* ಎಚ್‌ಐವಿಗೂ ಕೋವಿಡ್‌ ರೂಪಾಂತರಿಗೂ ಸಂಬಂಧ?* ಆಫ್ರಿಕಾದ ಎಚ್‌ಐವಿ ಪೀಡಿತಳಲ್ಲಿ 32 ರೂಪಾಂತರಿ ವೈರಸ್‌!* 10 ಲಕ್ಷ ಎಚ್‌ಐವಿ ಪೀಡಿತರಿರುವ ಭಾರತಕ್ಕೆ ಎಚ್ಚರಿಕೆ

ನವದೆಹಲಿ(ಜೂ.07): 35 ವರ್ಷದ ಎಚ್‌ಐವಿ ಪೀಡಿತ ಮಹಿಳೆಯಲ್ಲಿ ಬರೋಬ್ಬರಿ 32 ಅಪಾಯಕಾರಿ ಕೊರೋನಾ ರೂಪಾಂತರಿ ವೈರಸ್‌ಗಳಿರುವುದನ್ನು ದಕ್ಷಿಣ ಆಫ್ರಿಕಾ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇದು ಎಚ್‌ಐವಿ ಮತ್ತು ಕೊರೋನಾ ರೂಪಾಂತರಿ ಮಧ್ಯೆ ಸಂಬಂಧ ಇದೆಯೇ ಎಂಬ ಅನುಮಾನ ಸೃಷ್ಟಿಸಿದೆ. ಭಾರತದಲ್ಲಿ ಸುಮಾರು 10 ಲಕ್ಷ ಮಂದಿ ಎಚ್‌ಐವಿ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು, ಕೋವಿಡ್‌ ರೂಪಾಂತರಿ ಬಗ್ಗೆ ಮತ್ತೆ ಆತಂಕ ಉಂಟಾಗಿದೆ.

ಎಚ್‌ಐವಿಯಿಂದಾಗಿ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವ ಮಹಿಳೆಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿತ್ತು. ಅದು ಸತತ 126 ದಿನಗಳ ಕಾಲ ದೇಹದಲ್ಲಿತ್ತು. ಈ ವೇಳೆ ವೈರಸ್‌ 32 ಸಲ ರೂಪಾಂತರಿಯಾಗಿ ವಿಕಾಸ ಹೊಂದಿದೆ ಎಂದು ‘ಮೆಡ್ರಿಕ್ಸಿವ್‌ ಜರ್ನಲ್‌’ ವರದಿ ಮಾಡಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಮಹಿಳೆ 2006ರಿಂದ ಎಚ್‌ಐವಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ರೋಗನಿರೋಧಕ ಶಕ್ತಿ ದುರ್ಬಲವಾಗಿತ್ತು. ಈ ವೇಳೆ ಕೋವಿಡ್‌ ತಗುಲಿದ್ದು, ಮಹಿಳೆ ದೇಹದಲ್ಲಿ 13 ರೂಪಾಂತರಿ ವೈರಸ್‌ ಮತ್ತು 19 ಇತರೆ ಪ್ರಬೇಧಗಳು ಪತ್ತೆಯಾಗಿವೆ. ಇದರಲ್ಲಿ ಅಪಾಯಕಾರಿ ಆಲ್ಫಾ, ಎನ್‌510ವೈ, ಬೀಟಾ ರೂಪಾಂತರಿಗಳೂ ಸೇರಿವೆ. ಮಹಿಳೆಯಿಂದ ರೂಪಾಂತರಿಗಳು ಇನ್ನೊಬ್ಬರಿಗೆ ಹರಡಿವೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ಜಪಾ​ನ್‌​ನಲ್ಲಿ 12-15 ವರ್ಷ​ದ ಮಕ್ಕ​ಳಿಗೆ ಫೈಝರ್‌ ಲಸಿಕೆ!

‘ಆದರೆ ಎಚ್‌ಐವಿ ಪೀಡಿತರಿಗೆ ಕೋವಿಡ್‌ ತಗಲುವ ಅಪಾಯ ಹೆಚ್ಚು ಎಂಬುದು ದೃಢಪಟ್ಟಿದೆ. ಇನ್ನೂ ಹೆಚ್ಚಿನ ಇಂಥ ಪ್ರಕರಣಗಳು ಪತ್ತೆಯಾದರೆ ಎಚ್‌ಐವಿ ಪೀಡಿತರೇ ರೂಪಾಂತರಿ ವೈರಸ್‌ಗಳನ್ನು ಸೃಷ್ಟಿಸುವ ಕಾರ್ಖಾನೆಗಳು ಎಂಬುದು ಸಾಬೀತಾಗುತ್ತದೆ’ ಎಂದು ಸಂಶೋಧಕರು ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona