ಆಚಾರ್ಯ ಚಾಣಕ್ಯರ ನೀತಿಶಾಸ್ತ್ರದ ಪ್ರಕಾರ, ಭೂಮಿಯ ಮೇಲಿನ ನಿಜವಾದ ರತ್ನಗಳು ಚಿನ್ನ- ವಜ್ರಗಳಲ್ಲ. ಮೂರು ಅಮೂಲ್ಯ ಸಂಪತ್ತುಗಳನ್ನು ಹೊಂದಿರುವ ವ್ಯಕ್ತಿಯು ಮನಃಶಾಂತಿಯಿಂದ ಭೂಮಿಯಲ್ಲೇ ಸ್ವರ್ಗದಂತಹ ಸುಖವನ್ನು ಅನುಭವಿಸುತ್ತಾನೆ.

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಶ್ರೀಮಂತಿಕೆಗಾಗಿ- ಚಿನ್ನ ಮುತ್ತು ರತ್ನಗಳಿಗಾಗಿ ಯಾವಾಗಲೂ ಹಂಬಲಿಸುತ್ತಾನೆ. ಶ್ರೀಮಂತಿಕೆ ಬರುತ್ತದೆ ಎಂದರೆ ಯಾರೂ ಬೇಡ ಅನ್ನೋಲ್ಲ. ಅದಕ್ಕಾಗಿಯೇ ಎಲ್ಲರೂ ಸಾಯುವವರೆಗೂ ದುಡಿಯುತ್ತಾರೆ. ದುಡಿದು ಗಳಿಸಿದ್ದನ್ನು ಕೂಡಿಟ್ಟು ದುಪ್ಪಟ್ಟು- ಮುಪ್ಟಟ್ಟು ಮಾಡಲು ಯತ್ನಿಸುತ್ತಾರೆ. ಆದರೆ ಯಾವುದು ನಿಜವಾದ ಶ್ರೀಮಂತಿಕೆ? ಯಾವುದು ನಿಜವಾದ ಮುತ್ತು- ರತ್ನ? ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ 14ನೇ ಅಧ್ಯಾಯದ ಮೊದಲ ಶ್ಲೋಕದಲ್ಲಿ ಭೂಮಿಯ ಮೇಲಿರುವ ಮೂರು ಅಮೂಲ್ಯ ರತ್ನಗಳ ಬಗ್ಗೆ ತಿಳಿಸುತ್ತಾರೆ. ಈ ಮೂರು ರತ್ನಗಳು ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಈ ಮೂರೂ ಇರುವವರಿಗೆ ಭೂಮಿಯೇ ಸ್ವರ್ಗವಿದ್ದಂತೆ. ಹಾಗಾದರೆ ಅವು ಮೂರು ಯಾವುವು? ತಿಳಿಯೋಣ.

''ಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಂ|

ಮುಧೈಃ ಪಾಷಾಣಖಂಡೇಷು ರತ್ನಸಂಜ್ಞಾ ವಿಧೀಯತೇ||''

1. ಮೊದಲ ರತ್ನ- ಜಲ

ಆಚಾರ್ಯ ಚಾಣಕ್ಯರು ಹೇಳುವಂತೆ ವಜ್ರ, ಮುತ್ತು, ಪಚ್ಚೆ, ಚಿನ್ನ ಇವುಗಳನ್ನು ರತ್ನಗಳೆಂದು ಪರಿಗಣಿಸಿ ಅದನ್ನು ಪಡೆಯುವ ಹಂಬಲದಲ್ಲಿ ನಿಜವಾದ ಸುಖವನ್ನು ಕಳೆದುಕೊಳ್ಳುತ್ತೇವೆ. ಮರುಭೂಮಿಲ್ಲಿ ಬಾಯಾರಿ, ಇನ್ನೇನು ಸತ್ತೇ ಹೋಗುತ್ತೇನೆ ಎಂಬ ಪರಿಸ್ಥಿತಿಯಲ್ಲಿ ಇರುವವನ ಮುಂದೆ ವಜ್ರ ವೈಢೂರ್ಯಗಳನ್ನು ಇಟ್ಟರೆ ಸಂತೋಷವಾದೀತೆ? ಖಂಡಿತಾ ಇಲ್ಲ. ಬಾಯಾರಿಕೆಯಾದಾಗ ಒಳ್ಳೆಯ ಕುಡಿಯುವ ನೀರು ಸಿಕ್ಕರೆ ಅದೇ ಮುತ್ತು ರತ್ನ ಎಲ್ಲವೂ. ಸಂತೋಷದಿಂದ ನೀರು ಕುಡಿದಾಗ ದೇಹ ನಲಿಯುತ್ತದೆ. ಅದೇ ಸ್ವರ್ಗ.

