ದಾವಣಗೆರೆ ಉಪಚುನಾವಣೆಯು ಕಾಂಗ್ರೆಸ್‌ನಲ್ಲಿ ಅಸಮಾಧಾನ ಸೃಷ್ಟಿಸಿದೆ. ಈ ನಡುವೆ, ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ಚುನಾವಣೆಯ ನಂತರ ಕರ್ನಾಟಕ ಕಾಂಗ್ರೆಸ್ ಇಬ್ಭಾಗವಾಗಲಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಈ ಹಿಂದೆ ಅವರ ಕೆಲವು ಭವಿಷ್ಯವಾಣಿಗಳು ನಿಜವಾಗಿದ್ದವು.
ದಾವಣಗೆರೆ ಉಪ ಚುನಾವಣೆ ಈ ಬಾರಿ ಭಾರಿ ಗದ್ದಲ ಸೃಷ್ಟಿಸ್ತಿರುವುದು ಗೊತ್ತೇ ಇದೆ. ಕಾಂಗ್ರೆಸ್‌ನಿಂದ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಹಾಗೂ ಬಿಜೆಪಿಯಿಂದ ಶ್ರೀನಿವಾಸ್ ಟಿ. ದಾಸಕರಿಯಪ್ಪ ಸ್ಪರ್ಧಿಸಿದ್ದಾರೆ. ಮುಸ್ಲಿಂ ಸಮುದಾಯದವರನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟುಹಿಡಿದಿದ್ದರು. ಆದರೆ, ದಾವಣಗೆರೆ ದಕ್ಷಿಣ ಕ್ಷೇತ್ರ ಪ್ರತ್ಯೇಕ ಆದಾಗಿನಿಂದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರೇ ಟಿಕೆಟ್ ಪಡೆದುಕೊಳ್ಳುತ್ತಾ ಬಂದಿದ್ದಾರೆ. 2008, 2013, 2018 ಹಾಗೂ 2023ರ ವಿಧಾನಸಭಾ ಚುನಾವಣೆಗಳಲ್ಲಿ ಅವರೇ ಜಯಶಾಲಿಯಾಗಿದ್ದರು ಎನ್ನುವ ಕಾರಣಕ್ಕೆ ಅವರ ಪುತ್ರನನ್ನೇ ನಿಲ್ಲಿಸಿರುವುದು ಮುಸ್ಲಿಂ ಸಮುದಾಯದಲ್ಲಿ ಭಾರಿ ನಿರಾಸೆ ಮೂಡಿಸಿದೆ. ಹಲವರು ಕಾಂಗ್ರೆಸ್ ವಿರೋಧಿಗಳಾಗಿದ್ದಾರೆ.
ಪ್ರಶಾಂತ್ ಕಿಣಿ ಭವಿಷ್ಯ
ಚುನಾವಣೆ ಸಂದರ್ಭದಲ್ಲಿಯೇ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ನಸೀರ್ ಅಹ್ಮದ್ರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳು ದಾವಣಗೆರೆಯಲ್ಲಿ ಕಾಂಗ್ರೆಸ್ಗೆ ಫಲಿತಾಂಶ ಕೈಕೊಡುತ್ತಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಜೊತೆಗೆ ಕಾಂಗ್ರೆಸ್ ಪಾಳಯದಲ್ಲಿಯೂ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಇದೇ ಸಂದರ್ಭದಲ್ಲಿ, ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ಭವಿಷ್ಯವೊಂದನ್ನು ನುಡಿದಿದ್ದಾರೆ. ಕಳೆದ ವರ್ಷ ಇವರು, 2025ರ ಏಪ್ರಿಲ್‌ನಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯದ ಮುಂದಿನ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.
