*ಉಕ್ರೇನ್ ವಶಪಡಿಸಿಕೊಂಡ ವಸ್ತುಗಳಲ್ಲಿ ವಿಷಾನಿಲ ತಡೆಯಬಲ್ಲ ಮಾಸ್ಕ್‌ಗಳು ಪತ್ತೆ*ಉಕ್ರೇನ್‌ನಲ್ಲಿ ಅಮೆರಿಕದ ಜೈವಿಕ ಅಸ್ತ್ರ ಕಾರ್ಖಾನೆ: ರಷ್ಯಾ ಆರೋಪ
ಕೀವ್ (ಮಾ. 12): ಉಕ್ರೇನ್ ಮೇಲಿನ ರಷ್ಯಾ ದಾಳಿ ತೀವ್ರಗೊಳ್ಳುತ್ತಿರುವ ಹೊತ್ತಿನಲ್ಲೇ (Russia Ukraine War) ಇದೀಗ ಅಮೆರಿಕ-ರಷ್ಯಾ- ಉಕ್ರೇನ್ ನಡುವೆ ವಿಷಾನಿಲ ಜಟಾಪಟಿ (Chemical War) ಆರಂಭವಾಗಿದೆ. ಉಕ್ರೇನ್‌ನಲ್ಲಿ ಅಮೆರಿಕ ಜೈವಿಕ ಅಸ್ತ್ರ ಪ್ರಯೋಗಾಲಯ ಹೊಂದಿದೆ ಎಂದು ರಷ್ಯಾ ಆರೋಪಿಸಿದ್ದರೆ, ರಷ್ಯಾ ಯೋಧರಿಂದ ತಾನು ವಶಪಡಿಸಿಕೊಂಡ ವಸ್ತುಗಳಲ್ಲಿ ವಿಷಾನಿಲ ದಾಳಿಯಿಂದ ರಕ್ಷಿಸಿಕೊಳ್ಳುವ ಮಾಸ್ಕ್ ಸಿಕ್ಕಿದೆ. ಇದು ರಷ್ಯಾ ವಿಷಾನಿಲ ದಾಳಿಗೆ ರಷ್ಯಾ ಮುಂದಾಗಿರುವ ಸಂಕೇತ ಎಂದು ಉಕ್ರೇನ್ ಆರೋಪಿಸಿದೆ.
ಈ ಹಿಂದೆ ಸಿರಿಯಾ (Syria) ಯುದ್ಧದ ವೇಳೆ ಬಳಸಿದ್ದ ವಿಷಾನಿಲದಿಂದ ಉಂಟಾಗಿದ್ದ ಘೋರ ಘಟನೆಗಳು ಮಾಸುವ ಮುನ್ನ ಮತ್ತೆ ಅಂಥದ್ದೇ ಅಪಾಯ ಕಾಡಿರುವುದು ಜಾಗತಿಕ ಸಮುದಾಯದಲ್ಲಿ ಕಳವಳಕ್ಕೆ ಕಾರಣವಾಗಿದೆ.
ವಿಷಾನಿಲ ದಾಳಿಗೆ ರಷ್ಯಾ ರಹಸ್ಯ ಯೋಜನೆ?: ಉಕ್ರೇನ್ ಅನ್ನು ಪೂರ್ಣವಾಗಿ ವಶಪಡಿಸಿಕೊಳ್ಳಲು ಹೆಣಗಾಡುತ್ತಿರುವ ರಷ್ಯಾ ಸೇನೆ, ಅಗತ್ಯ ಬಿದ್ದರೆ ವಿಷಾನಿಲ ಪ್ರಯೋಗಕ್ಕೆ ಸಜ್ಜಾಗಿದೆಯೇ? ಇಂಥ ಅನುಮಾನಕ್ಕೆ ಕಾರಣವಾಗುವ ವಸ್ತುಗಳು ಇದೀಗ ರಷ್ಯಾ ಯೋಧರ ಬಳಿ ಪತ್ತೆಯಾಗಿದೆ ಎಂದು ಉಕ್ರೇನ್ ಸೇನೆ ಆರೋಪಿಸಿದೆ.