2. ಎರಡನೇ ರತ್ನ- ಅನ್ನ

ಇಲ್ಲಿ ಅನ್ನ ಎಂದರೆ ಉತ್ತಮ ಆಹಾರ. ಹಸಿವಾಗಿ ಸಾಯುವ ಹೊತ್ತಿನಲ್ಲಿ ಸಿಕ್ಕುವ ಯಾವುದೇ ಆಹಾರವನ್ನು ನಾವು ಸೇವಿಸುತ್ತೇವೆ. ಅದು ಅತ್ಯಂತ ರುಚಿಕರವಾಗಿ ಕಾಣಿಸುತ್ತದೆ. ಆಗ ಅದರ ಉಪ್ಪು- ಸಪ್ಪೆ ವ್ಯತ್ಯಾಸಗಳು ಯಾವುದೂ ನಮಗೆ ಮುಖ್ಯ ಆಗುವುದಿಲ್ಲ. ಹಣವನ್ನು ಗಳಿಸಿದ ನಂತರವೂ ದಿನಕ್ಕೆರಡು ಬಾರಿ ರೊಟ್ಟಿ ಮತ್ತು ಉಪಹಾರವನ್ನು ಹೊಂದಲು ಸಾಧ್ಯವಾಗದಿದ್ದರೆ ಯಾರೂ ಸಂತೋಷವಾಗಿರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ಪಾಪದ ಹೊಟ್ಟೆಯನ್ನು ತುಂಬಲು ಹಣವನ್ನು ಸಂಪಾದಿಸುತ್ತಾನೆ. ಆದರೆ ಎಲ್ಲರಿಗೂ ಸಂತೋಷದ ವಾತಾವರಣದಲ್ಲಿ ಆಹಾರ ಸೇವಿಸುವ ಭಾಗ್ಯವಿರುವುದಿಲ್ಲ. ಹಾಗಾಗಿ, ಒಳ್ಳೆಯ ಆಹಾರ ಸೇವಿಸುವ ಸೌಭಾಗ್ಯವೇ ಎರಡನೇ ರತ್ನ

2. ಮೂರನೇ ರತ್ನ- ಸುಭಾಷಿತ

ಸುಭಾಷಿತ ಎಂದರೆ ಒಳ್ಳೆಯ ಮಾತು. ಚಾಣಕ್ಯನ ಪ್ರಕಾರ, ತನ್ನ ಮಾತಿನಲ್ಲಿ ಮಾಧುರ್ಯವನ್ನು ಹೊಂದಿರುವ ವ್ಯಕ್ತಿಯು ಶತ್ರುವನ್ನೂ ತನ್ನ ಅಭಿಮಾನಿಯನ್ನಾಗಿ ಮಾಡಿಕೊಳ್ಳುವ ಸಾಮರ್ಥ್ಯವನ್ನು ಪಡೆದಿರುತ್ತಾನೆ. ಮಾತನಾಡುವಾಗಲೂ ನಾವು ತುಂಬಾನೇ ಯೋಚಿಸಿ ನಂತರ ಮಾತನಾಡಬೇಕು. ಒಂದು ಮೌನ ನೂರು ಸಂತೋಷ ಎಂದು ಕೂಡ ಅವನು ಹೇಳಿದ್ದಾನೆ. ಅಂದರೆ, ತಪ್ಪು ಮಾತನಾಡುವುದಕ್ಕಿಂತ ಮೌನವಾಗಿರುವುದು ಉತ್ತಮ. ಮನಸೋಇಚ್ಛೆ ಮಾತನಾಡುವವರನ್ನು ಎಲ್ಲೆಡೆ ಹೊಗಳುತ್ತಾರೆ. ಅದೇ ವೇಳೆ ಕಹಿ ಮಾತುಗಳನ್ನಾಡುವವರಿಂದ ಎಲ್ಲರೂ ಅಂತರ ಕಾಯ್ದುಕೊಳ್ಳುತ್ತಾರೆ. ಸುಭಾಷಿತ ಒಂದು ರತ್ನವಾಗಿದ್ದು ಅದು ಮನುಷ್ಯನ ಗೌರವ ಮತ್ತು ಪ್ರತಿಷ್ಟೆಯನ್ನು ಹೆಚ್ಚಿಸುತ್ತದೆ.

ಮನಸ್ಸಿನ ಶಾಂತಿಯೇ ದೊಡ್ಡ ಸಂಪತ್ತು ಎಂದು ಚಾಣಕ್ಯ ಹೇಳುತ್ತಾನೆ, ಏಕೆಂದರೆ ಒಬ್ಬ ವ್ಯಕ್ತಿಯ ಮನಸ್ಸು ಸಂಪೂರ್ಣವಾಗಿ ಶಾಂತವಾಗಿರದಿದ್ದರೆ, ಅವನು ತನ್ನ ಜೀವನದಲ್ಲಿ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಹಣದ ದುರಾಸೆಯಲ್ಲಿ ಮನುಷ್ಯ ಈ ಸುಖದಿಂದ ದೂರ ಉಳಿಯುತ್ತಾನೆ. ಇದರಿಂದಾಗಿ ಅನೇಕ ದೈಹಿಕ ಕಾಯಿಲೆಗಳು ಮತ್ತು ಸಂಬಂಧಗಳು ಹುಳಿಯಾಗಲು ಪ್ರಾರಂಭಿಸುತ್ತವೆ. ಮನಸ್ಸು ಪ್ರಶಾಂತವಾಗಿ, ಸಂತೃಪ್ತಿಯಿಂದ ಇದ್ದರೆ ಪ್ರತಿ ಹೆಜ್ಜೆಯಲ್ಲೂ ಯಶಸ್ಸು ಸಿಗುತ್ತದೆ, ಇಲ್ಲದಿದ್ದರೆ ಎಲ್ಲವೂ ಕಳೆದು ಹೋಗುತ್ತದೆ ಎಂದು ಚಾಣಕ್ಯ ಹೇಳುತ್ತಾನೆ. ಈ ಮೂರು ರತ್ನಗಳು- ಸಂತೋಷಗಳು ಇದ್ದರೆ ಓರ್ವ ವ್ಯಕ್ತಿಗೆ ಅವನಿರುವ ಭೂಮಿಯೇ ಸ್ವರ್ಗವಾಗಿರುತ್ತದೆ. ಅವನು ಭೂಮಿಯಲ್ಲೇ ಸ್ವರ್ಗದ ಅನುಭವವನ್ನು ಪಡೆದುಕೊಳ್ಳುತ್ತಾನೆ. ಈ ಮೂರು ಸಂತೋಷಗಳಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ.