ದಾನ ಮಾಡೋದು ಪುಣ್ಯದ ಕೆಲಸ. ಆದರೆ ತಪ್ಪು ರೀತಿಯಲ್ಲಿ ಮಾಡಿದ ದಾನ ಆರ್ಥಿಕ ಸಮಸ್ಯೆ ತರುತ್ತೆ. ಪ್ರದರ್ಶನಕ್ಕಾಗಿ ರೀಲ್ಸ್ ಮಾಡಿ ದಾನ ಮಾಡಿದರೆ ಪುಣ್ಯ ಲಭಿಸುವುದಿಲ್ಲ, ಪಾಪ ಸುತ್ತಿಕೊಳ್ಳಲಿದೆ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಆಚಾರ್ಯ ಚಾಣಕ್ಯ ತನ್ನ ನೀತಿ ಸೂತ್ರಗಳಲ್ಲಿ ಜೀವನಕ್ಕೆ ಉಪಯುಕ್ತವಾದ ವಿಷಯಗಳನ್ನು ಹೇಳಿದ್ದಾರೆ. ಇಂದಿಗೂ ಅದನ್ನು ಜನ ಪಾಲಿಸುತ್ತಾರೆ. ಪ್ರೀತಿ, ಮದುವೆ, ಸ್ನೇಹ, ನಂಬಿಕೆ, ಮೋಸ, ದಾನ ಹೀಗೆ ಪ್ರತಿ ವಿಷಯದ ಬಗ್ಗೆ ಅವರು ಹೇಳಿದ್ದಾರೆ. ಚಾಣಕ್ಯರ ಪ್ರಕಾರ ದಾನ ಮಾಡುವಾಗ ಕೆಲವು ವಿಷಯ ನೆನಪಿಡ್ಬೇಕು. ಅದೇನು ಅಂತ ನೋಡೋಣ.

ದಾನ ಮಾಡುವಾಗ ನೆನಪಿಡಬೇಕಾದ ಅಂಶಗಳು:

1. ಯಾವ ದಾನ ನಿಮ್ಮ ಆರ್ಥಿಕ ಪರಿಸ್ಥಿತಿಗೆ ಒಳ್ಳೆಯದಲ್ಲ ಅಂತ ತಿಳ್ಕೊಳ್ಳಿ:

ದಾನ ಮಾಡೋದು ಪುಣ್ಯದ ಕೆಲಸ. ಬಡವರ ಮೇಲೆ ದಯೆ ಇರೋರು ಆಗಾಗ ದಾನ ಮಾಡುತ್ತಾರೆ. ಆದರೆೆ ಚಾಣಕ್ಯರ ಪ್ರಕಾರ ತಪ್ಪು ರೀತಿಯಲ್ಲಿ ಮಾಡಿದ ದಾನ ನಿಮ್ಮ ಆರ್ಥಿಕ ಪರಿಸ್ಥಿತಿಗೆ ಒಳ್ಳೆಯದಲ್ಲ. ಆದ್ದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ದಾನ ಮಾಡೋದು ಒಳ್ಳೆಯದು.

2. ಯೋಚನೆ ಮಾಡಿ ದಾನ ಮಾಡಿ

ಯಾವುದೇ ಕೆಲಸವನ್ನು ಮಾಡಿದರೂ ಯೋಚನೆ ಮಾಡಿ ಮಾಡಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಇನ್ನು ನೀವು ದುಡಿದು ಸಂಪಾದನೆ ಮಾಡಿದ ಹಣವನ್ನು ದಾನ ಮಾಡುವ ಮುನ್ನವೂ ಯೋಚನೆ ಮಾಡಬೇಕು. ಯೋಚನೆ ಇಲ್ಲದೆ ಮಾಡಿದ ದಾನ ಕೆಲವೊಮ್ಮೆ ತೊಂದರೆ ತರುತ್ತದೆ ಅಂತ ಚಾಣಕ್ಯ ನೀತಿ ಹೇಳುತ್ತದೆ. ಆರ್ಥಿಕ ಪರಿಸ್ಥಿತಿ ನೋಡದೇ ಭಾವುಕರಾಗಿ ದಾನ ಮಾಡೋರು ಸಮಸ್ಯೆಗೆ ಸಿಲುಕುತ್ತಾರೆ. ಚಾಣಕ್ಯರ ಪ್ರಕಾರ ದಾನ ಮಾಡೋ ಮುಂಚೆ ಯೋಚನೆ ಮಾಡಿ ನಿರ್ಧಾರ ತಗೊಳ್ಳೋದು ಒಳ್ಳೆಯದು.

