಿಗಳು ಬೇಯಿಸಿದ ಹೆಸರುಕಾಳು ಹಾಗೂ ಕಾಯಿಯ ತುಂಡುಗಳನ್ನು ತಿಂದು ತೃಪ್ತರಾಗಬೇಕು.

ಚೈನೀಸ್ ಕಾಳಿ ಮಂದಿರ, ಕೋಲ್ಕತಾ

ಈ ಕಾಳಿ ಮಂದಿರದಲ್ಲಿ ಹೆಸರೇ ಹೇಳುವ ಹಾಗೆ ನೂಡಲ್ಸ್, ಚಾಪ್ಸಿ, ಅನ್ನ ಹಾಗೂ ತರಿಕಾರಿಯ ಖಾದ್ಯಗಳನ್ನು ದೇವಿಯ ತಲಗಳಿಗೆ ಅರ್ಪಿಸಿ, ಭಕ್ತರಿಗೆ ನೀಡಲಾಗುತ್ತದೆ. ಕೋಲ್ಕತಾದ ಚೈನಾಟೌನ್ ತಾಂಗ್ರಾದಲ್ಲಿರುವ ಈ ದೇವಾಲಯ, ಎರಡು ಸಂಸ್ಕೃತಿಯ ಸಮ್ಮಿಲನದ ಪ್ರತೀಕವಾಗಿದ್ದು, ಭೇಟಿಗೆ ಖಂಡಿತಾ ಅರ್ಹವಾಗಿದೆ. 

ಖಬೀಸ್ ಬಾಬಾ ಟೆಂಪಲ್, ಸಂದನ

ಖಬೀಸ್ ಬಾಬಾ ಮದ್ಯ ಪ್ರಿಯ. ಮದ್ಯದ ಅಮಲಿನಲ್ಲಿ ಬಾಬಾ ಹೇಳಿದ್ದೆಲ್ಲವೂ ನಿಜವಾಗಿದೆ ಎಂಬುದು ಸ್ಥಳೀಯರ ನಂಬಿಕೆ. ಅದಕ್ಕಾಗಿ ಇಲ್ಲಿ ಮಧ್ಯವನ್ನೇ ನೈವೇದ್ಯ ನೀಡಲಾಗುತ್ತದೆ. ಸುಮಾರು 150 ವರ್ಷಗಳ ಹಿಂದೆ ಇಲ್ಲಿ ವಾಸಿಸಿದ್ದ ಖಬೀಸ್ ಎಂಬ ಬಾಬಾ ಸ್ಮರಣಾರ್ಥ ಈ ದೇವಾಲಯ ನಿರ್ಮಿಸಲಾಗಿದೆ. ಸೀತಾಪುರದ ಶಿವನನ್ನೇ ಆರಾಧಿಸುತ್ತಿದ್ದ ಈ ಬಾಬಾ, ಸಂದನಾ ಕಾಡಿನ ಮಧ್ಯೆ ಶಿವಾರಾಧನೆಯಲ್ಲಿ ತೊಡಗಿದ್ದಾಗಲೇ ದೈವಾಧೀನರಾದರು ಎನ್ನಲಾಗುತ್ತದೆ. ಹೀಗಾಗಿ, ಬಾಬಾ ಶಿಷ್ಯರು ಅವರ ಸ್ಮರಣಾರ್ಥ ಇಲ್ಲಿ ದೇವಾಲಯ ಕಟ್ಟಿಸಿದ್ದಾರೆ. 

ಬೈಧ್ಯನಾಥ ದೇಗುಲ, ದಿಯೋಘರ್

ಈ ನಗರಕ್ಕೆ ನಗರವೇ ಶಿವನ ಆರಾಧನೆಯಲ್ಲಿ ತೊಡಗಿದ್ದು, ಬೈಧ್ಯನಾಥ ದೇಗುಲದಲ್ಲಿ ಪ್ರತಿದಿನ ಶಿವಲಿಂಗಕ್ಕೆ ಹಾಲಿನ ಅಭಿಷೇಕ ನಡೆಸಲಾಗುತ್ತದೆ. ಇಲ್ಲಿ ವಿವಿಧ ರೀತಿಯ ಪೇಡಗಳು, ಪರಿಮಳದ ಅವಲಕ್ಕಿ ಹಾಗೂ ಸಕ್ಕರೆ ಉಂಡೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ. 

ಬಂಕೆ ಬಿಹಾರಿ ದೇವಾಲಯ, ವೃಂದಾವನ

ವೃಂದಾವನ ಕೃಷ್ಣನ ಕಾಲದಿಂದಲೂ ಹಾಲಿಗೆ ಪ್ರಸಿದ್ಧ. ಈಗ ಕೂಡಾ ಈ ಪವಿತ್ರ ಕ್ಷೇತ್ರ ಹಾಲು ಹಾಗೂ ಹಾಲಿನ ಉತ್ಪನ್ನಗಳ ಕಣಜ. ಇಲ್ಲಿನ ದೇವಾಲಯದಲ್ಲಿ ಕೃಷ್ಣನಿಗೆ ನೀಡುವ ಮೊದಲ ನೈವೇದ್ಯ ಬಾಲ್ ಬೋಗ್- ಕಚೋರಿ, ಸುಖಿ ಆಲೂ ಕಿ ಸಬ್ಜಿ ಹಾಗೂ ಬೇಸನ್ ಲಡ್ಡು ಒಳಗೊಂಡಿರುತ್ತದೆ. ಇನ್ನು ಇಲ್ಲಿನ ಜನಪ್ರಿಯ ಪ್ರಸಾದವೆಂದರೆ ಪುಟಾಣಿ ಮಡಿಕೆಯಲ್ಲಿ ನೀಡುವ ಬೆಣ್ಣೆ ಹಾಗೂ ಸಕ್ಕರೆಯಚ್ಚು.