TIME100 ದಾನಶೀಲರ ಪಟ್ಟಿಯಲ್ಲಿ ಮುಕೇಶ್ & ನೀತಾ ಅಂಬಾನಿ, ಬರೋಬ್ಬರಿ 407 ಕೋಟಿ ರೂ ದಾನ
TIME100 ಫಿಲಾಂತ್ರಪಿ 2025 ಪಟ್ಟಿ ಬಿಡುಗಡೆಯಾಗಿದೆ. ಕಳೆದ ವರ್ಷ 407 ಕೋಟಿ ರೂಪಾಯಿ ಹಣವನ್ನು ಶಿಕ್ಷಣ, ಸಾಮಾಜಿಕ, ಆರೋಗ್ಯ, ಮಹಿಳಾ ಸಬಲೀಕರಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ದಾನ ಮಾಡುವ ಮೂಲಕ ಕೊಡುಗೈ ದಾನಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಸಿಕೊಂಡಿದ್ದಾರೆ.

ಟೈಮ್ 100 ಪಟ್ಟಿಯಲ್ಲಿ ಅಂಬಾನಿ ದಂಪತಿ
ಪ್ರಪಂಚದ ಪ್ರಸಿದ್ಧ ಟೈಮ್ ಮ್ಯಾಗಜಿನ್ ಬಿಡುಗಡೆ ಮಾಡಿದ ಟೈಮ್ 100 ದಾನಶೀಲರ 2025 ಪಟ್ಟಿಯಲ್ಲಿ ಭಾರತದ ಉದ್ಯಮಿ ದಂಪತಿಗಳಾದ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸ್ಥಾನ ಪಡೆದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಖೇಶ್ ಅಂಬಾನಿ ಮತ್ತು ರಿಲಯನ್ಸ್ ಫೌಂಡೇಶನ್ ಸ್ಥಾಪಕ ಅಧ್ಯಕ್ಷರಾದ ನೀತಾ ಅಂಬಾನಿ ಸಾಮಾಜಿಕ ಸೇವಾ ಕಾರ್ಯಕ್ರಮಗಳಿಗೆ ಭಾರಿ ಪ್ರಮಾಣದಲ್ಲಿ ಹಣ ನೀಡುತ್ತಿದ್ದಾರೆ ಎಂದು ಟೈಮ್ ವರದಿ ತಿಳಿಸಿದೆ.
ಭಾರತದಲ್ಲಿ ಅತಿ ಹೆಚ್ಚು ದಾನಿಗಳು
ಈ ಪಟ್ಟಿಯು ವಿಶ್ವದಾದ್ಯಂತದ ದಾನಿಗಳನ್ನು ಗುರುತಿಸುತ್ತದೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆ ತರಲು ಅಸಾಧಾರಣ ಕೊಡುಗೆ ನೀಡಿದವರನ್ನು ಗೌರವಿಸುತ್ತದೆ. 2024ರಲ್ಲಿ ಅಂಬಾನಿ ದಂಪತಿಗಳು ಭಾರತದಲ್ಲಿ ಅತಿ ಹೆಚ್ಚು ದೇಣಿಗೆ ನೀಡಿದ ದಾನಿಗಳಾಗಿದ್ದಾರೆ. TIME ವರದಿಯ ಪ್ರಕಾರ, ಅಂಬಾನಿ ದಂಪತಿಗಳು 2024 ರಲ್ಲಿ ₹407 ಕೋಟಿ (ಸುಮಾರು $48 ಮಿಲಿಯನ್) ದೇಣಿಗೆ ನೀಡಿದ್ದಾರೆ. ಇದರಿಂದ ಅವರು ಭಾರತದ ಅತಿದೊಡ್ಡ ದಾನಿಗಳಲ್ಲಿ ಒಬ್ಬರಾಗಿದ್ದಾರೆ.
ಸಾಮಾಜಿಕ ಅಭಿವೃದ್ಧಿಯಲ್ಲಿ ಅಂಬಾನಿ ದಂಪತಿ
ನೀತಾ ಅಂಬಾನಿ ಸ್ಥಾಪಿಸಿದ ರಿಲಯನ್ಸ್ ಫೌಂಡೇಶನ್ ಮೂಲಕ ಅಂಬಾನಿ ಕುಟುಂಬವು ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಜಲ ಸಂರಕ್ಷಣೆ, ಮಹಿಳಾ ಸಬಲೀಕರಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಹಲವು ಉಪಕ್ರಮಗಳನ್ನು ಹಮ್ಮಿಕೊಂಡಿದೆ. ಫೌಂಡೇಶನ್ ವಿದ್ಯಾರ್ಥಿವೇತನ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಗ್ರಾಮೀಣ ಸಮುದಾಯಗಳಿಗೆ ಉತ್ತಮ ಕೃಷಿ ಯೋಜನೆಗಳು, ಶಾಲೆಗಳ ಅಭಿವೃದ್ಧಿಗೆ ಮೂಲಸೌಕರ್ಯ ನಿರ್ಮಾಣ, ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಹಾಯ, ಆಸ್ಪತ್ರೆಗಳ ನಿರ್ಮಾಣ ಮತ್ತು ಆರೋಗ್ಯ ಸೇವೆಗಳು, ಮಹಿಳಾ ಕ್ರೀಡಾಪಟುಗಳಿಗೆ ವಿಶೇಷ ಉಪಕ್ರಮ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಯಶಸ್ವಿ ಉದ್ಯಮಿ ಮತ್ತು ಕ್ರೀಡಾಭಿಮಾನಿಯಾಗಿ ನೀತಾ ಅಂಬಾನಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿದ್ದಾರೆ. ಅವರು ಕ್ರೀಡಾ ವಿಜ್ಞಾನ ಆಧಾರಿತ ತರಬೇತಿ ಮತ್ತು ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸುವ ಮೂಲಕ, ವಿಶೇಷವಾಗಿ ಮಹಿಳಾ ಕ್ರೀಡಾಪಟುಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತಿದ್ದಾರೆ.
ಸಾಮಾಜಿಕ ಸೇವೆಯ ಪ್ರೇರಣೆ
ಟೈಮ್ 100 ಫಿಲಾಂತ್ರಪಿ ಪಟ್ಟಿಯಲ್ಲಿ ಭಾರತೀಯರಾದ ಮುಖೇಶ್ ಮತ್ತು ನೀತಾ ಅಂಬಾನಿ ಜೊತೆಗೆ, ಟ್ರಯಲ್ ಬ್ಲೇಜರ್ಸ್ ವಿಭಾಗದಲ್ಲಿ ಜೆರೋಧಾ ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಟೈಟಾನ್ಸ್ ವಿಭಾಗದಲ್ಲಿ ಅಜೀಂ ಪ್ರೇಮ್‌ಜಿ ಕೂಡ ಸ್ಥಾನ ಪಡೆದಿದ್ದಾರೆ.
ಈ ಪ್ರತಿಷ್ಠಿತ ಪಟ್ಟಿಯಲ್ಲಿ ಮುಕೇಶ್ ಮತ್ತು ನೀತಾ ಅಂಬಾನಿ ಜೊತೆಗೆ ವಾರೆನ್ ಬಫೆಟ್, ಮೆಲಿಂಡಾ ಫ್ರೆಂಚ್ ಗೇಟ್ಸ್, ಒಪ್ರಾ ವಿನ್ಫ್ರೇ, ಮೈಕೆಲ್ ಬ್ಲೂಮ್‌ಬರ್ಗ್, ಡೇವಿಡ್ ಬೆಕ್‌ಹ್ಯಾಮ್, ಆಲಿಸ್ ಎಲ್. ವಾಲ್ಟನ್, ಲೀ ಕಾ-ಶಿಂಗ್, ಕಾರ್ಲೋಸ್ ಸ್ಲಿಮ್, ರೀಡ್ ಹೇಸ್ಟಿಂಗ್ಸ್, ಅಜೀಮ್ ಪ್ರೇಮ್‌ಜಿ, ಮೈಕೆಲ್ ಡೆಲ್, ಫಿಲ್ ನೈಟ್, ಸ್ಟೀವ್ ಬಾಲ್ಮರ್ ಮತ್ತು ಜ್ಯಾಕ್ ಮಾ ಮುಂತಾದವರು ಸೇರಿದ್ದಾರೆ.