3. ದಾನ ಮಾಡಿ ಜೇಬು ಖಾಲಿ ಮಾಡಿಕೊಳ್ಳಬೇಡಿ:

ಕೆಲವರು ನಾವೆಷ್ಟು ಜಾಸ್ತಿ ಹಣವನ್ನು ದಾನ ಮಾಡುತ್ತೇವೆಯೋ ಅಷ್ಟು ನಮಗೆ ಪುಣ್ಯ ಲಭಿಸುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ, ಚಾಣಕ್ಯರ ಪ್ರಕಾರ ಎಲ್ಲಾ ಆಸ್ತಿ ದಾನ ಮಾಡೋರು ಸಮಸ್ಯೆಗೆ ಸಿಲುಕುತ್ತಾರೆ. ಆದ್ದರಿಂದ ಪರಿಸ್ಥಿತಿ ನೋಡಿ ದಾನ ಮಾಡೋದು ಒಳ್ಳೆಯದು.

4. ಅನರ್ಹರಿಗೆ ದಾನ ಮಾಡಬೇಡಿ:

ಚಾಣಕ್ಯ ನೀತಿ ಪ್ರಕಾರ ಅನರ್ಹರಿಗೆ ದಾನ ಮಾಡಬಾರದು. ಹಸು ಸಾಕಲು ಸಾಧ್ಯವಿಲ್ಲದವರಿಗೆ ಹಸುವನ್ನು ದಾನ ಮಾಡಿದರೆ ಅದು ಬದುಕಲು ಸಾಧ್ಯವಿಲ್ಲ. ಹಾಗೆಯೇ ದುಡ್ಡು ನಿರ್ವಹಣೆ ಮಾಡುವುದಕ್ಕೆ ಯಾರಿಗೆ ಗೊತ್ತಿರುವುದಿಲ್ಲವೋ ಅವರಿಗೆ ಕೋಟಿ ರೂ. ಹಣ ಕೊಟ್ಟರೂ ವ್ಯರ್ಥವಾಗುತ್ತದೆ. ಆದ್ದರಿಂದ ಯೋಚನೆ ಮಾಡಿ ದಾನ ಮಾಡೋದು ಒಳ್ಳೆಯದು.

5. ಮಾಡಿದ ಉಪಕಾರ ಮರೆಯುವವರಿಗೆ ದಾನ ಬೇಡ:

ಮಾಡಿದ ಉಪಕಾರ ಮರೆಯೋರಿಗೆ ದಾನ ಮಾಡೋದು.. ನಿಮ್ಮ ಕಾಲಿಗೆ ನೀವೇ ಕಲ್ಲು ಹಾಕಿಕೊಂಡಂತೆ ಎಂದು ಆಚಾರ್ಯ ಚಾಣಕ್ಯ ನೀತಿ ಹೇಳುತ್ತದೆ. ಕೃತಜ್ಞತೆ ಇಲ್ಲದವರಿಗೆ ದಾನ ಮಾಡಿದರೆ ಪುಣ್ಯ ಬರಲ್ಲ, ಸಮಸ್ಯೆ ಬರುತ್ತದೆ ಅಂತ ಚಾಣಕ್ಯರು ಹೇಳಿದ್ದಾರೆ.

6. ಅತಿಯಾದ ದಾನ ತಪ್ಪು:

ಚಾಣಕ್ಯರ ಪ್ರಕಾರ ಅತಿಯಾದ ದಾನ ತಪ್ಪು. ದಾನ ನಿಮ್ಮನ್ನು ಬಲಹೀನರನ್ನಾಗಿ ಮಾಡಬಾರದು. ನೀವು ಮತ್ತು ನಿಮ್ಮ ಕುಟುಂಬ ನೆಮ್ಮದಿಯಾಗಿ ಜೀವನ ಮಾಡುವಷ್ಟು ಸಂಪತ್ತು ಉಳಿಸಿಕೊಂಡು, ಹೆಚ್ಚುವರಿಯಾಗಿ ದಾನ ಮಾಡಲು ಶಕ್ತರಾಗಿದ್ದರೆ ಮಾತ್ರ ದಾನ ಮಾಡಬೇಕು. ಅತಿಯಾಗಿ ದಾನ ಮಾಡಿ ಬೀದಿಗೆ ಬರಬಾರದು. ಸತ್ಯ ಹರಿಶ್ಚಂದ್ರನಂತೆ ಎಲ್ಲವನ್ನು ದಾನ ಮಾಡಬಾರದು.

7. ರೀಲ್ಸ್‌ಗಾಗಿ ಪ್ರದರ್ಶನದ ದಾನ ಮಾಡೋದು ಪಾಪದ ಕೆಲಸ:

ಇನ್ನು ಕೆಲವರು ತೋರಿಕೆ ಅಥವಾ ಪ್ರದರ್ಶನಕ್ಕಾಗಿ ದಾನ ಮಾಡುತ್ತಾರೆ. ಅವರು ಸಮಾಜದಲ್ಲಿ ತಮ್ಮ ಇಮೇಜ್ ಅನ್ನು ಗಳಿಸಿಕೊಳ್ಳಲು ತೋರಿಕೆಗಾಗಿ ದಾನ ಮಾಡುತ್ತಾರೆ. ಇಂತಹ ಸಾಲಿಗೆ ರೀಲ್ಸ್ ಮಾಡುತ್ತಾ ಪ್ರದರ್ಶನಕ್ಕಾಗಿ ದಾನ ಮಾಡುವವರೂ ಸೇರಿಕೊಳ್ಳುತ್ತಾರೆ. ಇಲ್ಲಿ ದಾನ ಮಾಡಿದ ಪುಣ್ಯಕ್ಕಿಂತ ತಾನು ದಾನ ಮಾಡಿದ ವ್ಯಕ್ತಿಯ ಮಾನ ಹಾನಿ ಮಾಡಿದ ಪಾಪ ಅವರನ್ನು ಸುತ್ತಿಕೊಳ್ಳುತ್ತದೆ. ಆದ್ದರಿಂದ ದಾನ ಮಾಡಿದ್ದನ್ನು ಪ್ರದರ್ಶನ ಮಾಡಿದವರಿಗೆ ದಾನದ ಪುಣ್ಯಫಲ ಸಿಗುವುದಿಲ್ಲ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗುತ್ತದೆ.

8. ಧಾರ್ಮಿಕ ದಾನ:

ದೇವಸ್ಥಾನದಲ್ಲಿ ದಾನ ಮಾಡಿದರೆ ದೇವರ ಅನುಗ್ರಹ ಸಿಗುತ್ತೆ ಅಂತ ಚಾಣಕ್ಯರು ಹೇಳುತ್ತಾರೆ. ಸೋಮವಾರ ಶಿವನಿಗೆ, ಶನಿವಾರ ಶನಿ ದೇವರಿಗೆ, ಭಾನುವಾರ ಅಮ್ಮನವರ ದೇವಸ್ಥಾನದಲ್ಲಿ ದಾನ ಮಾಡೋದು ಶುಭ.