ಕಾಂಗ್ರೆಸ್ ಎರಡು ಭಾಗ
ಇದೀಗ ಅವರು, ಉಪಚುನಾವಣೆಯ ಫಲಿತಾಂಶದ ಬಳಿಕ ಕರ್ನಾಟಕ ಕಾಂಗ್ರೆಸ್ ಎರಡು ಭಾಗವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ. ಕರ್ನಾಟಕದ ಜನರು ಇದಕ್ಕೆ ಬೆಲೆ ತೆರಲಿದ್ದಾರೆ. ಮೈಸೂರು ತೊಂದರೆಗಳನ್ನು ಎದುರಿಸಲಿದೆ. ಭವಿಷ್ಯದಲ್ಲಿ ಕರ್ನಾಟಕ ಎರಡು ಭಾಗವಾಗಲಿದೆ ಎಂದಿದ್ದಾರೆ. ಉಪಚುನಾವಣೆಗಳ ನಂತರ ಕರ್ನಾಟಕದ ಕೆಲವು ಕಾಂಗ್ರೆಸ್ ನಾಯಕರು ತಮ್ಮ ನಿಷ್ಠೆಯನ್ನು ಬದಲಾಯಿಸುತ್ತಾರೆ. ಬಿಜೆಪಿ ಕರ್ನಾಟಕ ರಾಜಕೀಯಕ್ಕೆ ಒಬ್ಬ ಯೋಗಿಯನ್ನು ತರಲಿದೆ ಅದು ಉತ್ತರ ಪ್ರದೇಶದ ಮಾದರಿಯಲ್ಲಿ ಎಂದು ಹೇಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಜ್ಯೋತಿಷದ ಭವಿಷ್ಯ ನಿರ್ಧಾರವಾಗಲಿದೆ.
ಈ ಹಿಂದೆ ನುಡಿದಿದ್ದ ಭವಿಷ್ಯ ನಿಜವಾಯ್ತು
ದೆಹಲಿಯಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಮಹಿಳೆಯೊಬ್ಬರು ಸಿಎಂ ಆಗಲಿದ್ದಾರೆ ಎಂದು ಕರ್ನಾಟಕದ ಮೂಲದ ಜ್ಯೋತಿಷಿ ಪ್ರಶಾಂತ್ ಕಿಣಿ ಹೇಳಿದ್ದ ಭವಿಷ್ಯವಾಣಿ ನಿಜವಾಗಿತ್ತು. 2024ರ ಅಕ್ಟೋಬರ್ 13 ರಂದು ಅವರು ಮಾಡಿದ್ದ ಟ್ವೀಟ್‌ನಲ್ಲಿ ಬಿಜೆಪಿ ದೆಹಲಿಯಲ್ಲಿ ಅಧಿಕಾರ ಪಡೆಯಲಿದೆ ಎಂದು ಬರೆದಿದ್ದರೆ, ಮುಖ್ಯಮಂತ್ರಿ ಸ್ಥಾನ ಕೂಡ ಮಹಿಳೆಯೊಬ್ಬರಿಗೆ ಸಿಗಲಿದೆ ಎಂದು ಅವರು ಬರೆದುಕೊಂಡಿದ್ದರು. ಅದರಂತೆ ಜಿದ್ದಾಜಿದ್ದಿನಿಂದ ಕೂಡಿದ್ದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನ ಗೆದ್ದು 27 ವರ್ಷಗಳ ಬಳಿಕ ಅಧಿಕಾರ ಪಡೆದುಕೊಂಡಿದ್ದಲ್ಲದೆ, ಇದೇ ಮೊದಲ ಬಾರಿಗೆ ಶಾಸಕಿಯಾಗಿದ್ದ 50 ವರ್ಷದ ರೇಖಾ ಗುಪ್ತಾರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿತತು. ನಾಲ್ಕು ತಿಂಗಳ ಹಿಂದೆ ತಾವೇ ಮಾಡಿದ್ದ ಟ್ವೀಟ್‌ಅನ್ನು ಪ್ರಶಾಂತ್ ಕಿಣಿ ನೆನಪಿಸಿ, ನಾನು ಹೇಳಿದ್ದು ನಿಜವಾಗಿದೆ ಎಂದಿದ್ದರು. ಆದರೆ ಅವರ ಭವಿಷ್ಯವಾಣಿ ಪ್ರಕಾರ, ಕಳೆದ ವರ್ಷದ ಏಪ್ರಿಲ್ನಲ್ಲಿಯೇ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಆಗಬೇಕಿತ್ತು.


