ಊಟಕ್ಕೆ ಬೆಳ್ಳಿ ತಟ್ಟೆ ಹಾಗೂ ನೀರು ಕುಡಿಯಲು ಬೆಳ್ಳಿ ಲೋಟ ಬಳಸಿದರೆ ಅದು ಶ್ರೀಮಂತರ ಶೋಕಿ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಹಳೆ ಕಾಲದವರು ಬೆಳ್ಳಿ ಪೂಜಾ ಸಾಮಗ್ರಿಗಳು, ಮಕ್ಕಳಿಗೆ ಊಟ ಹಾಕಲು ಬೆಳ್ಳಿ ಬಟ್ಟಲು, ಮನೆಗೆ ಬಂದವರಿಗೆ ನೀರು ಕುಡಿಯಲು ಬೆಳ್ಳಿ ಲೋಟ.... ಹೀಗೆ ಸಾಧ್ಯವಾದಷ್ಟು ಬೆಳ್ಳಿ ಪಾತ್ರೆಗಳನ್ನೇ ಬಳಸುತ್ತಿದ್ದರು. ಅದನ್ನು ಎಲ್ಲರೂ ಬಳಸಲಿ ಎಂದೇ ಬೆಳ್ಳಿಗೆ ಪವಿತ್ರ ಲೋಹ ಎಂಬ ಹಣೆಪಟ್ಟಿ ಕಟ್ಟಿದರು. ಇದಕ್ಕೆ ಕಾರಣ ಬೆಳ್ಳಿ ದುಬಾರಿ ಎಂಬುದಲ್ಲ. ಬದಲಿಗೆ, ಬೆಳ್ಳಿಯಲ್ಲಿರುವ ಆರೋಗ್ಯವರ್ಧಕ ಅಂಶಗಳು. 

ವಾಸ್ತು ಶಾಸ್ತ್ರದ ಬಗ್ಗೆ ಇರಲಿ ಎಚ್ಚರ

ಬೆಳ್ಳಿಯಲ್ಲಿ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಗುಣವಿದೆ. ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಬೆಳ್ಳಿಯ ಪಾತ್ರೆಗಳಿಗೆ ಇತರ ಲೋಹದ ಪಾತ್ರೆಗಳಿಗೆ ಅಂಟಿಕೊಂಡಷ್ಟು ಸುಲಭವಾಗಿ ಬ್ಯಾಕ್ಟೀರಿಯಾಗಳು ಅಂಟಿಕೊಳ್ಳುವುದಿಲ್ಲ. ಬೆಳ್ಳಿಯ ಪಾತ್ರೆಗಳನ್ನು ಸ್ಟೆರಿಲೈಸ್ ಮಾಡುವ ಅಗತ್ಯವಿಲ್ಲ. ಹಾಗಾಗಿ ಮಕ್ಕಳಿಗೆ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿಸಿದರೆ ಬ್ಯಾಕ್ಟೀರಿಯಾ ಸೋಂಕಿನ ಭಯವಿಲ್ಲ. ಇನ್ನು, ಬೆಳ್ಳಿ ಪಾತ್ರೆಯಲ್ಲಿಟ್ಟ ಆಹಾರ ಹಾಗೂ ಪಾನೀಯಗಳು ಬೇಗ ಕೆಡುವುದಿಲ್ಲ. ಅವು ತಾಜಾ ಆಗಿರುತ್ತವೆ. ಇಂದು ನಾವು ಬಳಸುವ ಅನೇಕ ವಾಟರ್ ಪ್ಯೂರಿಫೈರ್‌ಗಳಲ್ಲಿ ಬೆಳ್ಳಿಯನ್ನು ಬಳಸಿರುತ್ತಾರೆ. 

ಅದೇ ರೀತಿ, ಮಕ್ಕಳಿಗೆ ಬೆಳ್ಳಿಯ ಬಳೆ, ಕಡಗ, ಉಡದಾರಗಳನ್ನು ಹಾಕುವುದಕ್ಕೂ ಕಾರಣವಿದೆ. ಅವು ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತವೆ. ಈ ಎಲ್ಲ ಕಾರಣಗಳಿಂದ ಬೆಳ್ಳಿಯ ಪಾತ್ರೆ ಹಾಗೂ ಆಭರಣಗಳನ್ನು ಬಳಸುವ ಅಭ್ಯಾಸ ಬೆಳೆದುಬಂದಿದೆ. ಅದು ಚಾಲ್ತಿಯಲ್ಲಿರಲಿ ಎಂಬ ಕಾರಣಕ್ಕೆ ಬೆಳ್ಳಿ ಪವಿತ್ರ ಲೋಹ ಎಂದು ಕರೆಯಲಾಗಿದೆ. ಬೆಳ್ಳಿ ಪಾತ್ರೆಯಲ್ಲಿ ಉಣ್ಣುವುದು ಹಾಗೂ ಬೆಳ್ಳಿಯನ್ನು ಧರಿಸುವುದು ಮಕ್ಕಳಗಿಷ್ಟೇ ಅಲ್ಲ, ದೊಡ್ಡವರಿಗೂ ಒಳ್ಳೆಯದು. 

ಹಳೆ ಆಚಾರ ಹೊಸ ವಿಚಾರಕ್ಕೆ ಸಂಬಂಧಿಸಿದ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

- ಮಹಬಾಲ ಸೀತಾಳಬಾವಿ