ಇದನ್ನೂ ಓದಿ:Russia Ukraine War 8 ಜನರಲ್‌ಗಳಿಗೆ ಪುಟಿನ್ ವಜಾ ಶಿಕ್ಷೆ
ಯುದ್ಧದ ವೇಳೆ ಬಂಧಿತ ಅಥವಾ ರಷ್ಯಾ ಸೈನಿಕರು ಬಿಟ್ಟುಹೋಗಿರುವ ವಾಹನಗಳಿಂದ ನಾನಾ ರೀತಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಇದರಲ್ಲಿ ವಿಷಾನಿಲ ದಾಳಿಯನ್ನು ತಡೆಬಲ್ಲಂತಹ ಮಾಸ್ಕ್‌ಗಳು ಪತ್ತೆಯಾಗಿದೆ ಎಂದು ಉಕ್ರೇನ್ ಸೇನೆ ಮಾಹಿತಿ ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಉಕ್ರೇನ್ ಆಡಳಿತ, ‘ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಉಕ್ರೇನ್ ನಾಯಕರುಗಳಿಗೆ ಇದೊಂದು ಎಚ್ಚರಿಕೆಯಾಗಿದೆ. ಪುಟಿನ್ ಉಕ್ರೇನ್ ಮೇಲೆ ವಿಷಾನಿಲ ದಾಳಿ ನಡೆಸಲು ಯೋಜನೆ ರೂಪಿಸಿದ್ದಾರೆ. ಇದರ ಅಂಗವಾಗಿ ರಷ್ಯಾದ ಸೈನಿಕರಿಗೆ ಸುರಕ್ಷಿತ ಮಾಸ್ಕ್ ವಿತರಿಸಲಾಗಿದೆ. ರಷ್ಯಾದ ದಾಳಿಯನ್ನು ನಿಲ್ಲಿಸಿ’ ಎಂದು ಹೇಳಿದೆ.
ರಷ್ಯಾದ ಆಕ್ರಮಣ 3ನೇ ದಿನಕ್ಕೆ ಕಾಲಿಟ್ಟಿರುವುದರಿಂದ ರಷ್ಯಾ ವಿಷಾನಿಲ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಹೇಳಿದ್ದಾರೆ. ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ‘ನೀವು ವಿಷಾನಿಲದ ದಾಳಿಯನ್ನು ಎಲ್ಲಿ ನಡೆಸುತ್ತೀರಿ?, ಮರಿಯುಪೋಲ್‌ನ ಮಿಲಿಟರಿ ಆಸ್ಪತ್ರೆಯ ಮೇಲೆ? ಖಾರ್ಕೀವ್‌ನ ಚರ್ಚಿನ ಮೇಲೆ? ಅಥವಾ ಓಕಮಡಿಟ್‌ನಲ್ಲಿರುವ ಮಕ್ಕಳ ಆಸ್ಪತ್ರೆ ಮೇಲೆ? ಎಂದು ರಷ್ಯಾ ಸೈನ್ಯವನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ರಷ್ಯಾ ವಿಷಾನಿಲ ದಾಳಿ ನಡೆಸಬಹುದು ಎಂದು ಬೋರಿಸ್ ಜಾನ್ಸನ್ ಮತ್ತು ಎಂಐ16ನ ರಷ್ಯಾದ ಮಾಜಿ ನಿರ್ವಾಹಕ ಕ್ರಿಸ್ಟೋಫರ್ ಸ್ಟೀಲಿ ಸಹ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Russia Ukraine War ಉಕ್ರೇನ್‌ಗೆ ಸೇನಾ ನೆರವು ಹೆಚ್ಚಿಸಿದ ಐರೋಪ್ಯ ಒಕ್ಕೂಟ
ಉಕ್ರೇನ್‌ನಲ್ಲಿ ಅಮೆರಿಕದ ಜೈವಿಕ ಅಸ್ತ್ರ ಕಾರ್ಖಾನೆ: ರಷ್ಯಾ ಆರೋಪ: ಅಮೆರಿಕ ಉಕ್ರೇನ್ ಗಡಿಯೊಳಗೆ ಜೈವಿಕ ಅಸ್ತ್ರ ಮತ್ತು ರಾಸಾಯನಿಕ ಅಸ್ತ್ರಗಳನ್ನು ತಯಾರು ಮಾಡುವ ಕಾರ್ಖಾನೆಗಳನ್ನು ನಡೆಸುತ್ತಿದೆ ಎಂದು ರಷ್ಯಾ ಗಂಭೀರ ಆರೋಪ ಮಾಡಿದೆ. ಈ ಕುರಿತಾಗಿ ವಿಶ್ವಸಂಸ್ಥೆ ತನಿಖೆ ನಡೆಸಬೇಕು ಎಂದು ರಷ್ಯಾ ಮನವಿ ಮಾಡಿದೆ.
ರಷ್ಯಾ ಉಕ್ರೇನ್ ಮೇಲೆ ರಾಸಾಯನಿಕ ಅಸ್ತ್ರ ದಾಳಿ ನಡೆಸಬಹುದು ಎಂದು ಅಮೆರಿಕ ಬುಧವಾರ ಆರೋಪ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾ ಉಕ್ರೇನ್ ಗಡಿಯೊಳಗೆ ಅಮೆರಿಕ ಸಹಾಯದಿಂದ ಜೈವಿಕ ಅಸ್ತ್ರಗಳನ್ನು ತಯಾರು ಮಾಡಲಾಗುತ್ತಿದೆ. ಪಾಶ್ಚಿಮಾತ್ಯ ಮಾಧ್ಯಮಗಳು ಇದನ್ನು ಗಮನಿಸಬೇಕು ಎಂದು ಹೇಳಿದೆ. ಈ ಆರೋಪದ ಕುರಿತಾಗಿ ಚರ್ಚಿಸಲು ಶುಕ್ರವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಸೇರಿದೆ.
