Asianet Suvarna News Asianet Suvarna News

ಯಾದಗಿರಿ ಗೋಳು:  ಪಕ್ಷದ ಮಾತ್ ಬಿಡ್ರಿ.. ಮೆಡಿಕಲ್ ಕಾಲೇಜಿಗಾದ್ರೂ ಒಂದಾಗ್ರಿ !

ಪಕ್ಷದ ಮಾತ್ ಬಿಡ್ರಿ, ಮೆಡಿಕಲ್ ಕಾಲೇಜಿಗಾದ್ರೂ ಒಂದಾಗ್ರಿ ! ವೈದ್ಯ ಕಾಲೇಜು ನಿರ್ಮಾಣಕ್ಕೆ ಬೇಕಿದೆ ರಾಜಕೀಯ ಇಚ್ಛಾಶಕ್ತಿ|  ಈ ವಿಚಾರದಲ್ಲಿ ಬೀದರ್, ಗದಗ್ ಹಾಗೂ ಕೊಪ್ಪಳ ರಾಜಕಾರಣಿಗಳನ್ನು ನೋಡಿ ಕಲೀರಿ|  ಆರೋಗ್ಯ, ಶಿಕ್ಷಣ, ಉದ್ಯೋಗ, ಆರ್ಥಿಕ, ಸಾಮಾಜಿಕ ಪ್ರಗತಿಯಲ್ಲಿ ರಾಜಕೀಯ ಬೇಡ 

Yadgir Medical College needs political will
Author
Bengaluru, First Published Jul 2, 2019, 6:00 PM IST

ಯಾದಗಿರಿ[ಜು. 02]  ಕೈತಪ್ಪಿದ ಯಾದಗಿರಿ ಮೆಡಿಕಲ್ ಕಾಲೇಜು ನಿರ್ಮಾಣ ವಿಚಾರದಲ್ಲಿ ಈಗ ಪ್ರಮುಖವಾಗಿ ಪ್ರದರ್ಶಿಸ ಬೇಕಿರೋದು ರಾಜಕೀಯ ಇಚ್ಛಾಶಕ್ತಿ. ಪಕ್ಷ ಪಕ್ಷಗಳ ಮಾತು ಪಕ್ಕಕ್ಕಿಟ್ಟು, ಮೆಡಿಕಲ್ ಕಾಲೇಜಿಗಾದ್ರೂ ಈ ಭಾಗದ ರಾಜಕೀಯ ಪ್ರಭಾವಿಗಳು ಹಾಗೂ ಜನಪ್ರತಿನಿಧಿಗಳು ಒಂದಾದರೆ ಇದು ಕಷ್ಟವೇನಲ್ಲ. ಹೀಗಾಗಿ, ಪಕ್ಷದ್ ಮಾತ್ ಬಿಡ್ರಿ, ಮೆಡಿಕಲ್ ಕಾಲೇಜಿಗಾದ್ರೂ ಒಂದಾಗ್ರಿ ಅನ್ನಬೇಕಾಗಿದೆ.

ಆರೋಗ್ಯ, ಶಿಕ್ಷಣ, ಉದ್ಯೋಗ, ಆರ್ಥಿಕ, ಸಾಮಾಜಿಕ ಮುಂತಾದ ವಿಭಾಗಗಳಲ್ಲಿ ಪ್ರಗತಿ ಸಾಧಿಸಿ, ‘ಹಿಂದುಳಿದ’ ಅನ್ನೋ ಹಣೆಪಟ್ಟಿಯಿಂದ ಹೊರಬರಬೇಕಾದರೆ ಯಾದಗಿರಿ ಜಿಲ್ಲೆ ಕನಿಷ್ಠ ಈಗಲಾದರೂ ಒಂದಿಷ್ಟು ‘ರಾಜಕೀಯ’ ಜಿದ್ದಾಜಿದ್ದಿ, ವೈಷಮ್ಯಗಳನ್ನ ಬದಿಗೊತ್ತಬೇಕಿದೆ. ಹಾಗೆ ನೋಡಿದರೆ, ಕೊಪ್ಪಳ, ಬೀದರ್ ಹಾಗೂ ಗದಗ್ ಜಿಲ್ಲೆಗಳಲ್ಲಿ ಈ ಹಿಂದೆಯೂ ಕೂಡ ಮೆಡಿಕಲ್ ಕಾಲೇಜು ನಿರ್ಮಾಣದ ಪ್ರಸ್ತಾವನೆ ಕೊಕ್ಕೆ ಬಿದ್ದಾಗ, ಅಲ್ಲಿನ ರಾಜಕಾರಣಿಗಳ ಒಗ್ಗಟ್ಟು ಪ್ರದರ್ಶನ ಕೊನೆಗೂ ವೈದ್ಯಕೀಯ ಕಾಲೇಜುಗಳ ಕನಸನ್ನು ನನಸಾಗಿಸಿದ್ದರು.

ಕೊಪ್ಪಳ, ಗದಗ್, ಬೀದರ್ ರಾಜಕಾರಣ : ಕೊಪ್ಪಳದಲ್ಲಿಯೂ ಮೆಡಿಕಲ್ ಕಾಲೇಜು ಪ್ರಸ್ತಾವನೆ ತಿರಸ್ಕೃತಗೊಳ್ಳುವ ಲಕ್ಷಣಗಳು ಕಾಣಿಸಿಕೊಂಡಾಗ, ಎಚ್ಚೆತ್ತ ಅಲ್ಲಿನ ರಾಜಕಾರಣಿಗಳು ಭವಿಷ್ಯದ ಒಳಿತಿಗಾಗಿ ಒಂದಾಗುವ ಮೂಲಕ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ನಿಯಮಗಳಂತೆ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಿದರು. ಗದಗಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಅನುದಾನದ ಕೊರತೆ ಕಂಡುಬಂದಾಗ, ಮಾಜಿ ಸಚಿವ ಎಚ್. ಕೆ. ಪಾಟೀಲರ ಸಮಯಪ್ರಜ್ಞೆ ಹಾಗೂ ಸ್ಥಳೀಯ ದಾನಿಗಳ ಸಹಕಾರ ಅದನ್ನು ಅಲ್ಲಿಯೇ ಉಳಿಸುವಂತೆ ಮಾಡಿತು. ಈ ವಿಚಾರದಲ್ಲಿ ಬೀದರ್ ಸಹ ಹಿಂದೆ ಬಿದ್ದಿದ್ದಿಲ್ಲ. ಹೀಗಾಗಿ, ಈ ಕಡೆಗಳಲ್ಲಿ ಮೆಡಿಕಲ್ ಕಾಲೇಜು ಈಗ ತಲೆಯೆತ್ತಿ ನಿಂತಿದೆ.

ಕಲಬುರಗಿ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರಗಳಿಗೆ ಹಂಚಿಹೋಗಿರುವ ಯಾದಗಿರಿ ಜಿಲ್ಲೆಯ ಇಬ್ಬರೂ ಸಂಸದರು, ಜಿಲ್ಲೆಯ ನಾಲ್ಕೂ ಮತಕ್ಷೇತ್ರಗಳ ಶಾಸಕರು ಹಾಗೂ ರಾಜಕೀಯ ಭವಿಷ್ಯವನ್ನೇ ಇಲ್ಲಿಂದಲೇ ಕಂಡುಕೊಂಡು ರಾಜಕೀಯ ಮತ್ಸದ್ಧಿಗಳೆನಿಸಿದ ಮಲ್ಲಿಕಾರ್ಜುನ ಖರ್ಗೆ, ಡಾ. ಮಾಲಕರೆಡ್ಡಿ ಅಂಥವರು ಈ ವಿಚಾರದಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ.

ಇನ್ನು, ಜುಲೈ 12 ರಿಂದ ನಡೆಯುವ ಅಧಿವೇಶನದಲ್ಲಿ ಸರ್ಕಾರದ ತೀರ್ಮಾನ (ಮೆಡಿಕಲ್ ಕಾಲೇಜು ಕೈಬಿಡುವ ವಿಚಾರ) ಪ್ರಶ್ನಿಸುವುದಾಗಿ ಯಾದಗಿರಿ ಹಾಗೂ ಸುರಪುರದ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ್ ಹಾಗೂ ನರಸಿಂಹ ನಾಯಕ್ (ರಾಜೂಗೌಡ) ಈಗಾಗಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಇನ್ನು, ಮೈತ್ರಿ ಪಕ್ಷದ ಪಾಲುದಾರ ಶಾಸಕರುಗಳಾದ ಶಹಾಪುರದ ಶರಣಬಸಪ್ಪಗೌಡ ದರ್ಶಾನಾಪೂರ ಹಾಗೂ ಗುರುಮಠಕಲ್ ಮತಕ್ಷೇತ್ರದ ನಾಗನಗೌಡ ಕಂದಕೂರು ಅವರೂ ಸಹ ಮುಖ್ಯಮಂತ್ರಿಗಳಿಗೆ ವಾಸ್ತವದ ಅರಿವು ಮೂಡಿಸುವಲ್ಲಿ ಯತ್ನಿಸಬೇಕಾಗಿ. ಯಾದಗಿರಿಗೆ ಮೆಡಿಕಲ್ ಯಾಕೆ ಬೇಕು ಅನ್ನುವ ಬಗ್ಗೆ ಅಂಕಿ ಅಂಶಗಳ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ.

ಅಂಕಿ ಅಂಶಗಳ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಲಿ : ಇದಕ್ಕಾಗಿ ಡಾ. ನಂಜುಂಡಪ್ಪ ವರದಿಗಳ ಅಂಶಗಳನ್ನು, ದೇಶ-ರಾಜ್ಯ ಮಾನವಾಭಿವೃದ್ಧಿ ವರದಿಯಲ್ಲಿ ಜಿಲ್ಲೆಯ ಸ್ಥಾನಮಾನ ಕುರಿತು, ಹದಗೆಟ್ಟ ಇಲ್ಲಿನ ಆರೋಗ್ಯ ಹಾಗೂ ಶಿಕ್ಷಣ ವ್ಯವಸ್ಥೆ ಹಾಗೂ ಇದಕ್ಕಾಗಿನ ಪರಿಹಾರ ನೀಡಿಸುವಲ್ಲಿ ಮೆಡಿಕಲ್ ಕಾಲೇಜು ಅದ್ಯಾವ ರೀತಿಯಲ್ಲಿ ಸಹಕಾರಿಯಾಗಲಿದೆ ಅನ್ನುವ ಬಗ್ಗೆ ವಿವಿಧ ವಿಷಯ ಪರಿಣಿತರಿಂದ, ವೈದ್ಯರುಗಳ ತಂಡದಿಂದ, ಆರ್ಥಶಾಸ್ತ್ರಜ್ಞರಿಂದ ವಿಚಾರಗಳನ್ನು ಮಂಡಿಸಬೇಕಿದೆ.

ಇನ್ನು, ಮೈತ್ರಿ ಸರ್ಕಾರ ಸಂಕಷ್ಟದಲ್ಲಿದ್ದಾಗ ಮರುಜೀವ ನೀಡಿದ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಅವರ ಮಾತನ್ನು ಸಿಎಂ ತಳ್ಳಿ ಹಾಕುವುದೇ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿ ಪರವಾಗಿ ಮೆಡಿಕಲ್ ಕಾಲೇಜು ಪ್ರಸ್ತಾವದ ಅವರ ದನಿ ಪ್ರತಿಧ್ವನಿಸಬೇಕಿದೆ. ಅಧಿವೇಶನದ ಸಂದರ್ಭದಲ್ಲಿ ಜಿಲ್ಲೆಯ ರಾಜಕಾರಣಿಗಳು ಕಾಂಗ್ರೆಸ್, ಜೆಡಿಎಸ್ ಅಥವಾ ಬಿಜೆಪಿಗೆ ಮಾತ್ರ ಸೀಮಿತ ಎಂತೆಂದು ಕೂಡುವ ಬದಲು ಪಕ್ಷಾತೀತ ನಿಲುವಿಗೆ ಬದ್ಧರಾಗಬೇಕಿದೆ ಅನ್ನೋದು ಇಲ್ಲಿನ ಜನರ ಅಂಬೋಣ.

 ಜಿಲ್ಲೆಯಲ್ಲಿ ಇಂತಹುದ್ದೊಂದು ಮೆಡಿಕಲ್ ಕಾಲೇಜು ಅಥವಾ ಎಂಜಿನೀಯರಿಂಗ್ ಕಾಲೇಜು ಇತ್ತೆಂದರೆ ಇಲ್ಲಿನ ಮಕ್ಕಳು ಕಲಿಕೆಗೆ ಆಸಕ್ತಿ ತೋರಿಸುವುದರಲ್ಲಿ ಸಂದೇಹವೇ ಇಲ್ಲ. ಉನ್ನತ ಶಿಕ್ಷಣಕ್ಕಾಗಿ ದೂರದೂರಿಗೆ ಹೋಗುವ ಪ್ರಮೇಯ ಎದುರಾಗಿದ್ದರಿಂದ, ಆರ್ಥಿಕವಾಗಿ ಸಬಲರಲ್ಲದ ಅನೇಕರು ಶಿಕ್ಷಣವನ್ನು ಅಲ್ಲಿಗೆ ಮೊಟಕುಗೊಳಿಸಿದ ಉದಾಹರಣೆಗಳಿವೆ. ಮೆಡಿಕಲ್ ಕಾಲೇಜು ಬಂದಾಗಿನ ನಂತರದಲ್ಲಿ ಬೀದರ್ ಜಿಲ್ಲೆಯ ಜನರ ಶಿಕ್ಷಣ ಪ್ರಗತಿ ಸೂಚ್ಯಂಕ ಅದ್ಹೇಗೆ ಹೆಚ್ಚುತ್ತಿದೆ ಅನ್ನುವ ಬಗ್ಗೆ ಸರ್ಕಾರದಲ್ಲೇ ಸಾಕಷ್ಟು ಅಂಕಿಅಂಶಗಳ ಪುರಾವೆಗಳಿವೆ.

ಜನಾಂದೋಲನಕ್ಕೆ ಯಾದಗಿರಿ ಜಿಲ್ಲೆ ಸಾಕ್ಷಿಯಾಗಬೇಕಿದೆ. ದೂರದ ಕೊಲ್ಕತ್ತ, ಮುಂಬೈ, ದಿಲ್ಲಿಯಂತಹ ಪ್ರದೇಶಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಘಂಟಾಘೋಷವಾಗಿ ಹೇಳುವ ಜನರು, ನಾವಿದ್ದ ನೆಲವೇ ಕುಸಿಯುವ ಆತಂಕ ಎದುರಿಸುತ್ತಿದ್ದಾಗ ಮೌನಕ್ಕೆ ಶರಣಾಗುವ ಬದಲು, ಸರ್ಕಾರದ ಗಮನ ಸೆಳೆಯಬೇಕಾಗಿ, ಜನಶಕ್ತಿ ಹಾಗೂ ರಾಜಕೀಯ ಇಚ್ಛಾಶಕ್ತಿ ಮೆರೆದರೆ ಯಾದಗಿರಿ ಮೆಡಿಕಲ್ ಕಾಲೇಜು ಕನಸು ನನಸಾಗಿಸುವುದು ಅಸಾಧ್ಯದ ಮಾತೇನಲ್ಲ ಅನ್ನುವ ಹಿರಿಯರ ಸಲಹೆಗಳನ್ನು ನಿರ್ಲಕ್ಷಿಸುವಂತಿಲ್ಲ.

ಆನಂದ್ ಎಂ. ಸೌದಿ

ಜನನಾಯಕರು ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಬೇಕು. ಪಕ್ಷಬೇಧ ಮರೆತು ಅಖಾಡಾಕ್ಕೆ ಇಳಿಯಬೇಕು. ಮಾನ್ಯ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಬೇಕಿದೆ.
-ಚಂದ್ರಕಾಂತ ಕರದಳ್ಳಿ, ಕೇಂದ್ರ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ, ಶಹಾಪುರ

ಹಿಂದುಳಿದ ಹೈದರಾಬಾದ್ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಹೊಸ ಆಶಾಕಿರಣ. ಮೆಡಿಕಲ್ ಕಾಲೇಜು ಕೇಳುವುದು ನಮ್ಮ ಹಕ್ಕು. ಸ್ಥಳೀಯ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಪಕ್ಷಾತೀತರಾಗಬೇಕು. ಸರ್ಕಾರದ ತಪ್ಪು ನಿರ್ಣಯದ ವಿರುದ್ಧ ಪ್ರತಿಭಟನೆ ಅನಿವಾರ್ಯ
-ಡಿ. ಎನ್. ಅಕ್ಕಿ, ಹಿರಿಯ ಸಂಶೋಧಕರು, ಯಾದಗಿರಿ ಜಿಲ್ಲೆ.

ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಜಿಲ್ಲೆಯ ನಾಲ್ವರೂ ಶಾಸಕರು ಒಂದಾಗಿ, ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಜಿಲ್ಲೆಯ ಜನರ ಸ್ಥಿತಿಗತಿ ಬದಲಿಸುವ ಶಕ್ತಿ ಮೆಡಿಕಲ್ ಕಾಲೇಜಿಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ನಾವು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದುಕೊಂಡು ಸುಮ್ಮನಿರುವುದು ಬೇಡ.
-ಮಲ್ಲಣ್ಣ ಶಿರಡ್ಡಿ, ಮಾಜಿ ಸೈನಿಕರು, ಗೋಗಿ, ಶಹಾಪುರ ತಾಲೂಕು

 

 

Follow Us:
Download App:
  • android
  • ios