ಯಾದಗಿರಿ[ಜೂ. 03]  ಯಾದಗಿರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಸರ್ಕಾರಕ್ಕೆ ಆಗ್ರಹಿಸಿ, ಜಿಲ್ಲೆಯಲ್ಲಿ ಪತ್ರ ಚಳವಳಿ ಆರಂಭವಾಗಿದೆ. ಶಹಾಪುರ ನಗರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ರಾಜ್ಯಪಾಲರಿಗೆ, ಉಚ್ಚ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಈ ಕುರಿತು ಪತ್ರ ಬರೆದು ಆಗ್ರಹಿಸಿದ್ದಾರೆ.

ಯಾದಗಿರಿಯಲ್ಲಿ ಉದ್ದೇಶಿತ ಮೆಡಿಕಲ್ ಕಾಲೇಜು ಸ್ಥಾಪನೆ ಈ ಭಾಗದ ಅಭಿವೃದ್ಧಿಗೆ ನಾಂದಿಯಾಗಲಿದೆ. ಲಕ್ಷಾಂತರ ಜನರ ಚಿಕಿತ್ಸೆಗೆ ಇದು ನೆರವಾಗಲಿದೆ ಎಂದು ಆಗ್ರಹಿಸಿರುವ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಲ್ಲಯ್ಯ ಪೋಲಂಪಲ್ಲಿ, ಬಸಣ್ಣಗೌಡ ಮಾಲೀಪಾಟೀಲ್, ಮಲ್ಲಣ್ಣ ಶಿರೆಡ್ಡಿ, ನಿಂಗಣ್ಣ ನಾಟೇಕಾರ್, ಬಸವರಾಜ್ ಭಜಂತ್ರಿ, ಅಂಬಣ್ಣ ಸುರಪುರಕರ್, ಬಸವರಾಜ ಡಂಗೆ, ಭೀಮಣ್ಣ ಹೆಳುವರ ಸೇರಿದಂತೆ ಅನೇಕರು ಪತ್ರ ಚಳವಳಿ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. 

ಯಾದಗಿರಿ ಮೆಡಿಕಲ್ ಕಾಲೇಜು: ಸುವರ್ಣನ್ಯೂಸ್-ಕನ್ನಡಪ್ರಭ ಅಭಿಯಾನ

‘ಬಂದ್’ಗೆ ಬೆಂಬಲ : ಇನ್ನೊಂದೆಡೆ, ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಆಗ್ರಹಿಸಿ ಇದೇ ಜುಲೈ 10 ರಂದು ಕರೆ ನೀಡಲಾಗಿರುವ ‘ಯಾದಗಿರಿ ಬಂದ್’ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. 

ಜುಲೈ10  ರಂದು ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ನೇತೃತ್ವದಲ್ಲಿ ಕರೆ ನೀಡಲಾಗಿರುವ ‘ಬಂದ್’ ಚಳವಳಿಗೆ ಸಂಪೂರ್ಣವಾಗಿ ಬೆಂಬಲಿಸುವುದಾಗಿ ವೀರಶೈವ ಸಮಾಜ ನಗರ ಘಟಕದ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಭಾರತ ಸ್ವಾಭಿಮಾನ ಟ್ರಸ್ಟ್ ಜಿಲ್ಲಾ ಪ್ರಭಾರಿ ಅನಿಲ್ ಗುರೂಜಿ, ಶ್ರೀ ಮೌನೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ರಾಜು ಹೆಂದೆ ಹಾಗೂ ಪದಾಧಿಕಾರಿಗಳು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ. 

ಯಾದಗಿರಿ ಗೋಳು:  ಪಕ್ಷದ ಮಾತ್ ಬಿಡ್ರಿ.. ಮೆಡಿಕಲ್ ಕಾಲೇಜಿಗಾದ್ರೂ ಒಂದಾಗ್ರಿ !

ಜಿಲ್ಲೆಯ ಅಭಿವೃದ್ಧಿ ವಿಚಾರದ ದೃಷ್ಟಿಯಿಂದ ನಡೆಯುವ ಈ ‘ಬಂದ್’ ಕರೆಗೆ ಎಲ್ಲ ಸಂಘ ಸಂಸ್ಥೆಗಳು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.